
ಪ್ರಾತಿನಿಧಿಕ ಚಿತ್ರ
ಸೂಕ್ಷ್ಮ ಸ್ವಭಾವದ ವ್ಯಕ್ತಿಗಳಿಗೆ ಜೀವನದ ಒತ್ತಡಗಳು ಬಹಳ ಬೇಗ ಮನಸ್ಸಿನ ಮೇಲೆ ಪರಿಣಾಮ ಬೀರುತ್ತವೆ. ಭಯ ಎನ್ನುವುದು ಕೆಲವರಿಗೆ ಒಂದು ರೋಗದಂತೆ ಕಾಡುತ್ತಿರುತ್ತದೆ. ತೀವ್ರ ಆತಂಕದಿಂದ ಉಸಿರಾಟ ಕಷ್ಟವಾಗುವುದು, ಮೈ ನಡುಕ ಬರುವುದು, ಹೃದಯಾಘಾತವಾದಂತೆ ಭಾಸವಾಗುವುದನ್ನು ಪ್ಯಾನಿಕ್ ಅಟ್ಯಾಕ್ (ಗಾಬರಿ) ಎಂದು ಕರೆಯಲಾಗುತ್ತದೆ. ಈ ಸಮಸ್ಯೆಗೆ ಕಾರಣ, ಪರಿಹಾರ ಕ್ರಮಗಳ ಬಗ್ಗೆ ಇಲ್ಲಿದೆ ಮಾಹಿತಿ.
ಪ್ಯಾನಿಕ್ ಅಟ್ಯಾಕ್‌ಗೆ ಕಾರಣಗಳು
ಮಾನಸಿಕವಾಗಿ ದುರ್ಬಲ ಅಥವಾ ಮನೋಬಲ ಕಡಿಮೆ ಇರುವ ವ್ಯಕ್ತಿಗಳನ್ನು ಪ್ಯಾನಿಕ್ ಅಟ್ಯಾಕ್ ಕಾಡುವುದು ಹೆಚ್ಚು. ಸಣ್ಣ ಪುಟ್ಟ ವಿಚಾರಗಳಿಗೂ ಬೆಚ್ಚಿ ಬೀಳುವುದು, ಭಯ ಪಡುವುದರಿಂದಲೂ ಈ ಸಮಸ್ಯೆ ಉಲ್ಬಣಿಸುತ್ತದೆ.
ಯಾವುದಾದರೂ ಒಂದು ವಿಷಯ ಮನಸ್ಸಿನಲ್ಲಿ ಆಳವಾಗಿ ಉಳಿದರೆ ಅದರ ಬಗ್ಗೆ ಹೆಚ್ಚು ಯೋಚಿಸುವುದು.
ಮಾನಸಿಕ ಒತ್ತಡ, ವೃತ್ತಿ ಜೀವನ, ವಿದ್ಯಾಭ್ಯಾಸ, ವೈಯಕ್ತಿಕ ಸಮಸ್ಯೆಗಳಲ್ಲಿ ತೊಂದರೆ ಅನುಭವಿಸುವುದು.
ಸಮಸ್ಯೆಗಳ ಬಗ್ಗೆ ಅತಿಯಾಗಿ ಮುಂದಾಲೋಚನೆ ಮಾಡುವುದು ಕೂಡ ಪ್ಯಾನಿಕ್ ಅಟ್ಯಾಕ್‌ಗೆ ಕಾರಣವಾಗಬಹುದು ಎನ್ನುತ್ತಾರೆ ವೈದ್ಯರು.
ಪ್ಯಾನಿಕ್ ಅಟ್ಯಾಕ್ ಲಕ್ಷಣಗಳು
ನಡುಕ: ಯಾವುದೇ ವಿಷಯದಲ್ಲಿ ತೀವ್ರ ಭಯ, ಆತಂಕ ಹಾಗೂ ಕೆಲವೊಂದು ಬಾರಿ ವಿಪರೀತ ಕೋಪ ಬಂದಾಗಲೂ ಮೈ ನಡುಗು ಬರುತ್ತದೆ.
ಬೆವರುವುದು: ಪ್ಯಾನಿಕ್ ಅಟ್ಯಾಕ್‌ಗೆ ಒಳಗಾದ ವ್ಯಕ್ತಿ, ಆ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆವರುತ್ತಾರೆ.
ತಲೆ ಸುತ್ತುವಿಕೆ: ಆತಂಕ, ಗಾಬರಿಗೆ ಒಳಗಾದರೆ ಕೆಲವರಿಗೆ ತಲೆಸುತ್ತಿದಂತೆ ಭಾಸವಾಗುತ್ತದೆ. ಕೆಲವರು ಪ್ರಜ್ಞೆತಪ್ಪಿಯೂ ಬೀಳಬಹುದು.
ವಾಕರಿಕೆ: ಪ್ಯಾನಿಕ್ ಅಟ್ಯಾಕ್ ಸಂದರ್ಭದಲ್ಲಿ ವಾಕರಿಕೆ ಜೊತೆ, ಬಾಯಿ ಒಣಗುವಿಕೆ, ಹೊಟ್ಟೆ ತೊಳೆಸಿದಂತೆ ಆಗುತ್ತದೆ.
