ADVERTISEMENT

ವಿಶ್ವಕಪ್ ಗೆದ್ದ ತಂಡಕ್ಕೆ ಸಾರ್ವಜನಿಕ ಸಮಾರಂಭದ ಮೂಲಕ ಸ್ವಾಗತ ಕೋರಲಿದೆ ಬಾಂಗ್ಲಾ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2020, 13:09 IST
Last Updated 10 ಫೆಬ್ರುವರಿ 2020, 13:09 IST
   

ಢಾಕಾ:ಬಾಂಗ್ಲಾದೇಶಕ್ಕೆ ಐಸಿಸಿಯ ಮೊದಲ ಟ್ರೋಫಿ ಗೆದ್ದು ಕೊಟ್ಟ 19 ವರ್ಷದೊಳಗಿನವರ ತಂಡಕ್ಕೆಸಾರ್ವಜನಿಕ ಸಮಾರಂಭದ ಮೂಲಕ ಸ್ವಾಗತ ಕೋರಲು ಅಲ್ಲಿನ ಸರ್ಕಾರ ನಿರ್ಧರಿಸಿದೆ.

ಪ್ರಧಾನಿ ಶೇಖ್‌ ಹಸಿನಾ ನೇತೃತ್ವದಲ್ಲಿ ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿಈ ನಿರ್ಧಾರ ಕೈಗೊಳ್ಳಲಾಗಿದೆ.‘ತಂಡವು ಸ್ವದೇಶಕ್ಕೆ ಮರಳಿದ ಬಳಿಕ ದಿನಾಂಕವನ್ನು ನಿಗದಿಪಡಿಸಲಾಗುವುದು. ಕಾರ್ಯಕ್ರಮವನ್ನು ಸುಹ್ರವರ್ದಿ ಉದ್ಯಾನದಲ್ಲಿ ಆಯೋಜಿಸಲಾಗುವುದು’ ಎಂದು ಅಲ್ಲಿನ ರಸ್ತೆ ಮತ್ತು ಸಾರಿಗೆ ಸಚಿವ ಒಬೈದುಲ್‌ ಕ್ವಾದೆರ್‌ ತಿಳಿಸಿದ್ದಾರೆ.

ಈ ಬಾರಿಯ 19 ವರ್ಷದೊಳಗಿನವರ ವಿಶ್ವಕಪ್‌ ಟೂರ್ನಿಯು ದಕ್ಷಿಣ ಆಫ್ರಿಕಾದಲ್ಲಿ ನಡೆಯಿತು.ಯುವ ವಿಶ್ವಕಪ್‌ನಲ್ಲಿ 4 ಬಾರಿಯ ಚಾಂಪಿಯನ್‌ ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು. ಮೇಲ್ನೋಟಕ್ಕೆ ಭಾರತವೇ ಗೆಲ್ಲುವ ನೆಚ್ಚಿನ ತಂಡ ಎನಿಸಿತ್ತು.

ಟಾಸ್‌ ಗೆದ್ದರೂ ಬೌಲಿಂಗ್ ಮಾಡುವ ನಿರ್ಧಾರ ಕೈಗೊಂಡ ಬಾಂಗ್ಲಾ,ಭಾರತವನ್ನು ಕೇವಲ 177 ರನ್‌ ಗಳಿಗೆ ನಿಯಂತ್ರಿಸಿತ್ತು.ಈ ಮೊತ್ತ ಬೆನ್ನಟ್ಟಿದ ಬಾಂಗ್ಲಾ ತಂಡ 42.1 ಓವರ್‌ಗಳಲ್ಲಿ 170 ರನ್ ಗಳಿಸಿದ್ದಾಗ ಮಳೆ ಸುರಿಯಿತು.ಹೀಗಾಗಿ ಡಕ್ವರ್ಥ್‌ ಲೂಯಿಸ್‌ ನಿಯಮದನ್ವಯ ಬಾಂಗ್ಲಾಗೆ 3 ವಿಕೆಟ್‌ ಜಯ ಘೋಷಿಸಲಾಯಿತು.

ಪಂದ್ಯದ ಬಳಿಕ ಸಂಭ್ರಮಾಚರಣೆ ನಡೆಸುವ ಭರದಲ್ಲಿ ಬಾಂಗ್ಲಾ ಆಟಗಾರರು ಉದ್ಧಟತನದಿಂದ ವರ್ತಿಸಿದ್ದರು. ಈ ಕುರಿತುಆ ತಂಡದ ನಾಯಕ ಅಕ್ಬರ್‌ ಅಲಿ, ‘ಇದೊಂದು ದುರದೃಷ್ಟಕರ ಘಟನೆ’ ಎನ್ನುವ ಮೂಲಕ ಬೇಸರ ವ್ಯಕ್ತಪಡಿಸಿದ್ದರು. ಬಾಂಗ್ಲಾ ವರ್ತನೆಯನ್ನು ಖಂಡಿಸಿದ್ದ ಭಾರತ ತಂಡದ ನಾಯಕ ಪ್ರಿಯಂ ಗರ್ಗ್‌, ‘ಇದು ಅಸಹ್ಯಕರ’ ಎಂದು ಕಿಡಿ ಕಾರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.