
ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ
ಕೃಪೆ: ಪಿಟಿಐ
ನವದೆಹಲಿ: ಕೇರಳದ ಮಾಜಿ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್, ಹಿಂದುಳಿದ ವರ್ಗಗಳ ನಾಯಕ ವೆಲ್ಲಪಳ್ಳಿ ನಟೇಶನ್, ನಟ ಮಮ್ಮುಟಿ ಸೇರಿದಂತೆ ಒಟ್ಟು 131 ಸಾಧಕರಿಗೆ ಕೇಂದ್ರ ಸರ್ಕಾರವು ಗಣರಾಜ್ಯೋತ್ಸವದ ಮುನ್ನಾದಿನ (ಭಾನುವಾರ) ಪದ್ಮ ಪ್ರಶಸ್ತಿಗಳನ್ನು ಘೋಷಿಸಿದೆ. ಇದರ ಹಿಂದೆ, ವಿವಿಧ ರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆಗಳನ್ನು ಗೆಲ್ಲುವ ಲೆಕ್ಕಾಚಾರವೂ ಇದೆ ಎನ್ನಲಾಗುತ್ತಿದೆ.
131 ಸಾಧಕರ ಪೈಕಿ, ಐವರಿಗೆ ಪದ್ಮ ವಿಭೂಷಣ, 13 ಮಂದಿಗೆ ಪದ್ಮ ಭೂಷಣ ಹಾಗೂ ಉಳಿದ 113 ಮಂದಿಗೆ ಪದ್ಮಶ್ರೀ ಪ್ರಕಟಿಸಲಾಗಿದೆ.
ಶೀಘ್ರದಲ್ಲೇ ಚುನಾವಣೆ ನಡೆಯಲಿರುವ ತಮಿಳುನಾಡಿನ ಒಟ್ಟು 13 ಮಂದಿ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿದ್ದಾರೆ. ಪಶ್ಚಿಮ ಬಂಗಾಳದ 11 ಮಂದಿ, ಅಸ್ಸಾಂನ ಐವರು, ಪುದುಚೇರಿಯ ಒಬ್ಬರು ಹಾಗೂ ಕೇರಳದ ಎಂಟು ಸಾಧಕರಿಗೆ ಪ್ರಶಸ್ತಿ ಘೋಷಣೆಯಾಗಿದೆ.
ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳದ ವಿಧಾನಸಭೆಗಳಿಗೆ ಇದೇ ವರ್ಷ ಏಪ್ರಿಲ್–ಮೇ ವೇಳೆಗೆ ಚುನಾವಣೆ ನಡೆಯಲಿದೆ.
ಕೇರಳದ ಸಿಪಿಐ(ಎಂ) ದಿಗ್ಗಜ, ದಿವಂಗತ ಅಚ್ಯುತಾನಂದನ್ ಹಾಗೂ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ.ಟಿ. ಥಾಮಸ್, ಕೇರಳದಲ್ಲಿ ಬಿಜೆಪಿ ಮುಖವಾಣಿ ಎನಿಸಿರುವ 'ಜನ್ಮಭೂಮಿ'ಯ ಮಾಜಿ ಸಂಪಾದಕ ಪಿ. ನಾರಾಯಣನ್ ಅವರಿಗೆ ದೇಶದ ಎರಡನೇ ಅತ್ಯುನ್ನತ ನಾಗರಿಕ ಗೌರವ 'ಪದ್ಮ ವಿಭೂಷಣ' ಘೋಷಣೆಯಾಗಿದೆ. ನಟ ಧರ್ಮೇಂದ್ರ, ತಮಿಳುನಾಡಿನ ಹಿಂದೂಸ್ಥಾನಿ ಪಿಟೀಲು ವಾದಕ ಎನ್. ರಾಜಮ್ ಅವರು ಈ ಗೌರವಕ್ಕೆ ಭಾಜನರಾದ ಇನ್ನಿಬ್ಬರು.
ಎಡಪಂಥೀಯ ಬೆಂಬಲಿಗ ಎನಿಸಿರುವ ಮಮ್ಮುಟಿ, ಈಳವ ಸಮುದಾಯದ ಸಂಘಟನೆ ಎಸ್‌ಎನ್‌ಡಿಪಿ ಮುನ್ನಡೆಸುತ್ತಿರುವ ನಟೇಶನ್ ಅವರು ಪದ್ಮ ಭೂಷಣ ಪುರಸ್ಕೃತರ ಪಟ್ಟಿಯಲ್ಲಿರುವ ಮಲಯಾಳಿಗರು. ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ, ದಿವಂಗದ ಶಿಬು ಸೊರೇನ್, ಬಿಜೆಪಿ ನಾಯಕರಾಗಿದ್ದ ದಿವಂಗದ ವಿ.ಕೆ. ಮಲ್ಹೋತ್ರಾ, ಉತ್ತರಾಖಂಡ್‌ನ ಮಾಜಿ ಸಿಎಂ ಬಿಎಸ್ ಕೋಶಿಯಾರಿ, ಜಾಹೀರಾತು ಕ್ಷೇತ್ರದ ದಿಗ್ಗಜ ಪಿಯೂಷ್ ಪಾಂಡೆ, ಗಾಯಕ ಅಲ್ಕಾ ಯಾಗ್ನಿಕ್ ಮತ್ತು ಮಾಜಿ ಟೆನ್ನಿಸ್ ಪಟು ವಿಜಯ್ ಅಮೃತರಾಜ್ ಅವರಿಗೂ ಈ ಪ್ರಶಸ್ತಿ ಘೋಷಣೆಯಾಗಿದೆ.
