
ಅಜಿತ್ ಪವಾರ್ ಮತ್ತು ಸುನೇತ್ರಾ
–ಪಿಟಿಐ ಚಿತ್ರ
ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಹಠಾತ್ ನಿಧನದಿಂದಾಗಿ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಕವಲುದಾರಿಯಲ್ಲಿದ್ದು, ಮುಂದೇನು? ಎಂಬ ಪ್ರಶ್ನೆ ಉದ್ಭವಿಸಿದೆ.
ಮಹಾರಾಷ್ಟ್ರದ ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದ ವಿಮಾನ ದುರಂತದಲ್ಲಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಮೃತಪಟ್ಟಿದ್ದಾರೆ. ಇದರ ಬೆನ್ನಲ್ಲೇ ಅಜಿತ್ ಉತ್ತರಾಧಿಕಾರಿಯಾಗಿ ಎನ್‌ಸಿಪಿಯನ್ನು ಯಾರು ಮುನ್ನಡೆಸುತ್ತಾರೆ?, ಅಜಿತ್ ಅವರ ಪತ್ನಿ ಸುನೇತ್ರಾ ಚುಕ್ಕಾಣಿ ಹಿಡಿಯುವರೇ ಅಥವಾ ಪುತ್ರರಾದ ಪಾರ್ಥ, ಜಯ್ ಜವಾಬ್ದಾರಿ ವಹಿಸುತ್ತಾರೆಯೇ... ಎಂಬ ಚರ್ಚೆಗಳು ಜೋರಾಗಿವೆ.
ಇತ್ತ ಅಜಿತ್ ಪವಾರ್ ಅವರ ದೊಡ್ಡಪ್ಪ, ಎನ್‌ಸಿಪಿ (ಶರದ್‌ಚಂದ್ರ ಪವಾರ್ ಬಣ) ಮುಖ್ಯಸ್ಥ ಶರದ್ ಪವಾರ್ ಅವರ ಮುಂದಿನ ನಡೆ ಕುರಿತು ಸಮಲೋಚನೆಗಳು ನಡೆಯುತ್ತಿವೆ.
ಸೋನಿಯಾ ಗಾಂಧಿಯವರ ವಿದೇಶಿ ಮೂಲವನ್ನು ಪ್ರಸ್ತಾಪಿಸಿದ್ದಕ್ಕಾಗಿ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡ ನಂತರ 1999ರಲ್ಲಿ ಶರದ್ ಪವಾರ್ ಅವರು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷವನ್ನು ಸ್ಥಾಪಿಸಿದ್ದರು. ಆಗ ಪವಾರ್ ಅವರು ‘ಸಾಹೇಬ್’ ಎಂದೇ ಜನಪ್ರಿಯರಾಗಿದ್ದರು. 2026ರ ಏಪ್ರಿಲ್‌ನಲ್ಲಿ ತಮ್ಮ ರಾಜ್ಯಸಭಾ ಅವಧಿ ಮುಗಿದ ನಂತರ ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದುವ ಹಿಂಗಿತ ವ್ಯಕ್ತಪಡಿಸಿದ್ದರು.
2023ರಲ್ಲಿ ಶರದ್ ಪವಾರ್ ವಿರುದ್ಧ ಬಂಡೆದ್ದು ಅವರ ನೆರಳಿನಿಂದ ಹೊರಬಂದಿದ್ದ ಅಜಿತ್, ಪಕ್ಷದ ಚಿಹ್ನೆ, ಹೆಸರಿನ ಜತೆಗೆ ಬಹುತೇಕ ಶಾಸಕರನ್ನು ಕರೆದುಕೊಂಡು ಬಿಜೆಪಿ ಮತ್ತು ಶಿವಸೇನಾ ಮೈತ್ರಿ ಸರ್ಕಾರ ಸೇರಿದ್ದರು. ಇದರೊಂದಿಗೆ ಎನ್‌ಸಿಪಿ ಎರಡು ಬಣಗಳಾಗಿ ವಿಂಗಡಣೆ ಆಯಿತು.
