ADVERTISEMENT

2026ರ ಫೆಬ್ರುವರಿ 16: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಫೆಬ್ರುವರಿ 2026, 3:15 IST
Last Updated 16 ಫೆಬ್ರುವರಿ 2026, 3:15 IST
   

ರಾಜ್ಯ, ದೇಶ, ವಿದೇಶಕ್ಕೆ ಸಂಬಂಧಿಸಿದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

ಸರ್ಕಾರಿ ಅಧಿಕಾರಿ, ಸಿಬ್ಬಂದಿಗೆ ಬೆದರಿಕೆ ಹಾಕಿದರೆ 3 ವರ್ಷ ಜೈಲು: ಹೊಸ ಮಸೂದೆ

ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದ ಮೇಲೆ ನಡೆಯುತ್ತಿರುವ ಹಿಂಸಾಚಾರ ಮತ್ತು ಆಸ್ತಿಗಳಿಗೆ ಹಾನಿ ಉಂಟು ಮಾಡುವ ಕೃತ್ಯಗಳನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ಇಂತಹ ದುಷ್ಕೃತ್ಯ ಎಸಗುವವರಿಗೆ ಮೂರು ವರ್ಷ ಜೈಲು ಶಿಕ್ಷೆ ಮತ್ತು ₹50 ಸಾವಿರ ದಂಡ ವಿಧಿಸಲು ಅವಕಾಶ ಕಲ್ಪಿಸುವ ಕಾನೂನು ಜಾರಿಗೆ ತರಲು ಮುಂದಾಗಿದೆ.

RSS ಇಲ್ಲದಿದ್ದರೆ ಬಿಜೆಪಿಯು ಜೆಡಿಎಸ್‌ಗಿಂತಲೂ ಕನಿಷ್ಠ: ಪ್ರಿಯಾಂಕ್ ಖರ್ಗೆ

‘ಆರ್‌ಎಸ್‌ಎಸ್‌ ಇಲ್ಲದಿದ್ದರೆ ಬಿಜೆಪಿಯು ಜೆಡಿಎಸ್‌ಗಿಂತಲೂ ಕನಿಷ್ಠ ಎಂದು ಐಟಿ & ಬಿಟಿ ಹಾಗೂ ಗ್ರಾಮಿಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ADVERTISEMENT

5 ವರ್ಷಗಳಲ್ಲಿ ₹8,621.12 ಕೋಟಿ ದಂಡ ವಿಧಿಸಿದ ರಾಷ್ಟ್ರೀಕೃತ ಬ್ಯಾಂಕ್‌ಗಳು

ಉಳಿತಾಯ ಖಾತೆಗಳಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳದ ಕಾರಣಕ್ಕಾಗಿ ಖಾತೆದಾರರಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳು ಕಳೆದ ಐದು ವರ್ಷಗಳಲ್ಲಿ ₹8,621.12 ಕೋಟಿ ದಂಡ ವಿಧಿಸಿವೆ. ಉತ್ತರ ಪ್ರದೇಶದ ಬ್ಯಾಂಕ್‌ಗಳು ಅತಿ ಹೆಚ್ಚು ದಂಡ ವಿಧಿಸಿವೆ. ತಮಿಳುನಾಡು, ಮಹಾರಾಷ್ಟ್ರ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನದಲ್ಲಿವೆ. ಕರ್ನಾಟಕ ನಾಲ್ಕು ಹಾಗೂ ಬಿಹಾರ ಐದನೇ ಸ್ಥಾನದಲ್ಲಿವೆ. ಲೋಕಸಭೆಯ ಅರ್ಜಿಗಳ ಸಮಿತಿಯು ಮಂಡಿಸಿದ ವರದಿಯಲ್ಲಿ ಈ ಮಾಹಿತಿ ತಿಳಿದುಬಂದಿದೆ.

