ಸಂಜಯ್ ರಾವುತ್ ಮತ್ತು ನರೇಂದ್ರ ಮೋದಿ
–ಪಿಟಿಐ ಚಿತ್ರಗಳು
ಮುಂಬೈ: ‘ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ಒತ್ತಡಕ್ಕೊಳಗಾಗಿ ಭಾರತ–ಪಾಕಿಸ್ತಾನ, ರಷ್ಯಾ-ಉಕ್ರೇನ್ ಯುದ್ಧವನ್ನು ನಿಲ್ಲಿಸುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತ–ಪಾಕ್ ನಡುವಿನ ಕ್ರಿಕೆಟ್ ಪಂದ್ಯವನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ’ ಎಂದು ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವುತ್ ವಾಗ್ದಾಳಿ ನಡೆಸಿದ್ದಾರೆ.
ಮಹಾರಾಷ್ಟ್ರದ ಠಾಣೆಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ‘ಟೀಮ್ ಇಂಡಿಯಾ ಆಟಗಾರರು ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಪಾಕಿಸ್ತಾನದೊಂದಿಗೆ ಏಷ್ಯಾ ಕಪ್ ಪಂದ್ಯವನ್ನು ಆಡಲು ಉತ್ಸುಕವಾಗಿಲ್ಲ. ಬದಲಾಗಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮತ್ತು ಏಷ್ಯನ್ ಕ್ರಿಕೆಟ್ ಮಂಡಳಿ (ಎಸಿಸಿ) ಒತ್ತಡ ಸಿಲುಕಿದ್ದಾರೆ’ ಎಂದು ರಾವುತ್ ದೂರಿದ್ದಾರೆ.
‘ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜಯ್ ಶಾ ಅವರು ಐಸಿಸಿ ಅಧ್ಯಕ್ಷರಾಗಿದ್ದರೆ, ಪಾಕಿಸ್ತಾನದ ಮೊಹ್ಸಿನ್ ರಾಜಾ ನಖ್ವಿ ಅವರು ಎಸಿಸಿ ಅಧ್ಯಕ್ಷರಾಗಿದ್ದಾರೆ. ಭಾರತ ಮತ್ತು ಪಾಕ್ ನಡುವಿನ ಕ್ರಿಕೆಟ್ ಪಂದ್ಯ ನಿಲ್ಲಿಸಲು ಸಾಧ್ಯವಾಗದ ಮೋದಿ ಸರ್ಕಾರಕ್ಕೆ ನಾಚಿಕೆಯಾಗಬೇಕು’ ಎಂದು ಅವರು ಗುಡುಗಿದ್ದಾರೆ.
‘ಎಕ್ಸ್’ನಲ್ಲಿ ಆರ್‌ಎಸ್‌ಎಸ್ ಮತ್ತು ಬಿಜೆಪಿಯನ್ನು ಟ್ಯಾಗ್ ಮಾಡಿರುವ ರಾವುತ್, ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯವನ್ನು ಪ್ರದರ್ಶಿಸುವ ರೆಸ್ಟೋರೆಂಟ್‌ಗಳು ಮತ್ತು ಕ್ಲಬ್‌ಗಳ ಕುರಿತು ಮಾಹಿತಿಯನ್ನು ದೇಶಭಕ್ತ ನಾಗರಿಕರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಬೇಕು. ಜೈ ಹಿಂದ್! ಜೈ ಮಹಾರಾಷ್ಟ್ರ! ಭಾರತ್ ಮಾತಾ ಕಿ ಜೈ!’ ಎಂದು ಪೋಸ್ಟ್ ಮಾಡಿದ್ದಾರೆ.
ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ–ಪಾಕಿಸ್ತಾನ ಪಂದ್ಯಕ್ಕೆ ಕೆಲವು ವಲಯಗಳಿಂದ ಭಾರಿ ವಿರೋಧ ವ್ಯಕ್ತವಾಗಿದೆ. ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯ ಕಪ್ಪು ಛಾಯೆ ಈ ಪಂದ್ಯದ ಮೇಲೆ ಬಿದ್ದಿದೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏಪ್ರಿಲ್ 22ರಂದು ಭಯೋತ್ಪಾದಕರ ದಾಳಿಯಲ್ಲಿ 26 ಪ್ರವಾಸಿಗರು ಮೃತಪಟ್ಟ ಬಳಿಕ ಇತ್ತೀಚಿನ ದಿನಗಳಲ್ಲಿ ಎರಡು ದೇಶಗಳ ನಡುವಣ ಬಾಂಧವ್ಯವು ಮತ್ತಷ್ಟು ಹದಗೆಟ್ಟಿದೆ.
ಉಗ್ರರ ದಾಳಿಯ ಬಗ್ಗೆ ಸಾರ್ವಜನಿಕರ ಆಕ್ರೋಶ ಇನ್ನೂ ತಣ್ಣಗಾಗಿಲ್ಲ. ಭಾನುವಾರ ನಡೆಯಲಿರುವ ಪಂದ್ಯದ ಸಾವಿರಾರು ಟಿಕೆಟ್‌ಗಳು ಈಗಲೂ ಲಭ್ಯ ಇವೆ. ಶುಕ್ರವಾರ ನಡೆದ ಭಾರತ ತಂಡದ ಅಭ್ಯಾಸದ ವೇಳೆ ಕೆಲವೇ ಕೆಲವು ಅಭಿಮಾನಿಗಳು ಹಾಜರಿದ್ದರು. ಹೀಗಾಗಿ, ಎರಡು ರಾಷ್ಟ್ರಗಳ ನಡುವಿನ ‘ಹಬ್ಬದ ಸಂಭ್ರಮ’ವೂ ಕಣ್ಮರೆಯಾಗಿದೆ.
ದುಬೈನಲ್ಲಿ ಇಂದು ನಡೆಯುವ ಪಂದ್ಯದಲ್ಲಿ ಭಾಗವಹಿಸದಂತೆ ಭಾರತೀಯರು ಸಾಮಾಜಿಕ ಜಾಲತಾಣಗಳಲ್ಲಿ ಬಹಿಷ್ಕಾರಕ್ಕೆ ಕರೆ ನೀಡಿದ್ದು, #BoycottINDVsPAK ಹ್ಯಾಷ್‌ಟ್ಯಾಗ್ ಟ್ರೆಂಡ್ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.