ADVERTISEMENT

ವಿಶ್ಲೇಷಣೆ: ಕ್ರಿಕೆಟ್ ಕಣದಲ್ಲಿ ಹೊಸ ಹೊನಲು

18ರ ಐಪಿಎಲ್‌ನಲ್ಲಿ ಅನುಭವಿ– ನವತರುಣರ ಪೈಪೋಟಿ; ಪ್ರಿಯಾಂಶ್, ವಿಘ್ನೇಶ್‌ ಆಕರ್ಷಣೆ

ಗಿರೀಶ ದೊಡ್ಡಮನಿ
Published 10 ಏಪ್ರಿಲ್ 2025, 23:30 IST
Last Updated 10 ಏಪ್ರಿಲ್ 2025, 23:30 IST
   

ದೆಹಲಿ ಹೊರವಲಯದಲ್ಲಿರುವ ಆ ಮನೆಯಂಗಳದಲ್ಲಿ ಸದಾಕಾಲ ಕ್ರಿಕೆಟ್‌ ಆಟದ್ದೇ ಕಲರವ. ಅದು ಬಿಟ್ಟರೆ ಊಟ, ನಿದ್ದೆ ಮತ್ತು ಓದು ಅಷ್ಟೇ. ಮೊಬೈಲ್ ಫೋನ್‌ ಬಳಸುವಂತಿಲ್ಲ. ಗೆಳೆಯರೊಂದಿಗೆ ಮೋಜು, ಮಸ್ತಿಗಾಗಿ ಹೋಗುವಂತಿಲ್ಲ. ಅದು, ಕೋಚ್ ಸಂಜಯ್ ಭಾರದ್ವಾಜ್ ಅವರ ಮನೆ. ಅಲ್ಲಿರುವ ಕಠಿಣ ನಿಯಮಗಳನ್ನು ಪಾಲಿಸುವ ಹುಡುಗರ ದಂಡಿನಲ್ಲಿ ಒಬ್ಬರು ಪ್ರಿಯಾಂಶ್ ಆರ್ಯ.   

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್‌ ತಂಡದ ಪರವಾಗಿ 39 ಎಸೆತಗಳಲ್ಲಿ ಶತಕ ಬಾರಿಸಿದ ಪ್ರಿಯಾಂಶ್, ಕ್ರಿಕೆಟ್‌ಪ್ರಿಯರ ಕಣ್ಮಣಿಯಾಗಿಬಿಟ್ಟಿದ್ದಾರೆ. ಚೆನ್ನೈ ಸೂಪರ್‌ಕಿಂಗ್ಸ್ ಎದುರಿನ ಆ ಪಂದ್ಯದಲ್ಲಿ 24 ವರ್ಷದ ಎಡಗೈ ಬ್ಯಾಟರ್ ಆಟವು ಯುವರಾಜ್ ಸಿಂಗ್ ಆಟವನ್ನು ನೆನಪಿಗೆ ತಂದಿತ್ತು. ದೆಹಲಿ ಮೂಲದ ಈ ಯುವಕನನ್ನು ಕಳೆದ ಮೆಗಾ ಹರಾಜಿನಲ್ಲಿ ಪಂಜಾಬ್ ಫ್ರಾಂಚೈಸಿಯು ₹ 3.8 ಕೋಟಿಗೆ ಖರೀದಿಸಿದಾಗ ಬಹಳಷ್ಟು ಜನ ಹುಬ್ಬೇರಿಸಿದ್ದರು. ‘ಪ್ರಥಮ ದರ್ಜೆಯ ಒಂದೂ ಪಂದ್ಯವನ್ನು ಆಡದ ಯುವಕನಿಗೆ ಇಷ್ಟು ಬೆಲೆಯೇ’ ಎಂಬ ಚರ್ಚೆಯೂ ನಡೆದುಹೋಯಿತು. ಟೂರ್ನಿಯ ಮೊದಲ ಮೂರು ಪಂದ್ಯಗಳಲ್ಲಿ ಪ್ರಿಯಾಂಶ್ ಕ್ರಮವಾಗಿ ಗಳಿಸಿದ್ದು 47, 8 ಮತ್ತು 0.