2025ರ ಡಿಸೆಂಬರ್ 12ರಂದು ತಮ್ಮ 85ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಬಾರಾಮತಿಯಲ್ಲಿ ನಡೆದಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಶರದ್ ಪವಾರ್, ‘ನಾನು ಈಗ ಅಧಿಕಾರದಲ್ಲಿಲ್ಲ. ನಾನು ರಾಜ್ಯಸಭೆಯಲ್ಲಿದ್ದೇನೆ. ಅವಧಿ ಪೂರ್ಣಗೊಳುವುದಕ್ಕೆ ಒಂದೂವರೆ ವರ್ಷ ಉಳಿದಿದೆ. ಮತ್ತೆ ರಾಜ್ಯಸಭೆಗೆ ಹೋಗಬೇಕೇ ಎಂಬುದನ್ನು ಇನ್ನಷ್ಟೇ ನಿರ್ಧರಿಸಬೇಕಾಗುತ್ತದೆ. ನಾನು ಮೊದಲೇ ಘೋಷಿಸಿದಂತೆ ಲೋಕಸಭೆ ಚುನಾವಣೆ ಅಥವಾ ಯಾವುದೇ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ನಾನು ಈಗಾಗಲೇ 14 ಚುನಾವಣೆಗಳಲ್ಲಿ ಸ್ಪರ್ಧಿಸಿದ್ದೇನೆ. ಇನ್ನೆಷ್ಟು ಬಾರಿ ಸ್ಪರ್ಧಿಸಬೇಕು? ಯುವ ಪೀಳಿಗೆಗೆ ಅವಕಾಶ ನೀಡಬೇಕಾಗಿದೆ’ ಎಂದು ಹೇಳಿದ್ದರು.
ಭಾರತದ ರಾಜಕೀಯದ ‘ಭೀಷ್ಮ’ ಎಂದೇ ಕರೆಯಲ್ಪಡುವ ಶರದ್ ಪವಾರ್ ಅವರು ಸಕ್ರಿಯ ರಾಜಕೀಯದಿಂದ ಕ್ರಮೇಣ ಹಿಂದೆ ಸರಿಯುವ ಬಗ್ಗೆಯೂ ಉಲ್ಲೇಖಿಸಿದ್ದರು. ಮೊದಲ 30 ವರ್ಷಗಳ ಕಾಲ ರಾಜ್ಯ ರಾಜಕಾರಣದಲ್ಲೇ ಇದ್ದೆ. ಮುಂದಿನ 25ರಿಂದ 30 ವರ್ಷಗಳ ಕಾಲ ಅಜಿತ್ ದಾದಾ ಎಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ಈಗ, ಹೊಸಬರಿಗೆ ನಾಯಕತ್ವ ವಹಿಸಬೇಕಿದೆ ಎಂದಿದ್ದರು.
2024ರ ಲೋಕಸಭಾ ಚುನಾವಣೆಯಲ್ಲಿ ಅಜಿತ್ ಪವಾರ್ ಅವರ ಪಕ್ಷವು ಕೇವಲ ಒಂದು ಸ್ಥಾನ ಗೆಲ್ಲುವ ಮೂಲಕ ತೀವ್ರ ಹಿನ್ನಡೆ ಅನುಭವಿಸಿತ್ತು. ಶರದ್ ಪವಾರ್ ಬಣ 10 ಕ್ಷೇತ್ರಗಳಲ್ಲಿ ಸ್ಫರ್ಧಿಸಿ ಎಂಟರಲ್ಲಿ ಗೆದ್ದಿತ್ತು. 5 ತಿಂಗಳ ನಂತರ, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡು ಒಟ್ಟು 41 ಸ್ಥಾನಗಳನ್ನು ಗೆಲ್ಲುವ ಮೂಲಕ ಪವಾರ್ ಟೀಕಾಕಾರರ ಬಾಯಿ ಮುಚ್ಚಿಸಿದ್ದರು. ಇತ್ತ ಶರದ್ ಪವಾರ್ ಬಣ ಕೇವಲ 10 ಸ್ಥಾನಗಳನ್ನು ಗೆದ್ದುಕೊಂಡಿತ್ತು.
