ADVERTISEMENT

1ನೇ ತರಗತಿಯಿಂದಲೇ ಹಿಂದಿ ಕಡ್ಡಾಯಗೊಳಿಸುವ ಕ್ರಮವನ್ನು ಬೆಂಬಲಿಸುವುದಿಲ್ಲ: ಮಹಾ DCM

ಮೃತ್ಯುಂಜಯ ಬೋಸ್
Published 29 ಜೂನ್ 2025, 8:09 IST
Last Updated 29 ಜೂನ್ 2025, 8:09 IST
ಅಜಿತ್ ಪವಾರ್
ಅಜಿತ್ ಪವಾರ್   

ಪಿಟಿಐ ಚಿತ್ರ

ಮುಂಬೈ: ಮಹಾರಾಷ್ಟ್ರದಲ್ಲಿ ಹಿಂದಿ ಹೇರಿಕೆ ಹಾಗೂ ತ್ರಿಭಾಷಾ ಸೂತ್ರ ಜಾರಿ ಕುರಿತು ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ ಉಪಮುಖ್ಯಮಂತ್ರಿ ಹಾಗೂ ಎನ್‌ಸಿಪಿ ಮುಖ್ಯಸ್ಥ ಅಜಿತ್‌ ಪವಾರ್‌ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. 

ವಿಧಾನಸಭೆಯ ಮುಂಗಾರು ಅಧಿವೇಶನದ ಮುನ್ನಾದಿನ ಮಾತನಾಡಿರುವ ಅವರು, ಒಂದನೇ ತರಗತಿಯಿಂದಲೇ ಹಿಂದಿ ಕಲಿಕೆ ಕಡ್ಡಾಯಗೊಳಿಸುವ ಕ್ರಮವನ್ನು ಬೆಂಬಲಿಸುವುದಿಲ್ಲ. ಆದರೆ, 5ನೇ ತರಗತಿಯಿಂದ ಮೂರನೇ ಭಾಷೆ ಆಯ್ಕೆ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪೋಷಕರು ತೀರ್ಮಾನಿಸಬಹುದು ಎಂದಿದ್ದಾರೆ. ಹಾಗೆಯೇ, ಆರಂಭದಿಂದಲೂ ನಾವು ಹಿಂದಿ ಹೇರಿಕೆ ಪರವಾದ ನಿಲುವು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ADVERTISEMENT

'ಹಿಂದಿ ಭಾಷೆ ಕಲಿಕೆ ಕಡ್ಡಾಯವಿಲ್ಲ. ಆಯಾ ರಾಜ್ಯದ ಪ್ರತಿಯೊಬ್ಬರೂ ತಮ್ಮ ಮಾತೃಭಾಷೆಯನ್ನು ಕಲಿಯಬೇಕು ಎಂಬುದರಲ್ಲಿ ನಂಬಿಕೆ ಹೊಂದಿದ್ದೇವೆ. ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಓದುವವರು ಮರಾಠಿ ಭಾಷೆ ಕಲಿಯುವುದು ಕಡ್ಡಾಯವಾಗಿದೆ. ಐದನೇ ತರಗತಿಯಿಂದ ಹಿಂದಿ ಕಲಿಯುವ ಬಗ್ಗೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು ಆಲೋಚಿಸಿ, ನಿರ್ಧಾರ ಕೈಗೊಳ್ಳಬೇಕು' ಎಂದು ಹೇಳಿದ್ದಾರೆ.

ಅಧಿವೇಶನದ ಮುನ್ನಾದಿನವಾದ ಇಂದು (ಜೂ 29) ಸಂಜೆ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರ ಚರ್ಚೆಯಾಗಬಹುದು ಎಂದೂ ತಿಳಿಸಿದ್ದಾರೆ.

