ADVERTISEMENT

IAF 93ನೇ ದಿನಾಚರಣೆ: ರಾವಲ್ಪಿಂಡಿ ಚಿಕನ್ ಟಿಕ್ಕಾದಿಂದ ಬಾಲಕೋಟ್ ತಿರಮಿಸು ಖಾದ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಅಕ್ಟೋಬರ್ 2025, 10:43 IST
Last Updated 9 ಅಕ್ಟೋಬರ್ 2025, 10:43 IST
<div class="paragraphs"><p>ಭಾರತೀಯ ವಾಯು ಸೇನೆಯ ಪಥ ಸಂಚಲನ</p></div>

ಭಾರತೀಯ ವಾಯು ಸೇನೆಯ ಪಥ ಸಂಚಲನ

   

ಪಿಟಿಐ ಚಿತ್ರ, ಎಕ್ಸ್‌ ಚಿತ್ರ

ನವದೆಹಲಿ: ಭಾರತೀಯ ವಾಯುಸೇನೆಯ 93ನೇ ವರ್ಷಾಚರಣೆಗೆ ವೇದಿಕೆ ಸಿದ್ಧವಾಗಿದ್ದು, ಔತಣಕೂಟದಲ್ಲಿ ಉಣಬಡಿಸಲಿರುವ ತರಹೇವಾರಿ ಆಹಾರಗಳ ಪಟ್ಟಿಯು ಗಮನ ಸೆಳೆದಿದೆ. ಆಪರೇಷನ್ ಸಿಂಧೂರ ಸಂದರ್ಭದಲ್ಲಿ ವಾಯು ಸೇನೆ ದಾಳಿ ನಡೆಸಿದ ಪಾಕಿಸ್ತಾನದ ನಗರಗಳ ಹೆಸರುಗಳೇ ಇರುವುದಕ್ಕೆ ನೆಟ್ಟಿಗರು ಸಂಭ್ರಮಿಸಿದ್ದಾರೆ.

ADVERTISEMENT

ವಾಯುಸೇನೆಯ 93ನೇ ವರ್ಷಾಚರಣೆಯ ಆಹಾರ ಪಟ್ಟಿಯು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರೂ ಈ ಪಟ್ಟಿಯನ್ನು ಹಂಚಿಕೊಂಡಿದ್ದಾರೆ. ‘ಆಸಕ್ತಿದಾಯ ಆಹಾರ ಪಟ್ಟಿಯನ್ನು ಭಾರತೀಯ ವಾಯುಸೇನೆಯು ವಿಶೇಷ ಸಂದರ್ಭಕ್ಕಾಗಿ ಸಿದ್ಧಪಡಿಸಿದೆ. ಆಪರೇಷನ್ ಸಿಂಧೂರ ಸಂದರ್ಭದಲ್ಲಿ ಭಾರತೀಯ ವಾಯು ಸೇನೆಯು ಬಾಂಬ್ ದಾಳಿ ನಡೆಸಿದ ಪಾಕಿಸ್ತಾನದ ವಾಯು ನೆಲೆಗಳ ಹೆಸರುಗಳನ್ನೇ ಆಹಾರಕ್ಕೆ ಇಟ್ಟಿದೆ’ ಎಂದು ಬರೆದುಕೊಂಡಿದ್ದಾರೆ.

ಏ. 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಪ್ರವಾಸಿಗರನ್ನು ಕೊಂದ ಭಯೋತ್ಪಾದಕರು ಮತ್ತು ಅವರ ನೆಲೆಗಳನ್ನು ಗುರಿಯಾಗಿಸಿ ಮೇ 7ರಂದು ಭಾರತೀಯ ಸೇನೆಯು ‘ಆಪರೇಷನ್ ಸಿಂಧೂರ’ ಎಂಬ ಸೇನಾ ಕಾರ್ಯಾಚರಣೆ ನಡೆಸಿತು. ಇದರಲ್ಲಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರರ ಅಡಗುತಾಣಗಳನ್ನು ನಾಶಪಡಿಸಲಾಯಿತು. ನಂತರ ಕೆಲ ವಾಯುನೆಲೆಯನ್ನೂ ಭಾರತೀಯ ಸೇನೆ ಧ್ವಂಸಗೊಳಿಸಿತ್ತು.

ವಾಯುಸೇನೆಯ 93ನೇ ವರ್ಷಾಚರಣೆಯಲ್ಲಿ ಇದನ್ನು ಮೆಲಕು ಹಾಕಲಾಗಿದೆ. ಇದರಲ್ಲಿ ಪ್ರಮುಖವಾಗಿ...

