ADVERTISEMENT

ತಗ್ಗಿದ ಚಿಲ್ಲರೆ ಹಣದುಬ್ಬರ: ಮತ್ತೆ ರೆಪೊ ದರ ಕಡಿತಕ್ಕೆ ಹಾದಿ ಸುಗಮ

ಪಿಟಿಐ
Published 13 ಮೇ 2025, 11:35 IST
Last Updated 13 ಮೇ 2025, 11:35 IST
<div class="paragraphs"><p>ತರಕಾರಿ</p></div>

ತರಕಾರಿ

   

ನವದೆಹಲಿ: ಏಪ್ರಿಲ್‌ನಲ್ಲಿ ಚಿಲ್ಲರೆ ಹಣದುಬ್ಬರವು ಆರು ವರ್ಷದ ಕನಿಷ್ಠ ಮಟ್ಟವಾದ ಶೇ 3.16ರಷ್ಟು ದಾಖಲಾಗಿದೆ. ತರಕಾರಿ, ಹಣ್ಣು, ದ್ವಿದಳ ಧಾನ್ಯಗಳ ಬೆಲೆಯಲ್ಲಿನ ಇಳಿಕೆಯೇ ಇದಕ್ಕೆ ಕಾರಣ ಎಂದು ಕೇಂದ್ರ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಮಂಗಳವಾರ ತಿಳಿಸಿದೆ.

2019ರ ಜುಲೈ ಬಳಿಕ ದಾಖಲಾಗದ ಕನಿಷ್ಠ ಮಟ್ಟ ಇದಾಗಿದೆ. ಮಾರ್ಚ್‌ನಲ್ಲಿ  ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧರಿತ ಹಣದುಬ್ಬರವು ಶೇ 3.34ರಷ್ಟು ದಾಖಲಾಗಿತ್ತು.

ADVERTISEMENT

ಹಣಕಾಸು ನೀತಿಗೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಕೈಗೊಳ್ಳುವ ನಿರ್ಧಾರದಲ್ಲಿ ಚಿಲ್ಲರೆ ಹಣದುಬ್ಬರವು ನಿರ್ಣಾಯಕವಾಗಿದೆ.

ಸದ್ಯ ಈ ಹಣದುಬ್ಬರವು ಆರ್‌ಬಿಐ ನಿಗದಿಪಡಿಸಿರುವ ಶೇ 4ರ ಸರಾಸರಿ ಗುರಿಗಿಂತ ಕಡಿಮೆ ದಾಖಲಾಗಿದೆ. ಹಾಗಾಗಿ, ಜೂನ್‌ನಲ್ಲಿ ನಡೆಯುವ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ ಮೂರನೇ ಬಾರಿಗೆ ರೆಪೊ ದರ ಕಡಿತಗೊಳಿಸುವ ಸಾಧ್ಯತೆಯಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.

ಮಾರ್ಚ್‌ಗೆ ಹೋಲಿಸಿದರೆ ಏಪ್ರಿಲ್‌ನಲ್ಲಿ ಆಹಾರ ಹಣದುಬ್ಬರದಲ್ಲಿ ಶೇ 0.91ರಷ್ಟು ಇಳಿಕೆಯಾಗಿದೆ. 2021ರ ಅಕ್ಟೋಬರ್‌ ಬಳಿಕ ಆಹಾರ ಪದಾರ್ಥಗಳ ಬೆಲೆ ಕಡಿಮೆಯಾಗಿರುವ ತಿಂಗಳು ಇದಾಗಿದೆ. 

ಮಾರ್ಚ್‌ನಲ್ಲಿ ಶೇ 2.69ರಷ್ಟಿದ್ದ ಆಹಾರ ಪದಾರ್ಥಗಳ ಬೆಲೆಯು ಏಪ್ರಿಲ್‌ನಲ್ಲಿ ಶೇ 1.78ಕ್ಕೆ ತಗ್ಗಿದೆ. ಕಳೆದ ವರ್ಷದ ಏಪ್ರಿಲ್‌ನಲ್ಲಿ ಶೇ 8.7ರಷ್ಟಿತ್ತು ಎಂದು ಎನ್‌ಎಸ್‌ಒ  ತಿಳಿಸಿದೆ.

ತರಕಾರಿಗಳು, ದ್ವಿದಳಧಾನ್ಯ, ಏಕದಳ ಧಾನ್ಯ, ಹಣ್ಣುಗಳು, ಮಾಂಸ ಮತ್ತು ಮೀನು, ವೈಯಕ್ತಿಕ ಆರೈಕೆ ಉತ್ಪನ್ನಗಳ ಬೆಲೆಯಲ್ಲಿ ಇಳಿಕೆಯಾಗಿದೆ ಎಂದು ಹೇಳಿದೆ.