ಕೆಎಸ್‌ಆರ್‌ಟಿಸಿ: ಲಗೇಜ್‌ ದರ ಇಂದಿನಿಂದ ಶೇ 15ರಷ್ಟು ಹೆಚ್ಚಳ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳಲ್ಲಿ ಲಗೇಜ್‌ ದರವನ್ನು ಶೇ 15ರಷ್ಟು ಹೆಚ್ಚಿಸಿದ್ದು, ಪರಿಷ್ಕೃತ ದರ ಫೆ.16 ರಿಂದ ಜಾರಿಯಾಗಲಿದೆ. ಸಾರಿಗೆ ಸಂಸ್ಥೆಯ ಡೀಸೆಲ್‌ ವೆಚ್ಚ, ಸಿಬ್ಬಂದಿ ವೆಚ್ಚ ಜಾಸ್ತಿಯಾಗಿದೆ. ಆರ್ಥಿಕ ಹೊರೆ ತಗ್ಗಿಸಲು ಮತ್ತು ಹೆಚ್ಚುತ್ತಿರುವ ಇಂಧನ ವೆಚ್ಚವನ್ನು ಸರಿದೂಗಿಸಲು ಈ ನಿರ್ಧಾರ ಅನಿವಾರ್ಯ. ದರ ಪರಿಷ್ಕರಣೆಯು ಪ್ರಯಾಣಿಕರ ಜೊತೆಗಿರುವ ಹಾಗೂ ಪ್ರಯಾಣಿಕ ರಹಿತ ಲಗೇಜುಗಳಿಗೂ ಅನ್ವಯವಾಗಲಿದೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ ತಿಳಿಸಿದ್ದಾರೆ.

ರಕ್ಷಣಾ ಸಹಕಾರ: ಭಾರತ– ಫ್ರಾನ್ಸ್‌ ದ್ವಿಪಕ್ಷೀಯ ಸಭೆ ನಾಳೆ

ಭಾರತ ಮತ್ತು ಫ್ರಾನ್ಸ್‌ ನಡುವೆ ರಕ್ಷಣಾ ವಿಷಯಗಳಿಗೆ ಸಂಬಂಧಿಸಿದ ಆರನೇ ದ್ವಿಪಕ್ಷೀಯ ಸಭೆ ಫೆಬ್ರುವರಿ 17ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಈ ವೇಳೆ ಉಭಯ ರಾಷ್ಟ್ರಗಳು ಹತ್ತು ವರ್ಷಗಳ ರಕ್ಷಣಾ ಸಹಕಾರ ಒಪ್ಪಂದವನ್ನು ನವೀಕರಿಸಲಿವೆ. 

ಭಾರತದ ಜೊತೆ ಹೊಸ ಸಂಬಂಧಕ್ಕೆ ಬಾಂಗ್ಲಾ ಸಿದ್ಧ: ತಾರಿಕ್‌ ಸಲಹೆಗಾರ ಹುಮಾಯೂನ್‌

ಬಾಂಗ್ಲಾದೇಶದ ರಾಜಕೀಯ ಪರಿಸ್ಥಿತಿ ಬದಲಾಗಿದೆ. ಅವಾಮಿ ಲೀಗ್‌ ಮತ್ತು ಶೇಖ್‌ ಹಸೀನಾ ಇಂದಿನ ಬಾಂಗ್ಲಾದಲ್ಲಿ ಇಲ್ಲ. ಭಾರತವು ಇದನ್ನು ಅರ್ಥ ಮಾಡಿ ಕೊಳ್ಳ ಬೇಕು. ಪರಸ್ಪರ ಲಾಭಕ್ಕಾಗಿ ಹೊಸ ಹೆಜ್ಜೆಗಳೊಂದಿಗೆ, ಹೊಸ ಸಂಬಂಧವನ್ನು ಆರಂಭಿಸಲು ನಾವು ತಯಾರಿ ದ್ದೇವೆ’ ಎಂದು ಬಿಎನ್‌ಪಿ ಮುಖ್ಯಸ್ಥ ತಾರಿಕ್‌ ರೆಹಮಾನ್‌ ಅವರ ಸಲಹೆ ಗಾರ ಹುಮಾಯೂನ್‌ ಕಬೀರ್‌ ಹೇಳಿದರು.

