ಸಾಂದರ್ಭಿಕ ಚಿತ್ರ
ವಾಷಿಂಗ್ಟನ್: ತನ್ನ ರಾಷ್ಟ್ರಕ್ಕೆ ಆಮದಾಗುತ್ತಿರುವ ವಸ್ತುಗಳಿಗೆ ಸುಂಕದ ಮೇಲೆ ಸುಂಕ ಹೇರುತ್ತಿರುವ ಅಮೆರಿಕ, ಇದೀಗ ಭಾರತದ ಔಷಧಗಳ ಮೇಲೆ ಶೇ 100ರಷ್ಟು ತೆರಿಗೆ ವಿಧಿಸಿರುವುದು ದೇಶದ ಫಾರ್ಮಾ ಕಂಪನಿಗಳಲ್ಲಿ ಕಂಪನ ಉಂಟು ಮಾಡಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶದಂತೆ ಅಕ್ಟೋಬರ್ 1 ರಿಂದ ಬ್ರಾಂಡೆಡ್ ಮತ್ತು ಪೇಟೆಂಟ್ ಆಧಾರಿತ ಚಿಕಿತ್ಸಾ ಸಾಧನಗಳ ಮೇಲೆ ಶೇ 100, ಅಡುಗೆಮನೆ ಕ್ಯಾಬಿನೆಟ್‌ಗಳು ಮತ್ತು ಶೌಚಾಲಯ ಸಾಮಗ್ರಿಗಳ ಮೇಲೆ ಶೇ 50, ಇಸ್ಪೀಟ್‌ಗಳ ಮೇಲೆ ಶೇ 30 ಮತ್ತು ಭಾರೀ ವಾಹನಗಳ ಮೇಲೆ ಶೇ 25ರಷ್ಟು ತೆರಿಗೆ ವಿಧಿಸುವುದಾಗಿ ಹೇಳಲಾಗಿದೆ.
ಅದರಲ್ಲೂ ಅಮೆರಿಕವನ್ನೇ ಹೆಚ್ಚಾಗಿ ಅವಲಂಬಿಸಿರುವ ಭಾರತದ ಔಷಧ ತಯಾರಿಕಾ ವಲಯದ ಮೇಲೆ ಟ್ರಂಪ್ ಸುಂಕ ದೊಡ್ಡ ಪರಿಣಾಮವನ್ನೇ ಉಂಟು ಮಾಡಲಿದೆಯೇ ಎಂಬ ವಿಶ್ಲೇಷಿಸಲಾಗುತ್ತಿದೆ.
'ಇದೇ ಅ. 1ರಿಂದ ಜಾರಿಯಾಗುತ್ತಿರುವ ಶೇ 100ರಷ್ಟು ತೆರಿಗೆಯಿಂದ ತಪ್ಪಿಸಿಕೊಳ್ಳಬೇಕೆಂದರೆ, ಔಷಧ ತಯಾರಿಕಾ ಕಂಪನಿಗಳು ಅಮೆರಿಕದಲ್ಲಿ ತಮ್ಮ ತಯಾರಿಕಾ ಘಟಕವನ್ನು ತೆರೆಯಬೇಕು' ಎಂದು ರಿಪಬ್ಲಿಕನ್ ಪಕ್ಷದ ನಾಯಕ ಟ್ರುತ್ ಸೋಷಿಯಲ್‌ನಲ್ಲಿ ಹೇಳಿದ್ದಾರೆ.
ಆಗಸ್ಟ್‌ನಲ್ಲಿ ಪ್ರಾರಂಭವಾದ ಟ್ರಂಪ್ ಸುಂಕ ಹಾಗೂ ಅಮೆರಿಕದ ವ್ಯಾಪಾರದ ಚೌಕಟ್ಟುಗಳು ಇಂದಿಗೂ ನಿಂತಿಲ್ಲ. ಟ್ರಂಪ್ ಹೇಳಿಕೆಯಲ್ಲಿ ಈಗಲೂ ಸುಂಕ ದಾಹ ತಗ್ಗಿದಂತೆ ಅನಿಸುತ್ತಿಲ್ಲ. ಅಮೆರಿಕದ ಬದಲಾಗುತ್ತಿರುವ ನೀತಿಗಳಿಂದ ಆ ದೇಶದ ಉತ್ಪಾದನೆ ಹೆಚ್ಚಿಸುವ ಇಂಗಿತವೂ ಕಾಣಿಸುತ್ತಿದೆ. ಇದರ ಪರಿಣಾಮ ಭಾರತದ ಮೇಲೆ ಹೇಗಾಗಬಹುದು ಎಂಬುದನ್ನು ತಜ್ಞರು ವಿಶ್ಲೇಷಿಸುತ್ತಿದ್ದಾರೆ.
