ಟೀಮ್ ಇಂಡಿಯಾ ಆಟಗಾರರ ಸಂಭ್ರಮ
(ಚಿತ್ರ ಕೃಪೆ: X/@BCCI)
ದುಬೈ: ಬಲಾಢ್ಯ ಭಾರತ ತಂಡಕ್ಕೆ ಯುನೈಟೆಡ್ ಅರಬ್ ಎಮಿರೇಟ್ಸ್ ಬಳಗವು ಸುಲಭದ ತುತ್ತಾಯಿತು.
ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಭಾರತ ತಂಡವು 9 ವಿಕೆಟ್‌ಗಳ ಸುಲಭದ ಜಯ ದಾಖಲಿಸಿತು.
ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ (7ಕ್ಕೆ4) ಮತ್ತು ಮಧ್ಯಮವೇಗಿ ಶಿವಂ ದುಬೆ (4ಕ್ಕೆ3) ಅವರ ಬೌಲಿಂಗ್ ಮುಂದೆ ಯುಎಇ ತಂಡವು ತತ್ತರಿಸಿತು. ಟಾಸ್ ಗೆದ್ದ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.
ಅನುಭವದ ಕೊರತೆಯಿರುವ ಆಟಗಾರರಿರುವ ಯುಎಇ ತಂಡವು 13.1 ಓವರ್‌ಗಳಲ್ಲಿ 57 ರನ್‌ಗಳಿಗೆ ಸರ್ವಪತನವಾಯಿತು. ಇದಕ್ಕುತ್ತರವಾಗಿ ಭಾರತ ತಂಡವು ಕೇವಲ 4.3 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 60 ರನ್ ಗಳಿಸಿತು. ಅಭಿಷೇಕ್ ಶರ್ಮಾ (30; 16ಎ, 4X2, 6X3) ಅವರ ವಿಕೆಟ್ ಅನ್ನು ಜುನೈದ್ ಸಿದ್ದೀಕ್ ಪಡೆದರು. ಶುಭಮನ್ ಗಿಲ್ (ಔಟಾಗದೇ 20; 9ಎ, 4X2, 6X1) ಮತ್ತು ಸೂರ್ಯ (ಔಟಾಗದೇ 7; 2ಎ, 6X1) ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.
ಯುಎಇ ತಂಡವು ಭಾರತಕ್ಕೆ ಯಾವುದೇ ಹಂತದಲ್ಲಿಯೂ ಕಠಿಣ ಸವಾಲೊಡ್ಡಲಿಲ್ಲ. ಅನುಭವ, ಕೌಶಲದಲ್ಲಿ ಬಲಾಢ್ಯವಾಗಿರುವ ಭಾರತ ತಂಡಕ್ಕೆ ಸುಲಭ ಜಯ ಒಲಿಯಿತು.
ಯುಎಇ ತಂಡದ ಆರಂಭಿಕ ಜೋಡಿ ಅಲಿಷಾನ್ ಶರಾಫು (22; 17ಎ, 4X3, 6X1) ಮತ್ತು ನಾಯಕ ಮೊಹಮ್ಮದ್ ವಾಸೀಂ (19; 22ಎ, 4X3) ಮೊದಲ ವಿಕೆಟ್ ಜೊತೆಯಾಟದಲ್ಲಿ 26 ರನ್ ಸೇರಿಸಿದರು. ತಂಡದ ಇಡೀ ಇನಿಂಗ್ಸ್‌ನಲ್ಲಿ ಇದು ದೊಡ್ಡ ಜೊತೆಯಾಟವಾಯಿತು. ಅಲ್ಲದೇ ಈ ಇಬ್ಬರು ಬ್ಯಾಟರ್‌ಗಳು ಮಾತ್ರ ಎರಡಂಕಿ ತಲುಪಿದರು.
