ADVERTISEMENT

EXPLAINER: ಕ್ಯಾನ್ಸರ್‌ಕಾರಕ ಎಂಬ ಕರಾಳ ಮುಖದ ತಂಬಾಕಿನ ಅಪರಿಮಿತ ಔಷಧೀಯ ಗುಣ

ಪಿಟಿಐ
Published 15 ಮಾರ್ಚ್ 2025, 12:43 IST
Last Updated 15 ಮಾರ್ಚ್ 2025, 12:43 IST
<div class="paragraphs"><p>ಜಿಂಬಾಬ್ವೆಯ ಹೊಲದಲ್ಲಿ ತಂಬಾಕು ಬೆಳೆ</p></div>

ಜಿಂಬಾಬ್ವೆಯ ಹೊಲದಲ್ಲಿ ತಂಬಾಕು ಬೆಳೆ

   REUTERS/PHILIMON BULAWAYO
ಪ್ರತಿ ವರ್ಷ ತಂಬಾಕಿನ ಕಾರಣದಿಂದ ಜಗತ್ತಿನಲ್ಲಿ 80 ಲಕ್ಷ ಜನ ಸಾಯುತ್ತಿದ್ದಾರೆ. ಒಂದು ಕಾಲದಲ್ಲಿ ಔಷಧಿಯಾಗಿದ್ದ ತಂಬಾಕನ್ನು ಇಂದು ವಿಷವೆನ್ನುತ್ತಿದ್ದಾರೆ. ಆದರೆ ಜೆನೆಟಿಕ್ ಎಂಜಿನಿಯರಿಂಗ್ ಮೂಲಕ ಭವಿಷ್ಯದಲ್ಲಿ ತಂಬಾಕನ್ನು ಜೀವರಕ್ಷಕವಾಗಿಯೂ ಬಳಸುವ ಸಾಧ್ಯತೆ ಇದೆ ಎಂದೆನ್ನುತ್ತದೆ ಅಧ್ಯಯನ.

ಲಂಡನ್: ಯುರೋಪ್‌ನ ತಜ್ಞರು 16ನೇ ಶತಮಾನದಲ್ಲಿ ಅಮೆರಿಕದಲ್ಲಿ ಬೆಳೆಯುತ್ತಿದ್ದ ತಂಬಾಕನ್ನು ಪತ್ತೆ ಮಾಡಿದ್ದರು. ತಲೆನೋವು, ಶೀತ, ಹುಣ್ಣು, ಹೊಟ್ಟೆ ಸಮಸ್ಯೆಗಳಿಗೆ ಪರಿಹಾರವಾಗಿ ತಂಬಾಕನ್ನು ಸ್ಥಳೀಯರು ವಿವಿಧ ರೀತಿಯಲ್ಲಿ ಬಳಸುತ್ತಿದ್ದರು. ಆದರೆ ಯುರೋಪ್‌ಗೆ ಬಂದ ತಂಬಾಕು, ಸರ್ವ ರೋಗಕ್ಕೂ ರಾಮಬಾಣದಂತೆ ಬಳಕೆ ಆರಂಭಗೊಂಡಿತು.

ಆದರೆ 18ನೇ ಶತಮಾನದಲ್ಲಿ ಇದರ ಬಳಕೆ ವಿಚಿತ್ರ ತಿರುವು ಪಡೆದುಕೊಂಡಿತು. ಲಂಡನ್‌ನ ಥೇಮ್ಸ್‌ ನದಿಯ ದಂಡೆಯ ಮೇಲೆ ತಂಬಾಕಿನಿಂದ ಉತ್ಪಾದಿಸಿದ ಎನಿಮಾ ಕಿಟ್‌ಗಳನ್ನು ಇಡಲಾಗಿತ್ತು. ನದಿಗೆ ಹಾರಿ ಪ್ರಜ್ಞೆ ಕಳೆದುಕೊಂಡವರಿಗೆ, ಇದರ ಹೊಗೆ ಕುಡಿಸಿ ಎಚ್ಚರಿಸಲಾಗುತ್ತಿತ್ತು. ಆದರೆ ದೇಹ ಬೆಚ್ಚಗಿಡಲು ಮತ್ತು ಉದ್ದೀಪನಗೊಳಿಸಲು ಇದೇ ತಂಬಾಕನ್ನೇ ಬೇರೆ ರೀತಿಯಲ್ಲಿ ಬಳಸುವ ಪದ್ಧತಿ ಆರಂಭಗೊಂಡಿತು.