ಕಳೆದ ವರ್ಷದ ಏಪ್ರಿಲ್‌ನಲ್ಲಿದ್ದ ಧಾರಣೆಗೆ ಹೋಲಿಸಿದರೆ ಆಲೂಗೆಡ್ಡೆ (ಶೇ 12.7), ಟೊಮೆಟೊ (ಶೇ 33.21), ಕೋಳಿ ಮಾಂಸ (ಶೇ 6.78), ತೊಗರಿ ಬೇಳೆ (ಶೇ 14.27), ಜೀರಿಗೆ (ಶೇ 20.79) ದರದಲ್ಲಿ ಇಳಿಕೆಯಾಗಿದೆ. 

‘ಪ್ರಸಕ್ತ ಆರ್ಥಿಕ ವರ್ಷದ ಎರಡು ಮತ್ತು ಮೂರನೇ ತ್ರೈಮಾಸಿಕದಲ್ಲಿ ಚಿಲ್ಲರೆ ಹಣದುಬ್ಬರ ಇಳಿಕೆಯಾಗಲಿದೆ ಎಂದು ಆರ್‌ಬಿಐನ ಎಂಪಿಸಿ ಸಭೆ ಅಂದಾಜಿಸಿದೆ. ಕಡಿಮೆ ದಾಖಲಾದರೆ ಪ್ರಸಕ್ತ ಕ್ಯಾಲೆಂಡರ್‌ ವರ್ಷದಲ್ಲಿ ಹೆಚ್ಚುವರಿಯಾಗಿ ಶೇ 0.75ರಷ್ಟು ರೆಪೊ ದರ ಕಡಿತಗೊಳಿಸುವ ಸಾಧ್ಯತೆಯಿದೆ’ ಎಂದು ಐಸಿಆರ್‌ಎ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್‌ ತಿಳಿಸಿದ್ದಾರೆ.

‘ಏಪ್ರಿಲ್‌ನಲ್ಲಿ ಹಣದುಬ್ಬರ ಇಳಿಕೆಯಾಗಿರುವುದರಿಂದ ಜೂನ್‌ನಲ್ಲಿ ನಡೆಯುವ ಎಂಪಿಸಿ ಸಭೆಯಲ್ಲಿ ಶೇ 0.25ರಷ್ಟು ರೆಪೊ ದರ ಕಡಿತಗೊಳ್ಳುವ ನಿರೀಕ್ಷೆಯಿದೆ’ ಎಂದು ಹೇಳಿದ್ದಾರೆ.

ಕರ್ನಾಟಕ: ದೇಶದ ಸರಾಸರಿಗಿಂತ ಅಧಿಕ ರಾಜ್ಯವಾರು ಪಟ್ಟಿಯಲ್ಲಿ ಕೇರಳದಲ್ಲಿ ಚಿಲ್ಲರೆ ಹಣದುಬ್ಬರವು ಅತಿಹೆಚ್ಚು ಅಂದರೆ ಶೇ 5.94ರಷ್ಟು ದಾಖಲಾಗಿದೆ. ಕರ್ನಾಟಕದಲ್ಲಿ ಶೇ 4.26ರಷ್ಟು ದಾಖಲಾಗಿದೆ. ಇದು ದೇಶದ ಸರಾಸರಿಗಿಂತಲೂ ಹೆಚ್ಚಿದೆ. ಛತ್ತೀಸಗಢ (ಶೇ 3.09) ಹರಿಯಾಣ (ಶೇ 3.51) ಮಹಾರಾಷ್ಟ್ರ (ಶೇ 3.56) ಪಂಜಾಬ್‌ (ಶೇ 4.09) ತಮಿಳುನಾಡು (ಶೇ 3.41) ಪಶ್ಚಿಮ ಬಂಗಾಳ (ಶೇ 3.16) ಉತ್ತರಾಖಂಡ (ಶೇ 3.81) ಜಮ್ಮು ಮತ್ತು ಕಾಶ್ಮೀರದಲ್ಲಿ (ಶೇ 4.25ರಷ್ಟು) ಹೆಚ್ಚು ದಾಖಲಾಗಿದೆ. ತೆಲಂಗಾಣದಲ್ಲಿ ಅತಿಕಡಿಮೆ ಅಂದರೆ ಶೇ 1.26ರಷ್ಟು ದಾಖಲಾಗಿದೆ.  ದೇಶದ ಗ್ರಾಮೀಣ ಪ್ರದೇಶದಲ್ಲಿ ಹಣದುಬ್ಬರವು ಶೇ 3.25ರಿಂದ ಶೇ 2.92ಕ್ಕೆ ತಗ್ಗಿದೆ. ನಗರ ಪ್ರದೇಶದಲ್ಲಿ ಶೇ 3.43ರಿಂದ ಶೇ 3.25ಕ್ಕೆ ಇಳಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.