ADVERTISEMENT

ಸಂಪಾದಕೀಯ | ಕಾರ್ಯಕರ್ತರ ಮಹತ್ವ ಅರಿಯದೆ ಕಾಂಗ್ರೆಸ್‌ ಪುನಶ್ಚೇತನ ಸಾಧ್ಯವಿಲ್ಲ

ಪಕ್ಷದಲ್ಲಿ ಗುಂಪುಗಾರಿಕೆ ನಿವಾರಿಸಿ, ಶಿಸ್ತು ಮೂಡಿಸುವುದರ ಜೊತೆಗೆ ಬದಲಾದ ರಾಜಕೀಯ ಸಂದರ್ಭಕ್ಕೆ ತಕ್ಕಂತೆ ಪಕ್ಷವನ್ನು ಸಜ್ಜುಗೊಳಿಸಬೇಕಾದ ಸವಾಲಿದೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2019, 5:35 IST
Last Updated 22 ಜೂನ್ 2019, 5:35 IST
   

ಲೋಕಸಭೆ ಚುನಾವಣೆಯಲ್ಲಿ ದಯನೀಯ ಸೋಲು ಅನುಭವಿಸಿದ ಕಾಂಗ್ರೆಸ್‌ ಪಕ್ಷ ರಾಜ್ಯದಲ್ಲಿ ಚೇತರಿಕೆಯ ಹೊಸ ಹಾದಿಗೆ ಹುಡುಕಾಟ ನಡೆಸಿದೆ. ಪಕ್ಷ ಪುನಶ್ಚೇತನದ ಮೊದಲ ಕ್ರಮವಾಗಿ ಕೆಪಿಸಿಸಿ ಪದಾಧಿಕಾರಿಗಳ ಸಮಿತಿಯನ್ನೇ ವಿಸರ್ಜಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮತ್ತು ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರನ್ನು ಹೊರತುಪಡಿಸಿ ಉಳಿದ ಎಲ್ಲ ಪದಾಧಿಕಾರಿಗಳೂ ಸ್ಥಾನ ಕಳೆದುಕೊಂಡಿದ್ದಾರೆ. ತಳಮಟ್ಟದಿಂದ ಪಕ್ಷದ ಬಲವರ್ಧನೆಗೆ ಶೀಘ್ರವೇ ಹೊಸ ‍ಪದಾಧಿಕಾರಿಗಳನ್ನು ನೇಮಿಸಲು ಹಾಗೂ ಅದರಲ್ಲಿ ಹೊಸ ಮುಖಗಳಿಗೆ ಆದ್ಯತೆ ನೀಡಲು ಪಕ್ಷದ ಹೈಕಮಾಂಡ್‌ ನಿರ್ಧರಿಸಿರುವುದು ಸ್ವಾಗತಾರ್ಹ.

ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕೇವಲ ಒಂದು ಸ್ಥಾನವನ್ನು ಗೆಲ್ಲಲು ಸಾಧ್ಯವಾಗಿದ್ದು ಕಾಂಗ್ರೆಸ್‌ ಕಾರ್ಯಕರ್ತರ ಜಂಘಾಬಲವನ್ನೇ ಉಡುಗಿಸಿದೆ ಎನ್ನುವುದು ಸುಳ್ಳಲ್ಲ. ಈ ಘೋರ ಪರಾಭವ ಪಕ್ಷದ ಮುಖಂಡರಲ್ಲೂ ಹತಾಶೆ ಮೂಡಿಸಿದ್ದು ಸಹಜವೇ. ಕಾಂಗ್ರೆಸ್‌–ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಹೊಂದಾಣಿಕೆ ಇಲ್ಲದಿರುವುದು ಹಾಗೂ ವಿರೋಧ ಪಕ್ಷವಾಗಿರುವ ಬಿಜೆಪಿಯು ಸರ್ಕಾರ ಉರುಳಿಸಲು ಹೊಂಚು ಹಾಕುತ್ತಿರುವುದನ್ನು ನೋಡಿದರೆ, ರಾಜ್ಯದಲ್ಲಿ ಯಾವುದೇ ಸಮಯದಲ್ಲಿ ಮಧ್ಯಂತರ ಚುನಾವಣೆ ನಡೆಯಬಹುದು. ಇಂತಹ ಪರಿಸ್ಥಿತಿಯಲ್ಲಿ ಪಕ್ಷದ ಪುನಶ್ಚೇತನಕ್ಕೆ ದೃಢ ನಿರ್ಧಾರಗಳನ್ನು ಕೈಗೊಳ್ಳುವುದು ಅನಿವಾರ್ಯ. ಒಂದು ಕಾಲದಲ್ಲಿ ರಾಜ್ಯದ ಎಲ್ಲ ಜಾತಿ, ಪಂಗಡ, ಸಮುದಾಯಗಳನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುತ್ತಿದ್ದ ಪಕ್ಷ, ಇತ್ತೀಚೆಗೆ ಕೆಲವು ಜಿಲ್ಲೆಗಳಲ್ಲಿ ಅಸ್ತಿತ್ವವನ್ನೇ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದೆ.

