
ತೇಜಸ್ ಎಂ.ಕೆ.-1ಎ
ಚಿತ್ರ ಕೃಪೆ; ಪಿಟಿಐ
ರಕ್ಷಣಾ ದೃಷ್ಟಿಯಿಂದ ಭಾರತಕ್ಕೆ ಒಟ್ಟು 42 ಸ್ಕ್ವಾಡ್ರನ್‍ಗಳ ಅವಶ್ಯಕತೆ ಇದೆ. ಆದರೆ ಪ್ರಸ್ತುತ ಭಾರತೀಯ ವಾಯುಪಡೆಯಲ್ಲಿ 31 ಸ್ಕ್ವಾಡ್ರನ್‍ಗಳು ಮಾತ್ರ ಕಾರ್ಯನಿರ್ವಹಿಸುತ್ತುವೆ. ಪ್ರತಿ ಸ್ಕ್ವಾಡ್ರನ್‍ನಲ್ಲಿ 18 ಯುದ್ಧ ವಿಮಾನಗಳಿವೆ. ಇನ್ನೂ 11 ಸ್ಕ್ವಾಡ್ರನ್‍ಗೆ ಬೇಕಾದ ಯುದ್ಧ ವಿಮಾನಗಳ ಕೊರತೆ ಇದೆ. ಈ ಕೊರತೆಯನ್ನು ಕೆಲವೇ ವರ್ಷಗಳಲ್ಲಿ ತೇಜಸ್ ಯುದ್ಧ ವಿಮಾನ ತುಂಬಲಿದೆ ಎಂಬುದು ರಕ್ಷಣಾ ತಜ್ಞರ ಲೆಕ್ಕಾಚಾರ.
ಗ್ಲೋಬಲ್ ಫೈರ್ ಪವರ್ (GFP) ಇಂಡೆಕ್ಸ್ 2026ರ ವರದಿ ಪ್ರಕಾರ, ವಿಶ್ವದಲ್ಲೇ ಭಾರತವು ಶಕ್ತಿಶಾಲಿ ವಾಯು ಸೇನೆ ಹೊಂದಿರುವ ದೇಶಗಳ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಈಗಾಗಲೇ ‘ಅಪರೇಷನ್ ಸಿಂಧೂರ್’ ಕಾರ್ಯಾಚರಣೆಯಲ್ಲಿ ಸೇನೆಯ ಸಾಮರ್ಥ್ಯ ಸಾಬೀತಾಗಿದೆ. ಇದೀಗ ಭಾರತದ ವಾಯುಪಡೆಗೆ ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ ತೇಜಸ್ ಎಂ.ಕೆ.1ಎ ಸೇರ್ಪಡೆಗೊಳ್ಳಲು ತಯಾರಾಗಿದೆ. ಇದು ಸೇನಾ ಶಕ್ತಿಗೆ ಇನ್ನಷ್ಟು ಬಲವರ್ಧನೆ ಮಾಡಲಿದೆ.
ಈ ಹಿಂದೆ ವಾಯುಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಿಗ್-21 ಯುದ್ಧ ವಿಮಾನಗಳನ್ನು ನಿವೃತ್ತಿಗೊಳಿಸಲಾಗಿದ್ದು, ಈ ಜಾಗವನ್ನು ತೇಜಸ್ ಯುದ್ಧ ವಿಮಾನಗಳು ತುಂಬಲಿವೆ. ವರದಿಗಳ ಪ್ರಕಾರ 5 ತೇಜಸ್ ಎಂ.ಕೆ.-1ಎ. ಲಘು ಯುದ್ಧ ವಿಮಾನಗಳು ಸಂಪೂರ್ಣವಾಗಿ ಸಿದ್ಧವಾಗಿದ್ದು, ಸೇನೆಯನ್ನು ಸೇರಲಿವೆ ಎಂದು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‍ಎಎಲ್) ಇತ್ತೀಚೆಗೆ ತಿಳಿಸಿದೆ.
