ರಾಮನಗರ ತಾಲ್ಲೂಕಿನ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಜಾಲಿವುಡ್ ಸ್ಟುಡಿಯೋಸ್ ಆ್ಯಂಡ್ ಅಡ್ವೆಂಚರ್ಸ್ ಪಾರ್ಕ್‌ಗೆ ತಹಶೀಲ್ದಾರ್ ತೇಜಸ್ವಿನಿ ನೇತೃತ್ವದಲ್ಲಿ ಬೀಗಮುದ್ರೆ ಹಾಕಲಾಯಿತು
ಬೆಂಗಳೂರು: ‘ಬಿಗ್‌ಬಾಸ್’ ರಿಯಾಲಿಟಿ ಷೋ ನಡೆಯುತ್ತಿರುವ ಬಿಡದಿಯ ಜಾಲಿವುಡ್ ಸ್ಟುಡಿಯೋಸ್ ಆ್ಯಂಡ್ ಅಡ್ವೆಂಚರ್ಸ್ ಪಾರ್ಕ್‌ಗೆ ತಾಲ್ಲೂಕು ಆಡಳಿತ ಬೀಗಮುದ್ರೆ ಹಾಕಿದೆ. ಇದೇ ವಿಚಾರವಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಜೆಡಿಎಸ್ ಮಾರ್ಮಿಕ ಟ್ವೀಟ್ ಮಾಡಿದೆ.
‘ನಟ್ಟು ಬೋಲ್ಟ್ ಮಿನಿಸ್ಟರ್ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಡೆಯುತ್ತಿದ್ದ ಬಿಗ್ ಬಾಸ್ ರಿಯಾಲಿಟಿ ಷೋ ಬಂದ್ ಮಾಡಿಸುವ ಮೂಲಕ ಕಲಾವಿದರ ಮೇಲೆ ಸೇಡು ತೀರಿಸಿಕೊಂಡಿದ್ದಾರೆ’ ಎಂದು ಜೆಡಿಎಸ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದೆ.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ, ನಿಯಮಗಳ ಉಲ್ಲಂಘನೆ ನೆಪದಲ್ಲಿ ಬಿಡದಿಯ ಬಿಗ್ ಬಾಸ್ ಮನೆಗೆ ಬೀಗ ಹಾಕಿಸಿದ್ದೀರಿ. ಒಪ್ಪಿಕೊಳ್ಳೋಣ. ಆದೇ ರೀತಿ ಬೆಂಗಳೂರಿನ ರಸ್ತೆ ಗುಂಡಿಗಳನ್ನು ಯಾವಾಗ ಬಂದ್ ಮಾಡಿಸುತ್ತೀರಾ, ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿರುವ ರೈತರ ಆತ್ಮಹತ್ಯೆಗಳನ್ನು ಯಾವಾಗ ಬಂದ್ ಮಾಡಿಸುತ್ತೀರಾ’ ಎಂದು ಜೆಡಿಎಸ್ ಪ್ರಶ್ನಿಸಿದೆ.
‘ರಾಜ್ಯದ ಜನರ ಮೇಲೆ ನಿರಂತರವಾಗಿ ತೆರಿಗೆ ಬರೆ ಎಳೆದು ಲೂಟಿ ಹೊಡೆಯುತ್ತಿರುವುದಕ್ಕೆ ಯಾವಾಗ ಬೀಗ ಹಾಕುತ್ತೀರಾ?, ಬೆಲೆ ಏರಿಕೆಗಳ ಮೂಲಕ ಜನಸಾಮಾನ್ಯರನ್ನು ಪಿಕ್ ಪಾಕೆಟ್ ಮಾಡುತ್ತಿರುವ ನಿಮ್ಮ ಕಾಂಗ್ರೆಸ್ ಸರ್ಕಾರಕ್ಕೆ ಯಾವಾಗ ಬೀಗ ಹಾಕುತ್ತೀರಾ? ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿಯನ್ನು ತಡೆಯಲು ಯಾವ ರೀತಿ ಬೀಗ ಹಾಕಿಸುತ್ತೀರಾ’ ಎಂದು ಜೆಡಿಎಸ್ ಟೀಕಿಸಿದೆ.
‘ರಾಜ್ಯದ ಜನರ ತೆರಿಗೆ ಹಣವನ್ನು ಅಕ್ರಮವಾಗಿ ವಾಮಮಾರ್ಗಗಳ ಮೂಲಕ ಕಾಂಗ್ರೆಸ್ ಹೈಕಮಾಂಡ್‌ಗೆ ಕಪ್ಪ ಒಪ್ಪಿಸುತ್ತಿರುವುದಕ್ಕೆ ಯಾವಾಗ ಬೀಗ ಹಾಕಿಸುತ್ತೀರಾ?, ಸರ್ಕಾರದ ಶೇಕರ 60ರಷ್ಟು ಕಮಿಷನ್ ದಂಧೆಗೆ ಯಾವಾಗ ಬೀಗ ಹಾಕುತ್ತೀರಾ?, ಕಾಂಗ್ರೆಸ್ ಶಾಸಕರು ಮತ್ತು ಕಾಂಗ್ರೆಸ್ ಪುಢಾರಿಗಳು ನಡೆಸುತ್ತಿರುವ ಕ್ಯಾಸಿನೊ ದಂಧೆ, ಅಕ್ರಮಗಳಿಗೆ ಯಾವಾಗ ಬೀಗ ಹಾಕಿಸುತ್ತೀರಾ? ಭ್ರಷ್ಟಾಚಾರದ ಕೂಪಗಳಾಗಿರುವ ಸರ್ಕಾರಿ ಇಲಾಖೆ, ಕಚೇರಿಗಳಿಗೆ ಯಾವಾಗ ಬೀಗ ಹಾಕಿಸುತ್ತೀರಾ? ಕೈಲಾಗದವರು ಮೈಪರಚಿ ಕೊಂಡಂತೆ ಇದೆ ಕಾಂಗ್ರೆಸ್ ಸರ್ಕಾರದ ದುರಾಡಳಿತ’ ಎಂದು ಕಾಂಗ್ರೆಸ್ ವಿರುದ್ಧ ಜೆಡಿಎಸ್ ವಾಗ್ದಾಳಿ ನಡೆಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.