ADVERTISEMENT

ತಮಿಳುನಾಡು ವಿಧಾನಸಭೆ ಚುನಾವಣೆ: ಡಿಎಂಡಿಕೆ-ಡಿಎಂಕೆ ಮೈತ್ರಿ ಘೋಷಣೆ

ಪಿಟಿಐ
Published 19 ಫೆಬ್ರುವರಿ 2026, 9:10 IST
Last Updated 19 ಫೆಬ್ರುವರಿ 2026, 9:10 IST
   

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಗೂ ಮುನ್ನ ದಿವಂಗತ ನಟ ವಿಜಯಕಾಂತ್ ಅವರ ಡಿಎಂಡಿಕೆ ಪಕ್ಷವು ಡಿಎಂಕೆ ನೇತೃತ್ವದ ‘ಜಾತ್ಯತೀತ ಪ್ರಗತಿಪರ ಮೈತ್ರಿಕೂಟ’ಕ್ಕೆ (ಎಸ್‌ಪಿಎ) ಸೇರ್ಪಡೆಗೊಂಡಿದೆ.

ಡಿಎಂಕೆ ಅಧ್ಯಕ್ಷ, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಸಮ್ಮುಖದಲ್ಲಿ ಡಿಎಂಡಿಕೆ ಕಾರ್ಯದರ್ಶಿ ಪ್ರೇಮಲತಾ ವಿಜಯಕಾಂತ್ ಅವರು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ವರದಿಯಾಗಿದೆ.

ಇದೇ ವೇಳೆ ಡಿಎಂಡಿಕೆ ಪಕ್ಷದ ನಾಯಕ ಎಲ್.ಕೆ. ಸುಧೀಶ್ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

‘ನನ್ನ ಆತ್ಮೀಯ ಗೆಳೆಯ ‘ಕ್ಯಾಪ್ಟನ್’ ವಿಜಯಕಾಂತ್ ಸ್ಥಾಪಿಸಿದ್ದ ಮತ್ತು ಡಿಎಂಕೆ ಪಿತಾಮಹ ಎಂ.ಕರುಣಾನಿಧಿ ಅವರ ಮೇಲೆ ಅಚಲ ಪ್ರೀತಿ ಹೊಂದಿದ್ದ ಡಿಎಂಡಿಕೆ ಪಕ್ಷವು ಇಂದು ಜಾತ್ಯತೀತ ಪ್ರಗತಿಪರ ಒಕ್ಕೂಟಕ್ಕೆ ಸೇರ್ಪಡೆಗೊಂಡಿರುವುದು ತುಂಬಾ ಸಂತೋಷ ತಂದಿದೆ. ವಿಜಯಕಾಂತ್ ರಚಿಸಿದ ಪಕ್ಷವನ್ನು ಪ್ರೀತಿಯ ಸಹೋದರಿ ಪ್ರೇಮಲತಾ ವಿಜಯಕಾಂತ್ ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ’ ಎಂದು ಸ್ಟಾಲಿನ್‌ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಕಪ್ಪು ಮತ್ತು ಕೆಂಪು ಧ್ವಜವನ್ನು ಹೊತ್ತ ನಿಮ್ಮ ಸ್ವಾಗತ ಮತ್ತು ಸದ್ಭಾವನೆಯು ತಮಿಳುನಾಡಿನ ಉದಯಕ್ಕೆ ಕೊಡುಗೆ ನೀಡುವುದನ್ನು ಮುಂದುವರಿಸಲಿ. ದ್ರಾವಿಡ ಮಾದರಿ ಆಳ್ವಿಕೆಯನ್ನು ಮುಂದುವರಿಸಲು ಮತ್ತು ತಮಿಳುನಾಡನ್ನು ಎಲ್ಲಾ ರೀತಿಯಲ್ಲಿ ಪ್ರಗತಿಯ ಪಥದಲ್ಲಿ ಮುನ್ನಡೆಸಲು ಒಟ್ಟಾಗಿ ಸಾಗೋಣ’ ಎಂದು ಸ್ಟಾಲಿನ್‌ ತಿಳಿಸಿದ್ದಾರೆ.

‘ಕ್ಯಾಪ್ಟನ್ (ವಿಜಯಕಾಂತ್) ಮತ್ತು ಕಲೈಗ್ನರ್ ಆಶೀರ್ವಾದದೊಂದಿಗೆ ನಾವು ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿದ್ದೇವೆ. ಶೀಘ್ರದಲ್ಲೇ ಸೀಟು ಹಂಚಿಕೆ ಸಮಿತಿಯನ್ನು ರಚಿಸಲಾಗುವುದು ಎಂದು ಪ್ರೇಮಲತಾ ತಿಳಿಸಿದ್ದಾರೆ.

2021ರ ವಿಧಾನಸಭಾ ಚುನಾವಣೆಯಲ್ಲಿ ಡಿಎಂಡಿಕೆ ಪಕ್ಷವು ಟಿಟಿವಿ ದಿನಕರನ್ ಅವರ ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ ಜೊತೆ ಪಾಲುದಾರಿಕೆ ಹೊಂದಿತ್ತು. 2024ರ ಲೋಕಸಭಾ ಚುನಾವಣೆಯಲ್ಲಿ ಡಿಎಂಡಿಕೆ ಪಕ್ಷವು ಎಐಎಡಿಎಂಕೆ ನೇತೃತ್ವದ ಮೈತ್ರಿಕೂಟದ ಭಾಗವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.