2012ರಲ್ಲಿ 83 ತೇಜಸ್ ಎಂ.ಕೆ.-1ಎ. ಲಘು ಯುದ್ದ ವಿಮಾನಗಳ ಖರೀದಿಗೆ ₹48 ಸಾವಿರ ಕೋಟಿಗಳ ಒಪ್ಪಂದವನ್ನು ಎಚ್‌ಎಎಲ್‌ನೊಂದಿಗೆ ರಕ್ಷಣಾ ಇಲಾಖೆ ಮಾಡಿಕೊಂಡಿತ್ತು. ಆ ಪೈಕಿ 9 ಯುದ್ಧ ವಿಮಾನಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಅವುಗಳಿಗೆ ಎಂಜಿನ್ ಅಳವಡಿಕೆ ಬಾಕಿ ಇರುವುದಾಗಿ ಸಂಸ್ಥೆ ತಿಳಿಸಿದೆ. ಅಲ್ಲದೇ ಕಳೆದ ವರ್ಷ 2025ರಲ್ಲಿ 97 ತೇಜಸ್ ವಿಮಾನಗಳ ಹೊಸ ಬೇಡಿಕೆಯನ್ನು ರಕ್ಷಣ ಇಲಾಖೆ ಸಲ್ಲಿಸಿದೆ.
ತೇಜಸ್ ಎಂ.ಕೆ.-1ಎ. ಯುದ್ಧ ವಿಮಾನ
ಎಂ.ಕೆ.-1ಎ. ತೇಜಸ್ ಯದ್ಧ ವಿಮಾನ 4.5 ತಲೆಮಾರಿನ ಯುದ್ಧ ವಿಮಾನವಾಗಿದೆ. ಇದನ್ನು ಮಿಗ್–21ಗೆ ಪರ್ಯಾಯವಾಗಿ ತಯಾರಿಸಲಾಗಿದೆ. ರಾಡಾರ್, ಸ್ಥಳೀಯ ಎಲೆಕ್ಟ್ರಾನಿಕ್ ವಾರ್‌ಫೇರ್ ಸೂಟ್, ಹಾರಾಟದಲ್ಲಿರುವಾಗಲೇ ಇಂಧನ ಮರುಪೂರ್ಣ ಮಾಡುವ ಸಾಮರ್ಥ್ಯ ಮತ್ತು ಸುಧಾರಿತ ನಿರ್ವಹಣಾ ವ್ಯವಸ್ಥೆಗಳನ್ನು ಒಳಗೊಂಡಿದೆ.
ವಾಯು ಮಾರ್ಗ, ನೆಲ ಮತ್ತು ಸಮುದ್ರ ಮಾರ್ಗಗಳ ಮೂಲಕ ದಾಳಿ ನಡೆಸುವ ಸಾಮರ್ಥ್ಯ ಹೊಂದಿರುವ ತೇಜಸ್, ಎರಡು ಬ್ಯಾರೆಲ್‍ಗಳ ಸ್ವಯಂಚಾಲಿತ ಗನ್ ಹೊಂದಿದೆ.
ಏರೋನಾಟಿಕಲ್ ಡೆವಲಪ್‍ಮೆಂಟ್ ಏಜೆನ್ಸಿ (ಎಡಿಎ) ವಿನ್ಯಾಸಗೊಳಿಸಿರುವ ತೇಜಸ್ ಅನ್ನು ಬೆಂಗಳೂರು ಮೂಲದ ಎಚ್.ಎ.ಎಲ್. ತಯಾರಿಸಿದೆ. ಇದು ಅಪಾಯಕಾರಿ ಪ್ರದೇಶಗಳಲ್ಲಿಯೂ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ.
ಜೆಡಿಎಎಂ, ಗ್ರಿಫಿನ್ ಎಲ್‍ಜಿಬಿ, ಎನ್‍ಜಿಎಲ್‍ಬಿ, ಎಸ್‍ಎಎಡಬ್ಲ್ಯೂ ಎಂಬ ಸ್ಮಾರ್ಟ್ ಶಸ್ತ್ರಾಸ್ತ್ರಗಳಿವೆ. ಅತ್ಯಂತ ಹಗುರ ಹಾಗೂ ಬಲಶಾಲಿ ಯುದ್ಧ ವಿಮಾನವಾಗಿರುವ ತೇಜಸ್‍ನಲ್ಲಿ ಮೂರು ಅನ್‍ಗೈಡೆಡ್ ಬಾಂಬ್‍ಗಳು, ಪೈತಾನ್-5 ಹಾಗೂ ಅಸ್ತ್ರ ಸೇರಿ 6 ಬಾಂಬ್‍ಗಳಿವೆ.
