ADVERTISEMENT

ಲೋಕಸಭೆ ಚುನಾವಣೆಗಾಗಿ ಮಾತ್ರ ರಚಿಸಿದ್ದಲ್ಲಿ ‘ಇಂಡಿಯಾ’ ಒಕ್ಕೂಟ ವಿಸರ್ಜಿಸಿ: ಒಮರ್

ಪಿಟಿಐ
Published 9 ಜನವರಿ 2025, 9:24 IST
Last Updated 9 ಜನವರಿ 2025, 9:24 IST
<div class="paragraphs"><p>ಒಮರ್ ಅಬ್ದುಲ್ಲಾ</p></div>

ಒಮರ್ ಅಬ್ದುಲ್ಲಾ

   

ಶ್ರೀನಗರ: ‘ಇಂಡಿಯಾ’ ಮೈತ್ರಿಕೂಟವನ್ನು ಕೇವಲ ಲೋಕಸಭೆ ಚುನಾವಣೆ ಸಲುವಾಗಿ ಮಾತ್ರ ರಚನೆ ಮಾಡಲಾಗಿದೆ. ಸದ್ಯ ನಾಯಕತ್ವ ಮತ್ತು ರಾಜಕೀಯ ಕಾರ್ಯಸೂಚಿ ಬಗ್ಗೆ ಸ್ಪಷ್ಟತೆಯ ಕೊರತೆ ಇರುವುದರಿಂದ ಮೈತ್ರಿಕೂಟವನ್ನು ವಿಸರ್ಜಿಸುವುದು ಉತ್ತಮ ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ.

ದೆಹಲಿ ವಿಧಾನಸಭಾ ಚುನಾವಣೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘2024ರ ಲೋಕಸಭೆ ಚುನಾವಣೆಗಾಗಿ ಮಾತ್ರ ‘ಇಂಡಿಯಾ’ ಮೈತ್ರಿಕೂಟವನ್ನು ರಚನೆ ಮಾಡಿದ್ದರೆ, ಅದನ್ನು ವಿಸರ್ಜಿಸುವುದು ಅನಿವಾರ್ಯ. ದೆಹಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ), ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

ದೆಹಲಿ ವಿಧಾನಸಭಾ ಚುನಾವಣೆಗೆ ಮುನ್ನ ಎಎಪಿ ಮತ್ತು ಕಾಂಗ್ರೆಸ್ ನಡುವೆ ನಡೆಯುತ್ತಿರುವ ರಾಜಕೀಯ ಕಚ್ಚಾಟ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅಬ್ದುಲ್ಲಾ, ‘ಈ ಬಗ್ಗೆ ನಾನು ಏನನ್ನೂ ಹೇಳಲಾರೆ, ಏಕೆಂದರೆ ನಮಗೂ ದೆಹಲಿ ಚುನಾವಣೆಗೂ ಯಾವುದೇ ಸಂಬಂಧವಿಲ್ಲ. ಎಎಪಿ, ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳು ಬಿಜೆಪಿಯನ್ನು ಹೇಗೆ ಎದುರಿಸಬೇಕೆಂದು ನಿರ್ಧರಿಸಬೇಕು’ ಎಂದಷ್ಟೇ ಹೇಳಿದ್ದಾರೆ.

‘ನನಗೆ ನೆನಪಿರುವಂತೆ ‘ಇಂಡಿಯಾ’ ಮೈತ್ರಿಕೂಟಕ್ಕೆ ಯಾವುದೇ ಕಾಲಮಿತಿ ಎಂಬುದು ಇರಲಿಲ್ಲ. ಆದರೆ, ಲೋಕಸಭೆ ಚುನಾವಣೆ ಬಳಿಕ ಇದುವರೆಗೆ ಯಾವುದೇ ಸಭೆ ನಡೆಯದಿರುವುದು ದುರದೃಷ್ಟಕರ. ಮೈತ್ರಿಕೂಟವನ್ನು ಯಾರು ಮುನ್ನಡೆಸುತ್ತಾರೆ? ಅಜೆಂಡಾ ಏನು? ಮೈತ್ರಿ ಹೇಗೆ ಮುಂದುವರಿಯುತ್ತದೆ? ನಾವು ಒಗ್ಗಟ್ಟಾಗಿ ಇರುತ್ತೇವೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ’ ಎಂದು ಅಬ್ದುಲ್ಲಾ ಬೇಸರ ಹೊರಹಾಕಿದ್ದಾರೆ.

2024ರ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ನಡೆದ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆ ಚುನಾವಣೆಯಲ್ಲಿ ನ್ಯಾಷನಲ್‌ ಕಾನ್ಫರೆನ್ಸ್‌ (ಜೆಕೆಎನ್‌ಸಿ)–ಕಾಂಗ್ರೆಸ್‌ ಮೈತ್ರಿಕೂಟ ಸರಳ ಬಹುಮತ ಪಡೆದಿತ್ತು. ಎನ್‌ಡಿಎ ಹಾಗೂ ‘ಇಂಡಿಯಾ’ ಮೈತ್ರಿಕೂಟದಲ್ಲಿ ಗುರುತಿಸಿಕೊಳ್ಳದೆ ಸ್ವತಂತ್ರವಾಗಿ ಸ್ಪರ್ಧಿಸಿದ್ದ ಪ್ರಾದೇಶಿಕ ಪಕ್ಷಗಳು ನೆಲ ಕಚ್ಚಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.