ನಾಲ್ಕನೇ ಓವರ್‌ನಲ್ಲಿ ವೇಗಿ ಜಸ್‌ಪ್ರೀತ್ ಬೂಮ್ರಾ ಅವರು ಅಲಿಷಾನ್ ಅವರನ್ನು ಕ್ಲೀನ್‌ಬೌಲ್ಡ್ ಮಾಡಿ ತಂಡದ ವಿಕೆಟ್ ಖಾತೆ ತೆರೆದರು. ಇಲ್ಲಿಂದ ಮುಂದೆ ಕುಲದೀಪ್ ತಮ್ಮ ಕೈಚಳಕ ಮೆರೆದರು. ಅವರು ಬೀಸಿದ ಎಲ್‌ಬಿಡಬ್ಲ್ಯು ಬಲೆಗೆ ಮೊಹಮ್ಮದ್ ವಾಸೀಂ ಆಟಕ್ಕೆ ತೆರೆಬಿತ್ತು.
ರಾಹುಲ್ ಚೋಪ್ರಾ, ಹರ್ಷಿತ್ ಕೌಶಿಕ್ ಮತ್ತು ಹೈದರ್ ಅಲಿ ಅವರ ವಿಕೆಟ್‌ಗಳೂ ಕುಲದೀಪ್ ಪಾಲಾದವು. ಇನ್ನೊಂದು ಬದಿಯಿಂದ ಮಧ್ಯಮವೇಗಿ ದುಬೆ ಕೂಡ ಮೂವರು ಪ್ರಮುಖ ಬ್ಯಾಟರ್‌ಗಳಿಗೆ ಪೆವಿಲಿಯನ್ ದಾರಿ ತೋರಿಸಿದರು. ವರುಣ್ ಚಕ್ರವರ್ತಿ ಕುಡ ಮೊಹಮ್ಮದ್ ಝೊಹಾಬ್ ವಿಕೆಟ್ ಗಳಿಸಿ ತಮ್ಮ ಹೊಣೆ ನಿಭಾಯಿಸಿದರು.
ಭಾರತ ತಂಡವು ಮೂವರು ಸ್ಪಿನ್ನರ್, ಒಬ್ಬ ವೇಗದ ಬೌಲರ್‌ನೊಂದಿಗೆ ತಂಡವನ್ನು ಕಣಕ್ಕಿಳಿಸಿತ್ತು. ಆಲ್‌ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ, ಶಿವಂ, ಅಕ್ಷರ್ ಅವರಿಗೆ ಅವಕಾಶ ದೊರೆಯಿತು. ವಿಕೆಟ್‌ಕೀಪಿಂಗ್ ಹೊಣೆಯನ್ನು ಅನುಭವಿ ಸಂಜು ಸ್ಯಾಮ್ಸನ್ ಅವರಿಗೆ ನೀಡಲಾಗಿತ್ತು. ಅದರಿಂದಾಗಿ ಜಿತೇಶ್ ಶರ್ಮಾ ಅವರಿಗೆ ಅವಕಾಶ ದೊರೆಯಲಿಲ್ಲ.
ಸಂಕ್ಷಿಪ್ತ ಸ್ಕೋರು: ಯುಎಇ: 13.1 ಓವರ್‌ಗಳಲ್ಲಿ 57 (ಅಲಿಷಾನ್ ಶರಾಫು 22, ಮೊಹಮ್ಮದ್ ವಾಸೀಂ 19, ಕುಲದೀಪ್ ಯಾದವ್ 7ಕ್ಕೆ4, ಶಿವಂ ದುಬೆ 4ಕ್ಕೆ3) ಭಾರತ: 4.3 ಓವರ್‌ಗಳಲ್ಲಿ 1 ವಿಕೆಟ್‌ಗೆ 60 (ಅಭಿಷೇಕ್ ಶರ್ಮಾ 30, ಶುಭಮನ್ ಗಿಲ್ ಔಟಾಗದೇ 20, ಸೂರ್ಯಕುಮಾರ್ ಯಾದವ್ ಔಟಾಗದೇ 7, ಜುನೇದ್ ಸಿದ್ದಿಕ್ 16ಕ್ಕೆ1) ಫಲಿತಾಂಶ: ಭಾರತ ತಂಡಕ್ಕೆ 9 ವಿಕೆಟ್‌ಗಳ ಜಯ.
