ADVERTISEMENT

IND vs SA Match Highlights: ದಾಖಲೆ ಬರೆದ ಕೊಹ್ಲಿ, ರೋಹಿತ್, ಜೈಸ್ವಾಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಡಿಸೆಂಬರ್ 2025, 2:55 IST
Last Updated 7 ಡಿಸೆಂಬರ್ 2025, 2:55 IST
<div class="paragraphs"><p>ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್</p></div>

ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್

   

(ಪಿಟಿಐ ಚಿತ್ರ)

ವಿಶಾಖಪಟ್ಟಣ: ಎಡಗೈ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಗಳಿಸಿದ ಚೊಚ್ಚಲ ಶತಕದ (116*) ನೆರವಿನಿಂದ ಆತಿಥೇಯ ಭಾರತ ತಂಡವು ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಒಂಬತ್ತು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ADVERTISEMENT

ಇದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಭಾರತ 2-1ರ ಅಂತರದಿಂದ ವಶಪಡಿಸಿಕೊಂಡಿದೆ.

ಅನುಭವಿ ಬ್ಯಾಟರ್‌ಗಳಾದ ರೋಹಿತ್ ಶರ್ಮಾ (75) ಹಾಗೂ ವಿರಾಟ್ ಕೊಹ್ಲಿ (65*) ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.

ಮತ್ತೊಂದೆಡೆ ಕ್ವಿಂಟ್ ಡಿಕಾಕ್ ಶತಕದ (106) ಹೋರಾಟವು ವ್ಯರ್ಥವೆನಿಸಿತು. ದಕ್ಷಿಣ ಆಫ್ರಿಕಾ ಒಡ್ಡಿದ 271 ರನ್‌ಗಳ ಗುರಿಯನ್ನು ಭಾರತ 39.5 ಓವರ್‌ಗಳಲ್ಲೇ ಮುಟ್ಟಿತು.

ಸಚಿನ್ ದಾಖಲೆ ಮುರಿದ ಕೊಹ್ಲಿ:

ಪ್ರಸಕ್ತ ಸರಣಿಯಲ್ಲೇ ಸತತ ಎರಡು ಶತಕಗಳನ್ನು ಗಳಿಸಿದ್ದ ವಿರಾಟ್ ಕೊಹ್ಲಿ, ಅರ್ಹವಾಗಿಯೇ ಸರಣಿಶ್ರೇಷ್ಠ ಗೌರವಕ್ಕೆ ಭಾಜರಾಗಿದ್ದಾರೆ. ಆ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸರಣಿಶ್ರೇಷ್ಠ ಪ್ರಶಸ್ತಿಗಳನ್ನು ಗೆದ್ದ ಆಟಗಾರರ ಸಾಲಿನಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನೇ ಮುರಿದಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೊಹ್ಲಿ ಪಾಲಿಗಿದು 20ನೇ ಸರಣಿಶ್ರೇಷ್ಠ ಪ್ರಶಸ್ತಿಯಾಗಿದೆ. ಸಚಿನ್ ಒಟ್ಟು 19 ಸಲ ಸರಣಿಶ್ರೇಷ್ಠ ಪ್ರಶಸ್ತಿ ಗೆದ್ದಿದ್ದರು.

ಇನ್ನು ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು 'ಮ್ಯಾನ್ ಆಫ್ ದಿ ಸಿರೀಸ್' ಪ್ರಶಸ್ತಿ ಪಡೆದ ಆಟಗಾರರ ಸಾಲಿನಲ್ಲಿ ಶ್ರೀಲಂಕಾದ ಸನತ್ ಜಯಸೂರ್ಯ (11) ದಾಖಲೆಯನ್ನು ಕೊಹ್ಲಿ ಸರಿಗಟ್ಟಿದ್ದಾರೆ. ಈ ಪಟ್ಟಿಯಲ್ಲಿ ಸಚಿನ್ (14) ಅಗ್ರಸ್ಥಾನದಲ್ಲಿದ್ದಾರೆ.