ಸಂಘ ಪರಿವಾರದ ಟೀಕಾಕಾರರಿಗೆ ಪದ್ಮ ವಿಭೂಷಣ!
ಈ ಬಾರಿ ಪದ್ಮ ವಿಭೂಷಣ ಘೋಷಣೆಯಾಗಿರುವ ಐವರಲ್ಲಿ ಮೂವರು ಮಲಯಾಳಿಗಳು ಎಂಬುದು ವಿಶೇಷ. ಅದರಲ್ಲೂ, ಸಂಘ ಪರಿವಾರದ ಕಟು ಟೀಕಾಕಾರರಾಗಿದ್ದ ಅಚ್ಯುತಾನಂದನ್ ಅವರನ್ನು ಪ್ರಶಸ್ತಿಗೆ ಪರಿಗಣಿಸಿರುವುದು ಗಮನಿಸಬೇಕಾದ ಸಂಗತಿ. ಕೇಂದ್ರದ ಈ ಕ್ರಮವು, ಸಿಪಿಐ(ಎಂ) ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆ ಇದೆ. ಅವರ ಕುಟುಂಬವು ಪ್ರಶಸ್ತಿಯನ್ನು ಸ್ವಾಗತಿಸಿದೆ. ಆದರೆ, ಇದೇ ಪಕ್ಷದ ಪ್ರಮುಖ ನಾಯಕರಾಗಿದ್ದ, ಪಶ್ಚಿಮ ಬಂಗಾಳದ ಮಾಜಿ ಸಿಎಂ ಬುದ್ಧದೇವ್ ಭಟ್ಟಾಚಾರ್ಯ ಅವರು 2022ರಲ್ಲಿ ಪ್ರಶಸ್ತಿಯನ್ನು ನಿರಾಕರಿಸಿದ್ದರು.
ಇದೊಂದು 'ದೊಡ್ಡ ಗೌರವ' ಎಂದಿರುವ ಅಚ್ಯುತಾನಂದನ್ ಅವರ ಪುತ್ರ, ಈ ಹಿಂದೆ ಭಟ್ಟಾಚಾರ್ಯ ಅವರು ಪ್ರಶಸ್ತಿ ನಿರಾಕರಿಸಿರುವ ವಿಚಾರ ಗೊತ್ತಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ನಟೇಶನ್ ಅವರಿಗೆ ಪದ್ಮಭೂಷಣ ನೀಡಿರುವುದರಿಂದ, ವಿಧಾನಸಭೆ ಚುನಾವಣೆ ಹೊತ್ತಿಗೆ ಈಳವ ಸಮುದಾಯವು ಸಿಪಿಐ(ಎಂ) ಬೆಂಬಲಕ್ಕೆ ನಿಲ್ಲಲಿದೆ ಎಂಬ ಲೆಕ್ಕಾಚಾರವಿದೆ. ನಟೇಶನ್ ಪುತ್ರ ತುಷಾರ್ ವೆಲ್ಲಪ್ಪಳ್ಳಿ ಅವರು ಕೇರಳದಲ್ಲಿ ಬಿಜೆಪಿ ಮಿತ್ರಪಕ್ಷವಾಗಿರುವ ಬಿಜೆಡಿಎಸ್‌ನ ಮುಖ್ಯಸ್ಥರಾಗಿದ್ದಾರೆ.
ಮಲಯಾಳಂ ಚಿತ್ರರಂಗದ ಸೂಪರ್‌ಸ್ಟಾರ್ ಮೋಹನ್ ಲಾಲ್ ಅವರಿಗೆ ಇತ್ತೀಚೆಗೆ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಲಾಗಿತ್ತು. ಕೆಲವೇ ತಿಂಗಳುಗಳ ಅಂತರದಲ್ಲಿ ಮಮ್ಮುಟಿ ಅವರಿಗೆ ಪದ್ಮ ಭೂಷಣ ನೀಡಲಾಗಿದೆ.
