ADVERTISEMENT

‘ಇಂದೇ ವಿಶ್ವಾಸಮತ, ಸ್ಪೀಕರ್ ಮೇಲೆ ನಂಬಿಕೆ ಇದೆ’– ಸುಪ್ರೀಂಕೋರ್ಟ್‌

​ಪ್ರಜಾವಾಣಿ ವಾರ್ತೆ
Published 23 ಜುಲೈ 2019, 7:42 IST
Last Updated 23 ಜುಲೈ 2019, 7:42 IST
   

ನವದೆಹಲಿ: ‘ಇಂದೇ ವಿಶ್ವಾಸಮತ ಯಾಚಿಸುವ‌ ಭರವಸೆಯನ್ನು ಸ್ಪೀಕರ್‌ ನೀಡಿದ್ದಾರೆ.ನಮಗೂ ಆಶಾಭಾವ ಇದೆ’ ಎಂದು ಹೇಳಿದ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ವಿಚಾರಣೆಯನ್ನು ನಾಳೆಗೆ ಮುಂದೂಡಿದರು.

ಸುಪ್ರೀಂಕೋರ್ಟ್‌ನಲ್ಲಿ ಪಕ್ಷೇತರ ಶಾಸಕರು ಸಲ್ಲಿರುವ ಅರ್ಜಿಯ ವಿಚಾರಣೆಯನ್ನು ಇಂದು (ಜುಲೈ 23) ಕೈಗೆತ್ತಿಕೊಂಡ ಸುಪ್ರೀಂಕೋರ್ಟ್‌ ಯಾವುದೇ ನಿರ್ದೇಶನ ನೀಡದೇ, ವಿಚಾರಣೆಯನ್ನು ನಾಳೆಗೆ ಮುಂದೂಡಿತು.

ಪಕ್ಷೇತರ ಶಾಸಕರ ಪರವಾಗಿ ವಕೀಲ ಮುಕುಲ್ ರೋಹಟಗಿ ಮತ್ತು ಸ್ಪೀಕರ್ ಪರವಾಗಿ ಅಭಿಷೇಕ್ ಮನುಸಿಂಘ್ವಿವಾದ ಮಂಡಿಸಿದರು.

ADVERTISEMENT

‘ಇಂದು ಸಂಜೆಯೊಳಗೆ ವಿಶ್ವಾಸಮತ ಯಾಚನೆಗೆ ಸೂಚಿಸಿ. ಅವರು ಬೇಕೆಂದೇ ವಿಶ್ವಾಸಮತ ಯಾಚಿಸದೆ ದಿನದೂಡುತ್ತಿದ್ದಾರೆ. ಹೀಗೆಯೇ ಮುಂದುವರಿಯಲು ಬಿಡಬೇಡಿ’ ಎಂದು ಮುಕುಲ್ ರೋಹಟಗಿ ಕೋರಿದರು.

ಈ ಮಾತಿಗೆ ಆಕ್ಷೇಪಿಸಿದ ಸ್ಪೀಕರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ, ‘ವಿಧಾನಸಭೆಯಲ್ಲಿ ಚರ್ಚೆ ಆರಂಭವಾಗಿಕೇವಲ ನಾಲ್ಕು ದಿನವಾಗಿದೆ.ಸ್ಪೀಕರ್‌ ನಿನ್ನೆ ಸಂಜೆ ವಿಶ್ವಾಸಮತ ಯಾಚಿಸಿ ಎಂದು ಹೇಳಿದ್ದರು. ಇಂದು ಸಂಜೆಯೊಳಗೆ ಮುಗಿಸುವುದಾಗಿಹೇಳಿದ್ದಾರೆ. ರಾಜ್ಯಪಾಲರು ವಿಧಾನಸಭೆ ಪ್ರಕ್ರಿಯೆ, ಕಾರ್ಯ ಕಲಾಪದಲ್ಲಿ ಹಸ್ತಕ್ಷೇಪ ‌ಮಾಡುವಂತಿಲ್ಲ.ಆದರೂ ಅವರು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಸೂಚಿಸಿದ್ದಾರೆ’ ಎಂದು ಸಿಂಘ್ವಿ ವಾದ ಮಂಡಿಸಿದರು.

‘ವಿಶ್ವಾಸಮತ ಯಾವಾಗ ಮುಗಿಸ್ತೀರಿ’ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್ ಪ್ರಶ್ನಿಸಿದರು. ‘ಚರ್ಚೆಯ ಮಧ್ಯೆ ಮತಕ್ಕೆ ಹೇಗೆ ಹಾಕಲು ಸಾಧ್ಯ? ಎಲ್ಲರೂ ಸದನದಲ್ಲಿ ಮಾತನಾಡಬೇಕು. ಚರ್ಚೆ ನಾಳೆಗೂ ಮುಂದುವರಿಯಬಹುದು’ ಎಂದು ಸಿಂಘ್ವಿ ಹೇಳಿದರು.

‘ಸ್ಪೀಕರ್ ಎದುರು ಹಾಜರಾಗುವ ಅಗತ್ಯವಿಲ್ಲ’

ರಾಜೀನಾಮೆ ನೀಡಿರುವ ಶಾಸಕರಿಗೆ ವಿಪ್‌ನಿಂದ ಸುಪ್ರೀಂಕೋರ್ಟ್‌ ರಕ್ಷಣೆ ನೀಡಿದೆ. ಹೀಗಾಗಿ ರಾಜೀನಾಮೆ ನೀಡಿರುವ 15 ಮಂದಿಗೆ ಸ್ಪೀಕರ್ ಎದುರು ವಿಚಾರಣೆಗೆ ಹಾಜರಾಗುವ ಅಗತ್ಯವಿಲ್ಲ ಎಂದು ಸಲಹೆ ನೀಡಿದ್ದೇನೆ ಎಂದು ಅತೃಪ್ತ ಶಾಸಕರ ಪರ ವಕೀಲ ಮುಕುಲ್ ರೋಹಟಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.