ADVERTISEMENT

'ಪಡಿಯಪ್ಪ' ಚಿತ್ರದಲ್ಲಿ ರಮ್ಯಾ ಬದಲು ಇವರು ಇರಬೇಕಿತ್ತು: ರಜನಿಕಾಂತ್ ಮನದಾಳದ ಮಾತು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಡಿಸೆಂಬರ್ 2025, 10:49 IST
Last Updated 10 ಡಿಸೆಂಬರ್ 2025, 10:49 IST
   

ಬೆಂಗಳೂರು: 1999ರಲ್ಲಿ ಬಿಡುಗಡೆಯಾಗಿದ್ದ ತಮಿಳು ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ಸೂಪರ್‌ಹಿಟ್ ಸಿನಿಮಾ 'ಪಡಿಯಪ್ಪ' ಮರು ಬಿಡುಗಡೆಗೆ ಸಜ್ಜಾಗಿದೆ. ಈ ನಡುವೆ ರಜನಿಕಾಂತ್‌ ಅವರು ಚಿತ್ರದ ಕುರಿತು ಯಾರಿಗೂ ತಿಳಿಯದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಕೆ.ಎಸ್. ರವಿಕುಮಾರ್ ನಿರ್ದೇಶನದ ಈ ಚಿತ್ರ ರಜನಿಕಾಂತ್ ಜನ್ಮದಿನದ ಪ್ರಯುಕ್ತ ಇದೇ ಡಿಸೆಂಬರ್ 12 ರಂದು 4ಕೆ ಹಾಗೂ ಅತ್ಯಾಧುನಿಕ ಸೌಂಡ್ ತಂತ್ರಜ್ಞಾನದೊಂದಿಗೆ ಮರು ಬಿಡುಗಡೆಯಾಗುತ್ತಿದೆ.

ಈ ಮಧ್ಯೆ ರಜನಿಕಾಂತ್‌ ನೀಡಿದ ಸಂದರ್ಶನ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ‘ಪಡಿಯಪ್ಪ‘ ಸಿನಿಮಾ ತಮಿಳು ಚಿತ್ರರಂಗದ ಹೆಗ್ಗುರುತು. ಈ ಸಿನಿಮಾ ರಜನಿಕಾಂತ್‌ ಅವರನ್ನು ಯಶಸ್ಸಿನ ಉತ್ತುಂಗಕ್ಕೆ ಏರಿಸಿತ್ತು. ಈ ಸಿನಿಮಾದಲ್ಲಿ ರಜನಿಕಾಂತ್‌ ಅವರ ಸ್ಟೈಲ್‌ ಸಿನಿ ಜಗತ್ತಿನ ಅಚ್ಚರಿಗೆ ಕಾರಣವಾಗಿತ್ತು. ಆ ದಿನಗಳಲ್ಲಿ ಸ್ಟೈಲ್‌ ಎಂದರೆ ರಜನಿ, ರಜನಿ ಅಂದರೆ ಸ್ಟೈಲ್‌ ಎಂಬುವಂತಾಗಿತ್ತು. ಈಗಲೂ ರಜನಿಗೆ ಫಾಲೋವರ್ಸ್‌ ಸಂಖ್ಯೆ ಕಡಿಮೆ ಆಗಿಲ್ಲ.

ಪಡಿಯಪ್ಪ ಸಿನಿಮಾದಲ್ಲಿ ರಜನಿಕಾಂತ್‌ ಪಾತ್ರಕ್ಕೆ ಇದ್ದ ತೂಕದಷ್ಟೇ ನೀಲಾಂಬರಿ ಪಾತ್ರಕ್ಕೂ ಪ್ರಾಮುಖ್ಯತೆ ಇದೆ. ಹೀಗಾಗಿಯೇ ಈ ಸಿನಿಮಾದ ಬಳಿಕ ನಟಿ ರಮ್ಯಾ ಕೃಷ್ಣ ಅವರು ಮನೆಮಾತಾಗಿದ್ದರು. ಆದರೆ ಇದೀಗ ರಜನಿಕಾಂತ್‌ ಹೇಳಿದ ವಿಷಯ ಅಚ್ಚರಿಗೆ ಕಾರಣವಾಗಿದೆ. ಹೌದು, ರಮ್ಯಾ ಕೃಷ್ಣ ಬದಲಿಗೆ ನೀಲಾಂಬರಿ ಪಾತ್ರಕ್ಕೆ ನಟಿ ಐಶ್ವರ್ಯಾ ರೈ ಅವರು ಎಂದು ನಿರ್ಧರಿಸಲಾಗಿತ್ತು. ಅವರ ಡೇಟ್ಸ್‌ಗಾಗಿ ಕಾದಿದ್ದೆವು. ಆದರೆ, ಐಶ್ವರ್ಯಾ ರೈ ಅವರ ಡೇಟ್ಸ್‌ ಸಿಗದ ಕಾರಣ ಐಶ್ವರ್ಯಾ ಬದಲಿಗೆ ರಮ್ಯಾ ಕೃಷ್ಣ ಅವರನ್ನು ಆಯ್ಕೆ ಮಾಡಲಾಗಿತ್ತು ಎಂದು ರಜನಿಕಾಂತ್‌ ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಮತ್ತೆ ಈ ಸಿನಿಮಾ ಪರದೆ ಮೇಲೆ ಬರಲು ಸಜ್ಜಾಗಿರುವುದು ನಟನ ಅಭಿಮಾನಿಗಳಿಗೆ ಸಂತಸ ತಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.