13.2 ಮೀಟರ್ ಉದ್ದದ ತೇಜಸ್ 6,560 ಕೆ.ಜಿ. ತೂಕವಿದೆ, 13,500 ಕೆ.ಜಿ. ತೂಕ ಹೊತ್ತು ಸಾಗುತ್ತದೆ. ಮಾತ್ರವಲ್ಲ, ಗಂಟೆಗೆ 1,980 ಕಿ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯವಿದೆ.
ಇದು, ಸುಖೋಯ್‍ಗಿಂತಲೂ ಕಮ್ಮಿ ತೂಕವಿದೆ, ಆಕಾಶದಲ್ಲೇ ಇಂಧನ ತುಂಬಿಸುವ ಸಾಮರ್ಥ್ಯ ಹೊಂದಿದೆ. ಆಕಾಶದಿಂದಲೇ ಯುದ್ಧಕ್ಕೆ ತಯಾರಾಗುತ್ತದೆ.
ದೂರದಿಂದಲೇ ಎದುರಾಳಿಗಳಿಗೆ ಗುರಿ ಇಡುವ ತೇಜಸ್, ಎದುರಾಳಿ ಯುದ್ಧ ವಿಮಾನಗಳ ರಾಡಾರ್ ಕಣ್ತಪ್ಪಿಸುವ ಸಾಮರ್ಥ್ಯ ಕೂಡ ಹೊಂದಿದೆ.
ತೇಜಸ್ ಅಸ್ತ್ರ ಕ್ಷಿಪಣಿಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಅಭಿವೃದ್ಧಿಪಡಿಸಿದೆ. ಇದು 100 ಕಿ.ಮೀ.ಗೂ ಅಧಿಕ ವ್ಯಾಪ್ತಿಯ ಗುರಿಯನ್ನು ಹೊಡೆದುರುಳಿಸಬಲ್ಲ ಸಾಮರ್ಥ್ಯ ಹೊಂದಿದೆ.
1961ರಲ್ಲಿ ರಷ್ಯಾದಿಂದ ಬಂದಿಳಿದ ಮಿಕೊಯಾನ್-ಗುರೆವಿಚ್ ಡಿಸೈನ್ ಬ್ಯೂರೋ ನಿರ್ಮಿತ ಮಿಗ್-21ನಿಂದ ಹಿಡಿದು ಎಚ್.ಎ.ಎಲ್ ನಿರ್ಮಿತ ತೇಜಸ್ ಯುದ್ಧ ವಿಮಾನದವರೆಗೆ ಚರಿತ್ರೆ ಹಲವು ಮೈಲಿಗಲ್ಲುಗಳನ್ನು ಕಂಡಿದೆ. ಈ ಎಲ್ಲ ಯುದ್ಧ ವಿಮಾನಗಳು ಸ್ವತಂತ್ರ ಭಾರತದ ಯುದ್ಧ ಸಾಮರ್ಥ್ಯವನ್ನು ಹೆಚ್ಚುಸುವಲ್ಲಿ ತಮ್ಮದೇ ಕೊಡುಗೆ ನೀಡಿವೆ. ವಾಯುಪಡೆಯಲ್ಲಿ ಮುಖ್ಯವಾಗಿ ರಫೇಲ್, ಮಿರಾಜ್ 2000, ಮಿಗ್-29, ಸುಖೋಯ್ ಸು-30ಎಂಕೆಐ, ಜಾಗ್ವಾರ್ ಹಾಗೂ ತೇಜಸ್ ಯುದ್ಧ ವಿಮಾನಗಳಿವೆ. ಪ್ರಮುಖ ಕ್ಷಿಪಣಿಗಳಾದ ಬ್ರಹ್ಮೋಸ್, ರುದ್ರಮ್, ಅಸ್ತ್ರ, ನಿರ್ಭಯ್‌ಗಳಿವೆ.
ರಫೇಲ್: ಮಧ್ಯಮ-ಶ್ರೇಣಿಯ, ಏರ್-ಟು-ಲ್ಯಾಂಡ್ ಶಸ್ತ್ರಾಸ್ತ್ರ ವ್ಯವಸ್ಥೆಯುಳ್ಳ ಹ್ಯಾಮರ್ ಆಯುಧವನ್ನು ರಫೇಲ್ ಯುದ್ಧ ವಿಮಾನ ಹೊಂದಿದೆ. ಇದು 4.5 ತಲೆಮಾರಿನ ಯುದ್ಧ ವಿಮಾನವಾಗಿದ್ದು, 50 ಸಾವಿರ ಅಡಿ ಎತ್ತರದಲ್ಲಿ ಹಾರಾಟ ಮಾಡುವ ಸಾಮರ್ಥ್ಯವಿದೆ. ಏಕಕಾಲದಲ್ಲಿ 1,500 ಕಿ.ಮೀ.ಗೂ ಹೆಚ್ಚು ದೂರ ಕ್ರಮಿಸಬಲ್ಲದು. ಅಪರೇಷನ್ ಸಿಂಧೂರ್‌ನಲ್ಲಿ ತನ್ನ ಸಾಮರ್ಥ್ಯವನ್ನು ತೋರಿಸಿದೆ.
