ADVERTISEMENT

ಮಧ್ಯಂತರ ಚುನಾವಣೆ ಕೇವಲ ಬ್ಲ್ಯಾಕ್‌ಮೇಲ್‌ ತಂತ್ರ: ಶಾಸಕ ಬಿ.ಶ್ರೀರಾಮುಲು ಆರೋಪ

​ಪ್ರಜಾವಾಣಿ ವಾರ್ತೆ
Published 24 ಜೂನ್ 2019, 12:23 IST
Last Updated 24 ಜೂನ್ 2019, 12:23 IST
ಬಿ.ಶ್ರೀರಾಮುಲು
ಬಿ.ಶ್ರೀರಾಮುಲು   

ಚಿತ್ರದುರ್ಗ: ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಪಕ್ಷಗಳ ನಡುವಿನ ಕಿತ್ತಾಟದಿಂದ ರಾಜ್ಯ ಸರ್ಕಾರಕ್ಕೆ ಉಂಟಾಗಿರುವ ಹಾನಿಯನ್ನು ಮುಚ್ಚಿಕೊಳ್ಳಲು ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ಉರುಳಿಸಿದ ಮಧ್ಯಂತರ ಚುನಾವಣೆ ದಾಳವು ಬ್ಲ್ಯಾಕ್‌ಮೇಲ್‌ ತಂತ್ರವಾಗಿದೆ ಎಂದು ಬಿಜೆಪಿ ಶಾಸಕ ಬಿ.ಶ್ರೀರಾಮುಲು ಆರೋಪಿಸಿದರು.

‘ದೇವೇಗೌಡರು ಯೋಚಿಸಿ ಈ ಹೇಳಿಕೆ ನೀಡಿದ್ದಾರೆ. ಈಗಿರುವ ಪರಿಸ್ಥಿತಿಯಲ್ಲಿ ಯಾರಿಗೂ ಚುನಾವಣೆ ಬೇಕಿಲ್ಲ. ಸಮ್ಮಿಶ್ರ ಸರ್ಕಾರಕ್ಕೆ ಶೀಘ್ರದಲ್ಲೇ ಗಂಡಾಂತರ ಎದುರಾಗಲಿದೆ. ಸರ್ಕಾರದ ಒಳಜಗಳ ದೇವೇಗೌಡ ಹಾಗೂ ಸಿದ್ದರಾಮಯ್ಯ ಅವರ ಕೈಮೀರಿ ಬೆಳೆದಿದೆ’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದರು.

ADVERTISEMENT

‘ರಮೇಶ ಜಾರಕಿಹೊಳಿ ಸೇರಿ ಹಲವು ಕಾಂಗ್ರೆಸ್‌ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ. ಬಿಜೆಪಿ ಜೊತೆಗೆ ಬರಲು ಅವರಿಗೆ ಹಿಂಜರಿಕೆ ಇಲ್ಲ. ಆದರೆ, ಬಿಜೆಪಿ ಯಾವ ಶಾಸಕರು ಕಾಂಗ್ರೆಸ್‌–ಜೆಡಿಎಸ್‌ ಸಂಪರ್ಕದಲ್ಲಿ ಇದ್ದಾರೆ ಎಂಬುದನ್ನು ಬಹಿರಂಗಪಡಿಸಲಿ’ ಎಂದು ಸವಾಲು ಎಸೆದರು.

ಇದಕ್ಕೆ ತಿರುಗೇಟು ನೀಡಿದ ಕಾರ್ಮಿಕ ಸಚಿವ ವೆಂಕಟರಮಣಪ್ಪ, ‘ಕಾಂಗ್ರೆಸ್‌–ಜೆಡಿಎಸ್‌ ಮಿತ್ರ ಪಕ್ಷಗಳಲ್ಲಿ ಅತೃಪ್ತರು ಯಾರೂ ಇಲ್ಲ. ಬಿಜೆಪಿಯ ಸುಮಾರು 30 ಶಾಸಕರು ನಮ್ಮ ಸಂಪರ್ಕದಲ್ಲೂ ಇದ್ದಾರೆ. ಸಮ್ಮಿಶ್ರ ಸರ್ಕಾರದೊಂದಿಗೆ ಬರಲು ಸಜ್ಜಾಗಿರುವ ಬಿಜೆಪಿ ಶಾಸಕರನ್ನು ಸ್ವಾಗತಿಸಲು ನಾವೂ ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.