ADVERTISEMENT

T20 ಪಂದ್ಯದಲ್ಲಿ ಸೋಲು: ಆ ವೇಗಿಯ ಬಗ್ಗೆ ಕೊಹ್ಲಿ ಹೇಳಿದ್ದು ನಿಜ ಎಂದ ಅಭಿಮಾನಿಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಡಿಸೆಂಬರ್ 2025, 10:36 IST
Last Updated 12 ಡಿಸೆಂಬರ್ 2025, 10:36 IST
   

ಮುಲ್ಲನಪುರ: ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಕ್ರಿಕೆಟ್‌ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ತಂಡ 51 ರನ್ ಅಂತರದ ಹೀನಾಯ ಸೋಲು ಅನುಭವಿಸಿದೆ. ಅದರ ಬೆನ್ನಲ್ಲೇ, ವಿರಾಟ್ ಕೊಹ್ಲಿ ಅವರು ಅರ್ಷದೀಪ್‌ ಸಿಂಗ್‌ ಕುರಿತು ಹೇಳಿದ್ದ ಮಾತನ್ನು ಅಭಿಮಾನಿಗಳು ನೆನಪಿಸಿಕೊಂಡಿದ್ದಾರೆ.

ಗುರುವಾರ ನಡೆದ ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಭಾರತದ ಪರ, ಪ್ರಮುಖ ಬೌಲರ್‌ಗಳು ಸಾಮರ್ಥ್ಯಕ್ಕೆ ತಕ್ಕ ಆಟವಾಡುವಲ್ಲಿ ವಿಫಲರಾದರು. ಹೀಗಾಗಿ, ಲೀಲಾಜಾಲಾವಾಗಿ ಬ್ಯಾಟ್‌ ಬೀಸಿದ ಪ್ರವಾಸಿ ಬಳಗ, ನಿಗದಿತ ಓವರ್‌ಗಳಲ್ಲಿ 4 ವಿಕೆಟ್‌ಗೆ 213 ರನ್‌ ಕಲೆಹಾಕಿತು.

ಈ ಗುರಿ ಎದುರು ತಿಣುಕಾಡಿದ ಭಾರತ, ಬ್ಯಾಟಿಂಗ್‌ನಲ್ಲೂ ಛಲದ ಆಟವಾಡಲಿಲ್ಲ. 5ನೇ ಕ್ರಮಾಂಕದ ಬ್ಯಾಟರ್‌ ತಿಲಕ್‌ ವರ್ಮಾ ಹೊರತುಪಡಿಸಿ ಉಳಿದವರು ವೈಫಲ್ಯ ಅನುಭವಿಸಿದರು. ಹೀಗಾಗಿ, 19.1 ಓವರ್‌ಗಳಲ್ಲಿ 162 ರನ್ ಗಳಿಸಿದ್ದಾಗಲೇ ಆಲೌಟ್‌ ಆಗುವ ಮೂಲಕ ಮುಖಭಂಗ ಅನುಭವಿಸಿತು.

ADVERTISEMENT

ಮೊದಲ ಪಂದ್ಯದಲ್ಲಿ 101 ರನ್‌ ಅಂತರದ ಸೋಲು ಅನುಭವಿಸಿದ್ದ ಹರಿಣಗಳು, ಇಲ್ಲಿ ಗೆದ್ದು ಸರಣಿಯನ್ನು 1–1 ಅಂತರದಿಂದ ಸಮಬಲ ಮಾಡಿಕೊಂಡರು. ಮೂರನೇ ಪಂದ್ಯವು ಧರ್ಮಶಾಲಾದಲ್ಲಿ ಡಿಸೆಂಬರ್‌ 14ರಂದು ನಡೆಯಲಿದೆ.

ದುಬಾರಿಯಾದ ಪ್ರಮುಖರು
ಭಾರತದ ಪ್ರಮುಖ ವೇಗಿಗಳಾದ ಜಸ್‌ಪ್ರೀತ್‌ ಬೂಮ್ರಾ, ಅರ್ಷದೀಪ್‌ ಸಿಂಗ್ ಮತ್ತು ಹಾರ್ದಿಕ್‌ ಪಾಂಡ್ಯ ಅವರು ದುಬಾರಿಯಾದರು. ಒಟ್ಟು 11 ಓವರ್‌ ಎಸೆದ ಈ ಮೂವರು, 12.09ರ ಸರಾಸರಿಯಲ್ಲಿ 133 ರನ್‌ ಬಿಟ್ಟುಕೊಟ್ಟರು. 