ರಾಜ್ಯದಲ್ಲಿ ಕಾಂಗ್ರೆಸ್‌ಗೆ ಈಗಲೂ ತಳಮಟ್ಟದ ಕಾರ್ಯಕರ್ತರ ದೊಡ್ಡ ಪಡೆಯೇ ಇದೆ. ಪ್ರತಿ ಹಳ್ಳಿಯಲ್ಲೂ ನಿಷ್ಠಾವಂತ ಕಾರ್ಯಕರ್ತರಿದ್ದಾರೆ. ಆದರೆ ಈ ಕಾರ್ಯಕರ್ತರ ಮಹತ್ವವನ್ನು ಅಧಿಕಾರದಲ್ಲಿ ಇರುವವರು ಮರೆತಿದ್ದಾರೆ. ಪಕ್ಷ ಅಧಿಕಾರದಲ್ಲಿ ಇದ್ದಾಗ ಇಂತಹ ಮೈಮರೆವು ಬರುವುದು ಸಹಜ.ಜಿಲ್ಲೆಗಳಿಗೆ ಹೋದಾಗ ಸಚಿವರು ಪಕ್ಷದ ಕಚೇರಿಗೆ ಕಡ್ಡಾಯವಾಗಿ ಭೇಟಿ ನೀಡಿ, ಕಾರ್ಯಕರ್ತರ ಮೂಲಕ ಜನರ ಅಹವಾಲುಗಳನ್ನು ಆಲಿಸುವ ಕ್ರಮ ಹಿಂದೆ ಇತ್ತು.ಸರ್ಕಾರ ಮತ್ತು ಪಕ್ಷದ ಮಧ್ಯೆ ಸಮನ್ವಯ ಇಲ್ಲವಾಗಿರುವುದೇ ಕಾಂಗ್ರೆಸ್‌ನ ಈಗಿನ ಬಹುದೊಡ್ಡ ಸಮಸ್ಯೆ.

ADVERTISEMENT

ಸಚಿವರ ಪ್ರವಾಸದ ವೇಳೆ ವ್ಯವಹಾರದ ಲಾಭ ಪಡೆಯುವ ಮಧ್ಯವರ್ತಿಗಳೇ ಅವರನ್ನು ಸುತ್ತುವರಿಯುವುದು ಮಾಮೂಲಿ ಎನ್ನುವಂತಾಗಿದ್ದು, ಕಾರ್ಯಕರ್ತರನ್ನು ಮಾತನಾಡಿಸುವವರೇ ಇಲ್ಲವಾಗಿದೆ. ವಿದ್ಯಾರ್ಥಿ ಘಟಕ ಎನ್‌ಎಸ್‌ಯುಐ, ಕಾರ್ಮಿಕ ಘಟಕ ಇಂಟಕ್‌, ಸೇವಾದಳ, ಮಹಿಳಾ ಕಾಂಗ್ರೆಸ್‌ ಮುಂತಾಗಿ ಪಕ್ಷವು ಹಲವು ಘಟಕಗಳನ್ನು ಹೊಂದಿದ್ದರೂ ಇವುಗಳ ಪದಾಧಿಕಾರಿಗಳಿಗೆ ಸರ್ಕಾರದ ನೀತಿನಿರೂಪಣೆಯಲ್ಲಿ ಹೇಳಿಕೊಳ್ಳುವಂತಹ ಯಾವ ಪಾತ್ರವೂ ಇಲ್ಲವಾಗಿದೆ. ಶಾಸನಾತ್ಮಕ ಅಧಿಕಾರ ಹೊಂದಿರುವ ನಿಗಮ, ಮಂಡಳಿಗಳೂ ಶಾಸಕರ ಮುಷ್ಟಿಯಲ್ಲಿವೆ.

