ADVERTISEMENT

GS ಸಂಗ್ರೇಶಿ ಸಂದರ್ಶನ | ಐದು ಪಾಲಿಕೆ, ಸ್ಥಳೀಯ ಸಂಸ್ಥೆ ಚುನಾವಣೆ: ಹಲವು ಸವಾಲು

ಚಂದ್ರಹಾಸ ಹಿರೇಮಳಲಿ
Published 23 ಜನವರಿ 2026, 23:30 IST
Last Updated 23 ಜನವರಿ 2026, 23:30 IST
<div class="paragraphs"><p>ಜಿ.ಎಸ್‌.ಸಂಗ್ರೇಶಿ</p></div>

ಜಿ.ಎಸ್‌.ಸಂಗ್ರೇಶಿ

   
ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯ ಐದು ಪಾಲಿಕೆಗಳೂ ಸೇರಿದಂತೆ ಹಲವು ಸ್ಥಳೀಯ ಸಂಸ್ಥೆಗಳ ಚುನಾವಣೆ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಜಿಬಿಎ ವ್ಯಾಪ್ತಿಯ ಐದು ಪಾಲಿಕೆಗಳ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ವಿದ್ಯುನ್ಮಾನ ಮತಯಂತ್ರದ (ಇವಿಎಂ) ಬದಲು ಮತಪತ್ರಗಳನ್ನು (ಬ್ಯಾಲೆಟ್‌ ಪೇಪರ್‌) ಬಳಸಿ ಚುನಾವಣೆ ನಡೆಸುವುದಾಗಿ ರಾಜ್ಯ ಚುನಾವಣಾ ಆಯೋಗ ಘೋಷಿಸಿದೆ. ಇನ್ನೊಂದೆಡೆ ತಾಲ್ಲೂಕು, ಜಿಲ್ಲಾ ಪಂಚಾಯಿತಿಗಳ ಚುನಾಯಿತ ಪ್ರತಿನಿಧಿಗಳ ಆಡಳಿತದ ಅವಧಿ ಮುಗಿದು ಐದು ವರ್ಷಗಳಾದರೂ ಚುನಾವಣೆ ನಡೆದಿಲ್ಲ. ಸರ್ಕಾರದ ವಿಳಂಬ ಧೋರಣೆ ವಿರುದ್ಧ ಆಯೋಗ ಕೋರ್ಟ್‌ ಮೆಟ್ಟಿಲೇರಿದೆ. ಸರ್ಕಾರ ಮೂರೂ ಸ್ತರಗಳಿಗೆ ಒಟ್ಟಿಗೆ ಚುನಾವಣೆ ನಡೆಸಲು ಚಿಂತಿಸುತ್ತಿದೆ. ಈ ಎಲ್ಲ ಬೆಳವಣಿಗೆಗಳ ಕುರಿತು ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್‌.ಸಂಗ್ರೇಶಿ ಅವರ ಜತೆ ‘ಪ್ರಜಾವಾಣಿ’ ನಡೆಸಿದ ಮಾತುಕತೆಯ ಸಾರ ಇಲ್ಲಿದೆ.

ಬಹಳಷ್ಟು ಬೇಡಿಕೆಗಳು, ಪ್ರಯೋಗಗಳ ತರುವಾಯ ಇವಿಎಂ ಜಾರಿಗೆ ತರಲಾಗಿದೆ. ಮತ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕಾದ ಆಯೋಗ, ಹಿಂದಕ್ಕೆ ಚಲಿಸಲು ಹೊರಟಿದೆಯಲ್ಲ?