ಬೂಮ್ರಾ 4 ಓವರ್‌ಗಳಲ್ಲಿ 45 ರನ್‌ ನೀಡಿದರೆ, ಸಿಂಗ್‌ ಓವರ್‌ಗಳಲ್ಲಿ 54 ರನ್‌ ಚಚ್ಚಿಸಿಕೊಂಡರು. ಪಾಂಡ್ಯ, 3 ಓವರ್‌ಗಳಲ್ಲಿ 34 ರನ್‌ ಬಿಟ್ಟುಕೊಟ್ಟರು. ಆದರೂ ಇವರಿಗೆ ಒಂದೇ ಒಂದು ವಿಕೆಟ್‌ ಸಿಗಲಿಲ್ಲ.

ಅನಗತ್ಯ ದಾಖಲೆ ಬರೆದ ಅರ್ಷದೀಪ್‌
ಇನಿಂಗ್ಸ್‌ನ 11ನೇ ಓವರ್‌ ಬೌಲಿಂಗ್ ಮಾಡಿದ ಅರ್ಷದೀಪ್‌, 7 ವೈಡ್‌ಗಳನ್ನು ಎಸೆದರು. ಆ ಮೂಲಕ, ಈ ಮಾದರಿಯಲ್ಲಿ ಒಂದೇ ಓವರ್‌ನಲ್ಲಿ ಅತಿಹೆಚ್ಚು ವೈಡ್‌ ಹಾಕಿದ ಆಟಗಾರ ಎನಿಸಿದರು. ಅಷ್ಟೇ ಅಲ್ಲ, ಓವರ್‌ವೊಂದರಲ್ಲಿ ಹೆಚ್ಚು (13) ಎಸೆತಗಳನ್ನು ಹಾಕಿದ ಬೌಲರ್‌ ಎಂಬ ದಾಖಲೆಯನ್ನು ಅಫ್ಗಾನಿಸ್ತಾನದ ನವೀನ್‌ ಉಲ್‌ ಹಕ್‌ ಅವರೊಂದಿಗೆ ಹಂಚಿಕೊಂಡರು. 2024ರಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಪಂದ್ಯದಲ್ಲಿ ನವೀನ್‌ ಅವರೂ 13 ಎಸೆತ ಹಾಕಿದ್ದರು.

ಕೊಹ್ಲಿ ಹೇಳಿದ್ದು ನಿಜವೆಂದ ಫ್ಯಾನ್ಸ್‌
ಟಿ20 ಮಾದರಿಯಲ್ಲಿ ಟೀಂ ಇಂಡಿಯಾದ ಪ್ರಮುಖ ವೇಗಿ ಎನಿಸಿರುವ ಅರ್ಷದೀಪ್‌ ಅವರ ಕೆಟ್ಟ ಪ್ರದರ್ಶನದ ಬೆನ್ನಲ್ಲೇ, ಅಭಿಮಾನಿಗಳು ಟ್ರೋಲ್‌ ಮಾಡುತ್ತಿದ್ದಾರೆ. ಕಳೆದವಾರವಷ್ಟೇ ವಿರಾಟ್‌ ಕೊಹ್ಲಿ ಹೇಳಿದ್ದ ಮಾತನ್ನು ನೆನಪಿಸಿಕೊಂಡು ಕಾಲೆಳೆಯುತ್ತಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯ ಡಿಸೆಂಬರ್‌ 6ರಂದು ವಿಶಾಖಪಟ್ಟಣದಲ್ಲಿ ನಡೆದಿತ್ತು. ಮೊದಲೆರಡೂ ಪಂದ್ಯಗಳಲ್ಲಿ ಶತಕ ಸಿಡಿಸಿದ್ದ ವಿರಾಟ್‌ಗೆ, ಸತತ ಮೂರನೇ 'ನೂರು' ಗಳಿಸುವ ಅವಕಾಶವಿತ್ತು. ಆದರೆ, ಅದು ಸ್ವಲ್ಪದರಲ್ಲೇ ತಪ್ಪಿತ್ತು.