ಈಚೆಗೆ ನಡೆದ ಪುಣೆ ನಗರ ಪಾಲಿಕೆ ಚುನಾವಣೆಯಲ್ಲಿ ಎನ್‌ಸಿಪಿಯ ಎರಡು ಬಣಗಳು ಒಟ್ಟಾಗಿ ಸ್ಫರ್ಧಿಸಿದ್ದವು. ಆದರೆ, ನಿರೀಕ್ಷಿತ ಫಲಿತಾಂಶ ಬಂದಿರಲಿಲ್ಲ. ಆದರೂ ಧೃತಿಗೆಡದ ನಾಯಕರು ಮುಂದಿನ ಜಿಲ್ಲಾ ಪರಿಷತ್ ಮತ್ತು ಪಂಚಾಯತ್ ಸಮಿತಿ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸಲು ನಿರ್ಧರಿಸಿದ್ದವು. ಈ ಎಲ್ಲಾ ಬೆಳವಣಿಗೆಗಳಿಂದ ಎನ್‌ಸಿಪಿಯ ಎರಡು ಬಣಗಳು ವಿಲೀನವಾಗಬಹುದು ಎಂಬ ಮಾತುಗಳು ಕೇಳಿಬಂದಿದ್ದವು.
‘2023ರ ಜೂನ್-ಜುಲೈನಲ್ಲಿ ನಡೆದ ಬೆಳವಣಿಗೆಗಳು, 2024ರ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳ ನಂತರ ಪವಾರ್ ಕುಟುಂಬ ಮತ್ತು ಪಕ್ಷದೊಳಗೆ ಎಲ್ಲವೂ ಬದಲಾಯಿತು. ಕಳೆದ ಆರು ತಿಂಗಳಲ್ಲಿ ಮತ್ತೆ ಒಂದಾಗಲು ಗಂಭೀರ ಪ್ರಯತ್ನಗಳು ನಡೆದವು. ಕುಟುಂಬಸ್ಥರು ಮೊದಲಿನಂತೆ ಒಟ್ಟಿಗೆ ನಿಲ್ಲಲು ನಿರ್ಧರಿಸಿದ್ದರು. ಎರಡೂ ಕಡೆಯ ಪಕ್ಷದ ಕಾರ್ಯಕರ್ತರು ಸಹ ಒಗ್ಗಟ್ಟನ್ನು ಬಯಸಿದ್ದರು. ಇದೀಗ ಅಜಿತ್ ಪವಾರ್ ಹಠಾತ್ ಅವರ ನಿಧನ ನಮಗೆಲ್ಲರಿಗೂ ಭಾರಿ ಆಘಾತ ತರಿಸಿದೆ’ ಎಂದು ಎರಡೂ ಬಣಗಳಿಗೆ ಹತ್ತಿರವಿರುವ ಪವಾರ್ ಕುಟುಂಬದ ಆಪ್ತರೊಬ್ಬರು ಹೇಳಿದ್ದಾರೆ.
ಎನ್‌ಸಿಪಿ (ಎಸ್‌ಪಿ) ಬಣ: ಶರದ್ ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ ಅವರು ಎನ್‌ಸಿಪಿ (ಎಸ್‌ಪಿ) ಬಣದ ಕಾರ್ಯಾಧ್ಯಕ್ಷರಾಗಿದ್ದಾರೆ. ಅವರ ಸೋದರಳಿಯ ರೋಹಿತ್ ಪವಾರ್, ಪ್ರಸ್ತುತ ರಾಜ್ಯ ಅಧ್ಯಕ್ಷ ಶಶಿಕಾಂತ್ ಶಿಂದೆ, ಜಯಂತ್ ಪಾಟೀಲ್ ಅವರಂತಹ ನಾಯಕರು ಪಕ್ಷವನ್ನು ಮುನ್ನಡೆಸುತ್ತಿದ್ದಾರೆ.