  • ರಾವಲ್ಪಿಂಡಿ ಚಿಕನ್ ಟಿಕ್ಕಾ ಮಸಾಲಾ

  • ರಫೀಕ್ ರಾರಾ ಮಟ್ಟನ್‌

  • ಬೊಲಾರಿ ಪನ್ನೀರ್ ಮೇತಿ ಮಲಾಯ್‌

  • ಸುಕ್ಕೂರ್‌ ಶಾಮ್ ಸವೇರಾ ಕೋಫ್ತಾ

  • ಸರ್ಗೋಡಾ ದಾಲ್‌ ಮಖನಿ

  • ಜಾಕೊಬಾಬಾದ್ ಮೇವಾ ಪಲಾವ್

  • ಬಹವಲ್‌ಪುರ್‌ ನಾನ್

  • ಸಿಹಿ ತಿನಿಸುಗಳ ವಿಭಾಗದಲ್ಲಿ...

  • ಬಾಲಕೋಟ್ ತಿರಮಿಸು

  • ಮುಜಾಫರಾಬಾದ್ ಕುಲ್ಫಿ ಫಲೂದಾ

  • ಮುರಿಡ್ಕೆ ಮೀಠಾ ಪಾನ್

ಹೀಗೆ ಆಹಾರ ಪಟ್ಟಿಯಲ್ಲಿ ರಾವಲ್ಪಿಂಡಿ, ಬಾಲಕೋಟ್, ಬಹವಲ್ಪುರ, ಮುಜಾಫರಾಬಾದ್, ಮುರಿಡ್ಕೆ ಎಂಬ ಪಾಕಿಸ್ತಾನದ ನಗರಗಳ ಹೆಸರುಗಳನ್ನು ಬಳಸಲಾಗಿದೆ. ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಈ ನಗರಗಳು ಭಾರತೀಯ ವಾಯುಸೇನೆಯ ದಾಳಿಗೆ ಒಳಗಾಗಿದ್ದವು. ಆದರೆ ಈ ಆಹಾರ ಪಟ್ಟಿಯ ಕುರಿತು ವಾಯು ಸೇನೆಯು ಅಧಿಕೃತವಾಗಿ ಏನನ್ನೂ ಹೇಳಿಲ್ಲ.

ಭಾರತೀಯ ವಾಯುಸೇನೆಯು 1932ರ ಅ. 8ರಂದು ರಚನೆಯಾಯಿತು. ಅದರ 93ನೇ ವರ್ಷಾಚರಣೆ ಆಯೋಜಿಸಿತ್ತು. ವಾಯುಸೇನೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್‌ ಎ.ಪಿ. ಸಿಂಗ್ ಅವರು ಮಾತನಾಡಿ, ‘ಆಪರೇಷನ್ ಸಿಂಧೂರ ಒಂದು ಹೆಮ್ಮೆಯ ಕ್ಷಣ’ ಎಂದಿದ್ದಾರೆ.

ಆಪರೇಷನ್ ಸಿಂಧೂರ್‌ನಲ್ಲಿ ಭಾರತೀಯ ಸೇನೆ ಗುರಿಯಾಗಿಸಿದ ಸ್ಥಳಗಳು

ಮರ್ಕಜ್‌ ಸುಭಾನ್ ಅಲ್ಲಾ, ಬಹವಲ್‌ಪುರ್‌: ಜೈಷ್‌ ಎ ಮೊಹಮ್ಮದ್‌ ಭಯೋತ್ಪಾದಕರ ತಂಡದ ಕೇಂದ್ರ

ಮರ್ಕಜ್‌ ತಯಬಾ, ಮುರಿಡ್ಕೆ: 200 ಎಕರೆ ಪ್ರದೇಶದಲ್ಲಿರುವ ಲಷ್ಕರ್‌ ಎ ತಯಬಾ ಭಯೋತ್ಪಾದಕ ಗುಂಪಿನ ಆವರಣ. ಭಾರತೀಯ ಸೇನಾ ಕಾರ್ಯಾಚರಣೆಯಲ್ಲಿ ಅತ್ಯಂತ ತೀವ್ರವಾಗಿ ದಾಳಿಗೊಳಗಾದ ಪ್ರದೇಶ.

ಮರ್ಕಜ್‌ ಅಬ್ಬಾಸ್, ಕೊಟ್ಲಿ: ಜೈಷ್ ಎ ಮೊಹಮ್ಮದ್‌ ತರಬೇತಿ ಕೇಂದ್ರ ಮತ್ತು ಶಸ್ತ್ರಾಸ್ತ್ರ ವಿತರಣಾ ಕೇಂದ್ರ

ಸೈದ್ನಾ ಬಿಲಾಲ್ ಮತ್ತು ಶವಾಯಿ ನಲ್ಲಾ ಕ್ಯಾಂಪಸ್, ಮುಜಾಫರಾಬಾದ್: ನುಸುಳಲು ಸ್ಪೀಪರ್ ಸೆಲ್‌ಗಳು ಬಳಸುವ ಸ್ಥಳಗಳು

ಮರ್ಕಜ್ ಅಹ್ಲೆ ಹದಿತ್‌, ಬರ್ನಾಲಾ: ಲಷ್ಕರ್ ಎ ತಯಬಾ ಸಂಘಟನೆಯ ಪ್ರಾದೇಶಿಕ ದಾಸ್ತಾನು ಕೇಂದ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.