ಲೋಕಸಭೆ ಅಧಿವೇಶನ
ಪ್ರಾತಿನಿಧಿಕ ಚಿತ್ರ
ನವದೆಹಲಿ: ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ, ‘ಒಂದು ರಾಷ್ಟ್ರ, ಒಂದೇ ಚುನಾವಣೆ’ಗೆ ಸಂಬಂಧಿತ ಎರಡು ಪ್ರತ್ಯೇಕ ಮಸೂದೆಗಳನ್ನು ಇಂದು (ಮಂಗಳವಾರ) ಲೋಕಸಭೆಯಲ್ಲಿ ಮಂಡಿಸಲಿದೆ.
ಲೋಕಸಭೆ ಕಲಾಪ ಕಾರ್ಯಸೂಚಿಯಲ್ಲಿ ಈ ಅಂಶ ಸೇರ್ಪಡೆಗೊಂಡಿದೆ. ಮಸೂದೆಗೆ ಸಮ್ಮತಿ ನೀಡುವ ಮೂಲಕ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಂಪುಟ, ಈ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಇಟ್ಟಿತ್ತು.
ಕೇಂದ್ರ ಕಾನೂನು ಸಚಿವ ಅರುಣ್ ರಾಮ್ ಮೇಘವಾಲ್ ಅವರು ‘ಸಂವಿಧಾನ (129ನೇ ತಿದ್ದುಪಡಿ) ಮಸೂದೆ ಹಾಗೂ ‘ಕೇಂದ್ರ ಪ್ರಾಂತ್ಯವಾರು ಕಾಯ್ದೆಗಳು (ತಿದ್ದುಪಡಿ)’ ಮಸೂದೆ ಮಂಡಿಸಲಿದ್ದಾರೆ.
ಲೋಕಸಭೆಯಲ್ಲಿ ಮಂಡನೆಯಾಗಲಿರುವ ಹೊಸ ಮಸೂದೆಗಳ ಕುರಿತು ಚರ್ಚೆ ನಡೆಯುವ ಸಂಭವವಿದ್ದು, ತನ್ನ ಸಂಸದರ ಕಡ್ಡಾಯ ಹಾಜರಾತಿಗೆ ಬಿಜೆಪಿ ಮತ್ತು ಕಾಂಗ್ರೆಸ್ ವಿಪ್ ಜಾರಿ ಮಾಡಿವೆ.
ಮೇಘವಾಲ್ ಅವರು ಮಸೂದೆಗಳನ್ನು ಸಂಸತ್ತಿನಲ್ಲಿ ಮಂಡಿಸಿದ ನಂತರ ಹೆಚ್ಚಿನ ಸಮಾಲೋಚನೆ ನಡೆಸುವಂತೆ ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ) ಸೂಚಿಸುವಂತೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಮನವಿ ಮಾಡುವ ಸಾಧ್ಯತೆಯಿದೆ.
ವಿಧಾನಸಭೆ ಅಸ್ತಿತ್ವದಲ್ಲಿರುವ ಮೂರು ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿರುವ ಕಾಯ್ದೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಸಂಬಂಧಿಸಿದ ಮಸೂದೆಗೆ ಒಗ್ಗೂಡಿಸುವ ಒಂದು ಸರಳ ಮಸೂದೆ ಹಾಗೂ ಸಂವಿಧಾನ (ತಿದ್ದುಪಡಿ) ಮಸೂದೆಗಳಿಗೆ ಕೇಂದ್ರ ಸಂಪುಟ ಈಚೆಗೆ ಅನುಮೋದನೆ ನೀಡಿತ್ತು.
ಉದ್ದೇಶಿತ ತಿದ್ದುಪಡಿ ಮಸೂದೆಗಳು ದೇಶದಲ್ಲಿ ಲೋಕಸಭೆ ಹಾಗೂ ವಿವಿಧ ರಾಜ್ಯಗಳ ವಿಧಾನಸಭೆಗೆ ಏಕಕಾಲದಲ್ಲಿ ಚುನಾವಣೆಯನ್ನು ನಡೆಸಲು ಅವಕಾಶ ಕಲ್ಪಿಸಲಿವೆ.
ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೇತೃತ್ವದ ಸಮಿತಿ ರಾಷ್ಟ್ರೀಯ, ರಾಜ್ಯ ಚುನಾವಣೆಗಳ ಜೊತೆಗೆ ಸ್ಥಳೀಯ ಸಂಸ್ಥೆಗಳಿಗೂ ಚುನಾವಣೆ ನಡೆಸಲು ಪ್ರಸ್ತಾಪ ಮಾಡಿತ್ತು. ಆದರೆ, ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಅಂಶವನ್ನು ‘ಸದ್ಯಕ್ಕೆ’ ಪರಿಗಣಿಸದಿರಲು ಸಂಪುಟ ತೀರ್ಮಾನಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.