ನವದೆಹಲಿ: 2020ರಿಂದ ಕಳೆದ ಐದೂವರೆ ವರ್ಷಗಳಲ್ಲಿ ದೇಶದ ಪ್ರಮುಖ ಹತ್ತು ವಿಮಾನ ನಿಲ್ದಾಣಗಳಲ್ಲಿ ಸುಮಾರು 2,800 ಹಕ್ಕಿ ಡಿಕ್ಕಿ ಪ್ರಕರಣಗಳು ವರದಿಯಾಗಿವೆ. ದೆಹಲಿ, ಮುಂಬೈ ಮತ್ತು ಬೆಂಗಳೂರು ವಿಮಾನ ನಿಲ್ದಾಣಗಳಲ್ಲಿ ಅತಿ ಹೆಚ್ಚು ಹಕ್ಕಿ ಡಿಕ್ಕಿ ಪ್ರಕರಣಗಳು ದಾಖಲಾಗಿವೆ.
2020ರಿಂದ 2025ರ ಜೂನ್‌ವರೆಗೆ ದೆಹಲಿ ವಿಮಾನ ನಿಲ್ದಾಣವು ಅತಿ ಹೆಚ್ಚು 695 ಹಕ್ಕಿ ಡಿಕ್ಕಿ ಪ್ರಕರಣಗಳು ವರದಿಯಾಗಿವೆ. ಮುಂಬೈಯಲ್ಲಿ 407 ಮತ್ತು ಬೆಂಗಳೂರಲ್ಲಿ 343 ಪ್ರಕರಣಗಳು ದಾಖಲಿಸಿದೆ. 337 ಪ್ರಕರಣಗಳೊಂದಿಗೆ ಅಹಮದಾಬಾದ್ ನಾಲ್ಕನೇ ಸ್ಥಾನದಲ್ಲಿದ್ದರೆ, ಹೈದರಾಬಾದ್ ಐದನೇ ಸ್ಥಾನದಲ್ಲಿದೆ.
ಚೆನ್ನೈ (205), ಕೋಲ್ಕತ್ತ (193), ಭುವನೇಶ್ವರ (150), ಪುಣೆ (145) ಮತ್ತು ತಿರುವನಂತಪುರ (125) ನಂತರದ ಸ್ಥಾನದಲ್ಲಿವೆ.
ಕಳೆದ ವಾರ ರಾಜ್ಯಸಭೆಯಲ್ಲಿ ಮಂಡಿಸಲಾದ ನಾಗರಿಕ ವಿಮಾನಯಾನ ಸಚಿವಾಲಯದ ದತ್ತಾಂಶದ ಪ್ರಕಾರ, 2020–21ರಲ್ಲಿ ಕೋವಿಡ್ ಲಾಕ್‌ಡೌನ್‌ನಿಂದಾಗಿ ವಿಮಾನಯಾನ ಸೇವೆಗಳು ಕಡಿಮೆ ಇದ್ದ ಕಾರಣ ಹಕ್ಕಿ ಡಿಕ್ಕಿ ಪ್ರಕರಣಗಳು ಕಡಿಮೆಯಾಗಿದ್ದವು ಎಂದು ತಿಳಿದುಬಂದಿದೆ.
2020ರಲ್ಲಿ 309, 2021ರಲ್ಲಿ 354 ಪ್ರಕರಣಗಳು ವರದಿಯಾಗಿದ್ದರೆ, 2022ರಲ್ಲಿ 588, 2023ರಲ್ಲಿ 709, 2024ರಲ್ಲಿ 609 ಪ್ರಕರಣಗಳು ದಾಖಲಾಗಿದ್ದವು. ಈ ವರ್ಷ ಜೂನ್‌ವರೆಗೆ 238 ಘಟನೆಗಳು ವರದಿಯಾಗಿವೆ.
ಪ್ರತಿ ವರ್ಷವು ದೆಹಲಿ ವಿಮಾನ ನಿಲ್ದಾಣದಲ್ಲಿ ಅತ್ಯಧಿಕ ಸಂಖ್ಯೆಯ ಹಕ್ಕಿ ಡಿಕ್ಕಿ ಪ್ರಕರಣಗಳು ವರದಿಯಾಗಿದೆ.
2020ರಲ್ಲಿ 62, 2021ರಲ್ಲಿ 94, 2022ರಲ್ಲಿ 183, 2023ರಲ್ಲಿ 185, 2024ರಲ್ಲಿ 130 ಮತ್ತು ಈ ವರ್ಷ ಜೂನ್‌ವರೆಗೆ 41 ಪ್ರಕರಣಗಳು ವರದಿಯಾಗಿದ್ದರೆ, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಈ ಸಂಖ್ಯೆಗಳು ಕ್ರಮವಾಗಿ 29, 22, 84, 85, 88 ಮತ್ತು 35 ಆಗಿವೆ.
ವಿಮಾನ ಕಾರ್ಯಾಚರಣೆಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಾಗರಿಕ ವಿಮಾನಯಾನ ಸಚಿವಾಲಯವು ವನ್ಯಜೀವಿ ಅಪಾಯ ನಿರ್ವಹಣಾ ಯೋಜನೆಯನ್ನು (WHMP) ಅಭಿವೃದ್ಧಿಪಡಿಸುವುದನ್ನು ಕಡ್ಡಾಯಗೊಳಿಸುತ್ತದೆ ಎಂದು ನಾಗರಿಕ ವಿಮಾನಯಾನ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ಅವರು ಎಎಪಿ ಸಂಸದೆ ಸ್ವಾತಿ ಮಲಿವಾಲ್ ಅವರಿಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.