ಸುಖೋಯ್-30 ಎಂ.ಕೆ.ಐ: ಸು-30 ಎಂ.ಕೆ.ಐ. ಯುದ್ಧ ವಿಮಾನವನ್ನು ರಷ್ಯಾದ ಸುಖೋಯ್ ಕಂಪನಿ ವಿನ್ಯಾಸಗೊಳಿಸಿದ್ದು, ಭಾರತದ ಎಚ್.ಎ.ಎಲ್. ಕಂಪನಿಯ ಮಾರ್ಗದರ್ಶನದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಏರ್-ಟು-ಏರ್ ಮತ್ತು ಏರ್-ಟು-ಲ್ಯಾಂಡ್ ಕ್ಷಿಪಣಿಗಳನ್ನು ಹೊಂದಿವೆ. ಎರಡು ಆಸನ ಹೊಂದಿರುವ ಬಹುಪಾತ್ರ ನಿರ್ವಹಿಸುವ ಯುದ್ಧ ವಿಮಾನಗಳಾಗಿವೆ. ಒನ್ ಎಕ್ಸ್ 30 ಎಂ.ಎಂ. ಜಿ.ಎಸ್.ಎಚ್ ಬಂದೂಕಿನ ಜೊತೆಗೆ 8 ಸಾವಿರ ಕೆ.ಜಿ. ಬಾಹ್ಯ ಶಸ್ತ್ರಾಸ್ತ್ರಗಳನ್ನು ಹೊರುವ ಸಾಮರ್ಥ್ಯವನ್ನು ಈ ವಿಮಾನಗಳು ಹೊಂದಿವೆ. ಗಂಟೆಗೆ ಗರಿಷ್ಠ 2500 ಕಿ.ಮೀ. ವೇಗದಲ್ಲಿ ಚಲಿಸುವ ಶಕ್ತಿ ಇದೆ.
ಮಿರಾಜ್-2000: ಭಾರತೀಯ ವಾಯುಪಡೆಯಲ್ಲಿ ಬಹುಪಾತ್ರ ನಿರ್ವಹಿಸುವ ವಿಮಾನಗಳಲ್ಲಿ ಒಂದಾದ ಮಿರಾಜ್-2000ಅನ್ನು 1985ರಲ್ಲಿ ಪರಿಚಯಿಸಲಾಯಿತು. ಮಿರಾಜ್-2000ಅನ್ನು ಡಸಾಲ್ಟ್ ಏವಿಯೇಷನ್ ಕಂಪನಿಯು ಅಭಿವೃದ್ಧಿಪಡಿಸಿದೆ. ಒಂದು ಆಸನ, ಒಂದು ಎಂಜಿನ್ ಹೊಂದಿರುವ ಫ್ರೆಂಚ್ ಮೂಲದ ಬಹುಪಾತ್ರ ನಿರ್ವಹಿಸುವ ಯುದ್ಧ ವಿಮಾನ ಇದಾಗಿದೆ. ಅತಿ ದೂರದ ಗುರಿಯನ್ನು ನಿಖರವಾಗಿ ತಲುಪಬಲ್ಲ ಸಾಮರ್ಥ್ಯ ಮಿರಾಜ್-2000 ಯುದ್ಧ ವಿಮಾನಕ್ಕೆ ಇದೆ. ಇದು ಗಂಟೆಗೆ 2495 ಕಿ.ಮೀ. ಗರಿಷ್ಠ ವೇಗದಲ್ಲಿ ಚಲಿಸುವ ಶಕ್ತಿ ಹೊಂದಿದೆ. ಎರಡು 30 ಎಂ.ಎಂ. ಅವಿಭಾಜ್ಯ ಫಿರಂಗಿಗಳು ಮತ್ತು ಎರಡು ಆರ್-550 ಮ್ಯಾಜಿಕ್ ಯುದ್ಧ ಕ್ಷಿಪಣಿಗಳನ್ನು ಬಾಹ್ಯ ನಿಲ್ದಾಣಗಳಿಗೆ ಹೊತ್ತೊಯ್ಯುವ ಸಾಮರ್ಥ್ಯವನ್ನು ಈ ವಿಮಾನ ಹೊಂದಿದೆ.
