ADVERTISEMENT

ಪ್ರಧಾನಿ ಮೋದಿ ಇನ್ನಾದರೂ ಆರ್ಥಿಕ ಸ್ಥಿತಿಯತ್ತ ಗಮನಹರಿಸಲಿ: ಸಿದ್ದರಾಮಯ್ಯ

ಸರಣಿ ಟ್ವೀಟ್ ಮೂಲಕ ಪ್ರಧಾನಿಯವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ನಾಯಕ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2019, 13:34 IST
Last Updated 6 ಆಗಸ್ಟ್ 2019, 13:34 IST
   

ಬೆಂಗಳೂರು:ಸಂವಿಧಾನದ 370ನೇ ವಿಧಿ ರದ್ದತಿ ವಿಚಾರವಾಗಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರುಪ್ರಧಾನಿ ನರೇಂದ್ರ ಮೋದಿಯವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಸರಣಿ ಟ್ವೀಟ್ ಮೂಲಕ ಪ್ರಧಾನಿ ವಿರುದ್ಧದ ಆಕ್ರೋಶ ವ್ಯಕ್ತಪಡಿಸಿರುವ ಅವರು, ಮೋದಿಯವರು ಇನ್ನಾದರೂ ಕುಸಿಯುತ್ತಿರುವ ಆರ್ಥಿಕತೆಯತ್ತ ಗಮನಹರಿಸಲಿ ಎಂದು ಆಗ್ರಹಿಸಿದ್ದಾರೆ.

‘ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ‍್ಥಾನಮಾನ ರದ್ದಾಯಿತಲ್ಲಾ, ಈಗಲಾದರೂ ದೇಶದ ಕುಸಿಯುತ್ತಿರುವ ಆರ್ಥಿಕ ಸ್ಥಿತಿಯ ಬಗ್ಗೆ, ಕರ್ನಾಟಕದಲ್ಲಿ ಅತೀವೃಷ್ಟಿ ಮತ್ತು ಅನಾವೃಷ್ಟಿಯಿಂದ ನರಳುತ್ತಿರುವ ಜನರ ಬಗ್ಗೆ ಸ್ವಲ್ಪ ಗಮನಹರಿಸುತ್ತೀರಾ, ಪ್ರಧಾನಿಯವರೇ?’ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

‘ಪ್ರಣಾಳಿಕೆಯಲ್ಲಿನ ಆಶ್ವಾಸನೆಯಂತೆ ಕಾಶ್ಮೀರಕ್ಕೆ‌ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ್ದೀರಿ ಎನ್ನುತ್ತೀರಲ್ಲಾ‌ ಮೋದಿಯವರೇ, ವಿಧಾನಸಭೆಯನ್ನು ಅಮಾನತಿನಲ್ಲಿಟ್ಟು, ರಾಜಕೀಯ ನಾಯಕರನ್ನು ಗೃಹಬಂಧನದಲ್ಲಿಟ್ಟು, ಸೈನಿಕರ ಕಾವಲು ಹಾಕಿ ಇದನ್ನು ಮಾಡ್ತೀರಿ ಎಂದು ಪ್ರಣಾಳಿಕೆಯಲ್ಲಿ ಹೇಳಿದ್ದೀರಾ?’ ಎಂದು ಇನ್ನೊಂದು ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.

‘ಕೇಂದ್ರದಲ್ಲಿ ಬಿಜೆಪಿಅಧಿಕಾರಕ್ಕೆ ಬಂದ ನಂತರವೇ ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಭದ್ರತಾ ಸಿಬ್ಬಂದಿ ಮತ್ತು ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗಿದ್ದಾರೆ ಎನ್ನುತ್ತಿವೆ ದಾಖಲೆಗಳು. ಇದಕ್ಕೆ ಕಾರಣ ಸಂವಿಧಾನದ 370ನೇ ವಿಧಿಯೇ? ಇಲ್ಲವೇ ಪರಿಸ‍್ಥಿತಿಯನ್ನು ನಿಯಂತ್ರಣ ಮಾಡಲಿಕ್ಕಾಗದ ನಿಮ್ಮ ಅಸಾಮರ್ಥ್ಯವೇ?’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

‘ಪಾಕಿಸ್ತಾನದ ವಿರುದ್ಧ ಯುದ್ಧ ಗೆದ್ದಾಗ, ಸ್ವರ್ಣಮಂದಿರದಲ್ಲಿದ್ದ ಉಗ್ರಗಾಮಿಗಳನ್ನು ಖಾಲಿ ಮಾಡಿಸಿದಾಗ ಶ್ರೀಮತಿ ಇಂದಿರಾಗಾಂಧಿಯವರು ರಾಜಕೀಯವಾಗಿ ಬಳಸಿಕೊಳ್ಳಲಿಲ್ಲ, ಅದು ತಮ್ಮ ಕರ್ತವ್ಯ ಎಂದು ತಿಳಿದಿದ್ದರು. ನರೇಂದ್ರ ಮೋದಿಯವರೇನೀವ್ಯಾಕೆ ಪ್ರತಿ ಕೆಲಸವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ತಿದ್ದೀರಿ?’ ಎಂದೂ ಅವರು ಪ್ರಶ್ನಿಸಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.