ಅಮೆರಿಕಕ್ಕೆ ಭಾರತವು ಅತಿ ದೊಡ್ಡ ಔಷಧ ಸರಕು ರಫ್ತು ರಾಷ್ಟ್ರವಾಗಿದೆ. 2024ರಲ್ಲಿ ಭಾರತದಿಂದ 27.9 ಶತಕೋಟಿ ಅಮೆರಿಕನ್ ಡಾಲರ್ (₹2.5 ಲಕ್ಷ ಕೋಟಿ) ಮೌಲ್ಯದ ಔಷಧ ಅಮೆರಿಕಕ್ಕೆ ರಫ್ತಾಗಿದೆ. 2025ರ ಮೊದಲಾರ್ಧದಲ್ಲೇ ₹35 ಸಾವಿರ ಕೋಟಿ ಮೌಲ್ಯದ ಔಷಧ ಅಮೆರಿಕ ತಲುಪಿದೆ.
ವರದಿಗಳ ಪ್ರಕಾರ, ಅಮೆರಿಕದಲ್ಲಿ ಬಳಸುವ ಒಟ್ಟು ಜೆನೆರಿಕ್ ಔಷಧಿಗಳಲ್ಲಿ ಶೇ 45ಕ್ಕಿಂತ ಹೆಚ್ಚು ಭಾರತದಿಂದ ಆಮದು ಮಾಡಿಕೊಂಡವು. ಶೇ 15ರಷ್ಟು ಜೈವಿಕ ಸಮಾನವಾದ ಔಷಧಗಳಾಗಿವೆ. ಡಾ. ರೆಡ್ಡೀಸ್, ಅರಬಿಂದೋ ಫಾರ್ಮಾ, ಜೈಡಸ್ ಲೈಫ್ ಸೈನ್ಸಸ್, ಸನ್ ಫಾರ್ಮಾ ಮತ್ತು ಗ್ಲಾಂಡ್ ಫಾರ್ಮಾದಂತಹ ಸಂಸ್ಥೆಗಳು ತಮ್ಮ ಒಟ್ಟು ಆದಾಯದ ಶೇ 30-50 ರಷ್ಟು ಹಣವನ್ನು ಅಮೆರಿಕದ ಮಾರುಕಟ್ಟೆಯಿಂದ ಗಳಿಸುತ್ತಿವೆ ಎಂದೂ ವರದಿಯಾಗಿದೆ.
ಅಮೆರಿಕದ ಇತ್ತೀಚಿನ ಸುಂಕಗಳು ಮುಖ್ಯವಾಗಿ ಬಹುರಾಷ್ಟ್ರೀಯ ದೈತ್ಯ ಕಂಪನಿಗಳಿಂದ ಪ್ರಾಬಲ್ಯ ಹೊಂದಿರುವ ಬ್ರಾಂಡೆಡ್ ಮತ್ತು ಪೇಟೆಂಟ್ ಪಡೆದ ಔಷಧಿಗಳನ್ನೇ ಗುರಿಯಾಗಿಸಿದಂತೆ ಕಾಣುತ್ತಿದೆ. ಭಾರತದ ಅತ್ಯಂತ ಸಂಕೀರ್ಣವಾದ ಜೆನೆರಿಕ್ ಮತ್ತು ವಿಶೇಷ ಔಷಧಗಳನ್ನೂ ಸುಂಕದ ವ್ಯಾಪ್ತಿಗೆ ಒಳಪಡಿಸಲಾಗುತ್ತಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಜತೆಗೆ ಬೃಹತ್ ಕಂಪನಿಗಳು ಅಮೆರಿಕದಲ್ಲಿ ಈಗಾಗಲೇ ತಮ್ಮ ಉತ್ಪಾದನಾ ಸೌಲಭ್ಯಗಳನ್ನು ಹೊಂದಿವೆ.
ಅಮೆರಿಕದಲ್ಲಿರುವ ಗ್ರಾಹಕರು ಭಾರತದಲ್ಲಿ ತಯಾರಾಗುವ ಅಗ್ಗದ ಬೆಲೆಯ ಜೆನೆರಿಕ್ ಔಷಧಗಳನ್ನೇ ಅವಲಂಬಿಸಿದ್ದಾರೆ. ಈಗ ವಿಧಿಸಲಾಗುತ್ತಿರುವ ಹೆಚ್ಚುವರಿ ಸುಂಕದಿಂದ ಅಲ್ಲಿ ಬೆಲೆ ಏರಿಕೆ, ಹಣದುಬ್ಬರ ಮತ್ತು ಔಷಧ ಕೊರತೆ ಉಂಟಾಗುವ ಸಾಧ್ಯತೆಗಳೇ ಹೆಚ್ಚು. ಹೀಗಿದ್ದರೂ, ಅಮೆರಿಕದ ಜೆನೆರಿಕ್ ಕ್ಷೇತ್ರದಲ್ಲಿ ಕಡಿಮೆ ಲಾಭಾಂಶದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಕಂಪನಿಗಳು, ಹೆಚ್ಚುವರಿ ಸುಂಕದ ವೆಚ್ಚ ಭರಿಸಲು ಹೆಣಗಾಡಬಹುದು.
