ADVERTISEMENT

ಮನೋಬಲ ವೃದ್ಧಿಸುವ ಊರ್ಧ್ವ ಧನುರಾಸನ

ಜಿ.ಎನ್.ಶಿವಕುಮಾರ
Published 19 ಜೂನ್ 2019, 16:41 IST
Last Updated 19 ಜೂನ್ 2019, 16:41 IST
ಊರ್ಧ್ವ ಧನುರಾಸನ
ಊರ್ಧ್ವ ಧನುರಾಸನ   

ಊರ್ಧ್ವ ಎಂದರೆ ಮೇಲ್ಭಾಗ. ಧನು ಎಂದರೆ ಬಿಲ್ಲು. ದೇಹವು ಅಂಗೈಗಳು ಮತ್ತು ಪಾದಗಳ ಮೇಲೆ ನೆಲೆಸಿ, ಊರ್ಧ್ವ ಮುಖವಾಗಿ ಬಿಲ್ಲಿನಂತೆ ಸೆಳೆದಿಟ್ಟು ಅಭ್ಯಾಸ ನಡೆಯುತ್ತದೆ. ಆದ್ದರಿಂದ, ಇದಕ್ಕೆ ಊರ್ಧ್ವ ಧನುರಾಸನ ಎಂದು ಹೆಸರಿಸಲಾಗಿದೆ.
ಈ ಮೊದಲು ಧನುರಾಸನ ಅಭ್ಯಾಸ ಮತ್ತು ಅದರ ಪ್ರಯೋಜನಗಳ ಕುರಿತು ತಿಳಿದಿದ್ದೇವೆ. ಪ್ರಸ್ತುತ ಊರ್ಧ್ವ ಧನುರಾಸನ ವಿವರಿಸಲಾಗಿದೆ.

ಅಭ್ಯಾಸಕ್ರಮ

ಕಾಲುಗಳನ್ನು ಚಾಚಿಟ್ಟು, ಬೆನ್ನನ್ನು ನೆಲಕ್ಕೊರಗಿಸಿ ಮಲಗಿ. ನಂತರ, ಮಂಡಿಗಳನ್ನು ಮಡಿಚಿ ಹಿಮ್ಮಡಿಗಳು ಪೃಷ್ಠಕ್ಕೆ ತಾಗುವಂತೆ ಒಳಕ್ಕೆ ಸೆಳೆದು ಇರಿಸಿ(ಪಾದಗಳ ನಡುವೆ 6ರಿಂದ 9 ಇಂಚು ಅಂತರವಿರಲಿ). ಮೊಳಕೈಗಳನ್ನು ಮಡಿಚಿ, ಅಂಗೈಗಳನ್ನು ತಲೆಯ ಪಕ್ಕ ಭುಜಗಳತ್ತ ಬೆರಳು ಮಾಡಿ ನೆಲಕ್ಕೂರಿಡಿ. ಒಂದೆರೆಡು ಸರಳ ಉಸಿರಾಟ ನಡೆಸಿ.

