ಷೇರುಪೇಟೆ
(ಪಿಟಿಐ ಚಿತ್ರ)
ಮುಂಬೈ: ದೀಪಾವಳಿ ಹಬ್ಬಕ್ಕೆ ಮೊದಲು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಲ್ಲಿ ಹಲವು ಸುಧಾರಣೆಗಳನ್ನು ತರುವುದಾಗಿ ಕೇಂದ್ರ ಸರ್ಕಾರ ಹೇಳಿರುವ ಕಾರಣದಿಂದಾಗಿ ದೇಶದ ಷೇರುಪೇಟೆಯಲ್ಲಿ ಸೋಮವಾರ ತೇಜಿ ವಹಿವಾಟು ನಡೆಯಿತು.
ಪ್ರಸ್ತಾವಿತ ಜಿಎಸ್‌ಟಿ ಸುಧಾರಣೆಯ ಪರಿಣಾಮವಾಗಿ, ವಾಹನಗಳಿಗೆ ಈಗ ವಿಧಿಸುತ್ತಿರುವ ಶೇ 28ರಷ್ಟು ತೆರಿಗೆಯು ಶೇ 18ಕ್ಕೆ ತಗ್ಗಲಿದೆ ಎಂಬ ನಿರೀಕ್ಷೆ ಇದೆ. ಇದು ವಾಹನ ತಯಾರಿಕಾ ಕಂಪನಿಗಳಿಗೆ ಲಾಭ ತರಲಿದೆ ಎಂಬ ಲೆಕ್ಕಾಚಾರದಲ್ಲಿ ಸೋಮವಾರದ ಷೇರುಪೇಟೆ ವಹಿವಾಟಿನಲ್ಲಿ ವಾಹನ ತಯಾರಿಕಾ ಕಂಪನಿಗಳ ಷೇರು ಖರೀದಿ ಜೋರಾಗಿತ್ತು.
ಅಲ್ಲದೆ, ಗ್ರಾಹಕ ಬಳಕೆ ಉಪಕರಣಗಳ ತಯಾರಿಕಾ ಕಂಪನಿಗಳ ಷೇರು ಖರೀದಿ ಸಹ ಹೆಚ್ಚಿತ್ತು. ಇವೆಲ್ಲ ಸೂಚ್ಯಂಕಗಳು ಏರಿಕೆಗೆ ನೆರವಾದವು ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ. ಷೇರುಪೇಟೆ ಸೂಚ್ಯಂಕಗಳ ಏರಿಕೆಯಿಂದ ಹೂಡಿಕೆದಾರರ ಸಂಪತ್ತು ಒಂದೇ ದಿನ ₹6.17 ಲಕ್ಷ ಕೋಟಿಯಷ್ಟು ಹೆಚ್ಚಾಗಿದೆ.
ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 676 ಅಂಶ ಏರಿಕೆಯಾಗಿ, 81,273ಕ್ಕೆ ತಲುಪಿದೆ. ವಹಿವಾಟಿನ ನಡುವೆ ಸೂಚ್ಯಂಕವು 1,168 ಅಂಶದವರೆಗೆ ಜಿಗಿದಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 245 ಅಂಶ ಹೆಚ್ಚಳವಾಗಿ 24,876ಕ್ಕೆ ಕೊನೆಗೊಂಡಿದೆ.
ಪ್ರಸ್ತಾವಿತ ಜಿಎಸ್‌ಟಿ ಸರಳೀಕರಣವು ದೇಶದ ಷೇರುಪೇಟೆಗೆ ಉತ್ತೇಜನ ನೀಡಿದೆ. ಜೊತೆಗೆ ಅಮೆರಿಕ ಮತ್ತು ರಷ್ಯಾ ಮಾತುಕತೆಯು ಯಾವುದೇ ಬಿಕ್ಕಟ್ಟು ಹೆಚ್ಚಿಸದೆ ಪೂರ್ಣಗೊಂಡಿದೆ. ಇದು ಹೂಡಿಕೆದಾರರಲ್ಲಿನ ಆತಂಕವನ್ನು ತಗ್ಗಿಸಿದೆ. ಇದರಿಂದ ಷೇರುಪೇಟೆ ಸೂಚ್ಯಂಕಗಳು ಏರಿಕೆ ಕಂಡಿವೆ ಎಂದು ಜಿಯೊಜಿತ್ ಇನ್ವೆಸ್ಟ್‌ಮೆಂಟ್ಸ್ ಲಿಮಿಟೆಡ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.
ಜಿಎಸ್‌ಟಿ ಸುಧಾರಣೆಯಿಂದ ವಾಹನ ತಯಾರಿಕಾ ಕಂಪನಿಗಳು ಹೆಚ್ಚಿನ ಲಾಭ ಪಡೆಯಲಿವೆ ಎಂದು ಹೇಳಿದ್ದಾರೆ.
ಭಾರತದ ರೇಟಿಂಗ್ ಅನ್ನು ಎಸ್ ಆ್ಯಂಡ್ ಪಿ ಸಂಸ್ಥೆ ಮೇಲ್ದರ್ಜೆಗೇರಿಸಿರುವುದು, ಕಚ್ಚಾ ತೈಲದ ಬೆಲೆ ಇಳಿಕೆ ಆಗುತ್ತಿರುವುದು ಕೂಡ ಹೂಡಿಕೆದಾರರಲ್ಲಿ ವಿಶ್ವಾಸ ಹೆಚ್ಚಿಸಿದೆ. ಹೀಗಾಗಿ ಮಾರುಕಟ್ಟೆಯು ಏರಿಕೆ ದಾಖಲಿಸಿದೆ ಎಂದು ರೆಲಿಗೇರ್ ಬ್ರೋಕಿಂಗ್ ಲಿಮಿಟೆಡ್‌ನ ಅಜಿತ್ ಮಿಶ್ರಾ ಹೇಳಿದ್ದಾರೆ.
ಮಾರುತಿ ಸುಜುಕಿ ಕಂಪನಿಯ ಷೇರಿನ ಮೌಲ್ಯ ಶೇ 8.94ರಷ್ಟು ಏರಿಕೆ ಕಂಡಿದೆ. ಬಜಾಜ್ ಫೈನಾನ್ಸ್, ಅಲ್ಟ್ರಾಟೆಕ್ ಸಿಮೆಂಟ್, ಬಜಾಜ್ ಫಿನ್‌ಸರ್ವ್, ಮಹೀಂದ್ರ ಆ್ಯಂಡ್ ಮಹೀಂದ್ರ, ಹಿಂದೂಸ್ತಾನ್ ಯೂನಿಲಿವರ್ ಮತ್ತು ಟ್ರೆಂಟ್ ಷೇರಿನ ಮೌಲ್ಯದಲ್ಲಿ ಏರಿಕೆಯಾಗಿದೆ. ಐಟಿಸಿ, ಎಟರ್ನಲ್, ಟೆಕ್ ಮಹೀಂದ್ರ ಮತ್ತು ಲಾರ್ಸೆನ್ ಆ್ಯಂಡ್ ಟೊಬ್ರೊ ಷೇರಿನ ಮೌಲ್ಯ ಇಳಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.