ADVERTISEMENT

ವಿಶ್ಲೇಷಣೆ: ಹುಲಿಗಳ ಸಂಖ್ಯೆ ಮತ್ತು ಸಂಘರ್ಷ

ಸಂಜಯ್ ಗುಬ್ಬಿ
Published 16 ಸೆಪ್ಟೆಂಬರ್ 2025, 19:30 IST
Last Updated 16 ಸೆಪ್ಟೆಂಬರ್ 2025, 19:30 IST
...
...   

ಹುಲಿಗಳ ಬಗ್ಗೆ ನಾಲ್ಕು ಕಳವಳಕಾರಿ ಸುದ್ದಿಗಳು ಇತ್ತೀಚೆಗೆ ಪ್ರಕಟಗೊಂಡಿವೆ. ಮೂರು ಸುದ್ದಿಗಳು ಬಂಡೀಪುರ ಹುಲಿ ಯೋಜನೆಗೆ ಸಂಬಂಧಿಸಿದವು. ಇನ್ನೊಂದು, ನಾಗರಹೊಳೆ ಹುಲಿ ಯೋಜನೆಗೆ ಸಂಬಂಧಿಸಿದ್ದು. ಅವುಗಳಲ್ಲಿ ಎರಡು ಸುದ್ದಿಗಳಿಗೆ ಪಾರಿಸರಿಕ ಕೊಂಡಿಯಿದ್ದರೆ, ಇನ್ನೆರಡು ಸುದ್ದಿಗಳು ಸಾಮಾಜಿಕ ದೃಷ್ಟಿಕೋನವನ್ನು ಹೊಂದಿವೆ.

ಮೊದಲನೆಯದು: ಬಂಡೀಪುರದ ಸಫಾರಿ ಪ್ರದೇಶದಲ್ಲಿ ಹೆಣ್ಣು ಹುಲಿಯೊಂದು ನೈಸರ್ಗಿಕ ಕಾರಣಗಳಿಂದ ಗಾಯಗೊಂಡು ಕುಂಟುತ್ತಿರುವ ದೃಶ್ಯ. ಇದು, ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿ ಕೆಲವು ವನ್ಯಜೀವಿ ಆಸಕ್ತರು ಆ ಹುಲಿಗೆ ಚಿಕಿತ್ಸೆ ನೀಡಲು ಮತ್ತು ಅದರ ಮರಿಗಳಿಗೆ ಕೃತಕವಾಗಿ ಆಹಾರವನ್ನೊದಗಿಸಲು ಅರಣ್ಯ ಇಲಾಖೆಯ ಮೇಲೆ ಒತ್ತಡ ಹೇರಿದ ಪರಿಣಾಮ, ಇಲಾಖೆ ಏನೇನೊ ಕಸರತ್ತು ಮಾಡಿತು.

ಎರಡನೆಯದು: ಮೈಸೂರಿನ ಇಲವಾಲದ ಹತ್ತಿರ ಹುಲಿಗಳು ಪ್ರತ್ಯಕ್ಷವಾಗಿ ಜನರಲ್ಲಿ ಆತಂಕ ಮೂಡಿದೆ ಎಂಬ ಸುದ್ದಿ.

ADVERTISEMENT

ಮೂರನೆಯದು: ಬಂಡೀಪುರ ಹುಲಿ ಯೋಜನೆಯ ಹತ್ತಿರವಿರುವ ಕುಂದುಕೆರೆ ಗ್ರಾಮದ ಬಳಿಯಿರುವ ಪುಟ್ಟ ಗುಡ್ಡದಲ್ಲಿ ಇತ್ತೀಚೆಗೆ ಎರಡು ಹುಲಿಗಳು ಕಾಣಿಸಿಕೊಂಡು, ಅವುಗಳಲ್ಲಿ ಒಂದು ಹುಲಿ ಇನ್ನೊಂದು ಹುಲಿಯಿಂದ ಗಾಯಗೊಂಡು ನಿತ್ರಾಣಗೊಂಡಿರುವ ಸುದ್ದಿ.

ನಾಲ್ಕನೆಯದು: ಬಂಡೀಪುರದ ಬಳಿಯಿರುವ ಬೊಮ್ಮಲಾಪುರ ಎಂಬ ಹಳ್ಳಿಯಲ್ಲಿ ಗ್ರಾಮಸ್ಥರು ಹುಲಿ ಸಂಘರ್ಷದಿಂದ ಬೇಸತ್ತು, ಹುಲಿಯನ್ನು ಹಿಡಿಯಲು ಇಟ್ಟಿದ್ದ ಬೋನಿನಲ್ಲಿ ಅರಣ್ಯ ಇಲಾಖೆಯ ನೌಕರರನ್ನೇ ಕೂಡಿ ಹಾಕಿದ ಘಟನೆ.

