ADVERTISEMENT

ಸದನದಲ್ಲಿ ಭಾವುಕರಾದ ಕೃಷ್ಣ ಬೈರೇಗೌಡ

ಮೂವರು ಶಾಸಕರಿಂದ ನಂಬಿಕೆ ದ್ರೋಹ: ಕಿಡಿ

​ಪ್ರಜಾವಾಣಿ ವಾರ್ತೆ
Published 23 ಜುಲೈ 2019, 20:16 IST
Last Updated 23 ಜುಲೈ 2019, 20:16 IST
ಕೃಷ್ಣ  ಬೈರೇಗೌಡ
ಕೃಷ್ಣ ಬೈರೇಗೌಡ   

ಬೆಂಗಳೂರು: ‘ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡದಿರುವ ತೀರ್ಮಾನಕ್ಕೆ ಬಂದಿದ್ದೆ. ಸ್ಪರ್ಧೆ ಮಾಡುವುದು ಬೇಡ ಎಂದು ಕುಟುಂಬ ಸದಸ್ಯರೂ ಹೇಳಿದ್ದರು. ಆ ಹೊತ್ತಿನಲ್ಲಿ, ಸ್ಪರ್ಧೆ ಮಾಡುವಂತೆ ಒತ್ತಾಯಿಸಿದವರು ಮೂವರು ಶಾಸಕರು. ಬಳಿಕ ನಂಬಿಕೆ ದ್ರೋಹ ಮಾಡಿದರು. ಅವರಿಂದಾಗಿ, ನಾನು ಈಗ ಸಾಲಗಾರನಾಗಿದ್ದೇನೆ’ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಸಚಿವ ಕೃಷ್ಣ ಬೈರೇಗೌಡ ಸದನದಲ್ಲಿ ಭಾವುಕರಾದರು.

ವಿಧಾನಸಭೆಯಲ್ಲಿ ಮಂಗಳವಾರ ವಿಶ್ವಾಸಮತ ಯಾಚನೆ ಪ್ರಸ್ತಾವದ ಚರ್ಚೆ ವೇಳೆ ಮಾತನಾಡಿದ ಅವರು, ‘ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಕೊನೆಯ ಕ್ಷಣದ ವರೆಗೂ ನಮ್ಮ ಪಕ್ಷದ ಅಭ್ಯರ್ಥಿ ಅಂತಿಮವಾಗಿರಲಿಲ್ಲ. ಈ ಮೂವರು ಶಾಸಕರ ನಂಬಿ ಕಣಕ್ಕೆ ಇಳಿದೆ’ ಎಂದರು.

‘ನನಗೆ ಸ್ಪರ್ಧೆ ಮಾಡಲು ಇಷ್ಟವಿಲ್ಲ ಎಂದು ಶಾಸಕರಾದ ಬೈರತಿ ಸುರೇಶ್‌, ಆರ್‌.ಮಂಜುನಾಥ್‌ ಹಾಗೂ ಅಖಂಡ ಶ್ರೀನಿವಾಸಮೂರ್ತಿ ಅವರಿಗೆ ಹೇಳಿದ್ದೆ. ನನ್ನ ಹೆಸರು ಸೂಚಿಸಬೇಡಿ ಎಂದು ಎಚ್ಚರಿಕೆ ನೀಡಿದ್ದೆ. ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಶಾಸಕರು ಮೌನಕ್ಕೆ ಶರಣಾಗಿದ್ದರು. ಆದರೆ, ನಾನೇ ಕಣಕ್ಕೆ ಇಳಿಯಬೇಕು ಎಂದು ಬೈರತಿ ಬಸವರಾಜ್‌, ಎಸ್‌.ಟಿ.ಸೋಮಶೇಖರ್‌ ಹಾಗೂ ಕೆ.ಗೋಪಾಲಯ್ಯ ಪಟ್ಟು ಹಿಡಿದರು. ನಿಮ್ಮನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದರು.

ADVERTISEMENT

ಆ ಸಹೋದರರ ಮಾತಿಗೆ ಬೆಲೆ ಕೊಟ್ಟು ಕಣಕ್ಕೆ ಇಳಿದಿದೆ. ಆದರೆ, ಆ ಶಾಸಕರ ಕ್ಷೇತ್ರಗಳಲ್ಲಿ ನಮ್ಮ ಪಕ್ಷಕ್ಕೆ 45 ಸಾವಿರದಿಂದ 48 ಸಾವಿರ ಮತ ಹಿನ್ನಡೆಯಾಯಿತು. ಅದಕ್ಕೆ ಕಾರಣ ಏನು ಎಂಬುದನ್ನು ಈಗ ಹೇಳಲು ಹೋಗುವುದಿಲ್ಲ’ ಎಂದರು.

‘ಪ್ರಜಾವಾಣಿ’ ಸುದ್ದಿ, ಬರಹಗಳಲ್ಲಿ ರಾಜಕೀಯ ಬೆಳವಣಿಗೆಗಳ ಸಮಗ್ರ ನೋಟ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.