ಮಿಗ್-29: ರಷ್ಯಾ ನಿರ್ಮಿತ ಮಿಗ್-29 ಯುದ್ಧ ವಿಮಾನಗಳಿಗೆ ಅತ್ಯಾಧುನಿಕ ಯುದ್ಧ ಸೌಲಭ್ಯಗಳನ್ನು ಅಳವಡಿಸುವ ಮೂಲಕ ಮೇಲ್ದರ್ಜೆಗೆ ಏರಿಸಲಾಗಿದೆ. ಇದನ್ನು ರಷ್ಯಾ ಮೂಲದ ಮಿಕೋಯಾನ್-ಗುರೆವಿಚ್ ಡಿಸೈನ್ ಬ್ಯೂರೊ ವಿನ್ಯಾಸಗೊಳಿಸಿದೆ. ತಯಾರಿಸಿದೆ. ಭಾರತ ಸೈನ್ಯಕ್ಕೆ 1985ರಲ್ಲಿ ಪರಿಚಯಿಸಲಾಯಿತು. ಒಂದು ಸೀಟ್‍ನ ವಿಮಾನವಾಗಿದ್ದು, ಎರಡು ಎಂಜಿನ್‍ಗಳನ್ನು ಹೊಂದಿದೆ. ಗಂಟೆಗೆ ಗರಿಷ್ಠ 2,445 ಕಿ.ಮೀ. ವೇಗದಲ್ಲಿ ಚಲಿಸಬಲ್ಲದು. 30 ಎಂ.ಎಂ. ಫಿರಂಗಿ, ನಾಲ್ಕು ಆರ್-60 ಫಿರಂಗಿಗಳು ಮತ್ತು ಮಧ್ಯಮ ಶ್ರೇಣಿಯ ಎರಡು ಆರ್-27ಆರ್ ರೆಡಾರ್ ಮಾರ್ಗದರ್ಶಿ ಕ್ಷಿಪಣಿಗಳನ್ನು ಈ ವಿಮಾನ ಹೊಂದಿದೆ.
ಮಿಗ್-21 ಬಿಸನ್: 1961ರಲ್ಲಿ, ಮಿಕೋಯಾನ್-ಗುರೆವಿಚ್ ಡಿಸೈನ್ ಬ್ಯೂರೊ ನಿರ್ಮಿತ ಮಿಗ್-21 ಬಿಸನ್ ಯುದ್ಧ ವಿಮಾನವನ್ನು ಭಾರತ ವಾಯುಸೇನೆ ಆಯ್ಕೆ ಮಾಡಿಕೊಂಡಿತು. ರಷ್ಯಾ ಮೂಲದ ವಿಮಾನವು ಒಂದು ಎಂಜಿನ್, ಒಂದು ಸೀಟ್ ಹೊಂದಿದೆ. ಬಹುಪಾತ್ರ ನಿಭಾಯಿಸುವ ವಿಮಾನವು ಭೂ-ದಾಳಿ ನಡೆಸಲು ಅತ್ಯಂತ ಯೋಗ್ಯವಾಗಿದೆ. ಇದು ಗಂಟೆಗೆ 2230 ಕಿ.ಮೀ. ಗರಿಷ್ಠ ವೇಗದಲ್ಲಿ ಚಲಿಸುವ ಶಕ್ತಿ ಹೊಂದಿದ್ದು, ನಾಲ್ಕು ಆರ್-60 ಯುದ್ಧ ಕ್ಷಿಪಣಿ, ಒಂದು 23 ಎಂ.ಎಂ. ಎರಡು ಬ್ಯಾರೆಲ್ ಫಿರಂಗಿಗಳನ್ನು ಹೊಂದಿದೆ.
