ADVERTISEMENT

IPL 2025 | ಉತ್ತಮ ಕ್ರಿಕೆಟ್‌ ಆಡಿದರೂ 18 ವರ್ಷ ಕಾಯಬೇಕಾಯಿತು: ದಿನೇಶ್ ಕಾರ್ತಿಕ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಜೂನ್ 2025, 8:31 IST
Last Updated 4 ಜೂನ್ 2025, 8:31 IST
<div class="paragraphs"><p>ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಆಟಗಾರರೊಂದಿಗೆ ಮುಖ್ಯಕೋಚ್‌ ಆ್ಯಂಡಿ ಫ್ಲವರ್‌, ಮೆಂಟರ್‌ ದಿನೇಶ್ ಕಾರ್ತಿಕ್‌ ಹಾಗೂ ಸಹಾಯಕ ಸಿಬ್ಬಂದಿ ಸಂಭ್ರಮಿಸಿದ ಕ್ಷಣ</p></div>

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಆಟಗಾರರೊಂದಿಗೆ ಮುಖ್ಯಕೋಚ್‌ ಆ್ಯಂಡಿ ಫ್ಲವರ್‌, ಮೆಂಟರ್‌ ದಿನೇಶ್ ಕಾರ್ತಿಕ್‌ ಹಾಗೂ ಸಹಾಯಕ ಸಿಬ್ಬಂದಿ ಸಂಭ್ರಮಿಸಿದ ಕ್ಷಣ

   

ಪಿಟಿಐ ಚಿತ್ರ

ಅಹಮದಾಬಾದ್‌: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಈ ಸಮಯಕ್ಕಾಗಿ 18 ವರ್ಷದಿಂದ ಕಾಯಬೇಕಾಯಿತು ಎಂದು ತಂಡದ ಮೆಂಟರ್‌ ದಿನೇಶ್‌ ಕಾರ್ತಿಕ್‌ ಹೇಳಿದ್ದಾರೆ.

ADVERTISEMENT

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ನಡೆದ ಫೈನಲ್‌ನಲ್ಲಿ ಪಂಜಾಬ್‌ ಕಿಂಗ್ಸ್‌ ತಂಡವನ್ನು ಮಣಿಸುವ ಮೂಲಕ, ಆರ್‌ಸಿಬಿ ಚೊಚ್ಚಲ ಟ್ರೋಫಿಗೆ ಮುತ್ತಿಕ್ಕಿದೆ.

ಬಳಿಕ ಮಾತನಾಡಿರುವ ದಿನೇಶ್‌ ಕಾರ್ತಿಕ್‌ (ಡಿಕೆ), ಉತ್ತಮ ಕ್ರಿಕೆಟ್‌ ಆಡಿದರೂ ಈ ಸಮಯಕ್ಕಾಗಿ 18 ವರ್ಷ ಕಾಯಬೇಕಾಯಿತು. ಈ ಗೆಲುವು ಪ್ರತಿಯೊಬ್ಬ ಅಭಿಮಾನಿಗೂ ಸೇರಿದ್ದು. ವಿರಾಟ್ ಕೊಹ್ಲಿ, ಎಬಿ ಡಿ ವಿಲಿಯರ್ಸ್‌ ಹಾಗೂ ಕ್ರಿಸ್‌ ಗೇಲ್‌ ಅವರಂತಹ ದಿಗ್ಗಜರು ಹೃದಯದಿಂದ ಪ್ರಯತ್ನಿಸಿದ್ದಾರೆ ಎಂದಿದ್ದಾರೆ.

ನಮ್ಮ ಸಹಾಯಕ ಸಿಬ್ಬಂದಿಯೂ 18 ವರ್ಷಗಳಿಂದ ಕಾಯುತ್ತಿದ್ದರು. ಅವರಿಗೆಲ್ಲ ಖಂಡಿತಾ ಸಂತೋಷವಾಗಿದೆ ಎಂದಿರುವ ಡಿಕೆ, ನಮ್ಮದು ಉತ್ತಮ ತಂಡ ಎಂದು ಆರಂಭದಿಂದಲೂ ನಂಬಿದ್ದೆವು. ನಮ್ಮ ಆಟಗಾರರ ವಿವಿಧ ಸಂದರ್ಭಗಳಲ್ಲಿ ಹೊಣೆ ಹೊತ್ತು ಆಡಿದ್ದು ಖುಷಿ ನೀಡಿದೆ. ಅತ್ಯಂತ ಒತ್ತಡದಿಂದ ಕೂಡಿದ ಇಂದಿನ ಪಂದ್ಯದಲ್ಲೂ ನಮ್ಮನ್ನು ಮುಂದೆ ತಳ್ಳಿದರು. ಬ್ಯಾಟಿಂಗ್‌ ಮಾಡಲು ಅಷ್ಟೇನೂ ಸುಲಭವಲ್ಲದ ಪಿಚ್‌ನಲ್ಲಿಯೂ ಉತ್ತಮ ಮೊತ್ತ ಕಲೆಹಾಕಿದೆವು ಎಂದು ಹೇಳಿದ್ದಾರೆ.

ಮುಂದುವರಿದು, ಬ್ಯಾಟರ್‌ಗಳು ಬ್ಯಾಟಿಂಗ್‌ ಮಾಡುವುದು ಸುಲಭವಲ್ಲ ಎಂದುಕೊಂಡಿದ್ದರು. ಆದರೆ, ಇದು ಫೈನಲ್‌ ಪಂದ್ಯವಾಗಿರುವುದರಿಂದ ವಿಚಾರ ಪಿಚ್‌ನದ್ದಲ್ಲ. ಬದಲಾಗಿ ಭಾವನೆಗಳದ್ದು. ನಮ್ಮೊಳಗಿನ ಕಿಚ್ಚಿನದ್ದಾಗಿತ್ತು ಎಂದು ಪ್ರತಿಪಾದಿಸಿದ್ದಾರೆ.

ಸಹಾಯಕ ಸಿಬ್ಬಂದಿಗೆ ಕ್ರೆಡಿಟ್‌ ನೀಡಿರುವ ಅವರು, ಕೋಚ್‌ ಆ್ಯಂಡಿ ಫ್ಲವರ್‌ ತಂಡದ ಕಠಿಣ ಸನ್ನಿವೇಶದಿಂದ ತಂಡವನ್ನು ಮುನ್ನಡೆಸಿದರು. ನಾನೀಗ ಮೊದಲಿಗಿಂತ ಉತ್ತಮ ಬ್ಯಾಟಿಂಗ್‌ ತರಬೇತುದಾರನಾಗಿದ್ದೇನೆ. ಫ್ಲವರ್‌ ನನ್ನನ್ನು ತಿದ್ದಿ, ನೆರವಾದರು. ಆರಂಭದಿಂದಲೂ ಅವರಲ್ಲೊಂದು ದೃಷ್ಟಿಕೋನವಿತ್ತು. ಅದರಂತೆ ಆಟಗಾರರು ಅದ್ಭುತವಾಗಿ ಆಡಿದ್ದಾರೆ ಎಂದು ಶ್ಲಾಘಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.