ADVERTISEMENT

ಆಧುನಿಕ ಔಷಧೀಯ ಪದ್ಧತಿಯಲ್ಲಿ ಸಸ್ಯಗಳನ್ನು ಔಷಧವಾಗಿ ಬಳಕೆ ಮುಂದುವರಿದಿದೆ. ಕ್ಯಾನ್ಸರ್‌ಗೆ ಚಿಕಿತ್ಸೆಯಾಗಿ ನೀಡುವ ಕೀಮೊಥೆರಪಿಯಲ್ಲಿ ಬಳಕೆಯಾಗುವ ಟ್ಯಾಕ್ಸಾಲ್‌ ಎಂಬುದು ಯೂ ಎಂಬ ಮರದಿಂದ ಉತ್ಪಾದಿಸಿದ್ದಾಗಿದೆ. ಹೃದಯ ಬೇನೆ ನಿವಾರಣೆಗೆ ಬಳಸುವ ಡೈಜಾಕ್ಸಿನ್‌ ಔಷಧವನ್ನು ಫಾಕ್ಸ್‌ಗ್ಲೋ ಎಂಬ ಆಕರ್ಷಕ ಹೂವುಗಳನ್ನು ಬಿಡುವ ಸಸ್ಯಗಳಿಂದ ಪಡೆಯಲಾಗಿದೆ. ಆದರೆ ಪ್ರೊಟೀನ್ ಆಧಾರಿತ ಔಷಧಗಳಾದ ಇನ್ಸುಲಿನ್ ಅಥವಾ ಯಾವುದೇ ಲಸಿಕೆಗಳಲ್ಲಿನ ಬಳಕೆಯು ಸಾಕಷ್ಟು ತಂತ್ರಜ್ಞಾನವನ್ನು ಒಳಗೊಂಡಿದೆ.

ಇಂಥ ಕ್ಲಿಷ್ಟಕರ ಔಷಧಗಳ ಉತ್ಪಾದನೆಯಲ್ಲಿ ರಿಕಾಂಬಿನೆಂಟ್‌ ತಂತ್ರಜ್ಞಾನವೆಂಬ ಜೆನೆಟಿಕ್ ಎಂಜಿನಿಯರಿಂಗ್‌ ಬಳಕೆಯಾಗಿದೆ. ಆದರೆ ಇದು ಅಷ್ಟು ಸುಲಭದ ಹಾಗೂ ಅಗ್ಗದ ಕೆಲಸವಲ್ಲ. ಬಯೋರಿಯಾಕ್ಟರ್‌ಗಳು ಹಾಗೂ ಹಲವು ಅತ್ಯಾಧುನಿಕ ಉಪಕರಣಗಳು ಇದಕ್ಕೆ ಅಗತ್ಯ. ಜತೆಗೆ ದುಬಾರಿ ತೆರಿಗೆಯೂ ಇದ್ದು, ಬಡ ರಾಷ್ಟ್ರಗಳಿಗೆ ಇದರ ಬಳಕೆ ಭಾರವಾಗಿದೆ. ಆದರೆ ಇವೆಲ್ಲದಕ್ಕೂ ತಂಬಾಕು ಪರಿಹಾರವಾಗಬಲ್ಲದು ಎಂದು ತಜ್ಞರು ಹೇಳಿದ್ದಾರೆ.

