ADVERTISEMENT

ಅನರ್ಹಗೊಂಡರೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಬಹುದು...

​ಪ್ರಜಾವಾಣಿ ವಾರ್ತೆ
Published 23 ಜುಲೈ 2019, 20:18 IST
Last Updated 23 ಜುಲೈ 2019, 20:18 IST
   

ಬೆಂಗಳೂರು: ವಿಶ್ವಾಸ ಮತ ನಿರ್ಣಯದಲ್ಲಿ ಗೈರು ಹಾಜರಾಗಿರುವ ಮತ್ತು ಅತೃಪ್ತರು ಎಂಬ ಹಣೆಪಟ್ಟಿಯಲ್ಲಿ ಮೈತ್ರಿ ಸರ್ಕಾರದಿಂದ ಹೊರಬಂದು ಅಜ್ಞಾತ ಸ್ಥಳದಲ್ಲಿದ್ದು ಸದನಕ್ಕೆ ಗೈರು ಹಾಜರಾಗಿರುವ ಶಾಸನಸಭೆಯ ಸದಸ್ಯರನ್ನು ವಿಧಾನಸಭಾಧ್ಯಕ್ಷರು ಒಂದು ವೇಳೆ ಅನರ್ಹಗೊಳಿಸಿದರೆ ಏನಾಗಬಹುದು ಎಂಬ ಬಗ್ಗೆ ಕಾನೂನು ತಜ್ಞರು ವ್ಯಕ್ತಪಡಿಸಿರುವ ಅಭಿಪ್ರಾಯ ಇಲ್ಲಿದೆ.

*ಅನರ್ಹಗೊಂಡರೆ ಅಂತಹ ಶಾಸಕರು ಸಾಂವಿಧಾನಿಕ ಹುದ್ದೆ ಅಲಂಕರಿಸಬಹುದೇ?

ಅಶೋಕ ಹಾರನಹಳ್ಳಿ: ಅಲಂಕರಿಸಲು ಸಾಧ್ಯವಿಲ್ಲ.

ADVERTISEMENT

ಎ.ಎಸ್‌.ಪೊನ್ನಣ್ಣ: ಅಲಂಕರಿಸಲು ಸಾಧ್ಯವಿಲ್ಲ. ಸಂವಿಧಾನದ 164 1 (ಬಿ) ವಿಧಿ ಇದನ್ನು ಪ್ರತಿಬಂಧಿಸುತ್ತದೆ.

*ಉಪ ಚುನಾವಣೆಯಲ್ಲಿ ನಿಂತು ಗೆದ್ದರೆ ಆಗಬಹುದೇ?

ಹಾರನಹಳ್ಳಿ: ಗೆದ್ದರೆ ಅಲಂಕರಿಸಬಹುದು. ಚುನಾವಣೆಯಲ್ಲಿ ಗೆಲ್ಲೋತನಕ ಆಗೋದಿಲ್ಲ.

ಪೊನ್ನಣ್ಣ: ಖಂಡಿತಾ ಆಗಬಹುದು.

*ಅನರ್ಹಗೊಂಡವರು ಕೋರ್ಟ್‌ ಮೆಟ್ಟಿಲೇರಿ ಅದನ್ನು ಪ್ರಶ್ನಿಸಬಹುದೇ?

ಹಾರನಹಳ್ಳಿ: ಖಂಡಿತಾ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಬಹುದು.

ಪೊನ್ನಣ್ಣ: ಖಂಡಿತಾ ಸಂವಿಧಾನದ 226ನೇ ವಿಧಿಯಡಿ ಹೈಕೋರ್ಟ್‌ನಲ್ಲಿ ರಿಟ್‌ ಪಿಟಿಷನ್ (ಸರ್ಷಿಯೊರಾರಿ) ದಾಖಲು ಮಾಡಬಹುದು.

*ಕೋರ್ಟ್ ವಿಧಾನಸಭಾಧ್ಯಕ್ಷರ ಆದೇಶವನ್ನು ವಜಾಗೊಳಿಸಬಹುದೇ?

ಹಾರನಹಳ್ಳಿ: ವಜಾ ಮಾಡಬಹುದು. ಬಾಲಚಂದ್ರ ಜಾರಕಿಹೊಳಿ ಸೇರಿದಂತೆ 16 ಜನರ ಪ್ರಕರಣದಲ್ಲಿ ಈ ರೀತಿಯ ತೀರ್ಪು ಬಂದಿರುವುದನ್ನು ನಾವು ಗಮನಿಸಬಹುದು.

ಪೊನ್ನಣ್ಣ: ಹೌದು ವಜಾಗೊಳಿಸಬಹುದು. ವಿಧಾನಸಭೆ ಅಧ್ಯಕ್ಷರು ಕೈಗೊಳ್ಳುವ ಪ್ರಕ್ರಿಯೆಯ ಮಧ್ಯದಲ್ಲಿ ಮೂಗು ತೂರಿಸಲು ಬರುವುದಿಲ್ಲ. ಆದರೆ, ಅವರ ಕಾರ್ಯದ ಪ್ರಕ್ರಿಯೆಯಲ್ಲಿ ದೋಷ ಇದೆ ಎನಿಸಿದ್ದೇ ಆದರೆ, ಷೆಡ್ಯೂಲ್‌ 10ರ ಖಂಡಿಕೆ 2ರ ಅಡಿಯಲ್ಲಿ ಚಲಾಯಿಸಿದ ಅಧಿಕಾರವನ್ನು ರಿಟ್‌ ಅರ್ಜಿ ಸಲ್ಲಿಸುವ ಮೂಲಕ ಪ್ರಶ್ನೆ ಮಾಡಬಹುದು.ಬಾಲಚಂದ್ರ ಜಾರಕಿಹೊಳಿ ಪ್ರಕರಣದಲ್ಲಿ ಈ ಕುರಿತಂತೆ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ಗಮನಿಸಬಹುದು.

‘ಪ್ರಜಾವಾಣಿ’ ಸುದ್ದಿ, ಬರಹಗಳಲ್ಲಿ ರಾಜಕೀಯ ಬೆಳವಣಿಗೆಗಳ ಸಮಗ್ರ ನೋಟ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.