ಭಾರತದಿಂದ ಆಮದು ಮಾಡಿಕೊಳ್ಳುವ ಔಷಧಗಳಿಂದ ಅಮೆರಿಕವೂ ಸಾಕಷ್ಟು ಲಾಭ ಮಾಡಿಕೊಳ್ಳುತ್ತಿದೆ. ಮಾಹಿತಿ ಪ್ರಕಾರ 2022ರಲ್ಲಿ ಅಮೆರಿಕಕ್ಕೆ ಭಾರತದಿಂದಾಗಿ 219 ಶತಕೋಟಿ ಡಾಲರ್ (₹20 ಲಕ್ಷ ಕೋಟಿ) ಲಾಭವಾಗಿದೆ. ಮುಂದಿನ ಐದು ವರ್ಷಗಳಲ್ಲಿ ಭಾರತದ ಜನೆರಿಕ್ ಔಷಧಗಳಿಂದಾಗಿ ಆ ದೇಶಕ್ಕೆ ಸುಮಾರು 1.3 ಟ್ರಿಲಿಯನ್ ಡಾಲರ್‌ನಷ್ಟು (₹115 ಲಕ್ಷ ಕೋಟಿ) ಲಾಭವಾಗಲಿದೆ ಎಂದೂ ಅಂದಾಜಿಸಲಾಗಿದೆ.
‘ಬ್ರಾಂಡೆಡ್ ಮತ್ತು ಪೇಟೆಂಟ್ ಪಡೆದ ಔಷಧಗಳ ಮೇಲೆ ಟ್ರಂಪ್ ಸುಂಕ ಹೇರಿದ್ದರಿಂದ ಇವುಗಳನ್ನು ತಯಾರಿಸುವ ಕಂಪನಿಗಳನ್ನೇ ಹೆಚ್ಚಾಗಿ ಗುರಿಯಾಗಿಸಿದಂತಿದೆ. ಆದರೆ ಜೆನೆರಿಕ್ ಔಷಧ ತಯಾರಕರಿಗೆ ಇದರಿಂದ ಹೆಚ್ಚಿನ ಹೊರೆಯಾಗದು. ಹೀಗಿದ್ದರೂ ಔಷಧ ತಯಾರಿಕಾ ವಲಯದಲ್ಲಿ ಅಸ್ಥಿರತೆ ಉಂಟಾಗಿದೆ. ತಯಾರಕರು ಇದನ್ನು ಅತ್ಯಂತ ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದಾರೆ’ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಟ್ರಂಪ್ ವಿಧಿಸಿರುವ ಈ ಸುಂಕಕ್ಕೆ ಫಾರ್ಮಾ ಕಂಪನಿಗಳು, ಸಂಶೋಧನಾ ಸಂಸ್ಥೆಗಳು ಮತ್ತು ಅಮೆರಿಕದಲ್ಲಿರುವ ತಯಾರಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಬಟ್ಟೆ, ಆಭರಣ ಸೇರಿದಂತೆ ಭಾರತದಿಂದ ಆಮದಾಗುವ ಹಲವು ಉತ್ಪನ್ನಗಳ ಮೇಲೆ ಅಮೆರಿಕ ಈಗಾಗಲೇ ಶೇ 50ರಷ್ಟು ತೆರಿಗೆ ವಿಧಿಸಿದೆ. ಇದೀಗ ಫಾರ್ಮಾ ಉತ್ಪನ್ನಗಳ ಮೇಲೆ ಶೇ 100ರಷ್ಟು ತೆರಿಗೆ ಹೇರಿದೆ.
‘ಅಮೆರಿಕದವರ ನೌಕರಿ, ಅಮೆರಿಕದ ಕಾರ್ಖಾನೆಗಳನ್ನು ರಕ್ಷಿಸುತ್ತಿದ್ದೇವೆ. ತಮ್ಮ ಉತ್ಪನ್ನಗಳನ್ನು ಅಮೆರಿಕದಲ್ಲಿ ಮಾರಬೇಕೆಂದರೆ, ಇಲ್ಲಿಯೇ ಕಾರ್ಖಾನೆಗಳನ್ನು ಹಾಕಬೇಕು. ಇದು ಸರಳ ಮತ್ತು ಸ್ಪಷ್ಟ’ ಎಂದು ಅಮೆರಿಕನ್ನರು ಹೇಳುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.