ADVERTISEMENT

T20 ವಿಶ್ವಕಪ್: ಬಾಂಗ್ಲಾಗೆ ಕೋಕ್ ನೀಡಿ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದ ಐಸಿಸಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಜನವರಿ 2026, 5:27 IST
Last Updated 25 ಜನವರಿ 2026, 5:27 IST
<div class="paragraphs"><p>ಟಿ20 ವಿಶ್ವಕಪ್‌ ಟ್ರೋಫಿ ಹಾಗೂ ಭಾರತ ಕ್ರಿಕೆಟ್‌ ತಂಡ</p></div>

ಟಿ20 ವಿಶ್ವಕಪ್‌ ಟ್ರೋಫಿ ಹಾಗೂ ಭಾರತ ಕ್ರಿಕೆಟ್‌ ತಂಡ

   

ದುಬೈ: ಭಾರತ ಮತ್ತು ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ನಡೆಯುವ ಟಿ20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಪರಿಷ್ಕೃತ ವೇಳಾಪಟ್ಟಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಪ್ರಕಟಿಸಿದೆ.

ಭದ್ರತೆಯ ಕಾರಣ ನೀಡಿ, ಭಾರತದಲ್ಲಿ ಆಡಲು ನಿರಾಕರಿಸಿದ್ದ ಬಾಂಗ್ಲಾದೇಶ ತಂಡ, ತಾನಾಡುವ ಪಂದ್ಯಗಳನ್ನು ಶ್ರೀಲಂಕಾಗೆ ಸ್ಥಳಾಂತರಿಸುವಂತೆ ಮನವಿ ಮಾಡಿತ್ತು. ಅದನ್ನು ಮಾನ್ಯ ಮಾಡದ ಐಸಿಸಿ, ಬಾಂಗ್ಲಾ 'ಹುಲಿಗಳನ್ನು' ಟೂರ್ನಿಯಿಂದಲೇ ಹೊರಗಿಟ್ಟು, ಸ್ಕಾಟ್ಲೆಂಡ್‌ ತಂಡಕ್ಕೆ ಅವಕಾಶ ನೀಡಿರುವುದಾಗಿ ಶನಿವಾರ ಪ್ರಕಟಿಸಿತ್ತು.

ADVERTISEMENT

ಅದರಂತೆ ಪರಿಷ್ಕೃತ ವೇಳಾ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಫೆಬ್ರುವರಿ 7ರಿಂದ ಮಾರ್ಚ್‌ 8ರವರೆಗೆ ನಡೆಯುವ ಈ ಟೂರ್ನಿಯಲ್ಲಿ ಒಟ್ಟು 20 ತಂಡಗಳು ನಾಲ್ಕು ಗುಂಪುಗಳಾಗಿ ಆಡಲಿವೆ.

ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ನೆದರ್ಲೆಂಡ್ಸ್‌ ಕೊಲಂಬೊದಲ್ಲಿ ಮುಖಾಮುಖಿಯಾಗಲಿವೆ. ಗುಂಪು ಹಂತದಲ್ಲಿ ಉತ್ತಮ ಪ್ರದರ್ಶನ ತೋರುವ ತಲಾ ಎರಡು ತಂಡಗಳು ಸೂಪರ್‌–8ಕ್ಕೆ ಲಗ್ಗೆ ಇಡಲಿವೆ. ಅಲ್ಲಿ ಮೇಲುಗೈ ಸಾಧಿಸುವ ಸಾಲ್ಕು ತಂಡಗಳು ಸೆಮಿಫೈನಲ್‌ನಲ್ಲಿ ಸೆಣಸಲಿವೆ.

ಮಾರ್ಚ್‌ 8ರಂದು ಫೈನಲ್‌ ನಡೆಯಲಿದೆ. ಫೈನಲ್‌ ಪಂದ್ಯಕ್ಕೆ ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ವೇದಿಕೆ ಸಜ್ಜಾಗಿದೆ. ಒಂದು ವೇಳೆ, ಪಾಕಿಸ್ತಾನ ಫೈನಲ್ ತಲುಪಿದರೆ ಅಂತಿಮ ಹಣಾಹಣಿ ಶ್ರೀಲಂಕಾದ ಕೊಲಂಬೊಗೆ ಸ್ಥಳಾಂತರಗೊಳ್ಳಲಿದೆ.

ಪಾಕಿಸ್ತಾನ ಪಂದ್ಯಗಳು ಶ್ರೀಲಂಕಾದಲ್ಲಿ

ಭಾರತ ಹಾಗೂ ಪಾಕಿಸ್ತಾನ ನಡುವಣ ರಾಜತಾಂತ್ರಿಕ ಸಂಬಂಧ ಹದಗೆಟ್ಟಿದೆ. ಹೀಗಾಗಿ, ಉಭಯ ರಾಷ್ಟ್ರಗಳ ಪೈಕಿ ಯಾವುದೇ ಒಂದರಲ್ಲಿ ಐಸಿಸಿ ಟೂರ್ನಿ ಆಯೋಜನೆಗೊಂಡರೂ, ಇತ್ತಂಡಗಳ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ನಡೆಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಾಗೂ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಒಪ್ಪಂದ ಮಾಡಿಕೊಂಡಿವೆ. ಅದರಂತೆ, ಪಾಕಿಸ್ತಾನ ಪಾಲಿನ ಎಲ್ಲ ಪಂದ್ಯಗಳೂ ಶ್ರೀಲಂಕಾದಲ್ಲಿ ಆಯೋಜನೆಗೊಂಡಿವೆ.

ಯಾವ ಗುಂಪಿನಲ್ಲಿ ಯಾವ ತಂಡ?

'ಎ' ಗುಂಪು

ನಮೀಬಿಯಾ, ನೆದರ್ಲೆಂಡ್ಸ್‌, ಯುಎಸ್‌ಎ, ಪಾಕಿಸ್ತಾನ, ಭಾರತ

'ಬಿ' ಗುಂಪು

ಒಮನ್, ಐರ್ಲೆಂಡ್‌, ಜಿಂಬಾಬ್ವೆ, ಶ್ರೀಲಂಕಾ, ಆಸ್ಟ್ರೇಲಿಯಾ

'ಸಿ' ಗುಂಪು

ಇಟಲಿ, ನೇಪಾಳ, ಸ್ಕಾಟ್ಲೆಂಡ್‌, ವೆಸ್ಟ್‌ಇಂಡೀಸ್‌, ಇಂಗ್ಲೆಂಡ್‌

'ಡಿ' ಗುಂಪು

ಅಫ್ಗಾನಿಸ್ತಾನ, ಕೆನಡಾ, ನ್ಯೂಜಿಲೆಂಡ್‌, ದಕ್ಷಿಣ ಆಫ್ರಿಕಾ, ಯುಎಇ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.