'ಆ್ಯಂಡರ್ಸನ್–ತೆಂಡೂಲ್ಕರ್ ಟ್ರೋಫಿ'ಯೊಂದಿಗೆ ಜೇಮ್ಸ್ ಆ್ಯಂಡರ್ಸನ್ ಹಾಗೂ ಸಚಿನ್ ತೆಂಡೂಲ್ಕರ್
ಚಿತ್ರಕೃಪೆ: X / @englandcricket
ಲಂಡನ್: ಇಂಗ್ಲೆಂಡ್ ಹಾಗೂ ಭಾರತದ ನಡುವಣ ಟೆಸ್ಟ್ ಕ್ರಿಕೆಟ್ ಸರಣಿಯ ಟ್ರೋಫಿಗೆ ಬ್ಯಾಟಿಂಗ್ ದಂತಕತೆ ಸಚಿನ್ ತೆಂಡೂಲ್ಕರ್ ಅವರ ಹೆಸರಿನೊಂದಿಗೆ ತಮ್ಮ ಹೆಸರನ್ನು ಸೇರಿಸಿರುವುದು ಸರಿಯಾದ ನಿರ್ಧಾರವಲ್ಲ ಎಂದು ದಿಗ್ಗಜ ವೇಗಿ ಜೇಮ್ಸ್ ಆ್ಯಂಡರ್ಸನ್ ಅಭಿಪ್ರಾಯಪಟ್ಟಿದ್ದಾರೆ. ಹಾಗೆಯೇ, ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟರ್‌ಗಳಲ್ಲಿ ಒಬ್ಬರೊಂದಿಗೆ ಗೌರವ ಹಂಚಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದ್ದಾರೆ.
ಕ್ರಿಕೆಟ್ ಲೋಕದ ಈ ಇಬ್ಬರು ಸ್ಟಾರ್‌ಗಳ ಗೌರವಾರ್ಥವಾಗಿ ಇಂಗ್ಲೆಂಡ್ ಹಾಗೂ ಭಾರತದ ನಡುವಣ ಟೆಸ್ಟ್ ಸರಣಿಗೆ 'ಆ್ಯಂಡರ್ಸನ್–ತೆಂಡೂಲ್ಕರ್ ಟ್ರೋಫಿ' ಎಂದು ಇಂಗ್ಲೆಂಡ್ ಅಂಡ್ ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಹೆಸರಿಟ್ಟಿದೆ.
ಉಭಯ ತಂಡಗಳು ಈ ಮೊದಲು 'ಪಟೌಡಿ ಟ್ರೋಫಿ'ಗಾಗಿ ಸೆಣಸಾಡುತ್ತಿದ್ದವು. ಎರಡೂ ತಂಡಗಳ ಪರ ಟೆಸ್ಟ್ ಆಡಿದ ಏಕೈಕ ಕ್ರಿಕೆಟಿಗ ಎನಿಸಿರುವ ಇಫ್ತಿಕರ್ ಅಲಿ ಖಾನ್ ಪಟೌಡಿ ಹಾಗೂ ಅವರ ಮೊಮ್ಮಗ ಮನ್ಸೂರ್ ಅಲಿ ಖಾನ್ ಪಟೌಡಿ ಅವರ ಸ್ಮರಣಾರ್ಥ ಆ ಟ್ರೋಫಿ ಸ್ಥಾಪಿಸಲಾಗಿತ್ತು.
ತಮ್ಮ ಹೆಸರಲ್ಲಿ ಸ್ಥಾಪಿಸಲಾಗಿರುವ ಟ್ರೋಫಿ ಕುರಿತು 'ಸ್ಕೈ ಸ್ಪೋರ್ಟ್ಸ್' ಜೊತೆ ಮಾತನಾಡಿರುವ ಜಿಮ್ಮಿ (ಜೇಮ್ಸ್ ಆ್ಯಂಡರ್ಸನ್), 'ನಿಮ್ಮ ಹೆಸರಿನಲ್ಲಿ ಟ್ರೋಫಿ ಸ್ಥಾಪಿಸಲಾಗಿದೆ ಎಂಬುದು ದೊಡ್ಡ ವಿಚಾರವಲ್ಲ. ಬದಲಾಗಿ, ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾದ ಸಚಿನ್ ತೆಂಡೂಲ್ಕರ್ ಅವರೊಂದಿಗೆ ಟ್ರೋಫಿ ಹೆಸರು ಹಂಚಿಕೊಂಡಿರುವುದು ಮುಖ್ಯ' ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
'ಟ್ರೋಪಿಗೆ ಅವರ ಹೆಸರಿನೊಂದಿಗೆ ನನ್ನ ಹೆಸರನ್ನು ನೋಡಿದಾಗ, ಇದು ಸಂಪೂರ್ಣ ಅಸಮಂಜಸ ಎನಿಸಿತ್ತು. ಅವರನ್ನು ನಾನು ತುಂಬಾ ಗೌರವದಿಂದ ಕಾಣುತ್ತೇನೆ' ಎಂದು ಹೇಳಿಕೊಂಡಿದ್ದಾರೆ.