ಶಿವಾಜಿ–ಟಿಪ್ಪು ವಿವಾದ: ಪುಣೆಯಲ್ಲಿ ಬಿಜೆಪಿ, ಕಾಂಗ್ರೆಸ್‌ ಕಾರ್ಯಕರ್ತರ ಘರ್ಷಣೆ

ಮಹಾರಾಷ್ಟ್ರದಲ್ಲಿ ಶಿವಾಜಿ– ಟಿಪ್ಪು ವಿವಾದವು ತಾರಕಕ್ಕೇರಿದ್ದು, ಪುಣೆಯಲ್ಲಿ ನಡೆದ ಕಲ್ಲು ತೂರಾಟದಲ್ಲಿ ಒಂಬತ್ತು ಮಂದಿ ಭಾನುವಾರ ಗಾಯಗೊಂಡಿದ್ದಾರೆ. ಕಾಂಗ್ರೆಸ್‌ ಕಚೇರಿ ಮುಂಭಾಗ ಬಿಜೆಪಿಗರು ಪ್ರತಿಭಟನೆ ನಡೆಸುತ್ತಿದ್ದಾಗ, ಕಾಂಗ್ರೆಸ್‌ ಕಾರ್ಯಕರ್ತರು ಮುಖಾಮುಖಿಯಾಗಿದ್ದಾರೆ. ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿದೆ.

ಚಿನ್ನಸ್ವಾಮಿ ಕ್ರೀಡಾಂಗಣ: ಸಂಪೂರ್ಣ ಮರುವಿನ್ಯಾಸಕ್ಕೆ ಶಿಫಾರಸು

ಚಿನ್ನಸ್ವಾಮಿ ಕ್ರೀಡಾಂಗಣ ಸಂಪೂರ್ಣ ಮರುವಿನ್ಯಾಸ ಮಾಡಿ ಎಂದು ಮಹೇಶ್ವರರಾವ್ ನೇತೃತ್ವದ ತಜ್ಞರ ಸಮಿತಿಯು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ (ಕೆಎಸ್‌ಸಿಎ) ಶಿಫಾರಸು ಮಾಡಿದೆ. ಸಮಿತಿಯು ರಾಜ್ಯ ಸಚಿವ ಸಂಪುಟಕ್ಕೆ ಸಲ್ಲಿಸಿದ್ದ ವರದಿಯಲ್ಲಿ ಈ ಮಾಹಿತಿ ಇದೆ. 2025ರ ಜೂನ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡವು ಐಪಿಎಲ್ ಟ್ರೋಫಿ ಗೆದ್ದಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಸಂಭ್ರಮಾಚರಣೆ ವೇಳೆ ಕಾಲ್ತುಳಿತ ಸಂಭವಿಸಿ 11 ಮಂದಿ ಮೃತಪಟ್ಟಿದ್ದರು.

T20 WC | ಪಾಕಿಸ್ತಾನ ವಿರುದ್ಧ ಭರ್ಜರಿ ಜಯ ಸಾಧಿಸಿದ ಭಾರತ

ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡವು ತನ್ನ ‘ಬದ್ಧ ಎದುರಾಳಿ’ ಪಾಕಿಸ್ತಾನ ತಂಡದ ಎದುರು ನಿರೀಕ್ಷೆಗಿಂತಲೂ ಸುಲಭವಾಗಿ ಜಯಿಸಿತು. ಅದರೊಂದಿಗೆ  ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 8ರ ಹಂತಕ್ಕೆ ಲಗ್ಗೆಯಿಟ್ಟಿತು.

ರಾಹುಲ್, ಪಡಿಕ್ಕಲ್ ಶತಕದ ಸೊಬಗು: ಮೊದಲ ದಿನ ಬೃಹತ್ ಮೊತ್ತ ಕಲೆಹಾಕಿದ ಕರ್ನಾಟಕ

ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ಹಾಗೂ ಉತ್ತರಾಖಂಡ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದ ಮೊದಲ ದಿನದಾಟದಲ್ಲಿ ಕೆ.ಎಲ್ ರಾಹುಲ್ ಹಾಗೂ ನಾಯಕ ದೇವದತ್ತ ಪಡಿಕ್ಕಲ್ ಅವರ ಶತಕಗಳ ನೆರವಿನಿಂದ ಕರ್ನಾಟಕ ತಂಡ 2 ವಿಕೆಟ್ ಕಳೆದುಕೊಂಡು 355 ರನ್ ಕಲೆಹಾಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.