ವಿಕೆಟ್ ಪಡೆದ ಸಂಭ್ರಮದಲ್ಲಿ ನಿತೀಶ್ ಕುಮಾರ್ ರೆಡ್ಡಿ (ಎಡ) ಹಾಗೂ ಬ್ಯಾಟಿಂಗ್ ವೇಳೆ ಜೋ ರೂಟ್, ಓಲಿ ಪೋಪ್
ರಾಯಿಟರ್ಸ್ ಚಿತ್ರಗಳು
ಲಾರ್ಡ್ಸ್: ಕ್ರಿಕೆಟ್ ಕಾಶಿ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಭಾರತದ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಆತಿಥೇಯ ಇಂಗ್ಲೆಂಡ್ ತಂಡಕ್ಕೆ ಅನುಭವಿ ಜೋ ರೂಟ್ ಮತ್ತು ಓಲಿ ಪೋಪ್ ಆಸರೆಯಾಗಿದ್ದಾರೆ.
3ನೇ ವಿಕೆಟ್ ಪಾಲುದಾರಿಕೆಯಲ್ಲಿ 82 ರನ್ ಕಲೆಹಾಕಿರುವ ಈ ಜೋಡಿ, ಆತಿಥೇಯರನ್ನು ಆರಂಭಿಕ ಆಘಾತದಿಂದ ಪಾರು ಮಾಡಿದೆ. ಸದ್ಯ 43 ಓವರ್‌ಗಳ ಆಟ ಮುಗಿದಿದ್ದು, ತಂಡದ ಮೊತ್ತ 2 ವಿಕೆಟ್‌ಗೆ 126 ರನ್ ಆಗಿದೆ.
ರೂಟ್ 93 ಎಸೆತಗಳಲ್ಲಿ 42 ರನ್ ಕಲೆಹಾಕಿದ್ದರೆ, ಪೋಪ್ 83 ಎಸೆತಗಳಲ್ಲಿ 29 ರನ್ ಗಳಿಸಿದ್ದಾರೆ.
ರೆಡ್ಡಿ ಪೆಟ್ಟು
ಇಂದಿನಿಂದ ಆರಂಭವಾಗಿರುವ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್‌ಗೆ, ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಆಘಾತ ನೀಡಿದರು.
ಇನಿಂಗ್ಸ್ ಆರಂಭಿಸಿ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಜಾಕ್ ಕ್ರಾಲಿ (18) ಹಾಗೂ ಬೆನ್ ಡಕೆಟ್ (24) ಅವರಿಗೆ ಪೆವಿಲಿಯನ್ ದಾರಿ ತೋರುವ ಮೂಲಕ ಪೆಟ್ಟುಕೊಟ್ಟರು. ಆಗ ತಂಡದ ಮೊತ್ತ ಕೇವಲ 44 ರನ್. ಆದರೆ, ಈ ಆರಂಭಿಕ ಯಶಸ್ಸಿನ ಲಾಭ ಪಡೆಯಲು ಟೀಂ ಇಂಡಿಯಾ ವಿಫಲವಾಯಿತು.
ಮುನ್ನಡೆಯ ಛಲ
ಐದು ಪಂದ್ಯಗಳ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಸಮಬಲದ ಹೋರಾಟ ನಡೆಸಿರುವ ಇತ್ತಂಡಗಳು, ಲಾರ್ಡ್ಸ್‌ನಲ್ಲಿ ಗೆದ್ದು ಮುನ್ನಡೆ ಸಾಧಿಸುವ ಛಲದಲ್ಲಿವೆ.
ಲೀಡ್ಸ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ 5 ವಿಕೆಟ್ ಅಂತರದ ಸೋಲು ಅನುಭವಿಸಿದ್ದ ಭಾರತ, ಎಜ್‌ಬಾಸ್ಟನ್‌ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ 336 ರನ್ ಅಂತರದ ಜಯ ಸಾಧಿಸಿ ತಿರುಗೇಟು ನೀಡಿತ್ತು. ಹೀಗಾಗಿ, ಲಾರ್ಡ್ಸ್‌ನಲ್ಲಿ ಯಾರ ಕೈ ಮೇಲಾಗಲಿದೆ ಎಂಬುದು ಕುತೂಹಲ ಕೆರಳಿಸಿದೆ.
ಬೂಮ್ರಾ, ಆರ್ಚರ್ ಕಣಕ್ಕೆ
ಉಭಯ ತಂಡಗಳು ತಲಾ ಒಂದೊಂದು ಬದಲಾವಣೆಯೊಂದಿಗೆ ಕಣಕ್ಕಿಳಿದಿವೆ. ಕಾರ್ಯಭಾರ ನಿರ್ವಹಣೆಯ ಭಾಗವಾಗಿ ಎರಡನೇ ಟೆಸ್ಟ್‌ನಿಂದ ಹೊರಗುಳಿದಿದ್ದ ಜಸ್‌ಪ್ರೀತ್ ಬೂಮ್ರಾ ಈ ಪಂದ್ಯದಲ್ಲಿ ಭಾರತ ತಂಡಕ್ಕೆ ಮರಳಿದ್ದಾರೆ. ಮೊದಲೆರಡೂ ಪಂದ್ಯಗಳಲ್ಲಿ ಸಾಮರ್ಥ್ಯಕ್ಕೆ ತಕ್ಕ ಆಟವಾಡಲು ವಿಫಲವಾಗಿದ್ದ ಪ್ರಸಿದ್ಧ ಕೃಷ್ಣ ಅವಕಾಶ ಕಳೆದುಕೊಂಡಿದ್ದಾರೆ.
ಇತ್ತ ಎಜ್‌ಬಾಸ್ಟನ್ ಸೋಲಿನ ಆಘಾತದಲ್ಲಿರುವ ಇಂಗ್ಲೆಂಡ್, ವೇಗಿ ಜೋಫ್ರಾ ಆರ್ಚರ್‌ಗೆ ಸ್ಥಾನ ನೀಡಿದೆ. ಜೋಶ್ ಟಂಗ್ ಹನ್ನೊಂದರ ಬಳಗದಿಂದ ಹೊರಗುಳಿದಿದ್ದಾರೆ. ವಿಶೇಷವೆಂದರೆ, ಟಂಗ್ ಅವರು ಮೊದಲೆರಡು ಪಂದ್ಯಗಳಲ್ಲಿ ಹೆಚ್ಚು (11) ವಿಕೆಟ್ ಪಡೆದ ಬೌಲರ್ ಆಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.