ಇಂದಿನ ಪಂದ್ಯ
ಬಾಂಗ್ಲಾದೇಶ–ಹಾಂಗ್‌ಕಾಂಗ್ (ಗುಂಪು ಬಿ)
ಆರಂಭ: ರಾತ್ರಿ 8
ನೇರಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್
ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ...
2025ರ ಏಷ್ಯಾ ಕಪ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಇಂದು (ಬುಧವಾರ) ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಮ್ ಇಂಡಿಯಾದ ನಾಯಕ ಸೂರ್ಯಕುಮಾರ್ ಯಾದವ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ.
ಈ ಪಂದ್ಯವನ್ನು ಗೆಲ್ಲುವ ಮೂಲಕ ಟೀಮ್ ಇಂಡಿಯಾ ಶುಭಾರಂಭ ಮಾಡಿಕೊಳ್ಳುವ ತವಕದಲ್ಲಿದ್ದಾರೆ.
ಏಷ್ಯಾ ಕಪ್ ಟೂರ್ನಿಯಲ್ಲಿ ಮಂಗಳವಾರ ನಡೆದಿದ್ದ ಮೊದಲ ಪಂದ್ಯದಲ್ಲಿ ಹಾಂಗ್‌ಕಾಂಗ್ ವಿರುದ್ಧ ಅಫ್ಗಾನಿಸ್ತಾನ ಗೆಲುವು ದಾಖಲಿಸಿತ್ತು.
ಗಿಲ್ ಪುನರಾಗಮನ, ಸಂಜುಗೆ ಅವಕಾಶ...
ಉಪನಾಯಕ ಶುಭಮನ್ ಗಿಲ್ ಟಿ20 ತಂಡಕ್ಕೆ ಪುನರಾಗಮನ ಮಾಡಿಕೊಂಡಿದ್ದಾರೆ. ಅವರು ಅಭಿಷೇಕ್ ಶರ್ಮಾ ಜೊತೆ ಇನಿಂಗ್ಸ್ ಆರಂಭಿಸುವ ನಿರೀಕ್ಷೆಯಿದೆ.
ಟಿ20 ಆರಂಭಿಕನಾಗಿ ಗುರುತಿಸಿಕೊಂಡಿದ್ದ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಸಹ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ.
ಇದರಿಂದಾಗಿ ಆರ್‌ಸಿಬಿಯ ತಾರೆ ಜಿತೇಶ್ ಶರ್ಮಾ ಅವರು ತಮ್ಮ ಅವಕಾಶಕ್ಕಾಗಿ ಮತ್ತಷ್ಟು ಕಾಯಬೇಕಿದೆ.
ಇನ್ನು ಆಲ್‌ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ ಹಾಗೂ ಅಕ್ಷರ್ ಪಟೇಲ್ ಜೊತೆಗೆ ತಿಲಕ್ ವರ್ಮಾ ಹಾಗೂ ಶಿವಂ ದುಬೆ ಸಹ ತಂಡದಲ್ಲಿದ್ದಾರೆ.
ಜಸ್‌ಪ್ರೀತ್ ಬೂಮ್ರಾ ಆಡುವ ಬಳಗದಲ್ಲಿರುವ ಏಕೈಕ ವೇಗಿಯಾಗಿದ್ದು, ಸ್ಪಿನ್ ದ್ವಯರಾದ ವರುಣ್ ಚಕ್ರವರ್ತಿ ಹಾಗೂ ಕುಲದೀಪ್ ಯಾದವ್ ಅವರಿಗೆ ಅವಕಾಶ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.