ತಂಬಾಕು ಮಾರುಕಟ್ಟೆಯಲ್ಲಿ ಒಣ ಎಲೆಗಳ ಧಾರಣೆ

ಜಗತ್ತಿನ ಯಾವ ಪ್ರದೇಶದಲ್ಲಾದರೂ ಬೆಳೆಯುವ ತಂಬಾಕು

ಔಷಧೀಯ ಸಸ್ಯಗಳಿಗೆ ಇಂಥ ದುಬಾರಿ ಉಪಕರಣಗಳ ಅವಶ್ಯಕತೆ ಇಲ್ಲ. ಮಣ್ಣು, ನೀರು, ಸೂರ್ಯನ ಕಿರಣವಿದ್ದರೆ ಸಾಕು. ಇವಿಷ್ಟನ್ನೇ ಬಳಸಿಕೊಂಡು ಬೆಳೆಯುವ ತಂಬಾಕು, ಆಹಾರವಲ್ಲದ ಅತ್ಯಂತ ಅಗಲವಾದ ಎಲೆಯನ್ನು ಹೊಂದಿದೆ. ಪ್ರೊಟೀನು ಉತ್ಪಾದಿಸುವಲ್ಲಿ ಇದು ಶಕ್ತಿಕೇಂದ್ರ ಎಂದೇ ತಜ್ಞರು ಬಣ್ಣಿಸಿದ್ದಾರೆ. ಅತಿ ಹೇರಳ ಜೀವರಾಶಿ ಹೊಂದಿರುವ ತಂಬಾಕು ಗಿಡಗಳು ಔಷಧ ತಯಾರಿಕೆಯಲ್ಲಿ ಅತ್ಯಂತ ಬೇಡಿಕೆಯ ಸಸ್ಯವಾಗಿದೆ.

ತಂಬಾಕಿನ ಮೂಲ ಅಮೆರಿಕ ಅಥವಾ ಆಸ್ಟ್ರೇಲಿಯಾವೇ ಆಗಿದ್ದರೂ, ಇದರ ಸ್ಥಿತಿಸ್ಥಾಪಕತ್ವ ಶಕ್ತಿಯು ಜಗತ್ತಿನ ಯಾವುದೇ ಭೂಮಿಯಲ್ಲಿ ಬೆಳೆಯಲು ಸಾಧ್ಯವಾಗುವಂತೆ ಮಾಡಿದೆ. ಜತೆಗೆ ಬರನಿರೋಧಕವೂ ಹೌದು.

ಪ್ರಯೋಗಾಲಯದಲ್ಲಿ ಮೊಳಕೆಯೊಡೆದ ತಂಬಾಕಿನ ಸಸಿ

ಎಚ್‌ಐವಿ, ಎಬೊಲಾ ಸೋಂಕಿತರಿಗೆ ಇಮ್ಯುನೋಥೆರಪಿಯಾಗಿ ಬಳಕೆ

2012ರಲ್ಲಿ ಕೆನಡಾದ ಮೆಡಿಕಾಗೊ ಕಂಪನಿಯು ತಂಬಾಕನ್ನು ಔಷಧವಾಗಿ ಬಳಸುವ ಪ್ರಯತ್ನ ಆರಂಭಿಸಿತು. ಜ್ವರ, ನೆಗಡಿ ಹಾಗೂ ಮೈಕೈ ನೋವಿಗೆ ಲಸಿಕೆಯಾಗಿ ಇದನ್ನು ಬಳಸಿ, ಸುಮಾರು ಒಂದು ಕೋಟಿ ಡೋಸುಗಳಷ್ಟು ಲಸಿಕೆ ಉತ್ಪಾದಿಸಲಾಯಿತು. 

ಎಚ್‌ಐವಿ, ಎಬೊಲಾ ಸೇರಿದಂತೆ ವೈರಾಣು ಸೋಂಕಿಗೆ ಇಮ್ಯುನೋಥೆರಪಿಯಾಗಿ ತಂಬಾಕು ಬಳಕೆಯ ಕ್ಲಿನಿಕಲ್ ಟ್ರಯಲ್‌ ಹಲವೆಡೆ ಪ್ರಯೋಗದಲ್ಲಿದೆ. 2014ರಲ್ಲಿ ಎಬೊಲಾ ತೀವ್ರವಾಗಿ ವ್ಯಾಪಿಸಿದ್ದ ಸಂದರ್ಭದಲ್ಲಿ, ಆರೋಗ್ಯ ಕಾರ್ಯಕರ್ತರಿಗೆ ತುರ್ತು ಬಳಕೆಗಾಗಿ ಇದನ್ನು ನೀಡಲಾಗಿತ್ತು. 