ಆದರೂ ನಾಲ್ಕನೇ ಪಂದ್ಯದಲ್ಲಿ ತಂಡದ ನಾಯಕ ಶ್ರೇಯಸ್ ಅಯ್ಯರ್ ಇಟ್ಟ ವಿಶ್ವಾಸವನ್ನು ಪ್ರಿಯಾಂಶ್
ಹುಸಿಗೊಳಿಸಲಿಲ್ಲ. ಅವರು ಹೊಡೆದ 9 ಸಿಕ್ಸರ್‌ಗಳನ್ನು ಚೆನ್ನೈ ತಂಡದ ನುರಿತ ಬೌಲರ್‌ಗಳು (ಆರ್. ಅಶ್ವಿನ್ ಸೇರಿ) ಎಂದಿಗೂ ಮರೆಯುವುದಿಲ್ಲ. ಅಪ್ಪ ಪವನ್ ಆರ್ಯ ಮತ್ತು ಅಮ್ಮ ರಾಧಾ ಬಾಲಾ ಅವರಿಬ್ಬರೂ ಶಿಕ್ಷಕರು. ಮಗನ ಕ್ರಿಕೆಟ್‌ ಪ್ರೀತಿಗೆ ಅಡ್ಡಿ ಬರಲಿಲ್ಲ. ಆದರೆ ವಿದ್ಯಾಭ್ಯಾಸವನ್ನು ಕಡೆಗಣಿಸುವಂತಿಲ್ಲ ಎಂಬ ಷರತ್ತು ವಿಧಿಸಿದರು. ಎರಡನ್ನೂ ನಿಭಾಯಿಸುವ ವಾಗ್ದಾನದೊಂದಿಗೆ ಪ್ರಿಯಾಂಶ್ ಕಣಕ್ಕಿಳಿದರು.

ADVERTISEMENT

ಏಳನೇ ವಯಸ್ಸಿನಲ್ಲಿಯೇ ಈ ಹುಡುಗನನ್ನು ‘ಖಡಕ್ ಕೋಚ್’ ಎಂದೇ ಹೆಸರುವಾಸಿಯಾಗಿರುವ ಸಂಜಯ್ ಭಾರದ್ವಾಜ್ ಅವರಲ್ಲಿ ತರಬೇತಿಗೆ ಸೇರಿಸಲಾಯಿತು. ಗೌತಮ್ ಗಂಭೀರ್, ಜೋಗಿಂದರ್ ಶರ್ಮಾ, ಅಮಿತ್ ಮಿಶ್ರಾ ಮತ್ತು ಉನ್ಮುಕ್ತ್ ಚಾಂದ್ ಅವರು ಕೂಡ ಸಂಜಯ್ ಮಾರ್ಗದರ್ಶನದಲ್ಲಿ ಬೆಳೆದವರು. ಕಡುಶಿಸ್ತಿನ ತರಬೇತಿಯಲ್ಲಿ ತನ್ನ ವಯೋಸಹಜ ಅಭಿಲಾಷೆಗಳನ್ನು ಬದಿಗಿಟ್ಟ ಪ್ರಿಯಾಂಶ್‌ಗೆ ಈಗ ಫಲ ಸಿಗುತ್ತಿದೆ. ಅವರ ಹೆಸರು ಈಗ ಕ್ರಿಕೆಟ್‌ಪ್ರೇಮಿಗಳಿಗೆ ಅತ್ಯಂತ ಪ್ರಿಯವಾಗಿದೆ. ಅದರಲ್ಲೂ ಹೊಡಿ–ಬಡಿ ಶೈಲಿಯ ಆಟದ ಆರಾಧಕರಿಗಂತೂ ಪ್ರಿಯಾಂಶ್‌ ಅತ್ಯಂತ ಅಚ್ಚುಮೆಚ್ಚು. ಆದರೆ ಇದು ಭಾರದ್ವಾಜ್ ಅವರಿಗೆ ತೃಪ್ತಿ ತಂದಿಲ್ಲವಂತೆ!

‘ಇದು ಆರಂಭ ಅಷ್ಟೇ. ಸಾಗಬೇಕಾದ ಹಾದಿ ದೂರ ಇದೆ. ಐಪಿಎಲ್‌ ಮುಗಿಯುತ್ತಿದ್ದಂತೆ ರೆಡ್‌ ಬಾಲ್ ಕ್ರಿಕೆಟ್ ತರಬೇತಿ ಶುರು. ಭಾರತ ತಂಡದಲ್ಲಿ ಆಡಬೇಕು. ಪ್ರಿಯಾಂಶ್‌ಗೆ ಆ ತಾಕತ್ತು ಇದೆ’ ಎಂದು ಭಾರದ್ವಾಜ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. 

ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಆಡದಿದ್ದರೂ ಐಪಿಎಲ್‌ನಂತಹ ದೊಡ್ಡ ವೇದಿಕೆಯಲ್ಲಿ ಧೈರ್ಯದಿಂದ ತಮ್ಮ ಪ್ರತಿಭೆಯನ್ನು ಪಣಕ್ಕೊಡ್ಡುವ ಯುವ ಆಟಗಾರರು ಆಟದ ಸೊಬಗನ್ನು ಹೆಚ್ಚಿಸುತ್ತಿದ್ದಾರೆ. ಅದರಲ್ಲೂ ಈ ಬಾರಿ ಪ್ರಿಯಾಂಶ್ ಅವರಂತೆಯೇ ಗಮನ ಸೆಳೆದ ಹಲವರಿದ್ದಾರೆ.  

ಘಟಾನುಘಟಿ ಬ್ಯಾಟರ್‌ಗಳ ಜೊತೆಯಾಟ ಮುರಿಯುತ್ತಿರುವ ವಿಘ್ನೇಶ್‌ ಪುತ್ತೂರ್, ದಿಗ್ವೇಶ್ ರಾಠಿ, ಪದಾರ್ಪಣೆ ಪಂದ್ಯದಲ್ಲಿಯೇ ದೂಳೆಬ್ಬಿಸಿದ ವೇಗಿ ಅಶ್ವಿನಿಕುಮಾರ್, ಉಪಯುಕ್ತ ಕಾಣಿಕೆ ನೀಡುತ್ತಲೇ ಸಾಗುತ್ತಿರುವ ವಿಪ್ರಜ್ ನಿಗಂ ಅವರ ಹೆಸರುಗಳು ಈಗ ಕ್ರಿಕೆಟ್‌ಪ್ರಿಯರ ನಾಲಿಗೆ ಮೇಲೆ ನಲಿಯುತ್ತಿವೆ.

ಟೂರ್ನಿ ಆರಂಭವಾಗಿ 18 ದಿನಗಳು ಕಳೆಯುವುದರಲ್ಲಿಯೇ ಆರು ಜನ ‘ಅನ್‌ಕ್ಯಾಪ್ಡ್‌’ ಆಟಗಾರರು ‘ಪಂದ್ಯದ ಆಟಗಾರ’ ಗೌರವಕ್ಕೆ ಪಾತ್ರರಾಗಿದ್ದಾರೆ. ನವಪೀಳಿಗೆಯ ಕ್ರಿಕೆಟಿಗರು ಐಪಿಎಲ್‌ ಟೂರ್ನಿಯಲ್ಲಿ ಆಡುವುದನ್ನು ಎಷ್ಟು ಗಂಭೀರವಾಗಿ ಪರಿಗಣಿಸಿ ದ್ದಾರೆ ಎಂಬುದಕ್ಕೆ ಈ ಸಾಧನೆ ಸಾಕ್ಷಿಯಾಗುತ್ತದೆ. ಮಕ್ಕಳನ್ನು ಎಳವೆಯಿಂದಲೇ ಐಪಿಎಲ್‌ ಟೂರ್ನಿಗಾಗಿ ಸಿದ್ಧಗೊಳಿಸುವ ಅತ್ಯಾಧುನಿಕ ತರಬೇತಿ ವ್ಯವಸ್ಥೆಗಳು ದೇಶದ ಗ್ರಾಮಾಂತರ ಭಾಗಗಳಿಗೂ ವ್ಯಾಪಿಸಿರುವುದನ್ನು ಇದು ತೋರಿಸುತ್ತದೆ. ಇದರಿಂದಾಗಿ ಮಧ್ಯಮ ವರ್ಗದ ಕುಟುಂಬಗಳ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಹೊರಹೊಮ್ಮುತ್ತಿದ್ದಾರೆ. 

