ADVERTISEMENT

ಪ್ರತಿ ಆಪರೇಷನ್‌ ನಡೆಸಲು ಸಜ್ಜಾದ ದಳ ಪಡೆ?

​ಪ್ರಜಾವಾಣಿ ವಾರ್ತೆ
Published 7 ಜುಲೈ 2019, 10:00 IST
Last Updated 7 ಜುಲೈ 2019, 10:00 IST
   

ಬೆಂಗಳೂರು: ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಬಿಜೆಪಿ ಶಾಸಕರ ಪ್ರತಿ ಆಪರೇಷನ್ ಹಾಗೂ ಎಲ್ಲ ಸಚಿವರ ರಾಜೀನಾಮೆ ಕೊಡಿಸಿ ಹೊಸಬರಿಗೆ ಅವಕಾಶ ನೀಡುವ ಬಗ್ಗೆ ಜೆಡಿಎಸ್‌ ವರಿಷ್ಠರು ಆಲೋಚಿಸಿದ್ದಾರೆ.

ತಮ್ಮ ಮೂವರು ಶಾಸಕರ ರಾಜೀನಾಮೆಯಿಂದ ಸದ್ಯ ಮೌನಕ್ಕೆ ಶರಣವಾಗಿರುವ ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡರು, ತಮ್ಮ ಪುತ್ರನ ನೇತೃತ್ವದ ಸರ್ಕಾರ ಉಳಿಸಿಕೊಳ್ಳುವ ಬಗ್ಗೆ ತಂತ್ರ ಹೆಣೆಯುತ್ತಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.

ADVERTISEMENT

‘ಶಾಸಕರ ರಾಜೀನಾಮೆ ಅಂಗೀಕಾರದ ಬಗ್ಗೆ ಮಂಗಳವಾರ ಪರಿಶೀಲಿಸುವುದಾಗಿ ಸಭಾಧ್ಯಕ್ಷರು ಹೇಳಿದ್ದಾರೆ. ಅದಾದ ಬಳಿಕ ಮಾತನಾಡುತ್ತೇನೆ’ ಎಂದಷ್ಟೇ ದೇವೇಗೌಡರು ಪ್ರತಿಕ್ರಿಯಿಸಿದ್ದಾರೆ. ಸಿಕ್ಕಿರುವ ಎರಡು ದಿನಗಳಲ್ಲಿ ಸರ್ಕಾರ ಉಳಿಸಿಕೊಳ್ಳುವ ಮಾರ್ಗಗಳನ್ನು ಗೌಡರು ಹುಡುಕಲಿದ್ದಾರೆ. ರಾಜೀನಾಮೆ ಅಂಗೀಕರಿಸದಂತೆ ಸಭಾಧ್ಯಕ್ಷರನ್ನು ಒಪ್ಪಿಸುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.

ಅಮೆರಿಕ ಪ್ರವಾಸಕ್ಕೆ ತೆರಳಿದ್ದ ಮುಖ್ಯಮಂತ್ರಿ ಭಾನುವಾರ ರಾತ್ರಿ 8.30ರ ಸುಮಾರಿಗೆ ನಗರಕ್ಕೆ ಹಿಂದಿರುಗಲಿದ್ದಾರೆ. ಬಳಿಕ ಪ್ರತಿತಂತ್ರ ಚುರುಕಾಗಲಿದೆ ಎಂದು ಮೂಲಗಳು ಹೇಳಿವೆ.

ಎಲ್ಲ ಸಚಿವರ ಸಾಮೂಹಿಕ ರಾಜೀನಾಮೆ ಕೊಡಿಸಿ, ಅತೃಪ್ತ ಶಾಸಕರಿಗೆ ಸಚಿವ ಸ್ಥಾನದ ಕೊಡುಗೆ ನೀಡುವ ಮೂಲಕ ಸರ್ಕಾರ ಉಳಿಸುವ ನಿಟ್ಟಿನಲ್ಲಿ ಕೊನೆಯ ಪ್ರಯತ್ನವನ್ನು ಮಾಡಲಾಗುತ್ತಿದೆ.

‘ಬಿಜೆಪಿಯ ಆರಕ್ಕೂ ಹೆಚ್ಚು ಶಾಸಕರು ಸಂಪರ್ಕದಲಿದ್ದಾರೆ. ಸರ್ಕಾರ ಉಳಿಸಿಕೊಳ್ಳಲು ಅವರಿಂದ ರಾಜೀನಾಮೆ ಕೊಡಿಸಿ, ಬಿಜೆಪಿ ಬಲವನ್ನು ಕುಗ್ಗಿಸಿ ಸರ್ಕಾರ ರಚನೆಗೆ ಕೈ ಹಾಕದಂತೆ ಕಟ್ಟಿಹಾಕುವ ಲೆಕ್ಕಾಚಾರ ನಾಯಕರದ್ದಾಗಿದೆ. ಅಮೆರಿಕದಲ್ಲಿದ್ದುಕೊಂಡೇ ಕುಮಾರಸ್ವಾಮಿ, ಈ ಕಾರ್ಯಾಚರಣೆ ನಡೆಸಿದ್ದಾರೆ’ ಎಂದೂ ಮೂಲಗಳು ವಿವರಿಸಿವೆ.

* ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.