ಪಂಜಾಬ್ ಕಿಂಗ್ಸ್ ತಂಡದ ಪ್ರಭಸಿಮ್ರನ್ ಸಿಂಗ್ ಮತ್ತು ಪ್ರಿಯಾಂಶ್ ಆರ್ಯ
ಪಿಟಿಐ ಚಿತ್ರ
ಕೋಲ್ಕತ್ತ: ಆತಿಥೇಯ ಕೋಲ್ಕತ್ತ ನೈಟ್‌ರೈಡರ್ಸ್ ತಂಡದ ಬ್ಯಾಟಿಂಗ್ ಕಣ್ತುಂಬಿಕೊಳ್ಳಲು ಶನಿವಾರ ಈಡನ್ ಗಾರ್ಡನ್‌ಗೆ ಬಂದಿದ್ದ ಅಭಿಮಾನಿಗಳ ಆಸೆಗೆ ಮಳೆ ಅಡ್ಡಿಯಾಯಿತು.
ಪಂಜಾಬ್ ಕಿಂಗ್ಸ್ ತಂಡವು ಒಡ್ಡಿದ್ದ 202 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಕೆಕೆಆರ್ ತಂಡವು 1 ಓವರ್‌ನಲ್ಲಿ ವಿಕೆಟ್ ನಷ್ಟವಿಲ್ಲದೇ 7 ರನ್ ಗಳಿಸಿದ್ದ ಸಂದರ್ಭದಲ್ಲಿ ಮಳೆ ಆರಂಭವಾಯಿತು. ರಾತ್ರಿ 11 ಗಂಟೆಯವರೆಗೂ ಹವಾಮಾನ ಪರಿಸ್ಥಿತಿ ಸುಧಾರಿಸದ ಕಾರಣ ಪಂದ್ಯವನ್ನು ರದ್ದುಗೊಳಿಸಲಾಯಿತು. ಉಭಯ ತಂಡಗಳಿಗೆ ಒಂದೊಂದು ಅಂಕ ನೀಡಲಾಯಿತು.
ಇದಕ್ಕೂ ಮುನ್ನ ಪ್ರಿಯಾಂಶ್ ಆರ್ಯ (69; 35ಎ, 4X8, 6X4) ಮತ್ತು ಪ್ರಭಸಿಮ್ರನ್ ಸಿಂಗ್ (83; 49ಎ, 4X6, 6X6) ಅವರ ಶತಕದ ಜೊತೆಯಾಟದ ಬಲದಿಂದ ಪಂಜಾಬ್ ಕಿಂಗ್ಸ್ ತಂಡವು ‘ದ್ವಿಶತಕ’ದ ಮೊತ್ತ ದಾಖಲಿಸಿತು. ಅವರು ಮೊದಲ ವಿಕೆಟ್ ಜೊತೆಯಾಟದಲ್ಲಿ 120 (72 ಎಸೆತ) ರನ್ ಸೇರಿಸಿದರು. ಇದರಿಂದಾಗಿ ತಂಡವು 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 201 ರನ್ ಗಳಿಸಿತು.
ಟಾಸ್ ಗೆದ್ದ ಪಂಜಾಬ್ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಬ್ಯಾಟರ್‌ಗಳಿಬ್ಬರ ಭರಾಟೆಯಿಂದಾಗಿ ಪವರ್‌ಪ್ಲೇನಲ್ಲಿ 56 ರನ್‌ಗಳು ಸೇರಿದವು. ಪ್ರಿಯಾಂಶ್ ಅವರು ವೇಗವಾಗಿ ರನ್ ಗಳಿಸಿದರು. 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಪ್ರಭಸಿಮ್ರನ್ ಅವರು 38 ಎಸೆತಗಳಲ್ಲಿ 50ರ ಗಡಿ ದಾಟಿದರು. ಇವರಿಬ್ಬರೂ ಕ್ರೀಸ್‌ನಲ್ಲಿ ಇದ್ದಷ್ಟು ಹೊತ್ತು ರನ್‌ಗಳು ಸರಾಗವಾಗಿ ಹರಿದುಬಂದವು. ಆದರ ಜೊತೆಗೆ ಬೌಲರ್‌ಗಳ ಬೆವರು ಕೂಡ ಹರಿಯಿತು!