ಮತಪತ್ರ ಬಳಸಬಾರದು ಎಂದು ಯಾವ ಕಾನೂನು ಕೂಡ ಹೇಳಿಲ್ಲ. ಚುನಾವಣಾ ಆಯೋಗ ಸ್ವತಂತ್ರ ಆಯೋಗವಾಗಿದ್ದರೂ ಕಾಯ್ದೆಗಳ ಪ್ರಕಾರವೇ ಕಾರ್ಯನಿರ್ವಹಿಸುತ್ತದೆ. ಚುನಾವಣೆಗಳನ್ನು ನಡೆಸುತ್ತದೆ. ಯಾವುದೇ ಚುನಾವಣೆಗಳನ್ನು ಇವಿಎಂ ಅಥವಾ ಮತಪತ್ರ ಬಳಸಿ ಮಾಡಬಹುದು ಎಂದು ಚುನಾವಣಾ ನಿಯಮಗಳೇ ಹೇಳುತ್ತವೆ. ಅಂತಹ ನಿಯಮಗಳ ಅನ್ವಯವೇ ನಿರ್ಧಾರ ತೆಗೆದುಕೊಳ್ಳಲಾಗಿದೆ. ರಾಜ್ಯ ಸರ್ಕಾರ ಈಚೆಗೆ ಜಾರಿಗೆ ತಂದ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಚುನಾವಣೆ) ಕಾಯ್ದೆ–2025ರಲ್ಲೂ ಚುನಾವಣೆಗಳನ್ನು ಮತಪತ್ರ ಬಳಸಿ ನಡೆಸಬಹುದು ಎಂಬ ಅಂಶವನ್ನು ನಿಯಮ 37, 57ರಲ್ಲಿ ಉಲ್ಲೇಖಿಸಲಾಗಿದೆ. ಈ ನಿಯಮಗಳ ಅನ್ವಯವೇ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಐದು ಪಾಲಿಕೆಗಳಿಗೆ ಮತಪತ್ರ ಬಳಸಿ ಚುನಾವಣೆ ನಡೆಸಲು ನಿರ್ಧರಿಸಿದ್ದೇವೆ.

ADVERTISEMENT

 ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಪತ್ರ ಬಳಸುವಂತೆ ರಾಜ್ಯ ಸರ್ಕಾರದ ಒತ್ತಡವಿದೆಯಾ?

ಖಂಡಿತಾ ಯಾರದೇ ಒತ್ತಡವಿಲ್ಲ. ಚುನಾವಣಾ ಆಯೋಗ ರಾಜ್ಯ ಸರ್ಕಾರದ ಅಧೀನ ಸಂಸ್ಥೆಯಲ್ಲ. ಸಾಂವಿಧಾನಿಕ ಸಂಸ್ಥೆ. ರಾಜಕೀಯ ಪಕ್ಷಗಳು ಚುನಾವಣೆಗೆ ಸಂಬಂಧಿಸಿದ ಹಲವು ವಿಷಯಗಳಲ್ಲಿ ಆಯೋಗಕ್ಕೆ ಮನವಿ ಮಾಡುತ್ತವೆ. ಮತ‍ಪತ್ರ ಬಳಸುವಂತೆ ಕೆಲ ಪಕ್ಷಗಳು, ಇವಿಎಂ ಬಳಕೆ ಕುರಿತು ಕೆಲ ಪಕ್ಷಗಳ ಪ್ರತಿನಿಧಿಗಳು ಕಚೇರಿಗೆ ಬಂದು ಮನವಿ ಮಾಡಿದ್ದಾರೆ. ಯಾರೇ ಮನವಿ ಮಾಡಿದರೂ ನಿಯಮಗಳಲ್ಲಿರುವ ಅವಕಾಶದಂತೆ ಆಯೋಗ ಕ್ರಮ ಕೈಗೊಳ್ಳುತ್ತದೆ. ಇವಿಎಂ, ಮತಪತ್ರಗಳ ವಿಚಾರದಲ್ಲೂ ಕೂಲಂಕಷ ಪರಿಶೀಲನೆಯ ಬಳಿಕ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಲಾಗಿದೆ. ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ಅತ್ಯಂತ ದೊಡ್ಡ ಚುನಾವಣೆ ಗ್ರಾಮ ಪಂಚಾಯಿತಿಗಳ ಚುನಾವಣೆ. 2.97 ಕೋಟಿ ಮತದಾರರು ಭಾಗವಹಿಸುವ ಚುನಾವಣೆಗೆ ಮತಪತ್ರ ಬಳಕೆ ಮಾಡುತ್ತಿದ್ದೇವೆ. ಹಾಗಾಗಿ, ಇತರ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮತಪತ್ರ ಬಳಕೆ ಬಗ್ಗೆ ವಿರೋಧ ವ್ಯಕ್ತ ಮಾಡುವುದು, ವಿವಾದ ಮಾಡುವುದು ಸರಿಯಲ್ಲ. ಇಂತಹ ವಿಚಾರಗಳಲ್ಲಿ ಒತ್ತಡಗಳಿಗೆ ಆಯೋಗ ಮಣಿಯುವುದೂ ಇಲ್ಲ.

