ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿದ ರೊಮೆರಿಯೋ ಶೆಫರ್ಡ್
–ಪ್ರಜಾವಾಣಿ ಚಿತ್ರ/ರಂಜು ಪಿ
ಬೆಂಗಳೂರು: ಬೌಲರ್ ಗೊಂದಲಕ್ಕೊಳಗಾಗಿದ್ದರಿಂದ ಅಂತಿಮ ಓವರ್‌ಗಳಲ್ಲಿ ಅಬ್ಬರಿಸಲು ಸಾಧ್ಯವಾಯಿತು ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಆಲ್‌ರೌಂಡರ್ ರೊಮೆರಿಯೊ ಶೆಫರ್ಡ್ ಹೇಳಿದ್ದಾರೆ.
ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧ ಶನಿವಾರ ನಡೆದ ಪಂದ್ಯದಲ್ಲಿ ಶೆಫರ್ಡ್ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ತಂಡದ ಮೊತ್ತ 17.4 ಓವರ್‌ಗಳಲ್ಲಿ 5 ವಿಕೆಟ್‌ಗೆ 157 ರನ್ ಆಗಿದ್ದಾಗ ಕ್ರೀಸ್‌ಗಿಳಿದ ಅವರು ಕೊನೇ ಎರಡು ಓವರ್‌ಗಳಲ್ಲಿ ಅಬ್ಬರಿಸಿ ಪಂದ್ಯದ ದಿಕ್ಕನ್ನೇ ಬದಲಿಸಿದ್ದರು.
ಅದರೊಂದಿಗೆ ತಂಡದ ಮೊತ್ತವನ್ನು ನಿಗಿದಿತ ಓವರ್‌ಗಳಲ್ಲಿ 5 ವಿಕೆಟ್‌ಗೆ 213ಕ್ಕೆ ಏರಿಸಿದರು. ಈ ಗುರಿ ಬೆನ್ನತ್ತಿದ ಚೆನ್ನೈ ತಂಡ 211 ರನ್ ಗಳಿಸಲಷ್ಟೇ ಶಕ್ತವಾಯಿತು. ಹೀಗಾಗಿ, ಆತಿಥೇಯ ತಂಡಕ್ಕೆ 2 ರನ್‌ಗಳ ಅಲ್ಪ ಅಂತರದ ಜಯ ದಕ್ಕಿತು.
ಪಂದ್ಯದ ಬಳಿಕ ಮಾತನಾಡಿದ ಶೆಫರ್ಡ್, ಪ್ರಮಾಣಿಕವಾಗಿ ಹೇಳಬೇಕೆಂದರೆ, ಬೌಲರ್ (ಖಲೀಲ್ ಅಹ್ಮದ್) ಮೇಲೆ, ಆತ ಏನು ಮಾಡಬಹುದು ಎಂಬುದರ ಹೆಚ್ಚಿನ ಗಮನ ಹರಿಸಿದ್ದೆ. ಮೊದಲ ಎರಡು ಎಸೆತಗಳಲ್ಲಿ ಸಿಕ್ಸರ್ ಬಾರಿಸಿದ ನಂತರ, ಆತ ಒತ್ತಡಕ್ಕೊಳಗಾಗಿದ್ದರು. ಗೊಂದಲಕ್ಕೊಳಗಾಗಿರುವುದು ತಿಳಿಯುತ್ತಿದ್ದಂತೆ, ಇನ್ನಷ್ಟು ಬಿರುಸಿನ ಹೊಡೆತಗಳಿಗೆ ಮುಂದಾದೆ ಎಂದು ಹೇಳಿದ್ದಾರೆ.
ಖಲೀಲ್ ಎಸೆದ ಇನಿಂಗ್ಸ್‌ನ 19ನೇ ಓವರ್‌ನಲ್ಲಿ ನಾಲ್ಕು ಸಿಕ್ಸರ್, ಎರಡು ಬೌಂಡರಿ ಚಚ್ಚಿದ ಶೆಫರ್ಡ್, ಮಥೀಷ ಪತಿರಾಣ ಹಾಕಿದ ಕೊನೇ ಓವರ್‌ನಲ್ಲಿ ತಲಾ ಎರಡು ಬೌಂಡರಿ ಮತ್ತು ಸಿಕ್ಸರ್ ಬಾರಿಸಿದರು. ಹೀಗಾಗಿ, ಈ ಎರಡು ಓವರ್‌ಗಳಲ್ಲೇ 53 ರನ್ ಹರಿದುಬಂದಿತು.
ಒಟ್ಟು 14 ಎಸೆತಗಳನ್ನು ಎದುರಿಸಿದ ಅವರು 6 ಸಿಕ್ಸ್, 4 ಬೌಂಡರಿ ಸಹಿತ 53 ರನ್ ಬಾರಿಸಿ ಅಜೇಯವಾಗಿ ಉಳಿದರು. ಇದರೊಂದಿಗೆ, ಐಪಿಎಲ್‌ನಲ್ಲಿ ಎರಡನೇ ಅತಿವೇಗದ ಅರ್ಧಶತಕ ಸಿಡಿಸಿದ ಶ್ರೇಯಕ್ಕೆ ಭಾಜನರಾದರು.
ರಾಜಸ್ಥಾನ ರಾಯಲ್ಸ್ ತಂಡದ ಯಶಸ್ವಿ ಜೈಸ್ವಾಲ್ 2023ರಲ್ಲಿ ಕೇವಲ 13 ಎಸೆತಗಳಲ್ಲಿ ಅರ್ಧಶತಕ ಬಾರಿಸಿರುವುದು ದಾಖಲೆಯಾಗಿದೆ. 14 ಎಸೆತಗಳಲ್ಲಿ 50ರ ಗಡಿದಾಟಿದ ಸಾಧನೆ ಮಾಡಿರುವ ಕೆ.ಎಲ್.ರಾಹುಲ್, ಪ್ಯಾಟ್ ಕಮಿನ್ಸ್ ಮತ್ತು ಶೆಫರ್ಡ್ ನಂತರದ ಸ್ಥಾನವನ್ನು ಹಂಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.