12ನೇ ಓವರ್‌ನಲ್ಲಿ ಈ ಜೊತೆಯಾಟವನ್ನು ಮುರಿಯುವಲ್ಲಿ ಆ್ಯಂಡ್ರೆ ರಸೆಲ್ ಯಶಸ್ವಿಯಾದರು. ರಸೆಲ್ ಹಾಕಿದ ನಿಧಾನಗತಿಯ ಆಫ್ ಕಟರ್ ಎಸೆತವನ್ನು ಫುಲ್ ಮಾಡಿದ ಪ್ರಿಯಾಂಶ್ ಡೀಪ್ ಮಿಡ್‌ವಿಕೆಟ್‌ನಲ್ಲಿದ್ದ ಫೀಲ್ಡರ್ ವೈಭವ್ ಅರೋರಾಗೆ ಕ್ಯಾಚಿತ್ತರು.
ಇದರ ನಂತರ ಪ್ರಭಸಿಮ್ರನ್ ತಮ್ಮ ಆಟದ ವೇಗ ತುಸು ಹೆಚ್ಚಿಸಿದರು. ಅವರು ಎರಡನೇ ವಿಕೆಟ್ ಜೊತೆಯಾಟದಲ್ಲಿ ಶ್ರೇಯಸ್ ಅಯ್ಯರ್ ಅವರೊಂದಿಗೆ 40 ರನ್ ಸೇರಿಸಿದರು. ಈ ಹಂತದಲ್ಲಿ ವೈಭವ್ ಅರೋರಾ ಹಾಕಿದ ಎಸೆತದಲ್ಲಿ ಪ್ರಭಸಿಮ್ರನ್ ಸಿಂಗ್ ಅವರು ರೋವ್ಮನ್ ಪೊವೆಲ್ ಅವರಿಗೆ ಕ್ಯಾಚ್ ಆದರು.
ಗ್ಲೆನ್ ಮ್ಯಾಕ್ಸ್‌ವೆಲ್ (7; 8ಎ) ಅವರನ್ನು ಸ್ಪಿನ್ನರ್ ವರುಣ್ ಚಕ್ರವರ್ತಿ ಕ್ಲೀನ್‌ಬೌಲ್ಡ್ ಮಾಡಿದರು. ಮಾರ್ಕೊ ಯಾನ್ಸೆನ್ ಅವರಿಗೆ ಅರೋರಾ ಪೆವಿಲಿಯನ್ ದಾರಿ ತೋರಿಸಿದರು. ಇದೆಲ್ಲದರ ನಡುವೆ ಬ್ಯಾಟ್ ಬೀಸುತ್ತಿದ್ದ ನಾಯಕ ಶ್ರೇಯಸ್ (ಔಟಾಗದೇ 25; 16ಎ, 4X1, 6X1) ಅವರ ಜೊತೆಗೂಡಿದ ಜೋಷ್ ಇಂಗ್ಲಿಸ್ (ಔಟಾಗದೇ 11; 6ಎ, 4X2) ತಂಡದ ಮೊತ್ತವನ್ನು ಹೆಚ್ಚಿಸಿದರು.
ಸಂಕ್ಷಿಪ್ತ ಸ್ಕೋರು: ಪಂಜಾಬ್ ಕಿಂಗ್ಸ್: 20 ಓವರ್‌ಗಳಲ್ಲಿ 4ಕ್ಕೆ201 (ಪ್ರಿಯಾಂಶ್ ಆರ್ಯ 69, ಪ್ರಭಸಿಮ್ರನ್ ಸಿಂಗ್ 83, ಶ್ರೇಯಸ್ ಅಯ್ಯರ್ ಔಟಾಗದೇ 25, ವೈಭವ್ ಅರೋರಾ 34ಕ್ಕೆ2, ವರುಣ್ ಚಕ್ರವರ್ತಿ 39ಕ್ಕೆ1, ಆ್ಯಂಡ್ರೆ ರಸೆಲ್ 27ಕ್ಕೆ1) ಕೋಲ್ಕತ್ತ ನೈಟ್ ರೈಡರ್ಸ್: 1 ಓವರ್‌ನಲ್ಲಿ ವಿಕೆಟ್ ನಷ್ಟವಿಲ್ಲದೇ 7 ( ರೆಹಮಾನುಲ್ಲಾ ಗುರ್ಬಾಜ್ ಔಟಾಗದೇ 1, ಸುನಿಲ್ ನಾರಾಯಣ್ ಔಟಾಗದೇ 4) ಫಲಿತಾಂಶ: ಮಳೆಯಿಂದಾಗಿ ಪಂದ್ಯ ರದ್ದು. ಉಭಯ ತಂಡಗಳಿಗೆ ತಲಾ ಒಂದು ಅಂಕ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.