ಜಾಗ್ವಾರ್: ಬ್ರಿಟಿಷ್ ಮತ್ತು ಫ್ರೆಂಚ್ ವಾಯುಸೇನೆ ಒಟ್ಟಾಗಿ ಅಭಿವೃದ್ಧಿಪಡಿಸಿದ ಯುದ್ಧ ವಿಮಾನ ಇದಾಗಿದೆ. ಇದು ಒಂದು ಸೀಟ್‍ನ ಎರಡು ಎಂಜಿನ್ ವಿಮಾನವಾಗಿದ್ದು ಗಂಟೆಗೆ 1350 ಕಿ.ಮೀ. ವೇಗದಲ್ಲಿ ನುಗ್ಗುವ ಸಾಮರ್ಥ್ಯ ಹೊಂದಿದೆ. ಎರಡು 30 ಎಂ.ಎಂ. ಬಂದೂಕುಗಳು ಮತ್ತು ಎರಡು ಆರ್ -350 ಮ್ಯಾಜಿಕ್ ಸಿಸಿಎಂಗಳ ಜೊತೆಗೆ 4750 ಕೆ.ಜಿ. ಬಾಹ್ಯ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯಬಲ್ಲದು.
ಭಾರತದಲ್ಲಿ 2,229 ಯುದ್ಧ ವಿಮಾನಗಳಿವೆ. ಈ ಪೈಕಿ 513 ಫೈಟರ್ ಜಟ್, 613 ಏರಿಯಲ್ ಟ್ಯಾಂಕ್‍ಗಳು ಹಾಗೂ 899 ಹೆಲಿಕಾಪ್ಟರ್‌ಗಳಿವೆ. 1.4 ಲಕ್ಷ ಸೈನಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಮುಖ ಯುದ್ಧ ವಿಮಾನಗಳೆಂದರೆ,
ಮಿಗ್ 29: ಒಟ್ಟು 65 ಯುದ್ಧ ವಿಮಾನಗಳು ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿವೆ.
ತೇಜಸ್ ಎಂ.ಕೆ.-1ಎ: ಒಟ್ಟು 32 ಯುದ್ಧ ವಿಮಾನಗಳಿವೆ. ಇವುಗಳ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ.
ವಿರಾಜ್ 2000: ಸದ್ಯ ಇವುಗಳ ಸಂಖ್ಯೆ 45 ಇದ್ದು, ಮೇಲ್ದರ್ಜೆಗೆ ಏರಿಸುವ ಯೋಜನೆಯಿದೆ.
ಸುಖೋಯ್-30 ಎಂ.ಕೆ.ಐ: ಸೇನೆಯಲ್ಲಿ 248 ಯುದ್ಧ ವಿಮಾನಗಳಿವೆ. ಬ್ರಹ್ಮೋಸ್ ಹಾರಿಸುವ ಸಾಮರ್ಥ್ಯವಿರುವ ಯುದ್ಧ ವಿಮಾನವಾಗಿದೆ.
ರಫೇಲ್: 2019 ರಲ್ಲಿ ಮೊದಲು ಭಾರತಕ್ಕೆ ಬಂದಿಳಿದ ರಫೇಲ್‌ಗಳು ಸೇನೆಯಲ್ಲಿ 36 ಇವೆ.
ಜಾಗ್ವಾರ್: ಇವುಗಳ ಸಂಖ್ಯೆ ಸೇನೆಯಲ್ಲಿ 130 ಇದೆ.
ವರದಿಗಳ ಪ್ರಕಾರ ಎಚ್‍ಎಎಲ್ ಬಳಿ ಸುಮಾರು ₹2.7 ಲಕ್ಷ ಕೋಟಿ ಮೌಲ್ಯದ ಆರ್ಡರ್ ಬಾಕಿ ಇದೆ. ತೇಜಸ್ ಮಾರ್ಕ್ 1ಎ., (180) ತೇಜಸ್ ಮಾರ್ಕ್ 2 ಯುದ್ಧ ವಿಮಾನದ ಅಭಿವೃದ್ಧಿ, ಸುಖೋಯ್ ಸು-30 ಎಂ.ಕೆ.ಐ. ಯುದ್ಧ ವಿಮಾನವನ್ನು ಮೇಲ್ದರ್ಜೆಗೇರಿಸುವ ಹಾಗೂ ಪ್ರಚಂಡ್ ಹೆಲಿಕಾಪ್ಟರ್ (156)ಗಳನ್ನು ತಯಾರಿಸಬೇಕಿದೆ. 2032ರ ವೇಳೆಗೆ ಕೆಲ ಯೋಜನೆಗಳು ಪೂರ್ಣವಾಗುವ ಸಾಧ್ಯತೆ ಇದೆ ಎಂದು ಕೆಲ ವರದಿಗಳು ಹೇಳುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.