ಮೊದಲು ಬ್ಯಾಟಿಂಗ್ ಮಾಡಿದ್ದ ಹರಿಣಗಳು, 270 ರನ್‌ ಕಲೆಹಾಕಿದ್ದರು. ಈ ಗುರಿಯನ್ನು ಭಾರತ ಕೇವಲ 1 ವಿಕೆಟ್‌ ಕಳೆದುಕೊಂಡು 39.5 ಓವರ್‌ಗಳಲ್ಲೇ ತಲುಪಿತ್ತು. ಆರಂಭಿಕ ಯಶಸ್ವಿ ಜೈಸ್ವಾಲ್‌ (116) ಶತಕ ಸಿಡಿಸಿದರೆ, ಅನುಭವಿ ರೋಹಿತ್‌ ಶರ್ಮಾ (75) ಅರ್ಧಶತಕ ಬಾರಿಸಿದ್ದರು. ಹೀಗಾಗಿ, ಕೊಹ್ಲಿಗೆ ಹೆಚ್ಚು ರನ್‌ ಗಳಿಸಲು ಆಗಲಿಲ್ಲ. ಆದಾಗ್ಯೂ, ಸಿಕ್ಕ ಅವಕಾಶದಲ್ಲಿ ಅಮೋಘ ಫಾರ್ಮ್‌ ಮುಂದುವರಿಸಿದ ಅವರು, 45 ಎಸೆತಗಳಲ್ಲೇ 65 ರನ್‌ ಗಳಿಸಿ ಅಜೇಯವಾಗಿ ಉಳಿದರು.

ಅರ್ಷದೀಪ್‌ ಸಿಂಗ್‌ ಹಾಗೂ ವಿರಾಟ್ ಕೊಹ್ಲಿ

ಹ್ಯಾಟ್ರಿಕ್‌ ಶತಕ ಕೈತಪ್ಪಿದ್ದನ್ನು ಉಲ್ಲೇಖಿಸಿ ಕೊಹ್ಲಿಯೊಂದಿಗೆ ಸೆಲ್ಫಿ ವಿಡಿಯೊದಲ್ಲಿ ಮಾತನಾಡಿದ್ದ ಅರ್ಷದೀಪ್‌, 'ಅಣ್ಣಾ.. ಹೆಚ್ಚು ರನ್‌ ಇರಲಿಲ್ಲ. ಇದ್ದಿದ್ದರೆ, ಖಂಡಿತಾ 100 ರನ್‌ ಗಳಿಸುತ್ತಿದ್ದೆ' ಎಂದು ಹೇಳಿದ್ದರು.

ಅದಕ್ಕೆ ಪ್ರತಿಕ್ರಿಯಿಸಿದ್ದ 'ಕಿಂಗ್‌' ಕೊಹ್ಲಿ, 'ಟಾಸ್‌ ಗೆಲ್ಲದೇ ಹೋಗಿದ್ದರೆ ನೀನೂ ಶತಕ ಬಾರಿಸುತ್ತಿದ್ದೆ' ಎಂದು ಕಾಲೆಳೆದಿದ್ದರು.

ಮೊದಲೆರಡು ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಭಾರತ 300ಕ್ಕಿಂತ ಹೆಚ್ಚು ಮೊತ್ತ ಗಳಿಸಿತ್ತು. ಆದಾಗ್ಯೂ, ಭಾರತದ ದಾಳಿ ಎದುರು ಪ್ರವಾಸಿ ಪಡೆ, ಅಮೋಘವಾಗಿ ಆಡಿತ್ತು.

ಅರ್ಷದೀಪ್‌, ಮೊದಲೆರಡು ಪಂದ್ಯಗಳಲ್ಲಿ 20 ಓವರ್‌ ಎಸೆದು 118 ರನ್ ನೀಡಿ 4 ವಿಕೆಟ್‌ ಪಡೆದಿದ್ದರು.

ಅವರು, ಇದೀಗ ಟಿ20 ಪಂದ್ಯದಲ್ಲಿಯೂ ದುಬಾರಿಯಾಗಿರುವುದರಿಂದ ಕೊಹ್ಲಿ ಅಂದು ಹೇಳಿದ್ದು ಸರಿಯಾಗಿದೆ ಎಂದು ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.