ಮತಪತ್ರ ಬಳಕೆ ಮತದಾನದ ಅವಧಿಯ ಹಿಗ್ಗುವಿಕೆಗೆ ಕಾರಣವಾಗುತ್ತದೆಯಲ್ಲ?

ಬಿಬಿಎಂಪಿ ಚುನಾವಣೆ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆದು ಎಷ್ಟು ವರ್ಷಗಳಾಗಿವೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಪ್ರಜಾಪ್ರಭುತ್ವದಲ್ಲಿ ಅವಧಿ ಮುಗಿದ ನಂತರವೂ ನಡೆಯುವ ಚುನಾವಣೆ, ವಿವಿಧ ಹಂತಗಳ ಬಳಿಕ ಪ್ರಕಟವಾಗುವ ಫಲಿತಾಂಶಕ್ಕಾಗಿ ತಾಳ್ಮೆಯಿಂದ ಕಾಯುವ ಜನರು ಮತದಾನಕ್ಕಾಗಿ ಮೂರು, ನಾಲ್ಕು ಗಂಟೆ ಹೆಚ್ಚು ಅವಧಿ ತೆಗೆದುಕೊಂಡರೆ ಸಹಿಸುವುದಿಲ್ಲವೇ? ಮತಪತ್ರ ಬಳಕೆಯಲ್ಲೂ ತ್ವರಿತ ಮತದಾನಕ್ಕೆ ಅಗತ್ಯವಾದ ಕ್ರಮವನ್ನು ಆಯೋಗ ತೆಗೆದುಕೊಳ್ಳಲಿದೆ. 

ಇವಿಎಂನಂತಹ ಆಧುನಿಕ ವಿಧಾನ ಅವಳವಡಿಕೆಯ ನಂತರವೂ ನಗರ ಪ್ರದೇಶಗಳಲ್ಲಿ ಮತದಾನ ಪ್ರಮಾಣ ಕಡಿಮೆಯಾಗುತ್ತಿದೆ. ಮತಪತ್ರ ಬಳಕೆಯಿಂದ ಇನ್ನಷ್ಟು ಇಳಿಕೆ ಆಗುವುದಿಲ್ಲವೇ?

ಮತಪತ್ರ ಅಥವಾ ಇವಿಎಂ ಬಳಕೆಗೂ ಮತದಾನ ಪ್ರಮಾಣದ ಇಳಿಕೆಗೂ ಸಂಬಂಧವಿಲ್ಲ. ರಾಷ್ಟ್ರಪತಿ, ಉಪರಾಷ್ಟ್ರಪತಿ ಚುನಾವಣೆ, ಸಹಕಾರ ಸಂಘಗಳ ಚುನಾವಣೆ ಸೇರಿದಂತೆ ಹಲವೆಡೆ ಇಂದಿಗೂ ಮತಪತ್ರ ಬಳಕೆಯೇ ಮುಂದುವರಿದಿದೆ. ಸುಮಾರು 6,000 ಗ್ರಾಮ ಪಂಚಾಯಿತಿಗಳಿಗೆ ನಡೆಸುವ ಚುನಾವಣೆಯಲ್ಲಿ ಇದುವರೆಗೂ ಮತಪತ್ರವನ್ನೇ ಬಳಸಲಾಗಿದೆ. 2.97 ಕೋಟಿ ಮತದಾರರು ಇದ್ದಾರೆ. ಅಲ್ಲಿ ಮತಪತ್ರ ಯಶಸ್ವಿಯಾಗಿ ಬಳಸಲಾಗಿದೆ. ಜಿಬಿಎ ವ್ಯಾಪ್ತಿಯಲ್ಲಿ 80ರಿಂದ 90 ಲಕ್ಷ ಮತದಾರರು ಇದ್ದಾರೆ. ಇಷ್ಟು ಮತದಾರರಿಗೆ ಮತಪತ್ರಗಳನ್ನು ಬಳಕೆ ಮಾಡುವುದರಲ್ಲಿ ಯಾವ ಸಮಸ್ಯೆಯೂ ಇಲ್ಲ. ಮತಪ್ರಮಾಣ ಹೆಚ್ಚಳಕ್ಕೆ ಜಾಗೃತಿ ಮೂಡಿಸುವ ಹಲವು ಕ್ರಮಗಳನ್ನು ಆಯೋಗ ಕೈಗೊಳ್ಳಲಿದೆ. 