ಈ ನಾಲ್ಕೂ ಘಟನೆಗಳು ಸ್ವತಂತ್ರವೆನಿಸಿದರೂ, ಅವುಗಳಿಗೆ ಮತ್ತು ವನ್ಯಜೀವಿ ಸಂರಕ್ಷಣೆಯ ವಿಧಾನಗಳಿಗೆ ಕೊಂಡಿಗಳಿವೆ. ನಿಸರ್ಗದಲ್ಲಿ ಹುಲಿಯನ್ನು ಭಕ್ಷಿಸುವ ಇತರ ಪ್ರಾಣಿಗಳು ಇಲ್ಲವಾದುದರಿಂದ ಅದು ಪಾರಿಸರಿಕ ಗೋಪುರದ ತುದಿಯಲ್ಲಿರುವ ವನ್ಯಜೀವಿ. ಹಾಗಾಗಿ, ಹುಲಿಗಳಿಗೆ ಉತ್ತಮ ರಕ್ಷಣೆ ಸಿಕ್ಕರೆ ಅವುಗಳ ಸಂಖ್ಯೆ ಹೆಚ್ಚುತ್ತದೆ. ಆವಾಸಸ್ಥಾನದ ವ್ಯಾಪ್ತಿ, ಆ ಪ್ರದೇಶದಲ್ಲಿರುವ ಬಲಿಪ್ರಾಣಿಗಳ ಸಾಂದ್ರತೆಗೆ ಅನುಗುಣವಾಗಿ ಅವುಗಳ ಸಂಖ್ಯೆಯನ್ನು ನೈಸರ್ಗಿಕ ಕಾರಣಗಳು ನಿಯಂತ್ರಿಸುತ್ತವೆ. ಹುಲಿಗಳ ನೈಸರ್ಗಿಕ ಮರಣ ಪ್ರಮಾಣಕ್ಕೆ ಮುಖ್ಯ ಕಾರಣಗಳು: ನೆಲಹರವಿಗಾಗಿ ಹುಲಿಗಳ ಕಾದಾಟ, ನೈಸರ್ಗಿಕ ಕಾರಣಗಳಿಂದ ಆಗುವ ಗಾಯಗಳು, ರೋಗ, ಆಹಾರ ಅಥವಾ ನೀರಿನ ಕೊರತೆ. ಇವುಗಳಲ್ಲಿ ಕೊನೆಯದು ಅಪರೂಪ.

ಏಕೆಂದರೆ, ಆಹಾರ ಮತ್ತು ನೀರಿನ ಕೊರತೆಯಿದ್ದರೆ ಹುಲಿಗಳ ಸಂಖ್ಯೆ ನೈಸರ್ಗಿಕವಾಗಿ ಕಡಿಮೆಯಿದ್ದು, ಅವುಗಳ ಸಂಖ್ಯೆ ಹೆಚ್ಚುವುದಿಲ್ಲ. ಇದನ್ನು ಮಲೆಮಹದೇಶ್ವರಬೆಟ್ಟ, ಕಾವೇರಿ ವನ್ಯಜೀವಿಧಾಮ ಮತ್ತಿತರ ಪ್ರದೇಶಗಳಲ್ಲಿ ನಿರ್ದಿಷ್ಟವಾಗಿ ಕಾಣಬಹುದು. ಮಹದೇಶ್ವರಬೆಟ್ಟ, ಕಾವೇರಿ ವನ್ಯಜೀವಿ ಧಾಮದಲ್ಲಿ ನಡೆಸಿರುವ ಅಧ್ಯಯನಗಳ ಪ್ರಕಾರ, ಈ ಎರಡು ವನ್ಯಜೀವಿಧಾಮಗಳಲ್ಲಿ 12–15 ಹುಲಿಗಳಿವೆ. ಒಂದಕ್ಕೊಂದು ಹೊಂದಿಕೊಂಡಿರುವ ಈ ವನ್ಯಜೀವಿಧಾಮಗಳ ಒಟ್ಟು ಭೂ ವಿಸ್ತೀರ್ಣ 1,991 ಚ.ಕಿ.ಮೀ. (ಸುಮಾರು 4,91,987 ಎಕರೆ).