'ಬಾಲ್ಯದಿಂದ ಅವರ ಆಟವನ್ನು ನೋಡಿದ್ದೇನೆ. ಅವರ ಎದುರು ಆಡಿದ್ದೇನೆ. ತಮ್ಮ ವೃತ್ತಿಬದುಕಿನುದ್ದಕ್ಕೂ ದೇಶದ ಭರವಸೆಗಳನ್ನು ತಮ್ಮ ಹೆಗಲ ಮೇಲೆ ಹೊತ್ತು ಮುನ್ನಡೆಸಿದ ಅಪ್ರತಿಮ ಕ್ರಿಕೆಟಿಗ ಅವರು. ಹಾಗಾಗಿ, ಅವರೊಂದಿಗೆ ಇಂತಹದ್ದನ್ನು ಹಂಚಿಕೊಳ್ಳುವುದು ನಂಬಲಸಾಧ್ಯವಾದ ಗೌರವ' ಎಂದು ಪ್ರತಿಪಾದಿಸಿದ್ದಾರೆ.
ಸಚಿನ್–ಆ್ಯಂಡರ್ಸನ್ ಸಾಧನೆ
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಪಂದ್ಯಗಳನ್ನಾಡಿದ ಖ್ಯಾತಿ ಸಚಿನ್ (200) ಹಾಗೂ ಆ್ಯಂಡರ್ಸನ್ (188) ಅವರದ್ದು. ಸಚಿನ್ ಈ ಮಾದರಿಯಲ್ಲಿ ಅತಿಹೆಚ್ಚು (15,921) ರನ್ ಗಳಿಸಿದ ಶ್ರೇಯ ಹೊಂದಿದ್ದರೆ, ಆ್ಯಂಡರ್ಸನ್, ವೇಗದ ಬೌಲರ್‌ಗಳ ಪೈಕಿ ಗರಿಷ್ಠ (704) ವಿಕೆಟ್ ಪಡೆದಿದ್ದಾರೆ.
ಈ ಇಬ್ಬರು ಆಟಗಾರರು ಒಟ್ಟು 14 ಟೆಸ್ಟ್‌ಗಳಲ್ಲಿ ಮುಖಾಮುಖಿಯಾಗಿದ್ದಾರೆ. ಈ ವೇಳೆ ತೆಂಡೂಲ್ಕರ್ ಅವರನ್ನು 9 ಬಾರಿ ಔಟ್ ಮಾಡಿದ್ದಾರೆ ಆ್ಯಂಡರ್ಸನ್.
ಕೋವಿಡ್–19 ಸಾಂಕ್ರಾಮಿಕದ ವೇಳೆ (2021–2022ರಲ್ಲಿ) ನಡೆದಿದ್ದ ಕೊನೆಯ ಪಟೌಡಿ ಟ್ರೋಫಿ ಟೂರ್ನಿಯಲ್ಲಿ ಇಂಗ್ಲೆಂಡ್ ಹಾಗೂ ಭಾರತ 2 – 2 ಅಂತರದ ಡ್ರಾ ಸಾಧಿಸಿದ್ದವು. ಅದಕ್ಕೂ ಮೊದಲು (2018ರಲ್ಲಿ) ಇಂಗ್ಲೆಂಡ್ ತಂಡ ತವರಿನಲ್ಲಿ 4–1ರಲ್ಲಿ ಸರಣಿ ಜಯಿಸಿತ್ತು.
ಮುನ್ನಡೆಯಲ್ಲಿ ಇಂಗ್ಲೆಂಡ್
ಪ್ರಸ್ತುತ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೂರು ಪಂದ್ಯಗಳು ಮುಕ್ತಾಯವಾಗಿವೆ. ಇಂಗ್ಲೆಂಡ್ ತಂಡ 2–1 ಅಂತರದಿಂದ ಮುನ್ನಡೆ ಸಾಧಿಸಿದೆ. ನಾಲ್ಕನೇ ಪಂದ್ಯವು ಮ್ಯಾಂಚೆಸ್ಟರ್‌ನಲ್ಲಿ ಜುಲೈ 23ರಂದು ಆರಂಭವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.