ಕೇರಳದಲ್ಲಿ ಆಟೊ ಡ್ರೈವರ್ ಆಗಿರುವ ಸುನಿಲ್ ಕುಮಾರ್ ಅವರ ಪುತ್ರ ವಿಘ್ನೇಶ್ ಪುತ್ತೂರ್ ಅವರು ಚೈನಾಮೆನ್ ಬೌಲರ್ ಕುಲದೀಪ್ ಯಾದವ್ ಅವರಷ್ಟೇ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಅವರು ದೇಶಿ ಕ್ರಿಕೆಟ್‌ನಲ್ಲಿ ಕೇರಳದ ಪರವಾಗಿ ಆಡಿದ್ದು ನಾಲ್ಕು ಟಿ20 ಪಂದ್ಯಗಳಲ್ಲಿ ಮಾತ್ರ. 24 ವರ್ಷದ ಎಡಗೈ ಸ್ಪಿನ್ನರ್ ಹೆಚ್ಚು ರನ್‌ಅಪ್‌ನೊಂದಿಗೆ ಬಂದು ಬೌಲಿಂಗ್ ಮಾಡುವುದು ವಿಶೇಷ. ಪ್ರತಿಭೆಯಿದ್ದರೂ ತಮ್ಮ ರಾಜ್ಯದಲ್ಲಿ ಹೆಚ್ಚು ಆಡುವ ಅವಕಾಶವನ್ನು ವಿಘ್ನೇಶ್ ಪಡೆಯಲಿಲ್ಲ. ಸ್ಥಳೀಯ ಟೂರ್ನಿಗಳಲ್ಲಿ ಬೌಲಿಂಗ್ ಮಾಡುತ್ತಿದ್ದ ಈ ಯುವಕ ಮುಂಬೈ ಇಂಡಿಯನ್ಸ್‌ ಕಣ್ಣಿಗೆ ಬಿದ್ದಿದ್ದೇ ತಡ ಅವಕಾಶದ ಬಾಗಿಲು ತೆರೆಯಿತು. ವಿಘ್ನೇಶ್‌ಗೆ ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ಧ ಇಂಪ್ಯಾಕ್ಟ್‌ ಪ್ಲೇಯರ್ ಆಗಿ ಕಣಕ್ಕಿಳಿಯುವ ಅವಕಾಶ ಸಿಕ್ಕಿತು. ಚೆನ್ನೈ ತಂಡದ ನಾಯಕ ಋತುರಾಜ್ ಗಾಯಕವಾಡ್ ಸೇರಿದಂತೆ ಮೂವರು ಪ್ರಮುಖ ಬ್ಯಾಟರ್‌ಗಳ ವಿಕೆಟ್‌ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು. 

ಲಖನೌ ಸೂಪರ್ ಜೈಂಟ್ಸ್ ತಂಡದಲ್ಲಿ ಆಡುತ್ತಿರುವ ದಿಗ್ವೇಶ್ ರಾಠಿ ಅವರ ಕಥೆ ಸ್ವಲ್ಪ ವಿಭಿನ್ನ. ಇವರಿಗೆ ವೆಸ್ಟ್ ಇಂಡೀಸ್ ಆಲ್‌ರೌಂಡರ್ ಸುನಿಲ್ ನಾರಾಯಣ್ ಅವರೆಂದರೆ ಅಚ್ಚುಮೆಚ್ಚು. ಆಟ ಮತ್ತು ಹಾವಭಾವ
ಗಳಲ್ಲಿಯೂ ಸುನಿಲ್ ಅವರನ್ನು ಅನುಕರಿಸುತ್ತಾರೆ. ಎರಡು ಪಂದ್ಯಗಳಲ್ಲಿ ತಮ್ಮ ಎದುರಾಳಿ ಬ್ಯಾಟರ್‌ಗಳನ್ನು
ಔಟ್ ಮಾಡಿ ‘ನೋಟ್‌ಬುಕ್‌ ಸಂಭ್ರಮ’ ಆಚರಿಸಿ ರೆಫರಿಗಳ ಕೆಂಗಣ್ಣಿಗೆ ಗುರಿಯಾದರು. ಎರಡು ಡಿ–ಮೆರಿಟ್ ಪಾಯಿಂಟ್ ಕೂಡ ಇವರ ಖಾತೆ ಸೇರಿದವು. ದಂಡ ಕೂಡ ಭರಿಸಿದರು. ಮಾಜಿ ಕ್ರಿಕೆಟಿಗ ಸೈಮನ್ ಡೂಲ್ ಸೇರಿದಂತೆ ಕೆಲವರು ದಿಗ್ವೇಶ್‌ ಪರ ಬ್ಯಾಟಿಂಗ್ ಮಾಡಿದರು. ಬಿಸಿಸಿಐ ದಂಡ ವಿಧಿಸಬಾರದಿತ್ತು, ದಿಗ್ವೇಶ್ ಅವರ ಸಂಭ್ರಮ ಅಸಭ್ಯವಾಗಿರಲಿಲ್ಲ, ಒಳ್ಳೆಯ ಅಭಿರುಚಿಯಿಂದ ಕೂಡಿತ್ತು ಎಂದು ಸಮರ್ಥಿಸಿದ್ದಾರೆ. ದಿಗ್ವೇಶ್ ಅವರಿಗೆ ಮಾತ್ರ ಇದಾವುದರ ಪರಿವೆಯೂ ಇಲ್ಲ. ಅವರು ತಮ್ಮದೇ ಲೋಕದಲ್ಲಿ ವಿಹರಿಸುತ್ತಿದ್ದಾರೆ. ಇತ್ತೀಚೆಗೆ ಕೋಲ್ಕತ್ತ ನೈಟ್ ರೈಡರ್ಸ್ ಎದುರಿನ ಪಂದ್ಯದಲ್ಲಿ ತಮ್ಮ ‘ಗುರು’ ಸುನಿಲ್ ನಾರಾಯಣ್ ವಿಕೆಟ್ ಪಡೆದ ದಿಗ್ವೇಶ್, ಪಿಚ್‌ ಪಕ್ಕದ ಹುಲ್ಲಿನಂಕಣದ ಮೇಲೆ ಸಹಿ ಗೀಚುವಂತೆ ನಟಿಸಿದರು. ಇನ್ನೊಂದು ಪಂದ್ಯದಲ್ಲಿ ಅವರು ಕಡಿಮೆ ರನ್ ನೀಡಿ ಒಂದು ವಿಕೆಟ್ ಪಡೆದು ಪಂದ್ಯಶ್ರೇಷ್ಠರೂ ಆದರು.