ಜೈಸ್ವಾಲ್ ಚೊಚ್ಚಲ ಶತಕ...

ಏಕದಿನ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಗಳಿಸಿದ ಯಶಸ್ವಿ ಜೈಸ್ವಾಲ್, ಈ ಪಂದ್ಯವನ್ನು ಸ್ಮರಣೀಯವಾಗಿಸಿದರು. 121 ಎಸೆತಗಳಲ್ಲಿ ಅಜೇಯ 116 ರನ್ ಗಳಿಸಿದ (12 ಬೌಂಡರಿ, 2 ಸಿಕ್ಸರ್) ಜೈಸ್ವಾಲ್, ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು.

ಎಲ್ಲ ಮೂರು ಮಾದರಿಗಳಲ್ಲಿ ಜೈಸ್ವಾಲ್ ಶತಕ ಸಾಧನೆ...

ಎಲ್ಲ ಮೂರು ಮಾದರಿಗಳಲ್ಲಿ ಶತಕ ಗಳಿಸಿದ ಭಾರತದ ಆರನೇ ಬ್ಯಾಟರ್ ಎಂಬ ಕೀರ್ತಿಗೆ ಜೈಸ್ವಾಲ್ ಭಾಜನರಾಗಿದ್ದಾರೆ. ಆ ಮೂಲಕ ಸುರೇಶ್ ರೈನಾ, ರೋಹಿತ್ ಶರ್ಮಾ, ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ ಹಾಗೂ ಶುಭಮನ್ ಗಿಲ್ ಸಾಲಿಗೆ ಜೈಸ್ವಾಲ್ ಸೇರಿದ್ದಾರೆ.

ಭಾರತೀಯರ ಆಟಗಾರರ ಸಂಭ್ರಮ

ಕೊಹ್ಲಿ 12 ಸಿಕ್ಸರ್...

ಸರಣಿಯಲ್ಲಿ ಒಟ್ಟು 12 ಸಿಕ್ಸರ್‌ಗಳನ್ನು ಕೊಹ್ಲಿ ಸಿಡಿಸಿದ್ದಾರೆ. ಯಾವುದೇ ಟೂರ್ನಿಯಲ್ಲಿ ಕೊಹ್ಲಿ ಗಳಿಸಿದ ಗರಿಷ್ಠ ಸಿಕ್ಸರ್ ಸಾಧನೆ ಇದಾಗಿದೆ.

ಹಾಗೆಯೇ ವಿರಾಟ್ ಕೊಹ್ಲಿ ಏಕದಿನ ಸರಣಿಯಲ್ಲಿ ಒಂಬತ್ತನೇ ಸಲ, 300ಕ್ಕೂ ಹೆಚ್ಚು ರನ್‌ಗಳ ಸಾಧನೆ ಮಾಡಿದ್ದಾರೆ. ರಾಂಚಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ 135 ರನ್ ಗಳಿಸಿದ್ದ ಕೊಹ್ಲಿ, ರಾಯಪುರದಲ್ಲಿ 102 ರನ್ ಪೇರಿಸಿದ್ದರು.

ರೋಹಿತ್ 5,000 ರನ್ ದಾಖಲೆ:

ಭಾರತ ನೆಲದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ 5,000 ರನ್‌ಗಳ ಸಾಧನೆ ಮಾಡಿದ್ದಾರೆ. ಆ ಮೂಲಕ ತವರಿನಲ್ಲಿ 5,000 ರನ್ ಮೈಲಿಗಲ್ಲು ತಲುಪಿದ ವಿಶ್ವದ ಐದನೇ ಬ್ಯಾಟರ್ ಎನಿಸಿದ್ದಾರೆ. ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ರಿಕಿ ಪಾಂಟಿಂಗ್ ಹಾಗೂ ಜಾಕ್ ಕಾಲಿಸ್ ಈ ಸಾಧನೆ ಮಾಡಿದ ದಿಗ್ಗಜರಾಗಿದ್ದಾರೆ.

