ADVERTISEMENT

ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು: ಪಾಕಿಸ್ತಾನ ಸಂಸತ್‌ನಲ್ಲಿಯೂ ಗದ್ದಲ

ಏಜೆನ್ಸೀಸ್
Published 6 ಆಗಸ್ಟ್ 2019, 12:45 IST
Last Updated 6 ಆಗಸ್ಟ್ 2019, 12:45 IST
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ (ಎಎಫ್‌ಪಿ ಸಂಗ್ರಹ ಚಿತ್ರ)
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ (ಎಎಫ್‌ಪಿ ಸಂಗ್ರಹ ಚಿತ್ರ)   

ಇಸ್ಲಾಮಾಬಾದ್:ಭಾರತವು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿದ ವಿಚಾರವಾಗಿ ಪಾಕಿಸ್ತಾನ ಸಂಸತ್‌ನಲ್ಲಿಯೂ ಮಂಗಳವಾರ ಗದ್ದಲವೇರ್ಪಟ್ಟಿದೆ.

ವಿಶೇಷ ಸ್ಥಾನಮಾನ ರದ್ದುಗೊಳಿಸಿದ್ದನ್ನು ವಿರೋಧಿಸಿ ಸರ್ಕಾರ ಮಂಡಿಸಿದ ನಿಲುವಳಿಯಲ್ಲಿ ಭಾರತದ ಸಂವಿಧಾನದ 370ನೇ ವಿಧಿಯ ಬಗ್ಗೆ ಉಲ್ಲೇಖಿಸದಿರುವುದಕ್ಕೆ ಪ್ರತಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಈ ವೇಳೆ ಕೋಲಾಹಲ ಸೃಷ್ಟಿಯಾಗಿದ್ದರಿಂದ ಸ್ಪೀಕರ್ ಅಸಾದ್ ಕೈಸರ್ ಕಲಾಪವನ್ನು 20 ನಿಮಿಷ ಮುಂದೂಡಿದರು.

‘ಭಾರತವು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿದ್ದಕ್ಕೆ ಸಂಬಂಧಿಸಿದ ಪ್ರಮುಖ ವಿಚಾರವೇ ನಿಲುವಳಿಯಲ್ಲಿ ಇಲ್ಲ. ಅದನ್ನು ಉಲ್ಲೇಖಿಸಬೇಕಿತ್ತು’ ಎಂದು ಪ್ರತಿಪಕ್ಷದ ಸಂಸದ ರಜಾ ರಬ್ಬಾನಿ ಹೇಳಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಾನವಹಕ್ಕುಗಳ ಸಚಿವೆಶಿರೀನ್ ಮಜಾರಿ, ‘ಕಾಶ್ಮೀರದ ಬಗ್ಗೆ ಚರ್ಚಿಸುವುದು ಪ್ರತಿಪಕ್ಷಕ್ಕೆ ಬೇಕಿಲ್ಲ, ಗದ್ದಲ ಉಂಟುಮಾಡುವುದಕ್ಕೇ ಪ್ರತಿಪಕ್ಷದವರು ಇಲ್ಲಿದ್ದಾರೆ’ ಎಂದು ಆರೋಪಿಸಿದರು.

ಈ ವೇಳೆ ಮಾತನಾಡಿದ ರೈಲ್ವೆ ಸಚಿವ ಶೇಖ್ ರಶೀದ್, ನಿಲುವಳಿಯಲ್ಲಿ 370ನೇ ವಿಧಿಯ ಕುರಿತು ಉಲ್ಲೇಖಿಸುವುದು ಮುಖ್ಯ. ಆ ಕುರಿತು ಚರ್ಚೆಯಾಗಬೇಕು ಎಂದು ಪ್ರತಿಪಾದಿಸಿದರು.

ಬಳಿಕ ಸ್ಪೀಕರ್ ಸೂಚನೆ ಮೇರೆಗೆ ನಿಲುವಳಿಗೆ ತಿದ್ದುಪಡಿ ಮಾಡಿ 370ನೇ ವಿಧಿಯ ಕುರಿತು ಉಲ್ಲೇಖಿಸಲಾಯಿತು ಎಂದುಹಿಂದೂಸ್ತಾನ್ ಟೈಮ್ಸ್ವರದಿ ಮಾಡಿದೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಭಾರತೀಯ ಪಡೆಗಳು ಅಪ್ರಚೋದಿತ ಗುಂಡಿನ ದಾಳಿ ನಡೆಸಿವೆ ಎಂಬ ಆರೋಪಕ್ಕೆ ಸಂಬಂಧಿಸಿ ಚರ್ಚೆ ನಡೆಸಲು ಅಧ್ಯಕ್ಷ ಆರಿಫ್ ಅಲ್ವಿ ಸಂಸತ್‌ನ ಜಂಟಿ ಅಧಿವೇಶನಕ್ಕೆ ಕರೆ ನೀಡಿದ್ದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.