ಕ್ಯಾನ್ಸರ್‌ ಬಾಧಿತರಲ್ಲೂ ಇಮ್ಯುನೋಥೆರಪಿಯಾಗಿ ತಂಬಾಕನ್ನು ಬಳಸಲಾಗುತ್ತಿದೆ. ವ್ಯಕ್ತಿಯ ರೋಗನಿರೋಧಕ ಶಕ್ತಿ ಹೆಚ್ಚಿಸಲು ಮತ್ತು ಕ್ಯಾನ್ಸರ್‌ಕಾರಕ ಕೋಶಗಳ ವಿರುದ್ಧ ಹೋರಾಟ ನಡೆಸಲು ಇದನ್ನು ಬಳಸಬಹುದು ಎಂದು ಹಲವು ಸಂಶೋಧನೆಗಳು ಹೇಳಿವೆ. ಇದು ಸದ್ಯ ಬಳಕೆಯಲ್ಲಿರುವ ಕೀಮೋಥೆರಪಿಗಿಂತ ಉತ್ತಮ. ಆದರೆ ಉತ್ಪಾದನೆಯೇ ದುಬಾರಿ ಎಂದು ತಜ್ಞರು ಹೇಳಿರುವುದಾಗಿ ವರದಿಯಾಗಿದೆ.

ತಂಬಾಕು ಬೆಳೆ ಪ್ರದೇಶ

ಜಗತ್ತಿನಲ್ಲಿ ತಗ್ಗಿದ ತಂಬಾಕು ಬೆಳೆ ಪ್ರದೇಶ

ಧೂಮಪಾನ ಎಂಬುದು ಇಡೀ ಜಗತ್ತಿಗೆ ಮಾರಕವಾಗಿದೆ. ಆದರೆ ತಂಬಾಕು ವಿರುದ್ಧದ ವ್ಯಾಪಕ ಪ್ರಚಾರದಿಂದ ಇದನ್ನು ಬೆಳೆಯುವ ರೈತರ ಸಂಖ್ಯೆಯೇ ಕಡಿಮೆಯಾಗಿದೆ. ಬಹಳಷ್ಟು ಬಡ ರಾಷ್ಟ್ರಗಳಲ್ಲಿ ತಂಬಾಕನ್ನು ವ್ಯಾಪಕವಾಗಿ ಬೆಳೆಯಲಾಗುತ್ತಿತ್ತು. ಅಲ್ಲಿಯೂ ಬೆಳೆ ಪ್ರದೇಶ ಕ್ಷೀಣಿಸಿದೆ. ‘ಪ್ರತಿಯೊಬ್ಬ ಸಂತನಿಗೂ ಒಂದು ಇತಿಹಾಸವಿರುತ್ತದೆ. ಹಾಗೆಯೇ ಪ್ರತಿಯೊಬ್ಬ ಪಾಪಿಗೂ ನಾಳೆ ಎಂಬುದೊಂದಿರುತ್ತದೆ’ ಎಂಬ ಮಾತಿನಂತೆ ತಂಬಾಕಿಗೂ ಭವಿಷ್ಯವಿದೆಯೇ ಎಂಬ ಪ್ರಶ್ನೆ ಮೂಡಿದೆ.

ಪ್ರಯೋಗಾಲಯದಲ್ಲಿ ಎಂಜಿನಿಯರಿಂಗ್ ತಂಬಾಕನ್ನು ಔಷಧಿಯ ಸಸ್ಯವನ್ನು ಬೆಳೆಯುವ ಪದ್ಧತಿ ಆರಂಭಗೊಂಡಿದೆ. ಈಗಾಗಲೇ ಇದೇ ಪದ್ಧತಿಯಲ್ಲಿ ದುಬಾರಿಯ ಕೇಸರಿ ಬೆಳೆಯಲಾಗುತ್ತಿದೆ. ಅದೇ ಬಣ್ಣ ಹಾಗೂ ಸುವಾಸನೆಯನ್ನು ಇದು ಹೊಂದಿದೆ. ಇದೇ ತಂತ್ರಜ್ಞಾನದಲ್ಲಿ ರಾಸ್ಪ್‌ಬೆರ್ರಿಯನ್ನು ಅತಿ ಕಡಿಮೆ ಬೆಲೆಯಲ್ಲಿ ಬೆಳೆಯುವುದೂ ಆರಂಭಗೊಂಡಿದೆ. ಬರ ನಿರೋಧಕವಾಗಿರುವ ತಂಬಾಕನ್ನು ಮಂಗಳನ ಅಂಗಳದಲ್ಲೂ ಬೆಳೆಯುವ ಸಾಧ್ಯತೆಯನ್ನೂ ನೋಡಬೇಕಾಗಿದೆ. ಹೀಗಾಗಿ ತಂಬಾಕು ಬೆಳೆಯುವ ಸಾಧನೆಗೆ ಆಗಸವೂ ಮೀತಿಯಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.