ಮತಪತ್ರ ಬಳಸಲು ಅಗತ್ಯವಾದ ಮತಪೆಟ್ಟಿಗೆ ಇವೆಯೇ?

ಗ್ರೇಟರ್‌ ಬೆಂಗಳೂರು ವ್ಯಾಪ್ತಿಯ ಪಾಲಿಕೆಗಳಿಗೆ ಸಾಕಾಗುವಷ್ಟು ಮತಪೆಟ್ಟಿಗೆಗಳು ಇವೆ. 8 ಸಾವಿರಕ್ಕೂ ಹೆಚ್ಚು ಮತಪೆಟ್ಟಿಗೆಗಳು ಈಗಾಗಲೇ ಸಿದ್ಧ ಇವೆ. ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಸಲು ಇನ್ನಷ್ಟು ಮತಪೆಟ್ಟಿಗೆಗಳ ಅಗತ್ಯವಿದೆ. ಖರೀದಿಗಾಗಿ ಅಗತ್ಯ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. 

ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆ ಐದು ವರ್ಷ ವಿಳಂಬ ಏಕೆ?

ರಾಜ್ಯದ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿಗಳಿಗೆ 2016ರ ಏಪ್ರಿಲ್‌ನಲ್ಲಿ ಚುನಾವಣೆ ನಡೆದಿತ್ತು. ಅಂದು ಆಯ್ಕೆಯಾಗಿದ್ದ ಸದಸ್ಯರ ಅವಧಿ 2021ರ ಏಪ್ರಿಲ್ 27ರಂದು ಮುಕ್ತಾಯವಾಗಿತ್ತು. ಚುನಾವಣೆಗೆ ಸಿದ್ಧತೆ ನಡೆದಿರುವಾಗಲೇ ಕ್ಷೇತ್ರ ಪುನರ್‌ ವಿಂಗಡಣೆ ಮತ್ತು ಮೀಸಲಾತಿ ಅಧಿಕಾರವನ್ನು ಚುನಾವಣಾ ಆಯೋಗದಿಂದ ಹಿಂಪಡೆಯಲಾಗಿತ್ತು. ಕರ್ನಾಟಕ ಪಂಚಾಯತ್ ರಾಜ್ ಮತ್ತು ಗ್ರಾಮ ಸ್ವರಾಜ್ ಕಾಯ್ದೆಗೆ ತಿದ್ದುಪಡಿ ತಂದು ‘ಕರ್ನಾಟಕ ಪಂಚಾಯತ್‌ ರಾಜ್ ಸೀಮಾ ನಿರ್ಣಯ ಆಯೋಗ’ಕ್ಕೆ ನೀಡಲಾಗಿತ್ತು. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗಳ ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮೀಸಲಾತಿ ವಿಳಂಬದ ವಿರುದ್ಧ ಹೈಕೋರ್ಟ್‌ ಮೊರೆ ಹೋಗಿದ್ದೇವೆ. ಕ್ಷೇತ್ರಗಳ ಪುನರ್‌ ವಿಂಗಡಣೆ ಮತ್ತು ಮೀಸಲಾತಿ ನಿಗದಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದಾಗಿ 2023ರ ಡಿಸೆಂಬರ್‌ನಲ್ಲೇ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿತ್ತು. ನಂತರ ಕ್ಷೇತ್ರಗಳ ಪುನರ್‌ವಿಂಗಡಣೆ ಹಾಗೂ ಸದಸ್ಯರ ಸಂಖ್ಯೆ ನಿಗದಿಪಡಿಸಲು ಸರ್ಕಾರ ರಚಿಸಿದ್ದ ಆಯೋಗದ ಶಿಫಾರಸುಗಳನ್ನು ಅಂಗೀಕರಿಸಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಅಧಿಸೂಚನೆ ಹೊರಡಿಸಿತ್ತು. ಆದರೆ, ಮೀಸಲಾತಿ ನಿಗದಿಯನ್ನು ಇಲ್ಲಿಯವರೆಗೂ ಅಂತಿಮಗೊಳಿಸಿಲ್ಲ. 

