
ಶತ್ರುಘ್ನ ಸಿನ್ಹಾ ಮತ್ತು ನಿತೀಶ್ ಕುಮಾರ್
ಕೋಲ್ಕತ್ತ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದಕ್ಕಾಗಿ ಜೆಡಿಯು ನಾಯಕ ನಿತೀಶ್ ಕುಮಾರ್ ಮತ್ತು ಎನ್‌ಡಿಎ ಮಿತ್ರಪಕ್ಷಗಳನ್ನು ತೃಣಮೂಲ ಕಾಂಗ್ರೆಸ್ ಪಕ್ಷದ (ಟಿಎಂಸಿ) ಸಂಸದ ಶತ್ರುಘ್ನ ಸಿನ್ಹಾ ಅಭಿನಂದಿಸಿದ್ದಾರೆ.
‘ನಮ್ಮ ಬಿಹಾರದ ಜನರು ಚುನಾವಣೆಯಲ್ಲಿ ತಮ್ಮ ಅಮೂಲ್ಯವಾದ ಮತ ಚಲಾಯಿಸುವ ಮೂಲಕ ಅರ್ಹವಾದ ಸರ್ಕಾರವನ್ನು ಆಯ್ಕೆ ಮಾಡಿಕೊಂಡಿದ್ದಕ್ಕಾಗಿ ಮತ್ತು ಅತ್ಯಂತ ಜನಪ್ರಿಯ, ಸಜ್ಜನ ರಾಜಕಾರಣಿ ಹಾಗೂ ಯಶಸ್ವಿ ಮುಖ್ಯಮಂತ್ರಿಯಾಗಿಯಾದ ನಿತೇಶ್ ಕುಮಾರ್ ಅವರ ನಾಯಕತ್ವವನ್ನು ಬೆಂಬಲಿಸಿದ್ದಕ್ಕಾಗಿ ಎಲ್ಲರಿಗೂ ಅಭಿನಂದನೆಗಳು’ ಎಂದು ಶತ್ರುಘ್ನ ಸಿನ್ಹಾ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಜನರ ನಿರೀಕ್ಷೆಗಳಿಗೆ ತಕ್ಕಂತೆ ಅಡಳಿತ ನಡೆಸಲು ನಿತೇಶ್ ಅವರಿಗೆ ದೇವರು ಆಶೀರ್ವದಿಸಲಿ. ಅದೇ ರೀತಿ ಎನ್‌ಡಿಎ ಮಿತ್ರ ಪಕ್ಷಗಳಿಗೆ ಅಭಿನಂದನೆಗಳು. ಜೈ ಬಿಹಾರ! ಜೈ ಹಿಂದ್!’ ಎಂದು ಸಿನ್ಹಾ ಬರೆದುಕೊಂಡಿದ್ದಾರೆ.
ಸಿನ್ಹಾ ಅವರು ನಿತೇಶ್ ಅವರನ್ನು ಕೊಂಡಾಡಿರುವುದು ರಾಜಕೀಯ ವಲಯಗಳಲ್ಲಿ ಅಚ್ಚರಿ ಮೂಡಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಟಿಎಂಸಿ, ಇದು ಸಿನ್ಹಾ ಅವರು ಬಿಹಾರ ಮೂಲದವರಾಗಿದ್ದು, ವೈಯಕ್ತಿಕ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಿದೆ.
ಪ್ರಧಾನಿ ನರೇಂದ್ರ ಮೋದಿ–ನಿತೀಶ್ ಕುಮಾರ್ ಜೋಡಿಯ ಪ್ರಭಾವಳಿಯ ನೆರವಿನಿಂದ ಎನ್‌ಡಿಎ ಮೈತ್ರಿಕೂಟವು 243 ಕ್ಷೇತ್ರಗಳ ಪೈಕಿ 203 ಸ್ಥಾನಗಳನ್ನು ಗೆದ್ದು ಬೀಗಿದೆ. ಇತ್ತ ಕಾಂಗ್ರೆಸ್–ಆರ್‌ಜೆಡಿ ನೇತೃತ್ವದ ‘ಮಹಾಘಟಬಂಧನ್’ 34 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಷ್ಟೇ ಶಕ್ತವಾಗಿದೆ.
ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಪಾಳಯದ ಅಭೂತಪೂರ್ವ ಜಯದಿಂದ ಬೀಗುತ್ತಿರುವ ನಿತೀಶ್ ಕುಮಾರ್ ಅವರು ನವೆಂಬರ್ 19 ಅಥವಾ 20ರಂದು 10ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.