ಸ್ಯಾಮ್ ಕೊನ್‌ಸ್ಟಸ್, ಜಸ್‌ಪ್ರೀತ್ ಬೂಮ್ರಾ
ಎಕ್ಸ್ ಚಿತ್ರ
ಮೆಲ್ಬರ್ನ್: ಮೆಲ್ಬರ್ನ್ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ತಮ್ಮ ವಿರುದ್ಧ ಮೇಲುಗೈ ಸಾಧಿಸಿದ್ದ ಆಸ್ಟ್ರೇಲಿಯಾದ ಯುವ ಆರಂಭಿಕ ಬ್ಯಾಟರ್ ಸ್ಯಾಮ್ ಕೊನ್‌ಸ್ಟಸ್ ಅವರನ್ನು ಎರಡನೇ ಇನಿಂಗ್ಸ್‌ನಲ್ಲಿ ಕ್ಲೀನ್ ಬೌಲ್ಡ್ ಮಾಡುವ ಮೂಲಕ ಭಾರತದ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ ಅದೇ ಧಾಟಿಯಲ್ಲಿ ತಿರುಗೇಟು ನೀಡಿದ್ದಾರೆ.
19 ವರ್ಷದ ಕೊನ್‌ಸ್ಟಸ್, ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ತಮ್ಮ ಪದಾರ್ಪಣೆ ಪಂದ್ಯದಲ್ಲೇ ಅರ್ಧಶತಕದ ಸಾಧನೆ ಮಾಡಿದ್ದರು. ಬೂಮ್ರಾ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಕೊನ್‌ಸ್ಟಸ್, ರಿವರ್ಸ್, ಸ್ಕೂಪ್ ಹೊಡೆತಗಳ ಮೂಲಕ ಗಮನ ಸೆಳೆದಿದ್ದರು.
ಶಿಸ್ತುಬದ್ಧ ಲೈನ್ ಮತ್ತು ಲೆಂಗ್ತ್ ಬೌಲಿಂಗ್‌ಗೆ ಹೆಸರಾಗಿರುವ ಬೂಮ್ರಾ ಬೌಲಿಂಗ್‌ನಲ್ಲಿ 2021ರಿಂದ ಇದುವರೆಗೆ ಯಾವ ಬ್ಯಾಟರ್‌ಗೂ ಸಿಕ್ಸರ್ ಹೊಡೆಯಲು ಸಾಧ್ಯವಾಗಿರಲಿಲ್ಲ. ಅಲ್ಲದೆ ಟೆಸ್ಟ್ ಕ್ರಿಕೆಟ್‌ನಲ್ಲಿ ಈ ಅವಧಿಯಲ್ಲಿ ಹಾಕಿರುವ 4,483 ಎಸೆತಗಳಲ್ಲಿ ಸಿಕ್ಸರ್ ಬಿಟ್ಟುಕೊಟ್ಟಿರಲಿಲ್ಲ.
ಆದರೆ ಕೊನ್‌ಸ್ಟಸ್ ತಮ್ಮ ಚೊಚ್ಚಲ ಪಂದ್ಯದಲ್ಲೇ ಬೂಮ್ರಾ ದಾಳಿಯಲ್ಲಿ ಎರಡು ಸಿಕ್ಸರ್ ಬಾರಿಸಿದ್ದರು. ಅಲ್ಲದೆ ಓವರ್‌ವೊಂದರಲ್ಲಿ 18 ರನ್ ಕಬಳಿಸಿದ್ದರು. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಬೂಮ್ರಾ ಅವರ ದುಬಾರಿ ಓವರ್ ಆಗಿತ್ತು.
ಬಳಿಕ ವಿರಾಟ್ ಕೊಹ್ಲಿ ಅವರೊಂದಿಗೆ ಭುಜಕ್ಕೆ ಪರಸ್ಪರ ಡಿಕ್ಕಿಯಾಗಿ ಕೊನ್‌ಸ್ಟಸ್ ಸುದ್ದಿಯಾಗಿದ್ದರು. ಅನುಚಿತ ವರ್ತನೆಗಾಗಿ ವಿರಾಟ್ ಕೊಹ್ಲಿ ದಂಡನೆಗೊಳಗಾಗಿದ್ದರು.
ಮೊದಲ ಇನಿಂಗ್ಸ್‌ನಲ್ಲಿ ಭಾರತದ ಬ್ಯಾಟಿಂಗ್ ವೇಳೆ ಮೈದಾನದಲ್ಲಿ ಬೌಂಡರಿ ಗೆರೆಯ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಕೊನ್‌ಸ್ಟಸ್, ಪ್ರೇಕ್ಷಕರನ್ನು ಚಪ್ಪಾಳೆ ತಟ್ಟಿ ಹುರಿದುಂಬಿಸುತ್ತಿರುವ ದೃಶ್ಯ ಕಂಡುಬಂದಿತ್ತು. ಬಳಿಕ ಭುಜಕ್ಕೆ ಡಿಕ್ಕಿ ಹೊಡೆಯುವ ರೀತಿಯಲ್ಲಿ ವಿರಾಟ್ ಕೊಹ್ಲಿ ಅವರ ಅಣಕು ಪ್ರದರ್ಶಿಸಿದ್ದರು.
ಆದರೆ ದ್ವಿತೀಯ ಇನಿಂಗ್ಸ್‌ನಲ್ಲಿ ಕೊನ್‌ಸ್ಟಸ್ ಸ್ಟಂಪ್ ಉಡಾಯಿಸಿರುವ ಬೂಮ್ರಾ, ಪ್ರೇಕ್ಷಕರನ್ನು ಹುರಿದುಂಬಿಸುವ ರೀತಿಯಲ್ಲಿ ಸಂಭ್ರಮಿಸುವ ಮೂಲಕ ಅದೇ ಧಾಟಿಯಲ್ಲಿ ತಿರುಗೇಟು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.