ಅಸಾದುದ್ಧೀನ್ ಓವೈಸಿ
ಪಿಟಿಐ
ನವದೆಹಲಿ: ಕಾಶ್ಮೀರದಲ್ಲಿ ನಡೆದ ಪಹಲ್ಗಾಮ್ ಉಗ್ರರ ದಾಳಿಯ ಬಳಿಕ ಭಾರತ-ಪಾಕ್ ನಡುವಿನ ಕ್ರಿಕೆಟ್ ಪಂದ್ಯ ವೀಕ್ಷಿಸಲು ನನ್ನ ಆತ್ಮಸಾಕ್ಷಿ ಒಪ್ಪುತ್ತಿಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಹಾಗೂ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಒವೈಸಿ ಹೇಳಿದ್ದಾರೆ.
ಲೋಕಸಭೆಯಲ್ಲಿ ‘ಆಪರೇಷನ್ ಸಿಂಧೂರ’ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಅವರು, ‘ಪಹಲ್ಗಾಮ್ ಹತ್ಯಾಕಾಂಡದಲ್ಲಿ ತಮ್ಮವರನ್ನು ಕಳೆದುಕೊಂಡ ಕುಟುಂಬಸ್ಥರಿಗೆ ದೂರವಾಣಿ ಕರೆ ಮಾಡಿ ನಾವು ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಮೂಲಕ ಸೇಡು ತೀರಿಸಿಕೊಂಡಿದ್ದೇವೆ ಎಂದು ಹೇಳುವ ಧೈರ್ಯ ಕೇಂದ್ರ ಸರ್ಕಾರಕ್ಕಿದೆಯೇ’ ಎಂದು ಪ್ರಶ್ನಿಸಿದ್ದಾರೆ.
‘ಮುಂದಿನ ತಿಂಗಳು ನಡೆಯಲಿರುವ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ–ಪಾಕ್ ತಂಡಗಳು ಪರಸ್ಪರ ಮುಖಾಮುಖಿಯಾಗಲಿದ್ದು, ನೀವು (ಬಿಜೆಪಿ ನಾಯಕರು) ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಲು ಎದುರು ನೋಡುತ್ತಿದ್ದೀರಿ’ ಎಂದು ಓವೈಸಿ ಅವರು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
‘ಪಾಕಿಸ್ತಾನ ಸೇನೆ, ಐಎಸ್ಐ ಭಾರತವನ್ನು ದುರ್ಬಲಗೊಳಿಸಲು ಬಯಸುತ್ತಿವೆ. ಆದರೆ, ಎದುರಾಳಿಗಳನ್ನು ದುರ್ಬಲಗೊಳಿಸಲು ಭಾರತ ಸಾಧ್ಯವಿರುವ ಎಲ್ಲವನ್ನೂ ಮಾಡಬೇಕಿದೆ. ಆದರೆ, ಬುಲ್ಡೋಜರ್‌ಗಳನ್ನು ಚಲಾಯಿಸುವ ಮೂಲಕ ದೇಶದಲ್ಲಿ ದ್ವೇಷವನ್ನು ಸೃಷ್ಟಿಸಲಾಗುತ್ತಿದೆ ಎಂದು ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಬಳಿಕ ಕೇಂದ್ರ ಸರ್ಕಾರವು ವಿದೇಶಕ್ಕೆ ಕಳುಹಿಸಿದ್ದ ನಿಯೋಗದ ಭಾಗವಾಗಿದ್ದ ಓವೈಸಿ ಬೇಸರ ಹೊರಹಾಕಿದ್ದಾರೆ.
‘ರಕ್ತ ಹಾಗೂ ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ. ಮಾತುಕತೆ ಮತ್ತು ಭಯೋತ್ಪಾದನೆ ಕೂಡ ಏಕಕಾಲದಲ್ಲಿ ಸಂಭವಿಸಲು ಸಾಧ್ಯವಿಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯನ್ನು ಉಲ್ಲೇಖಿಸಿದ ಓವೈಸಿ, ‘ಭಾರತವು ಪಾಕಿಸ್ತಾನದೊಂದಿಗೆ ವ್ಯಾಪಾರ ವಹಿವಾಟು ನಿಲ್ಲಿಸಿದೆ. ಆದರೆ, ಶೇ 80ರಷ್ಟು ನೀರು ಪಾಕಿಸ್ತಾನಕ್ಕೆ ಹರಿಯುತ್ತಿದೆ’ ಎಂದು ತಿಳಿಸಿದ್ದಾರೆ.
‘ಪಹಲ್ಗಾಮ್ ಉಗ್ರರ ದಾಳಿ ತೀವ್ರ ವಿಷಾದದ ಸಂಗತಿ. ದಾಳಿಯನ್ನು ಯಾರು ಮಾಡಿದರು? ನಮ್ಮಲ್ಲಿ 7.5 ಲಕ್ಷ ಸೇನಾ ಸಿಬ್ಬಂದಿ ಹಾಗೂ ಅರೆಸೈನಿಕ ಪಡೆಗಳು ಇದ್ದರೂ ಕೂಡ ನಾಲ್ಕು ಇಲಿಗಳು (ಉಗ್ರರು) ಎಲ್ಲಿಂದ ಬಂದರು?, ಭಾರತೀಯರನ್ನು ಯಾಕೆ ಕೊಂದರು? ಯಾರ ಮೇಲೆ ಹೊಣೆಗಾರಿಕೆ ಹೊರಿಸಲಾಗುತ್ತಿದೆ ಎಂದು ಓವೈಸಿ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.
ಪಹಲ್ಗಾಮ್ ದಾಳಿಗೆ ಲೆಫ್ಟಿನೆಂಟ್ ಗವರ್ನರ್ ಜವಾಬ್ದಾರರಾಗಿದ್ದರೆ, ಅವರನ್ನು ವಜಾಗೊಳಿಸಬೇಕು ಅಥವಾ ಪೊಲೀಸರು ಅಥವಾ ಗುಪ್ತಚರ ಬ್ಯೂರೊದವರು ಜವಾಬ್ದಾರರಾಗಿದ್ದರೆ, ಅವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಓವೈಸಿ ಆಗ್ರಹಿಸಿದ್ದಾರೆ.
‘ಶ್ವೇತಭವನದಲ್ಲಿ ಒಬ್ಬ ಬಿಳಿಯ ವ್ಯಕ್ತಿ (ಡೊನಾಲ್ಡ್ ಟ್ರಂಪ್) ಕದನ ವಿರಾಮವನ್ನು ಘೋಷಿಸಿದರು. ಇದು ದೀರ್ಘಕಾಲದ ಸ್ನೇಹವೇ? ನಾವು ಅಮೆರಿಕಕ್ಕೆ ಹೇಳಲು ಸಾಧ್ಯವಾಗುತ್ತಿಲ್ಲ. ವಿದೇಶಾಂಗ ಸಚಿವರು (ಜೈಶಂಕರ್) ಇತ್ತೀಚೆಗೆ ಚೀನಾಕ್ಕೆ ಭೇಟಿ ನೀಡಿದ್ದರು. ಆಗ ನೀವು (ಚೀನಿಯರು) ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಏಕೆ ಒದಗಿಸಿದ್ದೀರಿ ಎಂದು ಕೇಳಿದ್ದಾರೆಯೇ’ ಎಂದು ಓವೈಸಿ ಕುಟುಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.