ಮಲೆಮಹದೇಶ್ವರ ಮತ್ತು ಕಾವೇರಿ ವನ್ಯಜೀವಿಧಾಮಗಳಂತೆಯೇ ಭೌಗೋಳಿಕವಾಗಿ ಕೂಡಿಕೊಂಡಿರುವ ಬಂಡೀಪುರ ಮತ್ತು ನಾಗರಹೊಳೆ ಹುಲಿ ಯೋಜನಾ ಪ್ರದೇಶಗಳ ಒಟ್ಟು ವಿಸ್ತೀರ್ಣ 1,771 ಚ.ಕಿ.ಮೀ. (ಸುಮಾರು 4,37,624 ಎಕರೆ). ಇತ್ತೀಚಿನ ವರದಿಗಳ ಪ್ರಕಾರ, ಇಲ್ಲಿರುವ ಹುಲಿಗಳ ಸಂಖ್ಯೆ 288. ಅಂದರೆ, ಮಲೆಮಹದೇಶ್ವರ ಹಾಗೂ ಕಾವೇರಿ ವನ್ಯಜೀವಿಧಾಮಗಳಿಗಿಂತ 200 ಚ.ಕಿ.ಮೀ. ಕಡಿಮೆ ಇರುವ ಪ್ರದೇಶಕ್ಕಿಂತ ಸುಮಾರು 20 ಪಟ್ಟು ಹೆಚ್ಚು ಹುಲಿಗಳು ಬಂಡೀಪುರ–ನಾಗರಹೊಳೆಯಲ್ಲಿವೆ. ಇಲ್ಲಿ ಹಲವು ದಶಕಗಳಿಂದ ಆಗಿರುವ ರಕ್ಷಣಾ ಕಾರ್ಯಗಳು ಮತ್ತು ಹುಲಿಗಳ ಆವಾಸಸ್ಥಾನಗಳ ನಿರ್ವಹಣೆಯಿಂದ ಈ ಪ್ರದೇಶದಲ್ಲಿ ಹುಲಿಗಳ ಸಂಖ್ಯೆ ಪಾರಿಸರಿಕ ಸಮತೋಲನದ ಮಟ್ಟ ತಲುಪಿವೆ ಅಥವಾ ಅದಕ್ಕಿಂತ ಹೆಚ್ಚಾಗಿವೆ. ಇದರ ಪರಿಣಾಮವಾಗಿ ಪ್ರಾಯದ ಹುಲಿಗಳು ಚಾಮರಾಜನಗರ, ಮೈಸೂರು ಮತ್ತು ಕೊಡಗು ಜಿಲ್ಲೆಯ ಸಣ್ಣಪುಟ್ಟ ಕಾಡುಗಳು ಅಥವಾ ಕೃಷಿ ಪ್ರದೇಶಗಳಿಗೆ ವಲಸೆ ಹೋಗುತ್ತಿವೆ. ಈ ಸಣ್ಣಪುಟ್ಟ ಕಾಡುಗಳು ಅಥವಾ ಕೃಷಿ ಪ್ರದೇಶ ಹುಲಿಗಳಿಗೆ ಪಾರಿಸರಿಕ ಮತ್ತು ಸಾಮಾಜಿಕವಾಗಿ ಸೂಕ್ತ ಪ್ರದೇಶಗಳಲ್ಲ. ಅಲ್ಲಿ ಅವುಗಳಿಗೆ ಬೇಕಿರುವಷ್ಟು ನೈಸರ್ಗಿಕ ಆಹಾರ ಸಿಗದಿರುವುದರಿಂದ, ಅವು ಹೆಚ್ಚಾಗಿ ಜಾನುವಾರುಗಳ ಮೇಲೆ ಅವಲಂಬಿತವಾಗಿವೆ. ಇದು ಸ್ಥಳೀಯರನ್ನು ತೊಂದರೆಗೆ ಸಿಲುಕಿಸಿದೆ ಮತ್ತು ಕೃಷಿ ಪ್ರದೇಶಗಳಲ್ಲಿ ಹುಲಿಗಳಿರುವುದು ಜನರನ್ನು ಆತಂಕಕ್ಕೀಡು ಮಾಡಿದೆ.

