ADVERTISEMENT

Maharashtra Elections | EVM ದೂಷಿಸಿದ ಬಿಜೆಪಿಯ ಮಾಜಿ ಮಿತ್ರಪಕ್ಷ ಆರ್‌ಎಸ್‌ಪಿ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2024, 11:17 IST
Last Updated 30 ನವೆಂಬರ್ 2024, 11:17 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಫಲಿತಾಂಶವು ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಬಗ್ಗೆ ಅನುಮಾನ ಹುಟ್ಟುಹಾಕಿದೆ ಎಂದು ಬಿಜೆಪಿ ನೇತೃತ್ವದ ‘ಮಹಾಯುತಿ’ ಮೈತ್ರಿಕೂಟದ ಮಾಜಿ ಮಿತ್ರಪಕ್ಷವಾದ ರಾಷ್ಟ್ರೀಯ ಸಮಾಜ ಪಕ್ಷ (ಆರ್‌ಎಸ್‌ಪಿ) ಆರೋಪಿಸಿದೆ.

ನವೆಂಬರ್ 20ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ಮತಗಳು ‘ಮಹಾಯುತಿ’ ಅಭ್ಯರ್ಥಿಗಳಿಗೆ ವರ್ಗಾವಣೆಗೊಂಡಿವೆ ಎಂದು ಆರ್‌ಎಸ್‌ಪಿ ಮುಖ್ಯಸ್ಥ ಮಹದೇವ್ ಜಾಂಕರ್ ದೂರಿದ್ದಾರೆ.

ADVERTISEMENT

‘ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಹ್ಯಾಕ್ ಮಾಡಬಹುದು. ನಾನು ಸಹ ಎಂಜಿನಿಯರ್, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜೀವಂತವಾಗಿಡಬೇಕಾದರೆ ದೇಶದಲ್ಲಿ ಇವಿಎಂಗಳನ್ನು ರದ್ದುಗೊಳಿಸಿ ಬ್ಯಾಲೆಟ್ ಪೇಪರ್‌ಗೆ ಮರಳುವುದೇ ಉತ್ತಮ’ ಎಂದು ಜಾಂಕರ್ ‘ಪಿಟಿಐ’ಗೆ ತಿಳಿಸಿದ್ದಾರೆ.

‘ಅಕ್ಕಲಕೋಟ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಸುನಿಲ್ ಬಂದ್ಗಾರ್ ಅವರು 1,312 ಮತಗಳನ್ನು ಪಡೆದಿದ್ದಾರೆ. ಆದರೆ, ತಮ್ಮದೇ ಗ್ರಾಮದಲ್ಲಿ ಅವರಿಗೆ ಶೂನ್ಯ ಮತಗಳು ಬಿದ್ದಿವೆ. ಅಭ್ಯರ್ಥಿಗೆ ತನ್ನ ಸ್ವಂತ ಮತವನ್ನು ಪಡೆಯಲು ಸಾಧ್ಯವಾಗುವುದಿಲ್ಲ ಎಂದಾದರೇ ಇವಿಎಂಗಳ ಮೇಲೆ ಅನುಮಾನ ಮೂಡುತ್ತದೆ’ ಎಂದು ಜಾಂಕರ್ ಹೇಳಿದ್ದಾರೆ.

ವಿಧಾನಸಭಾ ಚುನಾವಣೆಯ ಸೀಟು ಹಂಚಿಕೆ ಬಿಕ್ಕಟ್ಟಿನಿಂದಾಗಿ ಆರ್‌ಎಸ್‌ಪಿ, ‘ಮಹಾಯೂತಿ’ ಮೈತ್ರಿಕೂಟವನ್ನು ತೊರೆದಿತ್ತು. ಜತೆಗೆ, ಈ ಬಾರಿ 93 ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಒಂದು ಸ್ಥಾನ ಗೆದ್ದಿದೆ.

ಈ ಬಾರಿಯ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ‘ಮಹಾಯುತಿ’ ಮೈತ್ರಿಕೂಟವು 235 ಸ್ಥಾನಗಳಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಕಾಂಗ್ರೆಸ್‌ ನೇತೃತ್ವದ ‘ಮಹಾ ವಿಕಾಸ ಅಘಾಡಿ’ ಕೇವಲ 49 ಸ್ಥಾನಗಳನ್ನು ಗಳಿಸಿ ತೀವ್ರ ಮುಖಭಂಗ ಅನುಭವಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.