ADVERTISEMENT

ಹೃದಯಕ್ಕೆ ಮೃದು ಅಂಗಮರ್ಧನ ನೀಡುವ ಕಪೋತಾಸನ

ಜಿ.ಎನ್.ಶಿವಕುಮಾರ
Published 19 ಜೂನ್ 2019, 16:44 IST
Last Updated 19 ಜೂನ್ 2019, 16:44 IST
ಕಪೋತಾಸನ
ಕಪೋತಾಸನ   

ಕಪೋತವೆಂದರೆ ಪಾರಿವಾಳ. ಆಸನ ಅಭ್ಯಾಸದಲ್ಲಿ ದೇಹ ಸ್ಥಿತಿಯು ಎದೆಯುಬ್ಬಿಸಿ ಗುಬ್ಬಳಿಸುವ ಪಾರಿವಾಳವನ್ನು ಹೋಲುತ್ತದೆ. ಆದ್ದರಿಂದ, ಇದಕ್ಕೆ ಕಪೋತಾಸನ ಎಂದು ಹೆಸರಿಸಲಾಗಿದೆ. ರಾಜಕಪೋತಾಸನ ಅಭ್ಯಾಸದಲ್ಲಿ ಮೇಲ್ಮುಖವಾಗಿ ಅಭ್ಯಾಸ ನಡೆದರೆ, ಇಲ್ಲಿ ತಲೆಯು ಕೆಳಕ್ಕೆ ಹಿಮ್ಮುಖವಾಗಿ ಚಲನೆ ಹೊಂದಿ ಪಾದಗಳ ಮೇಲೆ ನೆತ್ತಿಯನ್ನೂರಿ ಅಭ್ಯಾಸ ನಡೆಯುತ್ತದೆ.

ಅಭ್ಯಾಸಕ್ರಮ

ಕಾಲುಗಳನ್ನು ಚಾಚಿಟ್ಟು ನೆಲದಮೇಲೆ ಕುಳಿತು, ಮಂಡಿಗಳನ್ನು ಮಡಚಿ ತೊಡೆಯ ಪಕ್ಕ ಪಾದಗಳನ್ನು ತಂದಿರಿಸಿ ವೀರಾಸನ ಸ್ಥಿತಿಗೆ ಬನ್ನಿ. ಕೈಗಳನ್ನು ಪಕ್ಕದಲ್ಲಿ ನೆಲಕ್ಕೂರಿ ನೆರವು ಪಡೆದು ಬೆನ್ನನ್ನು ನೆಲಕ್ಕೊರಗಿಸಿ ಮಲಗಿ. ಬಳಿಕ, ಕೈಗಳನ್ನು ತಲೆಯ ಮೇಲ್ಭಾಗದಿಂದ ಹಿಂದೆಕ್ಕೆ ತಂದು ಕಿವಿಗಳ ಪಕ್ಕ ಭುಜದ ಹಿಂಬದಿಗೆ ಅಂಗೈಗಳನ್ನು ನೆಲಕ್ಕೂರಿ. ಉಸಿರನ್ನು ಹೊರ ಹಾಕುತ್ತಾ ಕೈಗಳನ್ನು ನೆಲಕ್ಕೊತ್ತಿ, ಸೊಂಟ, ಬೆನ್ನನ್ನು ಮೇಲಕ್ಕೆತ್ತಿ. ಪೃಷ್ಠವನ್ನು ಮುಂದಕ್ಕೊತ್ತುತ್ತಾ, ಕೈಗಳನ್ನು ನಿಧಾನವಾಗಿ ಒಳಕ್ಕೆ ತಂದು ಕಾಲ್ಬೆರಳುಗಳನ್ನು ಹಿಡಿಯಿರಿ. ಈ ಹಂತದಲ್ಲಿ ದೇಹವನ್ನು ಮತ್ತಷ್ಟು ಹಿಗ್ಗಿಸಿ ಅಂಗೈಗಳಿಂದ ಕಾಲ್ಗಿಣ್ಣನ್ನು ಹಿಡಿದು ಮೊಳಕೈಗಳನ್ನು ನೆಲಕ್ಕೂರಿ, ದೇಹವನ್ನು ಒಳಕ್ಕೆಳೆದು ನೆತ್ತಿಯನ್ನು ಪಾದಗಳ ಮೇಲೆ ಇರಿಸಿ. ಅಂತಿಮ ಸ್ಥಿತಿಯಲ್ಲಿ ಸರಳ ಉಸಿರಾಟ ನಡೆಸುತ್ತಾ 20ರಿಂದ 30 ಸೆಕೆಂಡು ನೆಲೆಸಿ.
ಅವರೋಹಣ ಮಾಡುವಾಗ ತಲೆಯನ್ನು ನಿಧಾನವಾಗಿ ಮೇಲೆತ್ತಿ ಕೈಗಳ ಹಿಡಿತ ಬಿಡಿಸಿ ನೆಲಕ್ಕೂರಿ ನೆರವು ಪಡೆದು ಭುಜ, ಬೆನ್ನನ್ನು ನೆಲಕ್ಕೊರಗಿಸಿ. ಕೈಗಳ ನೆರವಿನಿಂದ ಮೇಲೆದ್ದು ಕುಳಿತು ವಿಶ್ರಾಂತಿ ಪಡೆಯಿರಿ.

ADVERTISEMENT

ಸೂಚನೆ

ಅಂತಿಮ ಸ್ಥಿತಿಯಲ್ಲಿ ದೇಹವು ಹೆಚ್ಚು ಹಿಂಭಾಗಿರುವುದರಿಂದ ಉಸಿರಾಟ ಪ್ರಕ್ರಿಯೆ ಅತ್ಯಂತ ವೇಗ ಮತ್ತು ಶ್ರಮದಿಂದ ಕೂಡಿರುತ್ತದೆ. ಆದ್ದರಿಂದ, ದೀರ್ಘ ಉಸಿರಾಟಕ್ಕೆ ಹೆಚ್ಚು ಒತ್ತು ನೀಡಿ ಅಭ್ಯಾಸಿಸಿ.

ಫಲಗಳು

* ವಸ್ತಿಕುಹರದ ಭಾಗ ಉತ್ತಮವಾಗಿ ಹಿಗ್ಗಿ ಜನನಾಂಗದ ಆರೋಗ್ಯ ವೃದ್ಧಿಗೆ ನೆರವಾಗುವುದು.
* ಬೆನ್ನು ಚೆನ್ನಾಗಿ ಹಿಗ್ಗುವುದು, ಈ ಮೂಲಕ ಬೆನ್ನಿನ ಭಾಗಕ್ಕೆ ಸರಿಯಾದ ರಕ್ತ ಪರಿಚಲನೆ ಒದಗಿಸುವುದು.
* ಎದೆಯು ವಿಶಾಲವಾಗಲು ನೆರವಾಗುವ ಮೂಲಕ ಹೃದಯಕ್ಕೆ ಮೃದುವಾದ ಅಂಗಮರ್ಧನವನ್ನು ಒದಗಿಸುವುದು.

* ಯೋಗದ ಕುರಿತಾದ ಹೆಚ್ಚಿನ ಮಾಹಿತಿಗಾಗಿಇವನ್ನೂ ಓದಿ....

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.