ನಾವು ಪಾರಿಸರಿಕ ಮತ್ತು ಸಾಮಾಜಿಕ ವಿಚಾರಗಳನ್ನು ಗಮನಕ್ಕೆ ತೆಗೆದುಕೊಳ್ಳದೆ ಬಂಡೀಪುರ–ನಾಗರಹೊಳೆಯಲ್ಲಿ ಹುಲಿಗಳ ಸಂಖ್ಯೆಯನ್ನು ಕೃತಕವಾಗಿ ಹೆಚ್ಚಿಸುವ ಕಾರ್ಯ ವಿಧಾನಗಳನ್ನು ಅಳವಡಿಸಿಕೊಂಡಿದ್ದೇವೆ. ಸಾಮಾಜಿಕ ಮಾಧ್ಯಮಗಳ ಒತ್ತಡಕ್ಕೆ ಮಣಿದು ಅವುಗಳಿಗೆ ಚಿಕಿತ್ಸೆ ನೀಡಿ, ಅವುಗಳ ನೈಸರ್ಗಿಕ ಮರಣ ಪ್ರಮಾಣಕ್ಕೆ ಅವಕಾಶ ಕೊಡದೆ ಸಂಖ್ಯೆಯನ್ನು ಅನೈಸರ್ಗಿಕವಾಗಿ ಹೆಚ್ಚಿಸುತ್ತಿದ್ದೇವೆ. ಸಾಕುಪ್ರಾಣಿಗಳು ಮತ್ತು ವನ್ಯಜೀವಿಗಳ ಬಗ್ಗೆ ಇರುವ ವ್ಯತ್ಯಾಸಗಳನ್ನು ಅರಿತುಕೊಳ್ಳದೆ, ಹುಲಿಗಳನ್ನು ಸಾಕುಪ್ರಾಣಿಗಳ ದೃಷ್ಟಿಕೋನದಿಂದ ನೋಡಲು ಪ್ರಾರಂಭಿಸಿದ್ದೇವೆ.

ಬಂಡೀಪುರದಲ್ಲಿ ಗಾಯಗೊಂಡು ಪತ್ತೆಯಾದ ಹೆಣ್ಣು ಹುಲಿಗೆ ನಾಲ್ಕು ಮರಿಗಳಿವೆ. ಈ ತಾಯಿ ಮತ್ತು ಮರಿಗಳು ಉಳಿಯುವುದು ಬಹು ಮುಖ್ಯವಾದರೂ, ಅವುಗಳು ನೈಸರ್ಗಿಕವಾಗಿ ಉಳಿಯಬೇಕೇ ಹೊರತು ಅವುಗಳನ್ನು ಕೃತಕವಾಗಿ ಬದುಕಿಸಿಕೊಳ್ಳುವ ಪ್ರಯತ್ನ ಮಾಡಿದರೆ, ಹುಲಿಗಳ ಸಂಖ್ಯೆಯನ್ನು ಅಸಹಜವಾಗಿ ಹೆಚ್ಚಿಸಿದಂತಾಗುತ್ತದೆ. ವೈಜ್ಞಾನಿಕ ಅಧ್ಯಯನಗಳ ಪ್ರಕಾರ ಹುಲಿಗಳು ಅಧಿಕವಾಗಿರುವ ಬಂಡೀಪುರ–ನಾಗರಹೊಳೆಯಂತಹ ಪ್ರದೇಶಗಳಲ್ಲಿ ವಾರ್ಷಿಕವಾಗಿ ಹುಲಿಗಳಲ್ಲಿ ಶೇ 25ರಷ್ಟು ನೈಸರ್ಗಿಕ ಮರಣ ಪ್ರಮಾಣವಿರುತ್ತದೆ. ಇದನ್ನು ತಡೆದರೆ, ಹುಲಿಗಳ ಸಂಖ್ಯೆ ಅವುಗಳಿಗಿರುವ ಆವಾಸಸ್ಥಾನಕ್ಕಿಂತ ಹೆಚ್ಚಾಗಿ ಜನವಸತಿ ಪ್ರದೇಶಗಳಿಗೆ ವಲಸೆ ಹೋಗಿ ತಮ್ಮ ವಸಾಹತು ಸ್ಥಾಪಿಸಿಕೊಳ್ಳಲು ಪ್ರಯತ್ನಿಸುತ್ತವೆ. ಇದು ಮಾನವ–ಹುಲಿ ಸಂಘರ್ಷದಂತಹ ಗಂಭೀರ ಸಮಸ್ಯೆಗೆ ಎಡೆ ಮಾಡಿಕೊಡುತ್ತದೆ.