'ಸಾಮಾನ್ಯವಾಗಿ, ಮಹಾರಾಷ್ಟ್ರದ ಶಾಲೆಗಳಲ್ಲಿನ ಮಕ್ಕಳು ಮರಾಠಿ ಮತ್ತು ಇಂಗ್ಲಿಷ್‌ ಜೊತೆಗೆ ಹಿಂದಿಯನ್ನು ಮೂರನೇ ಭಾಷೆಯಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ' ಎಂದೂ ಉಲ್ಲೇಖಿಸಿದ್ದಾರೆ.

ಶಿವಸೇನಾ (ಯುಬಿಟಿ) ನಾಯಕ ಉದ್ಧವ್‌ ಠಾಕ್ರೆ ಹಾಗೂ ಮಹಾರಾಷ್ಟ್ರ ನಿರ್ಮಾಣ ಸೇನಾ (ಎಂಎನ್‌ಎಸ್‌) ಅಧ್ಯಕ್ಷ ರಾಜ್‌ ಠಾಕ್ರೆ ಅವರು ರಾಜ್ಯದಲ್ಲಿ ಹಿಂದಿ ಹೇರಿಕೆ ವಿರೋಧಿಸಿ ಜುಲೈ 5ರಂದು ಜಂಟಿ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಜಿತ್‌ ಪವಾರ್‌ ಮಾತನಾಡಿದ್ದಾರೆ.

ಮರಾಠಿ ಹಾಗೂ ಇಂಗ್ಲಿಷ್‌ ಮಾಧ್ಯಮ ಶಾಲೆಗಳಲ್ಲಿ 1ರಿಂದ 5ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಹಿಂದಿಯನ್ನು ತೃತೀಯ ಭಾಷೆಯಾಗಿ ಕಲಿಸುವುದನ್ನು ಕಡ್ಡಾಯಗೊಳಿಸುವುದಾಗಿ ರಾಜ್ಯ ಸರ್ಕಾರ ಏಪ್ರಿಲ್‌ನಲ್ಲಿ ಅಧಿಸೂಚನೆ ಹೊರಡಿಸಿತ್ತು. ಇದಕ್ಕೆ, ವಿರೋಧ ಪಕ್ಷಗಳಾದ ಎನ್‌ಸಿಪಿ (ಎಸ್‌ಪಿ), ಶಿವಸೇನಾ (ಯುಬಿಟಿ) ಹಾಗೂ ಎಂಎನ್‌ಎಸ್‌ ತೀವ್ರ ವಿರೋಧ ವ್ಯಕ್ತಪಡಿಸಿದ್ದವು.

ನಂತರ ಆದೇಶ ತಿದ್ದುಪಡಿ ಮಾಡಿದ್ದ ಸರ್ಕಾರ, ಹಿಂದಿಯನ್ನು 'ಕಡ್ಡಾಯ'ಗೊಳಿಸುವ ಬದಲು ಮೂರನೇ ಭಾಷೆಯಾಗಿ 'ಸಾಮಾನ್ಯವಾಗಿ' ಕಲಿಸಲಾಗುವುದು ಎಂದು ತಿಳಿಸಿತ್ತು. ಹಾಗೆಯೇ, ಯಾವುದೇ ಶಾಲೆಯಲ್ಲಿ ಪ್ರತಿ ತರಗತಿಯ 20 ವಿದ್ಯಾರ್ಥಿಗಳು ಹಿಂದಿ ಬದಲು ಬೇರೆ ಭಾಷೆಯನ್ನು ಕಲಿಯಲು ಬಯಸಿದರೆ, ಆ ಭಾಷೆಯನ್ನೇ ಕಲಿಸಲಾಗುವುದು. ಅದಕ್ಕಾಗಿ, ಶಿಕ್ಷಕರನ್ನು ನೇಮಿಸಲಾಗುವುದು ಇಲ್ಲವೇ, ಆನ್‌ಲೈನ್ ಮೂಲಕ ಕಲಿಸಲಾಗುವುದು ಎಂದೂ ಉಲ್ಲೇಖಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.