ಅಚ್ಚರಿಯ ಆಯ್ಕೆಗೆ ಹೆಸರುವಾಸಿ
ಪ್ರಶಸ್ತಿಗೆ ಅಚ್ಚರಿಯ ಹೆಸರುಗಳನ್ನು ಘೋಷಿಸುವ ಮೂಲಕ ಎದುರಾಳಿಗಳಿಗೆ ರಾಜಕೀಯ ಸಂದೇಶ ಕಳುಹಿಸುವುದಕ್ಕೆ ಆಡಳಿತಾರೂಡ ಬಿಜೆಪಿ ಹೆಸರುವಾಸಿಯಾಗಿದೆ. ಈ ಹಿಂದೆ ಭೂಪೆನ್ ಹಜಾರಿಕಾ, ಚರಣ್ ಸಿಂಗ್ ಹಾಗೂ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ಮತ್ತು ಶರದ್ ಪವಾರ್ ಅವರಂತಹ ಬದ್ಧ ಎದುರಾಳಿಗೇ ಪದ್ಮ ಪ್ರಶಸ್ತಿ ನೀಡಿರುವುದು ತಾಜಾ ನಿದರ್ಶನಗಳಾಗಿವೆ.
ಅದೇ ರೀತಿ, ವೀರಪ್ಪನ್ ಸೆರೆ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಕೆ. ವಿಜಯ್‌ಕುಮಾರ್, ಹಿಂದುತ್ವ ಭಯೋತ್ಪಾದನೆಯ ಆರೋಪಗಳನ್ನು ಮಾಡಿದ್ದ ಆರ್‌ವಿಎಸ್ ಮಣಿ ಅವರಿಗೂ ಪ್ರಶಸ್ತಿ ನೀಡಲಾಗಿದೆ.
ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ಮಾಜಿ ಮುಖ್ಯಸ್ಥ ಮತ್ತು ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ಉಪಕುಲಪತಿ ಎಂ. ಜಗದೀಶ್ ಕುಮಾರ್, ನಟ ಆರ್. ಮಾಧವನ್ ಮತ್ತು ಪ್ರಸಾರ ಭಾರತಿ ಸಿಇಒ ಶಶಿ ಶೇಖರ್ ವೆಂಪತಿ, ನಟ, ದಿವಂಗತ ಸತೀಶ್ ಶಾ ಅವರನ್ನು ಅವರನ್ನು ಈ ಬಾರಿ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಉದ್ಯಮ ವಲಯದ ನಾಲ್ವರಿಗೆ ಪ್ರಶಸ್ತಿಗಳು ಲಭಿಸಿವೆ. ಉದ್ಯಮಿ ಉದಯ್ ಕೊಟಾಕ್ ಅವರಿಗೆ ಪದ್ಮ ವಿಭೂಷಣ ದೊರೆತಿದೆ. ಟಿಟಿಕೆ ಗ್ರೂಪ್‌ನ ದಿವಂಗತ ಟಿಟಿ ಜಗನ್ನಾಥನ್, ಸೋಲಾರ್ ಇಂಡ್ರಸ್ಟ್ರೀಸ್ ಲಿಮಿಡೆಟ್‌ನ ಸತ್ಯನಾರಾಯಣನ್ ನುವಾಲ್ ಮತ್ತು ದಾಸ್ ಆಫ್‌ಶೋರೆ ಎಂಜಿನಿಯರಿಂಗ್ ಪ್ರೈ. ಲಿಮಿಟೆಡ್‌ನ ಅಶೋಕ್ ಖಾಡೆಗೆ ಪದ್ಮಶ್ರೀ ಒಲಿದಿದೆ.
ಭಾರತೀಯ ಕುಸ್ತಿಗೆ ಹೊಸ ಹುರುಪು ನೀಡಿದ ದಿವಂಗತ ವ್ಲಾಡಿಮಿರ್ ಮೆವ್ಲಾಡಿಮಿರ್ ಮೆಸ್‌ತ್ವಿರಿಶ್ವಿಲಿ ಅವರು ಕ್ರೀಡಾ ಕ್ಷೇತ್ರದಿಂದ ಪದ್ಮಶ್ರೀ ಪಡೆದ ಸಾಧಕರ ಪಟ್ಟಿಯಲ್ಲಿದ್ದಾರೆ. ಉಳಿದಂತೆ ಟಿ20 ಕ್ರಿಕೆಟ್ ವಿಶ್ವಕಪ್ ಗೆದ್ದ ಭಾರತದ ಪುರುಷ ಹಾಗೂ ಮಹಿಳಾ ತಂಡಗಳನ್ನು ಮುನ್ನಡೆಸಿದ್ದ ರೋಹಿತ್ ಶರ್ಮಾ, ಹರ್ಮನ್‌ಪ್ರೀತ್ ಕೌರ್, ಹಾಕಿ ಗೋಲ್ ಕೀಪರ್ ಸವಿತಾ ಪೂನಿಯಾ, ಪ್ಯಾರಾ ಅಥ್ಲೀಟ್ ಪ್ರವೀಣ್ ಕುಮಾರ್ ಅವರು ವಿಜೇತರ ಲಿಸ್ಟ್‌ನಲ್ಲಿ ಸ್ಥಾನ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.