ADVERTISEMENT

ನಂತರ, ಉಸಿರನ್ನು ಹೊರಹಾಕುತ್ತಾ ಪಾದ ಮತ್ತು ಅಂಗೈಗಳ ಮೇಲೆ ಭಾರ ಹಾಕುತ್ತಾ ಸೊಂಟ ಮತ್ತು ಬೆನ್ನನ್ನು ನೆಲದಿಂದ ಮೇಲಕ್ಕೆತ್ತಿ. ಕಾಲುಗಳ ಸ್ಥಾನವನ್ನು ಕದಲಿಸದೆ ಸ್ಥಿರವಾಗಿರಿಸಿ, ಕೈಗಳನ್ನು ನಿಧಾನವಾಗಿ ಕಾಲಿನತ್ತ ಸರಿಸುತ್ತಾ ದೇಹವನ್ನು ಮತ್ತಷ್ಟು ಮೇಲಕ್ಕೆ ಹಿಗ್ಗಿಸಿ. ಸಾಧ್ಯವಿದ್ದಷ್ಟು ಕೈಗಳನ್ನು ಕಾಲಿನತ್ತ ತಂದು, ಕಾಲು ಮತ್ತು ಕೈಗಳನ್ನು ನೇರವಾಗಿರಿಸಿ, ದೇಹವನ್ನು ಬಿಲ್ಲಿನಂತೆ ಮೇಲಕ್ಕೆ ಸೆಳೆದು ನಿಲ್ಲಿಸಿ. ಅಂತಿಮ ಸ್ಥಿತಿಯಲ್ಲಿ ಸರಳ ಉಸಿರಾಟ ನಡೆಸುತ್ತಾ 15ರಿಂದ 20 ಸೆಕೆಂಡು ನೆಲೆಸಿ. ಅವರೋಹಣ ಮಾಡುವಾಗ ಕೈಗಳನ್ನು ಹಿಂದಕ್ಕೆ ಸರಿಸುತ್ತಾ ಭುಜವನ್ನು ನೆಲಕ್ಕೊರಗಿಸಿ, ಬೆನ್ನು, ಸೊಂಟವನ್ನು ಕೆಳಕ್ಕಿಳಿಸಿ ಕಾಲುಗಳನ್ನು ಚಾಚಿಟ್ಟು ವಿರಮಿಸಿ.

* ಊರ್ಧ್ವ ಧನುರಾಸನದ ಮುಂದುವರಿದ ಇನ್ನೆರೆಡು ಹಂತಗಳಿವೆ. ನೇರವಾಗಿ ನಿಂತು ಹಿಂದಕ್ಕೆ ಬಾಗುವುದು ಮತ್ತು ಏಕಪಾದ ಊರ್ಧ್ವ ಧನುರಾಸನ.

ಫಲಗಳು:

ಊರ್ಧ್ವ ಧನುರಾಸನದ ಮೂರು ಹಂತಗಳ ಪ್ರಯೋಜನಗಳು ಬಹುತೇಕ ಒಂದೇ ಆಗಿದ್ದು, ಅವುಗಳು ಇಂತಿವೆ.

*ರಮ್ಯತೆಯಿಂದ ಕೂಡಿದ ಆಸನ ಇದಾಗಿದ್ದು, ಅಭ್ಯಾಸಿಗರಲ್ಲಿ ಸಮತೋಲನ ಸ್ಥಿತಿಯನ್ನು ಹೆಚ್ಚಿಸುವುದು. ಮನಸ್ಸಿನಲ್ಲಿ ಸಮತೆ ಹಾಗೂ ವಿಶ್ವಾಸವನ್ನು ಮೂಡಿಸುವುದು.

* ಅಭ್ಯಾಸ ತುಸು ಕಷ್ಟ ಎನಿಸಿದರೂ ಹಿಂಬಾಗುವ ಆಸನಗಳ ಕಲಿಕೆಗೆ ಮೊದಲ ಮೆಟ್ಟಿಲೆಂದೇ ಹೇಳಬಹುದು. ಬೆನ್ನೆಲುಬು ಹಿಗ್ಗಲು ನೆರವಾಗಿ ಚೈತನ್ಯ ನೀಡುತ್ತದೆ. ಶರೀರವನ್ನು ಹೇಗೆಂದರಾಗೆ ತಿರುಗಿಸುವ ಹಾಗೂ ಮಣಿಸಬಲ್ಲ ಸಾಮರ್ಥ್ಯವನ್ನು ಒದಗಿಸುತ್ತದೆ.

* ಬೆನ್ನು ಶಕ್ತಿಯುತವಾಗಿ, ತಲೆಗೆ ತಂಪನ್ನು ಒದಗಿಸುತ್ತದೆ. ಒಟ್ಟಾರೆಯಾಗಿ ದೇಹಕ್ಕೆ ಚೈತನ್ಯ ತುಂಬಿ, ಮನೋಲ್ಲಾಸ ನೀಡಿ ದೇಹವನ್ನು ಹಗುರಗೊಳಿಸುತ್ತದೆ.

* ಯೋಗದ ಕುರಿತಾದ ಹೆಚ್ಚಿನ ಮಾಹಿತಿಗಾಗಿಇವನ್ನೂ ಓದಿ....

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.