ಇನ್ನೊಂದು ಗಂಭೀರ ಸಮಸ್ಯೆ, ಹುಲಿಗಳ ಆವಾಸ ಸ್ಥಾನಗಳ ಅವೈಜ್ಞಾನಿಕ ನಿರ್ವಹಣೆ. ವರ್ಷಪೂರ್ತಿ ವನ್ಯಜೀವಿಗಳಿಗೆ ನೀರು ಸಿಗುವ ಹಾಗೆ ಮಾಡಲು ಹೊಸ ಕೆರೆಗಳ ನಿರ್ಮಾಣ, ಕೊಳವೆಬಾವಿಗಳನ್ನು ತೋಡುವುದು ಮಾಡುತ್ತಿದ್ದೇವೆ. ವರ್ಷಪೂರ್ತಿ ನೀರು ಸಿಗುವು ದರಿಂದ ಹುಲಿಗಳಿಗೆ ಅವಶ್ಯಕವಾದ ಸಾರಂಗ ಗಳಂತಹ ಪ್ರಾಣಿಗಳು ಅಸ್ವಾಭಾವಿಕವಾಗಿ ವೃದ್ಧಿಸುತ್ತದೆ. ಋತುಮಾನಕ್ಕೆ ಅನುಗುಣವಾಗಿ ನೀರಿದ್ದರೆ, ದೈಹಿಕವಾಗಿ ಸಮರ್ಥ ಪ್ರಾಣಿಗಳು ಮಾತ್ರ ಬದುಕಿ, ಇನ್ನುಳಿದವು ಅಸುನೀಗಿ ಅವುಗಳ ಸಂಖ್ಯೆಯನ್ನು ನಿಸರ್ಗ ಪಾರಿಸರಿಕ ಮಟ್ಟದಲ್ಲಿ ಕಾಯ್ದುಕೊಳ್ಳುತ್ತದೆ.

ಸಾರಂಗಗಳ ಸಂಖ್ಯೆ ಹೆಚ್ಚಾದಾಗ ಹುಲಿಗಳ ಸಂಖ್ಯೆಯೂ ಹೆಚ್ಚುತ್ತದೆ. ಆದರೆ, ಅವುಗಳ ಆವಾಸಸ್ಥಾನದ ವ್ಯಾಪ್ತಿ ಹೆಚ್ಚಾಗುವುದಿಲ್ಲ. 5 ಜನರಿಗೆ ಸರಿಹೊಂದುವಂತೆ ಕಟ್ಟಿದ ಮನೆಯಲ್ಲಿ 15–20 ಜನರನ್ನು ತುರುಕಿದ ಹಾಗೆ ಆಗುತ್ತದೆ. ಇದರ ಪರಿಣಾಮವಾಗಿ ಹುಲಿಗಳು ಹೊಸ ವ್ಯಾಪ್ತಿಯನ್ನು ಹುಡುಕಿಕೊಂಡು, ತಾವು ಹುಟ್ಟಿರುವ ಪ್ರದೇಶವನ್ನು ಬಿಟ್ಟು ಕೃಷಿ ಪ್ರದೇಶಗಳಿಗೆ ಮತ್ತು ಚಿಕ್ಕಪುಟ್ಟ ಕಾಡುಗಳತ್ತ ವಲಸೆ ಹೋಗುವುದು ಪ್ರಾರಂಭವಾಗಿದೆ. ಹೀಗೆಯೇ ಮುಂದುವರಿದರೆ, ಈಗ ಮೈಸೂರು, ಮಡಿಕೇರಿ ತಲುಪಿರುವ ಹುಲಿಗಳು ಬೇರೆ ಬೇರೆ ಪ್ರದೇಶಗಳಿಗೆ ಹಬ್ಬುವ ಸಾಧ್ಯತೆಯಿದೆ. ವನ್ಯಜೀವಿ ಸಂರಕ್ಷಣಾ ದೃಷ್ಟಿಕೋನದಿಂದಷ್ಟೇ ನೋಡಿದರೆ ಇದು ಸಂಭ್ರಮಿಸುವ ವಿಚಾರವಾದರೂ, ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷ, ಮತ್ತು ಅದನ್ನು ಸರಿಯಾಗಿ ನಿರ್ವಹಿಸದ ಹಿನ್ನೆಲೆಯಲ್ಲಿ ಅಧಿಕವಾಗುತ್ತಿರುವ ಹುಲಿಗಳನ್ನು ಸೂಕ್ತವಲ್ಲದ ಪ್ರದೇಶಗಳಲ್ಲಿ ತುರುಕಲು ಪ್ರಯತ್ನಿಸುವುದು ಪಾರಿಸರಿಕ ದೃಷ್ಟಿಕೋನದಿಂದಾಗಲೀ ಅಥವಾ ಸಾಮಾಜಿಕ ದೃಷ್ಟಿಕೋನದಿಂದಾಗಲೀ ಸರಿಯಲ್ಲ. ಈ ತರಹದ ಪ್ರದೇಶಗಳಲ್ಲಿ ಹುಲಿಗಳ ಇರುವಿಕೆಯಿಂದ ಹುಲಿಗಳಿಗೆ ಕೂಡ ತೊಂದರೆಯೇ. ಸಂಘರ್ಷ ಹೆಚ್ಚಾದಂತೆ ಹುಲಿಗಳ ಬಗ್ಗೆ ಸಮಾಜಕ್ಕಿದ್ದ ತಾಳಿಕೆಯ ಸೌಹಾರ್ದ ಕಡಿಮೆಯಾಗಿ, ಅದರ ವಿರುದ್ದದ ಮನಃಸ್ಥಿತಿ ಮತ್ತು ನಡವಳಿಕೆ ಹೆಚ್ಚುತ್ತದೆ.