ಇನ್ನು ಏಕದಿನ ಸರಣಿಯ ಫೈನಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಸಾಲಿನಲ್ಲಿ ವಿರಾಟ್ (1,235) ಅವರನ್ನೇ ರೋಹಿತ್ (1,261) ಮೀರಿಸಿದ್ದಾರೆ.

ಒಟ್ಟಾರೆಯಾಗಿ ಒಂಬತ್ತು ವಿಕೆಟ್‌ಗಳ ಗೆಲುವು, ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಅತಿ ದೊಡ್ಡ (ವಿಕೆಟ್ ಅಂತರದಲ್ಲಿ) ಗೆಲುವನ್ನು ಸರಿಗಟ್ಟಿದೆ. 2018ರಲ್ಲೂ ಭಾರತ ಒಂಬತ್ತು ವಿಕೆಟ್ ಅಂತರದ ಜಯ ಗಳಿಸಿತ್ತು.

ಡಿಕಾಕ್ 7ನೇ ಶತಕ...

ಭಾರತ ವಿರುದ್ಧ ಏಕದಿನದಲ್ಲಿ ಕ್ವಿಂಟನ್ ಡಿಕಾಕ್ ಏಳನೇ ಶತಕ ಗಳಿಸಿದ್ದಾರೆ. ಆ ಮೂಲಕ ಸನತ್ ಜಯಸೂರ್ಯ ದಾಖಲೆಯನ್ನು ಸರಿಗಟ್ಟಿದ್ದಾರೆ.

ಇದು ಭಾರತ ನೆಲದಲ್ಲಿ ಡಿಕಾಕ್ ಗಳಿಸಿದ ಏಳನೇ ಶತಕವೂ ಆಗಿದ್ದು, ಈ ಸಾಲಿನಲ್ಲಿ ಎಬಿ ಡಿವಿಲಿಯರ್ಸ್ ದಾಖಲೆಯನ್ನು ಸರಿಗಟ್ಟಿದ್ದಾರೆ.

ಯಶಸ್ವಿ ಜೈಸ್ವಾಲ್ ಅಭಿನಂದಿಸುತ್ತಿರುವ ರೋಹಿತ್ ಶರ್ಮಾ, ಗೌತಮ್ ಗಂಭೀರ್

ಕನ್ನಡಿಗ ಪ್ರಸಿದ್ಧಗೆ 4 ವಿಕೆಟ್....

ಕನ್ನಡಿಗ ವೇಗದ ಬೌಲರ್ ಪ್ರಸಿದ್ಧ ಕೃಷ್ಣ, 9.5 ಓವರ್‌ಗಳಲ್ಲಿ 66 ರನ್ ನೀಡಿ ನಾಲ್ಕು ವಿಕೆಟ್ ಗಳಿಸಿ ಮಿಂಚಿದರು. ಮೊದಲು ದುಬಾರಿ ಎನಿಸಿಕೊಂಡಿದ್ದ ಪ್ರಸಿದ್ಧ ಬಳಿಕ ಪಂದ್ಯಕ್ಕೆ ಮಹತ್ವದ ತಿರುವು ನೀಡುವಲ್ಲಿ ಯಶಸ್ವಿಯಾದರು.

ಕುಲದೀಪ್ ಸಾಧನೆ...

ಭಾರತದ ಸ್ಪಿನ್ನರ್ ಕುಲದೀಪ್ ಯಾದವ್ ಏಕದಿನದಲ್ಲಿ 11ನೇ ಸಲ ನಾಲ್ಕು ವಿಕೆಟ್‌ಗಳ ಸಾಧನೆ ಮಾಡಿದ್ದಾರೆ. ಆ ಮೂಲಕ ಭಾರತೀಯ ಸ್ಪಿನ್ನರ್‌ಗಳ ಪೈಕಿ ಅನಿಲ್ ಕುಂಬ್ಳೆ (10) ದಾಖಲೆಯನ್ನು ಮುರಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.