
ಓಂ ಬಿರ್ಲಾ
ನವದೆಹಲಿ: ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಪದಚ್ಯುತಗೊಳಿಸುವುದಕ್ಕೆ ಸಂಬಂಧಿಸಿ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಸಲ್ಲಿಸಿರುವ ನೋಟಿಸ್‌ನಲ್ಲಿ ಹಲವು ನ್ಯೂನತೆಗಳು ಕಂಡುಬಂದಿವೆ ಎಂದು ವರದಿಯಾಗಿದೆ.
ಕಳೆದ ವಾರ ಲೋಕಸಭೆ ಕಲಾಪದ ವೇಳೆಯಲ್ಲಿನ ಕೆಲ ಘಟನೆಗಳನ್ನು ಉಲ್ಲೇಖಿಸುವಾಗ 2025 ಎಂದು ಬರೆಯಲಾಗಿತ್ತು. ಇದು ಗೊತ್ತಾಗುತ್ತಿದ್ದಂತೆಯೇ, ಹೊಸದಾಗಿ ನೋಟಿಸ್ ಸಿದ್ಧಪಡಿಸಿ ಸಲ್ಲಿಸಲಾಗಿತ್ತು. ಈ ನೋಟಿಸ್‌ನಲ್ಲೂ 2025ರ ಫೆಬ್ರುವರಿಯಲ್ಲಿ ನಡೆದಿದ್ದ ಘಟನೆಗಳನ್ನು ನಾಲ್ಕು ಬಾರಿ ಉಲ್ಲೇಖಿಸಲಾಗಿದೆ ಎಂದು ವರದಿ ತಿಳಿಸಿದೆ.
ಆದಾಗ್ಯೂ, ನೋಟಿಸ್‌ನಲ್ಲಿರುವ ನ್ಯೂನತೆಗಳನ್ನು ಸರಿಪಡಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಸ್ಪೀಕರ್ ಸಚಿವಾಲಯಕ್ಕೆ ನಿರ್ದೇಶನ ನೀಡಿದ್ದಾರೆ. ನಿಯಮಗಳಿಗೆ ಅನುಸಾರವಾಗಿ ತ್ವರಿತ ಕ್ರಮ ಕೈಗೊಳ್ಳುವಂತೆ ಓಂ ಬಿರ್ಲಾ ಆದೇಶಿಸಿದ್ದಾರೆ.
ಪರಿಷ್ಕೃತ ನೋಟಿಸ್ ಸ್ವೀಕರಿಸಿದ ನಂತರ ನಿಗದಿತ ನಿಯಮಗಳ ಪ್ರಕಾರ ಅದನ್ನು ಪರಿಶೀಲಿಸಲಾಗುತ್ತದೆ. ಮಾರ್ಚ್ 9ರಿಂದ ಎರಡನೇ ಹಂತದ ಬಜೆಟ್ ಅಧಿವೇಶನ ಆರಂಭವಾಗುತ್ತದೆ. ಬಳಿಕ ಬಿರ್ಲಾ ಅವರ ಪದಚ್ಯುತಿ ನೋಟಿಸ್ ಅನ್ನು ಪಟ್ಟಿ ಮಾಡಲಾಗುತ್ತದೆ ಎಂದು ಲೋಕಸಭೆ ಸಚಿವಾಲಯದ ಮೂಲಗಳು ತಿಳಿಸಿವೆ.
ಜನರಲ್ ಎಂ.ಎನ್. ನರವಣೆ ಪುಸ್ತಕ ಸೇರಿದಂತೆ ವಿವಾದಾತ್ಮಕ ವಿಷಯಗಳನ್ನು ಪ್ರಸ್ತಾಪಿಸಲು ತಮಗೆ ಅವಕಾಶ ನೀಡುವ ಕುರಿತು ಸ್ಪೀಕರ್ ಹಾಗೂ ಬಿಜೆಪಿ ನಡುವೆ ಒಪ್ಪಂದ ಆಗಿದೆ ಎಂದು ಲೋಕಸಭೆಯಲ್ಲಿ ರಾಹುಲ್ ಗಾಂಧಿ ಆರೋಪಿಸಿದ್ದರು.
ವಿಪಕ್ಷ ನಾಯಕನ ಹೇಳಿಕೆಯನ್ನು ಬಿಜೆಪಿ ತಳ್ಳಿಹಾಕಿದ್ದು, ಅಂತಹ ಯಾವುದೇ ಒಪ್ಪಂದ ಆಗಿಲ್ಲ ಎಂದು ಸ್ಪಷ್ಟಪಡಿಸಿದೆ. ಇನ್ನೊಂದೆಡೆ, ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರದ್ದು ಪಕ್ಷಪಾತದ ಧೋರಣೆ ಎಂದು ಆರೋಪಿಸಿರುವ ಕಾಂಗ್ರೆಸ್, ಅವರನ್ನು ಪದಚ್ಯುತಗೊಳಿಸುವಂತೆ ಸಹಿ ಸಂಗ್ರಹಿಸಿತ್ತು.
ಸರಳ ಬಹುಮತದೊಂದಿಗೆ ಸದನ ನಿರ್ಣಯ ಅನುಮೋದಿಸುವ ಮೂಲಕ ಸ್ಪೀಕರ್ ಅವರನ್ನು ಪದಚ್ಯುತಗೊಳಿಸುವುದಕ್ಕೆ ಸಂವಿಧಾನದ 94(ಸಿ) ವಿಧಿ ಅನ್ವಯ ಅವಕಾಶ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.