ಬೊಮ್ಮಲಾಪುರದ ಗ್ರಾಮಸ್ಥರು ತೆಗೆದುಕೊಂಡ ನಿಲುವು ಬಹುಶಃ ಹಲವು ವರ್ಷಗಳಿಂದ ಮಾನವ–ವನ್ಯಜೀವಿ ಸಂಘರ್ಷದ ಬಗ್ಗೆ ಅಂತರಂಗದೊಳಗೆ ಹುದುಗಿದ್ದ ಅಸಹಾಯಕ ಮನೋವೃತ್ತಿಯನ್ನು ತೋರಿಸುತ್ತಿರಬಹುದು. ಈಗಲಾದರೂ ಸಾಮಾಜಿಕ ಮಾಧ್ಯಮಗಳಲ್ಲಿ ತರುವ ಒತ್ತಡಕ್ಕೆ ಮಣಿಯದೆ, ವನ್ಯಜೀವಿಯ ಆವಾಸಸ್ಥಾನಗಳ ಅವೈಜ್ಞಾನಿಕ ನಿರ್ವಹಣೆಯನ್ನು ತಪ್ಪಿಸಬೇಕಾಗಿದೆ. ಬಹು ಮುಖ್ಯವಾಗಿ, ಆರ್ಥಿಕ ಕಾರಣಗಳಿಗೆ ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ನಿಲ್ಲಿಸದಿದ್ದರೆ ಹುಲಿಗಳಿಗಾಗಲೀ ಸಮಾಜಕ್ಕಾಗಲೀ ಒಳಿತಾಗದು.

ಈಗಿನ ಸಂಘರ್ಷದ ಪರಿಸ್ಥಿತಿಗೆ ವನ್ಯಜೀವಿ ಆವಾಸಗಳ ಅವೈಜ್ಞಾನಿಕ ನಿರ್ವಹಣೆಯೂ ಕಾರಣ. ಈ ಧೋರಣೆ ಬದಲಾಯಿಸಿಕೊಂಡರೆ, ಮುಂಬರುವ ದಿನಗಳಲ್ಲಿ ಸಂಘರ್ಷಕ್ಕೊಳಗಾಗುವ ವನ್ಯಜೀವಿಗಳ ಸಂಖ್ಯೆಯಲ್ಲಿ ಸಮತೋಲನ ಕಾಣಬಹುದು. ಇದರಿಂದ ಇಲವಾಲ, ಬೊಮ್ಮಲಾಪುರ, ಇನ್ನಿತರ ಪ್ರದೇಶಗಳಿಗೆ ಹುಲಿಗಳು ಹೋಗುವುದು ಕಡಿಮೆಯಾಗಿ ಸಂಘರ್ಷ ತಗ್ಗುವ ದಿನಗಳನ್ನು ಕಾಣಬಹುದು. ಇಲ್ಲವಾದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗುವುದು, ಅದರ, ಮತ್ತು ಅರಣ್ಯ ಇಲಾಖೆಯ ವಿರುದ್ಧ ಸ್ಥಳೀಯ ಜನರ ಆಕ್ರೋಶ ಇನ್ನೂ ಹೆಚ್ಚಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.