ಚುನಾವಣೆ ನಡೆಸುವ ಕುರಿತು ಆಯೋಗದ ಮುಂದಿನ ನಡೆ ಏನು? 

ವಿಳಂಬಕ್ಕೆ ಹೈಕೋರ್ಟ್‌ ಈಗಾಗಲೇ ರಾಜ್ಯ ಸರ್ಕಾರಕ್ಕೆ ದಂಡ ವಿಧಿಸಿದೆ. ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದ ಅವಧಿಯ ಒಳಗೆ ಚುನಾವಣೆ ನಡೆಸಲು ಸಹಕರಿಸಿಲ್ಲ ಎಂದು ಮತ್ತೊಂದು ನ್ಯಾಯಾಂಗ ನಿಂದನೆ ಪ್ರಕರಣವನ್ನು ದಾಖಿಸಿದ್ದೇವೆ. ಕೋರ್ಟ್‌ ಇದೇ ಜನವರಿ 30ರಂದು ಸಮಯ ನಿಗದಿ ಮಾಡಿದೆ. ಅಷ್ಟರ ಒಳಗೆ ಮತಕ್ಷೇತ್ರಗಳ ವಿವರ, ಮೀಸಲಾತಿ ಪಟ್ಟಿ ತಲುಪುವ ನಿರೀಕ್ಷೆ ಇದೆ. ಅವಧಿ ಮುಕ್ತಾಯಗೊಂಡ ಸ್ಥಳೀಯ ಸಂಸ್ಥೆಗಳಿಗೆ ರಾಜ್ಯ ಸರ್ಕಾರ ಕ್ಷೇತ್ರಗಳ ಪಟ್ಟಿ ಹಾಗೂ ಮೀಸಲಾತಿ ಅಧಿಸೂಚನೆ ಹೊರಡಿಸದೇ ಇದ್ದರೆ, ಹಿಂದಿನ ಚುನಾವಣೆಯಲ್ಲಿ ನಿಗದಿ ಮಾಡಲಾಗಿದ್ದ ಕ್ಷೇತ್ರ ವಿಂಗಡಣೆ ಹಾಗೂ ಮೀಸಲಾತಿ ಅನ್ವಯವೇ ಚುನಾವಣೆ ನಡೆಸಬಹುದು ಎಂದು ಸುಪ್ರೀಂ ಕೋರ್ಟ್‌ ಆದೇಶವಿದೆ. ಜ.30ರ ನಂತರ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು.

ಎಷ್ಟು ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಳಂಬವಾಗಿದೆ?

ಮೈಸೂರು, ತುಮಕೂರು, ಶಿವಮೊಗ್ಗ, ದಾವಣಗೆರೆ, ಮಂಗಳೂರು ಸೇರಿ ಐದು ಮಹಾನಗರ ಪಾಲಿಕೆಗಳು, 192 ಇತರೆ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಬೇಕಿದೆ. ಹೊಸ ಪಟ್ಟಣ ಪಂಚಾಯಿತಿಗಳ ಘೋಷಣೆ, ಪುರಸಭೆ, ನಗರಸಭೆಗಳಾಗಿ ಮೇಲ್ದರ್ಜೆಗೆ ಏರಿಕೆ ಮಾಡಿದಾಗ ನಗರಗಳ ಸೆರಗಿನ ಹಲವು ಪಂಚಾಯಿತಿಗಳು ವಿಲೀನವಾಗುತ್ತವೆ. ಅವುಗಳನ್ನು ಸೇರಿಸಿ, ಕೆಲವನ್ನು ಕೈಬಿಟ್ಟು ಆಯಾ ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳನ್ನು ಮರುವಿಂಗಡಣೆ ಮಾಡಬೇಕು. ಇಂತಹ ಕಾರ್ಯಗಳಲ್ಲಿ ವಿಳಂಬವಾಗುತ್ತಿದೆ. ಅಧಿಕಾರಿಗಳು, ಸರ್ಕಾರದ ಇಚ್ಛಾಶಕ್ತಿಯ ಕೊರತೆಯೂ ಇದಕ್ಕೆ ಕಾರಣ ಇರಬಹುದು. ಎರಡು ತಿಂಗಳಲ್ಲಿ ಶೇ 90ರಷ್ಟು ಗ್ರಾಮ ಪಂಚಾಯಿತಿಗಳ ಅವಧಿ ಮುಗಿಯುತ್ತದೆ. ತಾಲ್ಲೂಕು, ಜಿಲ್ಲಾ ಪಂಚಾಯಿತಿಗಳನ್ನು ಪರಿಗಣಿಸಿ ಮೂರೂ ಸ್ತರಗಳ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಬೇಕಿದೆ. 

ಎಲ್ಲ ಮತಗಟ್ಟೆಗಳಿಗೂ ‘ವೆಬ್‌ ಕಾಸ್ಟಿಂಗ್‌’
ಮೊದಲೆಲ್ಲ ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗುತ್ತಿತ್ತು. ಈ ಬಾರಿ ಪ್ರತಿ ಮತಗಟ್ಟೆಯಲ್ಲೂ ಸಿ.ಸಿ.ಟಿ.ವಿ. ಕ್ಯಾಮೆರಾ ವೆಬ್‌ಕಾಸ್ಟಿಂಗ್‌ ಕಣ್ಗಾವಲು ಇರಲಿದೆ ಎಂದು ರಾಜ್ಯ ಚುನಾವಣಾ ಆಯುಕ್ತ ಸಂಗ್ರೇಶಿ ಹೇಳಿದರು. ಹಿಂದೆಲ್ಲ ಮತಪೆಟ್ಟಿಗೆಗಳನ್ನೇ ಹೊತ್ತೊಯ್ದ ಪ್ರಕರಣಗಳು ನಡೆದಿವೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಹೊತ್ತುಕೊಂಡು ಹೋಗುವವರಿಗೆ ಮತ ಪೆಟ್ಟಿಗೆ, ಮತಯಂತ್ರ ಅನ್ನುವ ವ್ಯತ್ಯಾಸ ಇರುವುದಿಲ್ಲ. ಅಂತಹ ಪ್ರಕರಣಗಳಿಗೆ ಅವಕಾಶ ಇಲ್ಲದಂತೆ ಜನರು, ಪಕ್ಷಗಳು, ಪೊಲೀಸರ ಸಹಕಾರ ಪಡೆದು ನಿರ್ವಹಣೆ ಮಾಡವಷ್ಟು ಆಯೋಗ ಸಮರ್ಥವಾಗಿದೆ. ಕಟ್ಟುನಿಟ್ಟಿನ, ಪಾರದರ್ಶಕ ಚುನಾವಣೆಗೆ ಅಗತ್ಯ ಇರುವಷ್ಟು ಸಿಬ್ಬಂದಿ, ಪೊಲೀಸರನ್ನು ಬಳಕೆ ಮಾಡಲಾಗುತ್ತದೆ. ಮತಪತ್ರ ನಕಲಿಗೂ ಅವಕಾಶ ನೀಡುವುದಿಲ್ಲ. ಹಲವು ಕಠಿಣ ಕ್ರಮಗಳನ್ನು ಅಳವಡಿಸಲಾಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.