ಎನ್‌ಸಿಪಿ ಬಣ: ಪ್ರಫುಲ್ ಪಟೇಲ್ ಅವರು ಎನ್‌ಸಿಪಿಯ ಕಾರ್ಯಾಧ್ಯಕ್ಷರಾಗಿದ್ದರೆ, ರಾಯಗಢ ಸಂಸದ ಸುನಿಲ್ ತತ್ಕರೆ ಅವರು ರಾಜ್ಯ ಘಟಕದ ಅಧ್ಯಕ್ಷರಾಗಿದ್ದಾರೆ. ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ರಾಜ್ಯಸಭಾ ಸದಸ್ಯರಾಗಿದ್ದಾರೆ. ಅಜಿತ್ ಪುತ್ರರಾದ ಪಾರ್ಥ ಮತ್ತು ಜಯ್ ರಾಜಕೀಯದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿಲ್ಲ.
2019ರಲ್ಲಿ ಪಾರ್ಥ ಅವರು ಚುನಾವಣಾ ರಾಜಕೀಯಕ್ಕೆ ಪ್ರವೇಶಿಸಿದ್ದರು. ಮಾವಲ್ ಕ್ಷೇತ್ರದಿಂದ ಲೋಕಸಭೆ ಚುನಾವಣೆ ಸ್ಫರ್ಧಿಸಿ ಸೋಲು ಕಂಡಿದ್ದರು. ಜಯ್ ಇನ್ನಷ್ಟೇ ರಾಜಕೀಯ ರಂಗಪ್ರವೇಶ ಮಾಡಬೇಕಿದೆ.
ಅಜಿತ್ ಪವಾರ್ ನಿಧನದ ಹಿನ್ನೆಲೆ ಪಾರ್ಥ ಅಥವಾ ಜಯ್ ಇಬ್ಬರಲ್ಲಿ ಒಬ್ಬರು ಪಕ್ಷದ ನಾಯಕತ್ವ ವಹಿಸಿಕೊಳ್ಳಬಹುದು. ಸದ್ಯಕ್ಕೆ, ಸುನೇತ್ರಾ ಮತ್ತು ತತ್ಕರೆ ಅವರೊಂದಿಗೆ ಪಕ್ಷದ ವ್ಯವಹಾರಗಳನ್ನು ನೋಡಿಕೊಳ್ಳುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಸದ್ಯ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಯಲ್ಲಿ ಛಗನ್ ಭುಜಬಲ್, ಹಸನ್ ಮುಶ್ರೀಫ್, ದತ್ತಾತ್ರೇಯ ಭರ್ನೆ, ಮಾಣಿಕರಾವ್ ಕೊಕಾಟೆ, ಧನಂಜಯ್ ಮುಂಡೆ ಸೇರಿದಂತೆ ಅನುಭವಿ ನಾಯಕರ ದಂಡೇ ಇದೆ.
ಹಣಕಾಸು, ಯೋಜನೆ ಮತ್ತು ಅಬಕಾರಿ ಖಾತೆಗಳನ್ನು ಹೊಂದಿದ್ದ ಅಜಿತ್ ಪವಾರ್ ಬದಲಿಗೆ ಹೊಸ ಉಪಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬುದು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ನೇತೃತ್ವದ ಮಹಾ ಯುತಿ ಸರ್ಕಾರನ್ನು ಕಾಡುತ್ತಿರುವ ಮುಖ್ಯ ಪ್ರಶ್ನೆಯಾಗಿದೆ.
ಫೆಬ್ರುವರಿ 23ರಿಂದ 2026–27ನೇ ಸಾಲಿನ ಬಜೆಟ್ ಅಧಿವೇಶನ ಆರಂಭವಾಗಲಿದೆ. ಅಜಿತ್ ಪವಾರ್ ಮಂಡಿಸಬೇಕಿದ್ದ ಬಜೆಟ್ ಅನ್ನು ಯಾರು ಮಂಡಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.