ಶಾರ್ಜಾ: ಸುನೀಲ್ ನಾರಾಯಣ್ ಆಲ್‌ರೌಂಡ್ ಆಟದ ಬಲದಿಂದ ಕೋಲ್ಕತ್ತ ನೈಟ್ ರೈಡರ್ಸ್ ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೋಲಿನ ರುಚಿ ತೋರಿಸಿತು.
ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಡೆಲ್ಲಿ ತಂಡಕ್ಕೆ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲಿಯೂ ಹಿನ್ನಡೆಯಾಯಿತು. ಅದಕ್ಕೆ ಕಾರಣವಾಗಿದ್ದು ಸ್ಪಿನ್ ಆಲ್‌ರೌಂಡರ್ ಸುನೀಲ್ ಅವರ ಆಟ. ಇದರಿಂದಾಗಿ ಕೋಲ್ಕತ್ತ ತಂಡವು 3 ವಿಕೆಟ್‌ಗಳಿಂದ ಜಯಿಸಿತು. ಇದರೊಂದಿಗೆ ಒಟ್ಟು ಹತ್ತ ಅಂಕಗಳೊಂದಿಗೆ ಕೋಲ್ಕತ್ತ ನಾಲ್ಕನೇ ಸ್ಥಾನಕ್ಕೇರಿತು. ತಂಡದ ಪ್ಲೇ ಆಫ್ ಪ್ರವೇಶದ ಕನಸು ಜೀವಂತವಾಗುಳಿಯಿತು.
ಟಾಸ್ ಗೆದ್ದ ಕೋಲ್ಕತ್ತ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬೌಲಿಂಗ್‌ನಲ್ಲಿ ಮಿಂಚಿದ ಸುನೀಲ್ (18ಕ್ಕೆ2), ಲಾಕಿ ಫರ್ಗ್ಯುಸನ್ (10ಕ್ಕೆ2) ಮತ್ತು ನವಪ್ರತಿಭೆ ವೆಂಕಟೇಶ್ ಅಯ್ಯರ್ (29ಕ್ಕೆ2) ಡೆಲ್ಲಿ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿದರು. ರಿಷಭ್ ಪಂತ್ ಬಳಗವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 127 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಕೋಲ್ಕತ್ತ ತಂಡವು 18.2 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 130 ರನ್ ಗಳಿಸಿ ಜಯಿಸಿತು. ನಿತೀಶ್ ರಾಣಾ (ಔಟಾಗದೆ 36) ಮತ್ತು ಸುನೀಲ್ (21; 10ಎಸೆತ) ತಂಡದ ಜಯಕ್ಕೆ ಕಾಣಿಕೆ ಸಲ್ಲಿಸಿದರು. ಯುವ ಬ್ಯಾಟ್ಸ್‌ಮನ್ ಶುಭಮನ್ ಗಿಲ್ (30 ರನ್) ಮತ್ತು ವೆಂಕಟೇಶ್ (14 ರನ್) ನೀಡಿದ ಉತ್ತಮ ಆರಂಭ ವ್ಯರ್ಥವಾಗಲಿಲ್ಲ. ಡೆಲ್ಲಿ ತಂಡದ ಆವೇಶ್ ಖಾನ್ (13ಕ್ಕೆ3) ಅವರ ಕರಾರುವಾಕ್ ದಾಳಿಯನ್ನು ದಿಟ್ಟತನದಿಂದ ಎದುರಿಸಿದ ರಾಣಾ ತಂಡವನ್ನು ಜಯದತ್ತ ಸಾಗಿಸಿದರು.
ಆದರೆ, ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ತಂಡದ ಸ್ಟೀವನ್ ಸ್ಮಿತ್ (39ರನ್) ಮತ್ತು ಶಿಖರ್ ಧವನ್ (24 ರನ್) ಉತ್ತಮ ಆರಂಭ ಕೊಟ್ಟರು. ಮಧ್ಯದಲ್ಲಿ ಪಂತ್ (39 ರನ್) ಕೂಡ ಚೆನ್ನಾಗಿ ಆಡಿದರು. ಆದರೆ ಶ್ರೇಯಸ್ ಅಯ್ಯರ್ ಸೇರಿದಂತೆ ಉಳಿದೆಲ್ಲ ಬ್ಯಾಟ್ಸ್‌ಮನ್‌ಗಳೂ ಎರಡಂಕಿ ತಲುಪಲಿಲ್ಲ. ಅನುಭವಿ ಮತ್ತು ಯುವ ಬ್ಯಾಟ್ಸ್‌ಮನ್‌ಗಳು ಕೋಲ್ಕತ್ತ ಬೌಲರ್‌ಗಳ ಸ್ಪಿನ್ ಮತ್ತು ರಿವರ್ಸ್ ಸ್ವಿಂಗ್‌ಗಳನ್ನು ಎದುರಿಸುವಲ್ಲಿ ಎಡವಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.