ಉಸಿರಾಟದ ತೊಂದರೆ: ಒತ್ತಡ ಅಥವಾ ಗಾಬರಿಗೆ ಒಳಗಾದರೆ ಆ ಸಂದರ್ಭದಲ್ಲಿ ಉಸಿರು ಕಟ್ಟಿದಂತೆ ಆಗುತ್ತದೆ. ಕೆಲವರಿಗೆ ಉಸಿರಾಟದ ವೇಗ ಹೆಚ್ಚಳವಾಗಬಹುದು. ಆ ಕ್ಷಣಕ್ಕೆ ಉಸಿರಾಟ ಕಷ್ಟವಾಗಬಹುದು. ಆದರೆ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
ಪ್ಯಾನಿಕ್ ಅಟ್ಯಾಕ್‌ನಿಂದ ಪಾರಾಗಲು ಇರುವ ಪರಿಹಾರ ಮಾರ್ಗಗಳು
ಯೋಗ, ವ್ಯಾಯಾಮ: ಪ್ರತಿನಿತ್ಯ ವ್ಯಾಯಾಮ ಮಾಡುವುದರಿಂದ ದೈಹಿಕ ಆರೋಗ್ಯದ ಜೊತೆ ಮಾನಸಿಕ ಆರೋಗ್ಯವು ಸುಧಾರಿಸುತ್ತದೆ.
ಉದ್ವೇಗಕ್ಕೆ ಒಳಗಾಗದಿರುವುದು: ಸಣ್ಣ ಪುಟ್ಟ ವಿಷಯಗಳಿಗೆ ಉದ್ವೇಗಕ್ಕೆ ಒಳಗಾಗದೆ ನಿಧಾನವಾಗಿ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು.
ಪೌಷ್ಟಿಕ ಆಹಾರ ಸೇವನೆ: ಪೌಷ್ಟಿಕ ಆಹಾರ ಸೇವನೆ ದೇಹಕ್ಕೆ ಮಾತ್ರವಲ್ಲದೇ ಮನಸ್ಸಿನ ಆರೋಗ್ಯಕ್ಕೂ ಉಪಯುಕ್ತವಾಗಿದೆ.
ಸಂಗೀತ ಥೆರಪಿ: ಇದು ಕೂಡ ಒಂದು ರೀತಿಯ ಔಷಧ ಮಾರ್ಗವಾಗಿದೆ. ತೀವ್ರ ಒತ್ತಡ ಎನಿಸಿದಾಗ ಕಡಿಮೆ ಸೌಂಡ್‌ನಲ್ಲಿ ಇಷ್ಟವಾಗುವ ಹಾಡುಗಳನ್ನು ಕೇಳುವುದರಿಂದ ಮನಸ್ಸು ಹಗುರಾಗಿ ಒತ್ತಡ ನಿವಾರಣೆಗೆ ಸಹಕರಿಸಲಿದೆ.
ಚಿಕಿತ್ಸೆ ಪಡೆದುಕೊಳ್ಳುವುದು: ಪ್ಯಾನಿಕ್ ಅಟ್ಯಾಕ್ ಸಮಸ್ಯೆ ಆಗಾಗ ಕಾಡುತ್ತಿದ್ದರೆ ಮನೋವೈದ್ಯರ ಬಳಿ ಕೌನ್ಸಿಲಿಂಗ್ ಅಥವಾ ಚಿಕಿತ್ಸೆ ಪಡೆದುಕೊಳ್ಳಬೇಕು.
ಪ್ರಚೋದನೆ ವಿಷಯಗಳಿಗೆ ಗಮನ ಕೊಡದಿರುವುದು: ಅಪರಾಧಕ್ಕೆ ಸಂಬಂಧಿಸಿದ ಹಿಂಸೆ, ಕೋಪ, ಕ್ರೌರ್ಯ ಇಂತಹ ವಿಷಯಗಳಿಗೆ ಹೆಚ್ಚು ಆಸಕ್ತಿ ತೋರಬಾರದು.
ಆರೋಗ್ಯಕರ ನಿದ್ದೆ ಮಾಡಬೇಕು: ರಾತ್ರಿ ನಿದ್ದೆ ಆರೋಗ್ಯಕ್ಕೆ ಬಹಳ ಮುಖ್ಯ. ಆದ್ದರಿಂದ ಪ್ರತಿದಿನ 6 ರಿಂದ 7 ಗಂಟೆ ನಿದ್ದೆ ಮಾಡುವುದರಿಂದ ಪ್ಯಾನಿಕ್ ಅಟ್ಯಾಕ್ ಅನ್ನು ನಿಯಂತ್ರಿಸಬಹುದು ಎನ್ನುತ್ತಾರೆ ವೈದ್ಯರು.
ಮಾಹಿತಿ: ಡಾ. ಶಿವಸ್ವಾಮಿ ಸೋಸಲೆ, ಬೆಂಗಳೂರಿನ ಜಯದೇವ, ಮೈಸೂರಿನ ಸಂತ ಜೋಸೆಫರ ಆಸ್ಪತ್ರೆಯ ಹೃದಯ ಶಸ್ತ್ರ ಚಿಕಿತ್ಸೆ ಪ್ರಾಧ್ಯಾಪಕರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.