ADVERTISEMENT

Asia Cup: ಭಾರತ ಎದುರಿನ ಫೈನಲ್‌ಗೂ ಮುನ್ನ ಪಾಕ್ ಪಡೆಗೆ ಅಕ್ರಮ್ ನೀಡಿದ ಸಲಹೆಯೇನು?

ಪಿಟಿಐ
Published 28 ಸೆಪ್ಟೆಂಬರ್ 2025, 9:32 IST
Last Updated 28 ಸೆಪ್ಟೆಂಬರ್ 2025, 9:32 IST
<div class="paragraphs"><p>ಭಾರತ ತಂಡದ ಆಟಗಾರರು</p></div>

ಭಾರತ ತಂಡದ ಆಟಗಾರರು

   

ಕೃಪೆ: @BCCI

ದುಬೈ: ಈ ಬಾರಿಯ ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಯ ಫೈನಲ್‌ನಲ್ಲಿ ಗೆಲ್ಲುವ ನೆಚ್ಚಿನ ತಂಡ ಭಾರತವೇ ಆಗಿದೆ. ಆದರೆ, 'ಸೂಪರ್‌ 4' ಹಂತದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ದೊರೆತ ಜಯದ ವಿಶ್ವಾಸವನ್ನು ಸಲ್ಮಾನ್ ಆಘಾ ನೇತೃತ್ವದ ಪಾಕಿಸ್ತಾನ ಪಡೆ ಮುಂದುವರಿಸಬೇಕು ಎಂದು ಪಾಕ್‌ ದಿಗ್ಗಜ ವಾಸಿಂ ಅಕ್ರಮ್‌ ಹೇಳಿದ್ದಾರೆ.

ADVERTISEMENT

ಪಾಕ್‌ ತಂಡ 'ಸೂಪರ್‌ 4' ಹಂತದ ನಿರ್ಣಾಯಕ ಪಂದ್ಯದಲ್ಲಿ ಕೇವಲ 136 ರನ್‌ ಗಳಿಸಿಯೂ, ಬಾಂಗ್ಲಾ ವಿರುದ್ಧ ಜಯ ಸಾಧಿಸುವ ಮೂಲಕ ಫೈನಲ್‌ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ.

ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, 'ಪಾಕಿಸ್ತಾನ ತಂಡದ ಬೌಲಿಂಗ್‌ ಭಾನುವಾರವೂ (ಫೈನಲ್‌ ಪಂದ್ಯದಲ್ಲೂ) ಅತ್ಯುತ್ತಮವಾಗಿರಲಿದೆ ಎಂದು ಭಾವಿಸುತ್ತೇನೆ' ಎಂದಿದ್ದಾರೆ.

'ಖಂಡಿತವಾಗಿಯೂ ಭಾರತ ನೆಚ್ಚಿನ ತಂಡವಾಗಿದೆ. ಆದರೆ, ಈ ಮಾದರಿಯ ಆಟದಲ್ಲಿ ಏನು ಬೇಕಾದರೂ ಆಗಬಹುದು ಎಂಬುದನ್ನು ನಾನು, ನೀವೆಲ್ಲಾ ನೋಡಿದ್ದೇವೆ. ಕ್ರಿಕೆಟ್‌ ಪ್ರೇಮಿಗಳಿಗೂ ಅದು ಗೊತ್ತಿದೆ. ಒಂದು ಉತ್ತಮ ಇನಿಂಗ್ಸ್‌, ಒಂದು ಅತ್ಯುತ್ತಮ ಸ್ಪೆಲ್‌ ಪಂದ್ಯದ ದಿಕ್ಕನ್ನೇ ಬದಲಿಸಬಲ್ಲದು' ಎಂದು ಪ್ರತಿಪಾದಿಸಿದ್ದಾರೆ.

'ಪಾಕಿಸ್ತಾನ ತಂಡ ಬಾಂಗ್ಲಾದೇಶ ವಿರುದ್ಧದ ಜಯದ ವಿಶ್ವಾಸವನ್ನು ಭಾನುವಾರವೂ ಮುಂದುವರಿಸಬೇಕು. ತಮ್ಮನ್ನು ತಾವು ಬೆಂಬಲಿಸಿಕೊಂಡು, ಸಂವೇದನಾತ್ಮಕವಾಗಿ ಆಡಬೇಕು' ಎಂದು ಕಿವಿಮಾತು ಹೇಳಿದ್ದಾರೆ.

ಪಾಕ್‌ ಬೌಲರ್‌ಗಳು ಆರಂಭಿಕ ಬ್ಯಾಟರ್‌ಗಳಾದ ಅಭಿಷೇಕ್‌ ಶರ್ಮಾ ಮತ್ತು ಶುಭಮನ್‌ ಗಿಲ್‌ ಅವರನ್ನು ಬೇಗನೆ ಔಟ್ ಮಾಡಿದರೆ, ಟೀಂ ಇಂಡಿಯಾದ ಮಧ್ಯಮ ಕ್ರಮಾಂಕಕ್ಕೆ ಸವಾಲೊಡ್ಡಲು ಸಾಧ್ಯವಾಗಲಿದೆ ಎಂದು ಸಲಹೆ ನೀಡಿದ್ದಾರೆ.

ಪಾಕಿಸ್ತಾನ ವಿರುದ್ಧ ಸೆಪ್ಟೆಂಬರ್‌ 21ರಂದು ನಡೆದ 'ಸೂಪರ್‌ 4' ಹಂತದ ಪಂದ್ಯದಲ್ಲಿ ಶರ್ಮಾ ಹಾಗೂ ಗಿಲ್‌ ಜೋಡಿ, ಮೊದಲ ವಿಕೆಟ್‌ಗೆ 105 ರನ್‌ ಕಲೆಹಾಕಿತ್ತು.

41 ವರ್ಷಗಳ ಇತಿಹಾಸ ಹೊಂದಿರುವ ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿರುವುದು ಇದೇ ಮೊದಲು.

ಸೂರ್ಯಕುಮಾರ್‌ ಯಾದವ್‌ ನೇತೃತ್ವದ ಟೀಂ ಇಂಡಿಯಾ, ಟೂರ್ನಿಯಲ್ಲಿ ಆಡಿರುವ ಆರೂ ಪಂದ್ಯಗಳಲ್ಲಿ ಗೆದ್ದು, ಅಜೇಯಿಯಾಗಿ ಫೈನಲ್‌ ತಲುಪಿದೆ. ಇಷ್ಟೇ ಪಂದ್ಯ ಆಡಿರುವ ಪಾಕ್‌ ಪಡೆ, ಭಾರತ ವಿರುದ್ಧದ ಎರಡು ಪಂದ್ಯಗಳನ್ನು ಹೊರತುಪಡಿಸಿ ಉಳಿದೆಲ್ಲವನ್ನೂ ಜಯಿಸಿದೆ.

ಭಾರತ ಜಯದ ಓಟ ಮುಂದುವರಿಸುವ ಲೆಕ್ಕಾಚಾರದಲ್ಲಿದ್ದರೆ, ಪಾಕಿಸ್ತಾನ ತಿರುಗೇಟು ನೀಡುವ ಯೋಜನೆಯಲ್ಲಿದೆ. ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಇಂದು (ಸೆ.28ರಂದು) ರಾತ್ರಿ 8ಕ್ಕೆ ಪಂದ್ಯ ಆರಂಭವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.