ಮುಂಬೈ ತಂಡದ ಎಡಗೈ ವೇಗಿ ಅಶ್ವಿನಿಕುಮಾರ್ ತಮ್ಮ ಚೊಚ್ಚಲ ಪಂದ್ಯದಲ್ಲಿಯೇ 4 ವಿಕೆಟ್ ಗಳಿಸಿದರು. ಇದರೊಂದಿಗೆ ಅನ್‌ಕ್ಯಾಪ್ಡ್‌ ಆಟಗಾರನೊಬ್ಬ ಮೊದಲ ಬಾರಿ ಇಂತಹ ಸಾಧನೆ ಮಾಡಿದ ಹೆಗ್ಗಳಿಕೆಗೆ ಪಾತ್ರರಾದರು. ಡೆಲ್ಲಿ ಕ್ಯಾಪಿಟಲ್ಸ್‌ನ ವಿಪ್ರಜ್ ನಿಗಂ, ಗುಜರಾತ್ ಟೈಟನ್ಸ್ ತಂಡದ ಸಾಯಿ ಸುದರ್ಶನ್,  ಸನ್‌ರೈಸರ್ಸ್ ತಂಡದ ಅನಿಕೇತ್ ವರ್ಮಾ ಸೇರಿದಂತೆ ಹಲವರು ಈಗ ಗಮನ ಸೆಳೆದಿದ್ದಾರೆ. ಆರ್‌ಸಿಬಿ ತಂಡದ ಮನೋಜ್ ಬಾಂಢಗೆ ಸೇರಿದಂತೆ ಇನ್ನೂ ಹಲವರು ಅವಕಾಶಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.  

ಇದೆಲ್ಲದರ ನಡುವೆ, ಹೊಸ ಹುಡುಗರ ಭರಾಟೆಯಲ್ಲಿ ತಮ್ಮ ಸ್ಥಾನ ಉಳಿಸಿಕೊಳ್ಳಲು ಅನುಭವಿ ತಾರೆಗಳೂ
ಬೆವರುಹರಿಸುತ್ತಿದ್ದಾರೆ. ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿ, ಅಜಿಂಕ್ಯ ರಹಾನೆ, ಇಶಾಂತ್ ಶರ್ಮಾ, ಭುವನೇಶ್ವರ್ ಕುಮಾರ್ ಸೇರಿದಂತೆ ಹಲವು ಆಟಗಾರರು ತಾವಿನ್ನೂ ಪ್ರಸ್ತುತ ಎಂದು ತೋರಿಸುವ ಪ್ರಯತ್ನದಲ್ಲಿ ಇದ್ದಾರೆ. ಇದರಿಂದಾಗಿ ‘ಹೊಸ ಚಿಗುರು, ಹಳೆ ಬೇರು ಸೇರಿರಲು ಮರ ಸೊಬಗು...’ ಎಂಬಂತೆ ಐಪಿಎಲ್‌ ಆಕರ್ಷಣೆ ಹೆಚ್ಚುತ್ತಲೇ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.