
ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಗೆದ್ದ ಭಾರತ ತಂಡದ ಆಟಗಾರರು ಟ್ರೋಫಿಯೊಂದಿಗೆ ಸಂಭ್ರಮಿಸಿದರು
ಪಿಟಿಐ ಚಿತ್ರ
3–1 ರಿಂದ ಟಿ20 ಸರಣಿ ಗೆದ್ದ ಭಾರತ | ಡಿಕಾಕ್ ಅರ್ಧಶತಕ l ದ.ಆಫ್ರಿಕಾಕ್ಕೆ ನಿರಾಸೆ
ಅಹಮದಾಬಾದ್: ಹಾರ್ದಿಕ್ ಪಾಂಡ್ಯ ಮತ್ತು ತಿಲಕ್ ವರ್ಮಾ ಅವರ ಬೀಸಾಟದ ಬಳಿಕ ವರುಣ್ ಚಕ್ರವರ್ತಿ ಅವರ ಅಮೋಘ ಬೌಲಿಂಗ್ ದಾಳಿಯ ನೆರವಿನಿಂದ ಭಾರತ ತಂಡವು ಶುಕ್ರವಾರ ಐದನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 30 ರನ್‌ಗಳಿಂದ ಮಣಿಸಿತು. ಇದರೊಂದಿಗೆ ಆತಿಥೇಯರು 3–1ರಿಂದ ಸರಣಿಯನ್ನು ಗೆದ್ದುಕೊಂಡರು.
ಪಾಂಡ್ಯ (63;25ಎ, 4x5, 6x5) ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಭಾರತದ ಪರ ಎರಡನೇ ಶರವೇಗದ ಅರ್ಧಶತಕ ಗಳಿಸಿದರು. ಪಾಂಡ್ಯ ಮತ್ತು ತಿಲಕ್ (73;42, 4x10, 6x1) ಬ್ಯಾಟಿಂಗ್ ಬಲದಿಂದ ಭಾರತ 5 ವಿಕೆಟ್‌ಗೆ 231 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಬಳಗವನ್ನು ಕಟ್ಟಿ ಹಾಕುವಲ್ಲಿ ವರುಣ್ (53ಕ್ಕೆ 4) ಮತ್ತು ಜಸ್‌ಪ್ರೀತ್ ಬೂಮ್ರಾ (17ಕ್ಕೆ 2) ಪ್ರಮುಖ ಪಾತ್ರ ವಹಿಸಿದರು. ಹೀಗಾಗಿ, ಹರಿಣಗಳ ಪಡೆ ಎಂಟು ವಿಕೆಟ್‌ಗೆ 201 ರನ್ ಗಳಿಸಿ ಹೋರಾಟವನ್ನು ಮುಗಿಸಿತು.
ಕ್ವಿಂಟನ್ ಡಿಕಾಕ್ (65, 35ಎ, 4x9, 6x3) ಮತ್ತು ರೀಜಾ ಹೆನ್ರಿಕ್ಸ್ (13) ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ 69 ರನ್ ಸೇರಿಸಿದರು. ಅರ್ಷದೀಪ್ ಸಿಂಗ್, ಹಾರ್ದಿಕ್ ಸೇರಿದಂತೆ ಭಾರತದ ಬೌಲರ್‌ಗಳನ್ನು ಡಿಕಾಕ್ ದಂಡಿಸಿದರು. ಅವರ ಅಬ್ಬರದ ಆಟದಿಂದಾಗಿ ತಂಡವು 10 ಓವರ್‌ಗಳಲ್ಲಿ ಒಂದು ವಿಕೆಟ್‌ಗೆ 118 ರನ್ ಗಳಿಸಿ ಗೆಲುವಿನ ಹಾದಿ ಯಲ್ಲಿತ್ತು. ಆದರೆ, ಬೂಮ್ರಾ ಬೌಲಿಂಗ್‌ನಲ್ಲಿ ಡಿಕಾಕ್ ‘ಕ್ಯಾಚ್ ಅಂಡ್ ಬೌಲ್ಡ್’ ಆಗುವುದರೊಂದಿಗೆ ಪಂದ್ಯದ ಮೇಲೆ ಭಾರತ ಮತ್ತೆ ಹಿಡಿತ ಸಾಧಿಸಿತು.
ನಂತರದಲ್ಲಿ ವರುಣ್ ಸ್ಪಿನ್ ದಾಳಿಗೆ ನಿಯಮಿತವಾಗಿ ವಿಕೆಟ್‌ಗಳು ಉರುಳಿದವು. ಡೆವಾಲ್ಡ್ ಬ್ರೆವಿಸ್ (31; 17ಎ) ಹೊರತುಪಡಿಸಿ ಉಳಿದವರು ಹೆಚ್ಚಿನ ಹೋರಾಟ ತೋರಲಿಲ್ಲ. ಅರ್ಷದೀಪ್, ಪಾಂಡ್ಯ ತಲಾ ಒಂದು ವಿಕೆಟ್ ಕಬಲಿಸಿದರು.
ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ
ಪಾಂಡ್ಯ–ತಿಲಕ್ ಬೀಸಾಟ:
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಭಾರತ ತಂಡಕ್ಕೆ ಸಂಜು ಸ್ಯಾಮ್ಸನ್ (37;22ಎ) ಮತ್ತು ಅಭಿಷೇಕ್ ಶರ್ಮಾ (34;21ಎ) ಮೊದಲ ವಿಕೆಟ್‌ಗೆ 63 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ಉಪನಾಯಕ ಶುಭಮನ್ ಗಿಲ್ ಗಾಯಾಳಾದ ಕಾರಣ ಅವಕಾಶ ಪಡೆದ ಸ್ಯಾಮ್ಸನ್ ನಿರಾಸೆ ಮೂಡಿಸಲಿಲ್ಲ. ಮುಂಬೈನಲ್ಲಿ ಆಯ್ಕೆ ಸಮಿತಿ ಶನಿವಾರ ತಂಡ ಪ್ರಕಟಿಸುವ ವೇಳೆ ತಾವೂ ಆಕಾಂಕ್ಷಿ ಎನ್ನುವುದನ್ನು ಸಮರ್ಥಿಸುವಂತೆ ಆಡಿದರು.
ನಾಯಕ ಸೂರ್ಯಕುಮಾರ್ (5) ಅವರ ವೈಫಲ್ಯ ಈ ಪಂದ್ಯದಲ್ಲೂ ಮುಂದುವರಿಯಿತು.
ಭಾರತದ ರನ್‌ವೇಗ ಸ್ವಲ್ಪ ಕಡಿಮೆ ಯಾಗುತ್ತಿದೆ ಎನ್ನುವಷ್ಟರಲ್ಲಿ ತಿಲಕ್ ಜೊತೆಗೂಡಿದ ಪಾಂಡ್ಯ ಎದುರಾಳಿ ದಾಳಿ ಪುಡಿಗಟ್ಟಿ ಐದನೇ ವಿಕೆಟ್‌ಗೆ ಕೇವಲ 44 ಎಸೆತಗಳಲ್ಲಿ 105 ರನ್ ಸೇರಿಸಿದರು. ತಿಲಕ್ ತಮ್ಮ ಬತ್ತಳಿಕೆಯಿಂದ ವೈವಿಧ್ಯಮಯ ಹೊಡೆತಗಳನ್ನು ಪ್ರಯೋಗಿಸಿದರು.
ಪಾಂಡ್ಯ ಅವರ ಮಿಂಚಿನ ಆಟದಲ್ಲಿ ಐದು ಸಿಕ್ಸರ್ ಮತ್ತು ಅಷ್ಟೇ ಬೌಂಡರಿ ಗಳಿದ್ದವು. ಅವರು 50 ರನ್‌ಗಳನ್ನು ಕೇವಲ 16 ಎಸೆತಗಳಲ್ಲಿ ದಾಟಿದರು. ದಿಗ್ಗಜ ಆಲ್‌ರೌಂಡರ್ ಯುವರಾಜ್ ಸಿಂಗ್ 2007ರಲ್ಲಿ ಇಂಗ್ಲೆಂಡ್ ವಿರುದ್ಧ ಕಿಂಗ್ಸ್‌ಮೀಡ್‌ನಲ್ಲಿ ನಡೆದ ಪಂದ್ಯದಲ್ಲಿ ಕೇವಲ 12 ಎಸೆತಗಳಲ್ಲಿ ಅರ್ಧ ಶತಕ ಗಳಿಸಿದ್ದು, ದಾಖಲೆಯಾಗಿ ಉಳಿದಿದೆ.
ಸಂಕ್ಷಿಪ್ತ ಸ್ಕೋರು:
ಭಾರತ: 20 ಓವರುಗಳಲ್ಲಿ 5ಕ್ಕೆ 231 (ಸಂಜು ಸ್ಯಾಮ್ಸನ್ 37, ಅಭಿಷೇಕ್ ಶರ್ಮಾ 34, ತಿಲಕ್ ವರ್ಮಾ 73, ಹಾರ್ದಿಕ್ ಪಾಂಡ್ಯ 63; ಕಾರ್ಬಿನ್ ಬಾಷ್ 44ಕ್ಕೆ2).
ದಕ್ಷಿಣ ಆಫ್ರಿಕಾ: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 201 (ಕ್ವಿಂಟನ್ ಡಿಕಾಕ್ 65, ಡೆವಾಲ್ಡ್ ಬ್ರೆವಿಸ್ 31; ಜಸ್‌ಪ್ರೀತ್ ಬೂಮ್ರಾ 17ಕ್ಕೆ 2, ವರುಣ್ ಚಕ್ರವರ್ತಿ 53ಕ್ಕೆ 4)
ಪಂದ್ಯದ ಆಟಗಾರ: ಹಾರ್ದಿಕ್ ಪಾಂಡ್ಯ
ಸರಣಿಯ ಆಟಗಾರ: ವರುಣ್ ಚಕ್ರವರ್ತಿ (10 ವಿಕೆಟ್‌ಗಳು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.