ಶಾಸಕರು, ಸಚಿವರು, ನಿಗಮ– ಮಂಡಳಿ ಅಧ್ಯಕ್ಷರ ಕಾರ್ಯಕ್ಷಮತೆಯನ್ನು ಕಾಲಕಾಲಕ್ಕೆ ಪರಾಮರ್ಶಿಸುವ, ನಿಷ್ಕ್ರಿಯರಾಗಿರುವವರಿಗೆ ಚುರುಕು ಮುಟ್ಟಿಸುವ ಆಂತರಿಕ ವ್ಯವಸ್ಥೆಯೂ ಪಕ್ಷದಲ್ಲಿ ಮರೆಯಾಗಿದೆ. ರಾಜ್ಯದ ಎಲ್ಲೆಡೆ ಓಡಾಡಿ ಅಧಿಕಾರಿಗಳಿಗೆ ಚುರುಕು ಮುಟ್ಟಿಸಬೇಕಾದ ಸಚಿವರು ಹೆಚ್ಚಾಗಿ ಬೆಂಗಳೂರು ಮತ್ತು ತಮ್ಮ ಕ್ಷೇತ್ರಗಳಿಗೆ ಸೀಮಿತವಾಗಿರುವುದು ಇನ್ನೊಂದು ಲೋಪ. ಕೆಲವು ಜಿಲ್ಲೆಗಳಲ್ಲಿ ಕಾರ್ಯಕರ್ತರಿಗಿಂತ ನಾಯಕರ ಸಂಖ್ಯೆಯೇ ಹೆಚ್ಚಾಗಿರುವುದು ಪಕ್ಷದಲ್ಲಿ ಅಶಿಸ್ತು ಹೆಚ್ಚಲು ಕಾರಣವಾಗಿದೆ. ಪಕ್ಷದ ಶಿಸ್ತು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯ.

ಇತ್ತೀಚೆಗೆ ಪಕ್ಷದ ನಾಯಕರ ವಿರುದ್ಧ ಬಹಿರಂಗ ಆಕ್ರೋಶ ವ್ಯಕ್ತಪಡಿಸಿದ, ಷೋಕಾಸ್‌ ನೋಟಿಸ್‌ಗೂ ಉತ್ತರಿಸದ ಶಾಸಕ ರೋಷನ್ ಬೇಗ್‌ರನ್ನು ಪಕ್ಷ ಅಮಾನತು ಮಾಡಿದೆ. ಆದರೆ ಚುನಾವಣೆಯ ಸಂದರ್ಭದಲ್ಲಿ ಪಕ್ಷದ ಅಭ್ಯರ್ಥಿಗಳ ವಿರುದ್ಧ ಬಹಿರಂಗವಾಗಿ ಬಂಡೆದ್ದ ಇತರ ಕೆಲವು ನಾಯಕರ ವಿರುದ್ಧ ಕ್ರಮ ಕೈಗೊಳ್ಳಲು ಪಕ್ಷ ಹಿಂಜರಿಯುತ್ತಿದೆ. ಪಕ್ಷದಲ್ಲಿ ಶಿಸ್ತು ಕಾಯ್ದುಕೊಳ್ಳುವ ವಿಷಯದಲ್ಲಿ ಹೀಗೆ ತಾರತಮ್ಯ ಮಾಡುವುದರಿಂದ ಗುಂಪುಗಾರಿಕೆ ಹೆಚ್ಚಲಿದೆ. ಹೈಕಮಾಂಡ್‌ನಿಂದ ರಾಜ್ಯಕ್ಕೆ ಉಸ್ತುವಾರಿಯಾಗಿ ಬರುವ ಹಿರಿಯ ನಾಯಕರೂ ಇಲ್ಲಿಯ ಗುಂಪುಗಾರಿಕೆಗೆ ನೀರೆರೆಯಬಾರದು. ಅಂತಹ ಎಚ್ಚರಿಕೆಯ ಹೆಜ್ಜೆ ಇಡಬೇಕು.

ರಾಜಕೀಯವನ್ನೇ ವೃತ್ತಿ ಮಾಡಿಕೊಂಡವರು ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿರುವ ಸನ್ನಿವೇಶದಲ್ಲಿ, ರಾಜಕೀಯದಿಂದ ಹೊರತಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ವೃತ್ತಿಪರರಿಗೆ ಪಕ್ಷದಲ್ಲಿ ಮಹತ್ವದ ಹುದ್ದೆಗಳನ್ನು ನೀಡುವುದನ್ನೂ ಪರಿಶೀಲಿಸಬಹುದು. ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿ ಪಕ್ಷದಕಾರ್ಯಕರ್ತರನ್ನು ಸೈದ್ಧಾಂತಿಕವಾಗಿ ತರಬೇತುಗೊಳಿಸಲು ನಿಯಮಿತ ತರಗತಿಗಳನ್ನು ನಡೆಸಬೇಕು. ಸರ್ಕಾರದ ಜನೋಪಯೋಗಿ ಕಾರ್ಯಕ್ರಮಗಳ ಪರಿಣಾಮಕಾರಿ ಜಾರಿ ಮತ್ತು ಅವುಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಕೆಲಸಕ್ಕೆ ಆದ್ಯತೆ ನೀಡಬೇಕು. ಬೆಂಗಳೂರಿನಲ್ಲೇ ತಳವೂರಿ ಪಕ್ಷ ಕಟ್ಟಲು ಆಗುವುದಿಲ್ಲ ಎನ್ನುವುದನ್ನು ಪಕ್ಷದ ನಾಯಕರು ಎಷ್ಟು ಬೇಗ ಅರಿತುಕೊಳ್ಳುತ್ತಾರೋ ಅಷ್ಟೂ ಒಳ್ಳೆಯದು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.