ಕಾಲ್ಪನಿಕ ಚಿತ್ರ
ಈ ಯೋಜನೆಯಲ್ಲಿ ಗರಿಷ್ಠ ₹2 ಲಕ್ಷದವರೆಗೂ ಹೂಡಿಕೆಯನ್ನು ಮಾಡಬಹುದು. ಹೂಡಿಕೆ ಮಾಡಿದ ಠೇವಣಿಯ ಮೇಲೆ ವಾರ್ಷಿಕವಾಗಿ ಶೇ 7.5 ರಷ್ಟು ಬಡ್ಡಿಯನ್ನು ಪಡೆಯಬಹುದು. ಇದು ತೆರಿಗೆ ವಿನಾಯಿತಿಗೆ ಒಳಪಟ್ಟಿರುವ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವುದು ಹೇಗೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಮಹಿಳಾ ಸಬಲೀಕರಣದ ಉದ್ದೇಶದಿಂದ ಭಾರತ ಸರ್ಕಾರವು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅದೇ ರೀತಿ 2023ರಲ್ಲಿ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯನ್ನು ಜಾರಿ ಮಾಡಿತು. ಇದರಲ್ಲಿ ಮಹಿಳೆಯರು ಖಾತೆಯನ್ನು ತೆರೆದು ಹಣವನ್ನು ಹೂಡಿಕೆ ಮಾಡಬಹುದು. ಸಣ್ಣ ಉಳಿತಾಯವನ್ನು ಮಾಡುವವರಿಗೆ ಈ ಯೋಜನೆಯು ಅನುಕೂಲವಾಗಲಿದೆ ಎಂದು ಅಂಚೆ ಇಲಾಖೆ ಹೇಳುತ್ತದೆ.
ಈ ಯೋಜನೆಯಲ್ಲಿ ಗರಿಷ್ಠ ₹2 ಲಕ್ಷದವರೆಗೂ ಹೂಡಿಕೆಯನ್ನು ಮಾಡಬಹುದು. ಹೂಡಿಕೆ ಮಾಡಿದ ಠೇವಣಿಯ ಮೇಲೆ ವಾರ್ಷಿಕವಾಗಿ ಶೇ 7.5 ರಷ್ಟು ಬಡ್ಡಿಯನ್ನು ಪಡೆಯಬಹುದು. ಇದು ತೆರಿಗೆ ವಿನಾಯಿತಿಗೆ ಒಳಪಟ್ಟಿರುವ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವುದು ಹೇಗೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಖಾತೆಯನ್ನು ಯಾರು ತೆರೆಯಬಹುದು?
ಖಾತೆ ತೆರೆಯಲು ಮಹಿಳೆಯರಿಗೆ ಮಾತ್ರ ಅವಕಾಶ.
ಅಪ್ರಾಪ್ತ ಬಾಲಕಿಯ ಹೆಸರಿನಲ್ಲಿ ಖಾತೆ ತೆರೆಯಬಹುದು. ಆದರೆ ಆ ಖಾತೆಯನ್ನು ಪೋಷಕರು ಅಥವಾ ಪಾಲಕರು ನಿರ್ವಹಣೆ ಮಾಡಬೇಕು.
ಎಷ್ಟು ಮೊತ್ತವನ್ನು ಠೇವಣಿ ಮಾಡಬಹುದು?
ಕನಿಷ್ಠ ₹1000ಗಳನ್ನು ಠೇವಣಿ ಇಡುವ ಮೂಲಕ ಖಾತೆ ತೆರೆಯಬಹುದು.
ಒಂದು ಖಾತೆಯಲ್ಲಿ ಗರಿಷ್ಠ ₹2 ಲಕ್ಷದ ವರೆಗೂ ಹೂಡಿಕೆ ಮಾಡಬಹುದು.
ದೊರೆಯುವ ಬಡ್ಡಿದರ ಎಷ್ಟು?
ಠೇವಣಿಗೆ ವಾರ್ಷಿಕ ಶೇ 7.5 ರಷ್ಟು ಬಡ್ಡಿ ದೊರೆಯುತ್ತದೆ.
ಬಡ್ಡಿಯನ್ನು 3 ತಿಂಗಳಿಗೊಮ್ಮೆ ಖಾತೆಗೆ ಜಮಾ ಮಾಡಲಾಗುತ್ತದೆ. ಖಾತೆಯನ್ನು ಮುಚ್ಚುವಾಗ ಬಡ್ಡಿಯನ್ನು ಪಾವತಿಸಲಾಗುತ್ತದೆ.
ಹೂಡಿಕೆ ಹಿಂಪಡೆಯುವುದು ಯಾವಾಗ?
ಖಾತೆ ತೆರೆದ ದಿನದಿಂದ 1 ವರ್ಷ ಪೂರ್ಣವಾದ ಬಳಿಕ ಅರ್ಹ ಬಾಕಿ ಮೊತ್ತದ ಶೇ 40 ರಷ್ಡು ಹಣವನ್ನು ಹಿಂಪಡೆಯಬಹುದು. ಉಳಿದ ಹಣವನ್ನು ಅವಧಿ ಮುಗಿದ ನಂತರ ಪಡೆಯಬಹುದು.
ಅವಧಿಪೂರ್ವ ಖಾತೆ ಮುಚ್ಚುವಿಕೆಯ ನಿಯಮಗಳೇನು?
ಖಾತೆದಾರ ಮೃತಪಟ್ಟರೆ ಖಾತೆಯನ್ನು ಮುಚ್ಚಬಹುದು.
ಖಾತೆದಾರ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾದಾಗ ಹೂಡಿಕೆಯ ಹಣವನ್ನು ಹಿಂಪಡೆಯಬಹುದು.
ಅವಧಿಪೂರ್ವ ಖಾತೆಯನ್ನು ಮುಚ್ಚಿದರೆ, ಇಲಾಖೆಯ ಬಡ್ಡಿ ಶೇ 7.5 ಅನ್ನು ಶೇ 5.5 ಕ್ಕೆ ಇಳಿಕೆ ಮಾಡಲಾಗುತ್ತದೆ.
ಈ ಯೋಜನೆಯಲ್ಲಿ ಗ್ರಾಮೀಣ ಮಹಿಳೆಯರು ಸಣ್ಣ ಮೊತ್ತದ ಠೇವಣಿಯನ್ನು ಹೂಡಿಕೆ ಮಾಡಿ ಹೆಚ್ಚಿನ ಬಡ್ಡಿಯನ್ನು ಗಳಿಕೆ ಮಾಡಬಹುದು. ಇಲ್ಲಿ ಹೂಡಿಕೆ ಮಾಡುವ ಠೇವಣಿಗೆ 80C ಕಾಯ್ದೆಯಡಿ ತೆರಿಗೆ ವಿನಾಯಿತಿಯಿದೆ ಎಂದು ಅಂಚೆ ಇಲಾಖೆ ಅಧಿಕೃತ ಅಂತರ್ಜಾಲ ತಾಣದಲ್ಲಿ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಸಮೀಪದ ಅಂಚೆ ಕಚೇರಿಗೆ ಭೇಟಿ ನೀಡಿ ಮಾಹಿತಿಯನ್ನು ಪಡೆಯಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.